ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ರೈತ ಸ್ನೇಹಿಯಾದ ಮತ್ತೊಂದು ಕ್ರಮದಲ್ಲಿ, 2022-23ನೇ ಸಾಲಿನ ಸಕ್ಕರೆ ಹಂಗಾಮಿಗಾಗಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ಅನುಮೋದಿಸಿದ ಸರ್ಕಾರ 


ಕಬ್ಬು ಬೆಳೆಗಾರರಿಗೆ ಹಿಂದೆಂದಿಗಿಂತ ಅತ್ಯಧಿಕ ಪ್ರತಿ ಕ್ವಿಂಟಾಲ್ ಗೆ 305 ರೂ. ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ಅನುಮೋದನೆ

ರೈತರ ಆದಾಯ ಹೆಚ್ಚಿಸಲು, ಸರ್ಕಾರವು ಕಳೆದ 8 ವರ್ಷಗಳಲ್ಲಿ ಎಫ್ ಆರ್ ಪಿಯಲ್ಲಿ ಶೇ.34 ಕ್ಕಿಂತ ಅಧಿಕ ಹೆಚ್ಚಳ

ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತ ಸರ್ಕಾರ ಬದ್ಧ

ಈ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರಿಗೆ ಜೊತೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರು ಮತ್ತು ಸಂಬಂಧಿತ ಪೂರಕ ಚಟುವಟಿಕೆಗಳಿಗೆ ಪ್ರಯೋಜನ

Posted On: 03 AUG 2022 6:19PM by PIB Bengaluru

ಕಬ್ಬು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು 2022-23ನೇ ಸಾಲಿನ ಸಕ್ಕರೆ ಋತುವಿಗೆ (ಅಕ್ಟೋಬರ್ - ಸೆಪ್ಟೆಂಬರ್) ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ.)ಯನ್ನು ಮೂಲ ರಿಕವರಿ ದರವಾದ ಶೇ.10.25ರಂತೆ ಮತ್ತು ರಿಕವರಿಯಲ್ಲಿ ಪ್ರತಿ ಶೇ.0.1 ಇಳಿಕೆಗೆ ಎಫ್.ಆರ್.ಪಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 3.05 ರೂ.ಗಳಷ್ಟು ಇಳಿಕೆಯೊಂದಿಗೆ ಪ್ರತಿ ಕ್ವಿಂಟಾಲ್ ಗೆ 305 ರೂ.ನಂತೆ ಅನುಮೋದಿಸಿದೆ. ಆದಾಗ್ಯೂ, ಕಬ್ಬು ಬೆಳೆಗಾರರ ಹಿತ ರಕ್ಷಿಸುವ ದೃಷ್ಟಿಯಿಂದ ಸರ್ಕಾರವು ಶೇ.9.5ಕ್ಕಿಂತ ಕಡಿಮೆ ರಿಕವರಿ ಇರುವ ಸಕ್ಕರೆ ಕಾರ್ಖಾನೆಗಳ ವಿಷಯದಲ್ಲಿ ಯಾವುದೇ ಕಡಿತ ಮಾಡದಿರಲು ನಿರ್ಧರಿಸಿದೆ. ಅಂತಹ ರೈತರಿಗೆ 2021-22ರ ಸಕ್ಕರೆ ಹಂಗಾಮಿನಲ್ಲಿರುವ ಪ್ರತಿ ಕ್ವಿಂಟಾಲ್ ಕಬ್ಬಿಗೆ 275.50 ರೂ.ಗಳ ಬದಲಿಗೆ ಮುಂಬರುವ 2022-23 ರ ಸಕ್ಕರೆ ಹಂಗಾಮಿನಲ್ಲಿ ಕಬ್ಬಿಗೆ 282.125 ರೂ. ಪಡೆಯಲಿದ್ದಾರೆ.
2022-23ರ ಸಕ್ಕರೆ ಹಂಗಾಮಿನಲ್ಲಿ ಕಬ್ಬಿನ ಎ2 + ಎಫ್.ಎಲ್. ಉತ್ಪಾದನಾ ವೆಚ್ಚ (ಅಂದರೆ ನೈಜ ಪಾವತಿಸಿದ ವೆಚ್ಚ ಮತ್ತು ಕುಟುಂಬ ಕಾರ್ಮಿಕರ ಘೋಷಿತ ಮೌಲ್ಯ) ಉತ್ಪಾದನಾ ವೆಚ್ಚವು ಪ್ರತಿ ಕ್ವಿಂಟಾಲ್ ಗೆ 162 ರೂ. ಆಗಿರುತ್ತದೆ. ಶೇ.10.25ರಷ್ಟು ರಿಕವರಿ ದರದಲ್ಲಿ ಪ್ರತಿ ಕ್ವಿಂಟಾಲ್ ಗೆ 305ರೂ.ನಂತೆ ಈ ಎಫ್.ಆರ್.ಪಿ. ಉತ್ಪಾದನಾ ವೆಚ್ಚಕ್ಕಿಂತ ಶೇ.88.3ರಷ್ಟು ಹೆಚ್ಚಾಗಿರುತ್ತದೆ, ಆ ಮೂಲಕ ರೈತರಿಗೆ ಅವರ ವೆಚ್ಚಕ್ಕಿಂತ ಶೇ.50ಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವುದನ್ನು ಖಾತ್ರಿಪಡಿಸುತ್ತದೆ. 2022-23ರ ಸಕ್ಕರೆ ಋತುವಿನ ಎಫ್ಆರ್.ಪಿ. ಪ್ರಸ್ತುತ ಸಕ್ಕರೆ ಹಂಗಾಮು 2021-22 ಕ್ಕಿಂತ ಶೇ.2.6ರಷ್ಟು ಹೆಚ್ಚಾಗಿದೆ.
ಕೇಂದ್ರ ಸರ್ಕಾರದ ಕ್ರಿಯಾಶೀಲ ನೀತಿಗಳಿಂದಾಗಿ, ಕಬ್ಬು ಕೃಷಿ ಮತ್ತು ಸಕ್ಕರೆ ಉದ್ಯಮವು ಕಳೆದ 8 ವರ್ಷಗಳಲ್ಲಿ ಬಹಳ ದೂರ ಸಾಗಿದೆ ಮತ್ತು ಈಗ ಸ್ವಯಂ ಸುಸ್ಥಿರತೆಯ ಮಟ್ಟವನ್ನು ತಲುಪಿದೆ. ಇದು  ಸರ್ಕಾರದ ಸಕಾಲಿಕ ಮಧ್ಯಪ್ರವೇಶ ಮತ್ತು ಸಕ್ಕರೆ ಉದ್ಯಮ, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ರೈತರೊಂದಿಗಿನ ಸಹಯೋಗದ ಫಲಶ್ರುತಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ವಲಯಕ್ಕಾಗಿ ಸರ್ಕಾರವು ಕೈಗೊಂಡ ಪ್ರಮುಖ ಕ್ರಮಗಳು ಈ ಕೆಳಗಿನಂತಿವೆ:
ಕಬ್ಬು ಬೆಳೆಗಾರರಿಗೆ ನಿಶ್ಚಿತ ಬೆಲೆಯನ್ನು ಖಾತ್ರಿಪಡಿಸಲು ಕಬ್ಬಿನ ಎಫ್.ಆರ್.ಪಿಯನ್ನು ನಿಗದಿಪಡಿಸಲಾಗಿದೆ.
ಸರ್ಕಾರವು ಕಳೆದ 8 ವರ್ಷಗಳಲ್ಲಿ ಎಫ್.ಆರ್.ಪಿಯಲ್ಲಿ ಶೇ.34ಕ್ಕಿಂತ ಅಧಿಕ ಹೆಚ್ಚಳ ಮಾಡಿದೆ.
ಸಕ್ಕರೆಯ ಎಕ್ಸ್ ಮಿಲ್ ಬೆಲೆಗಳಲ್ಲಿ ಕುಸಿತ ಮತ್ತು ಕಬ್ಬಿನ ಬಾಕಿ ಹೆಚ್ಚಾಗುವುದನ್ನು ತಡೆಯಲು ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್.ಪಿ.) ಪರಿಕಲ್ಪನೆಯನ್ನು ಸಹ ಪರಿಚಯಿಸಿದೆ (ಎಂಎಸ್.ಪಿ.ಯನ್ನು ಆರಂಭದಲ್ಲಿ 07-06-2018 ರಿಂದ ಅನ್ವಯವಾಗುವಂತೆ ಕೆ.ಜಿ.ಗೆ  29ರೂ.ಗೆ ನಿಗದಿಪಡಿಸಲಾಗಿತ್ತು; 14-02-2019 ರಿಂದ ಜಾರಿಗೆ ಬರುವಂತೆ ಪ್ರತಿ ಕೆ.ಜಿ.ಗೆ 31ರೂ.ಗೆ ಪರಿಷ್ಕರಿಸಲಾಯಿತು).
ಸಕ್ಕರೆಯ ರಫ್ತಿಗೆ ಅನುಕೂಲ ಕಲ್ಪಿಸಲು, ಕಾಪು ದಾಸ್ತಾನು ನಿರ್ವಹಿಸಲು, ಎಥನಾಲ್ ಉತ್ಪಾದನೆ ಸಾಮರ್ಥ್ಯ ವರ್ಧನೆ ಮತ್ತು ರೈತರ ಬಾಕಿ ತೀರಿಸಲು  18,000 ಕೋಟಿ ರೂ.ಗೂ ಅಧಿಕ ಆರ್ಥಿಕ ನೆರವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದೆ.
ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ವಿನಿಯೋಗಿಸುವುದರಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಇದರ ಪರಿಣಾಮವಾಗಿ, ಅವರು ಕಬ್ಬಿನ ಬಾಕಿಯನ್ನು ಬೇಗನೆ ಪಾವತಿಸಲು ಸಾಧ್ಯವಾಗುತ್ತಿದೆ.
ರಫ್ತು ಮತ್ತು ಹೆಚ್ಚುವರಿ ಸಕ್ಕರೆಯನ್ನು ಎಥೆನಾಲ್ ನತ್ತ ವರ್ಗಾಯಿಸುವುದರಿಂದ, ಸಕ್ಕರೆ ವಲಯವು ಸ್ವಯಂ-ಸುಸ್ಥಿರವಾಗಿದೆ ಮತ್ತು ಕಾರ್ಖಾನೆಗಳ ಹಣದ ಹರಿವು ಸುಧಾರಿಸಲು ರಫ್ತು ಮತ್ತು ಕಾಪು ದಾಸ್ತಾನಿಗೆ ಬಜೆಟ್ ಬೆಂಬಲದ ಅಗತ್ಯವಿರುವುದಿಲ್ಲ.
ಜೊತೆಗೆ, ಕಳೆದ ಕೆಲವು ಸಕ್ಕರೆ ಋತುಗಳಲ್ಲಿ ಸಕ್ಕರೆ ವಲಯಕ್ಕಾಗಿ ತೆಗೆದುಕೊಂಡ ಇತರ ಕ್ರಮಗಳಿಂದಾಗಿ ಅಂದರೆ, ಕಬ್ಬಿನ ಹೆಚ್ಚಿನ ಇಳುವರಿ ನೀಡುವ ತಳಿಗಳ ಪರಿಚಯ, ಹನಿ ನೀರಾವರಿ ಪದ್ಧತಿ ಅಳವಡಿಕೆ, ಸಕ್ಕರೆ ಕಾರ್ಖಾನೆ ಮತ್ತು ಇತರ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಆಧುನೀಕರಣ, ಕಬ್ಬಿನ ಕೃಷಿ ಪ್ರದೇಶ, ಕಬ್ಬು ಉತ್ಪಾದನೆ, ಕಬ್ಬು ಅರೆಯುವುದು, ಸಕ್ಕರೆ ಉತ್ಪಾದನೆ ಮತ್ತು ಅದರ ಚೇತರಿಕೆಯ ಶೇಕಡಾವಾರು ಮತ್ತು ರೈತರಿಗೆ ಪಾವತಿಯು ಗಣನೀಯವಾಗಿ ಹೆಚ್ಚಳವಾಗಿದೆ.

ರೈತರ ಆದಾಯ ಹೆಚ್ಚಿಸಲು ಸರ್ಕಾರ ಬದ್ಧ:
ಈ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರು  ಮತ್ತು ಅವರ ಅವಲಂಬಿತರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರು ಮತ್ತು ಸಂಬಂಧಿತ ಪೂರಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. 9 ವರ್ಷಗಳ ಹಿಂದೆ, 2013-14ರ ಸಕ್ಕರೆ ಋತುವಿನಲ್ಲಿ ಎಫ್.ಆರ್.ಪಿ ಕೇವಲ 210 ರೂ.ಗಳಷ್ಟಿತ್ತು ಮತ್ತು ಸಕ್ಕರೆ ಕಾರ್ಖಾನೆಗಳು ಕೇವಲ 2397 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಮಾತ್ರ ಖರೀದಿಸುತ್ತಿದ್ದವು. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡುವುದರಿಂದ ರೈತರು ಕೇವಲ 51,000 ಕೋಟಿ ರೂ.ಗಳನ್ನು ಮಾತ್ರ ಪಡೆಯುತ್ತಿದ್ದರು. ಆದರೆ, ಕಳೆದ 8 ವರ್ಷಗಳಲ್ಲಿ ಸರ್ಕಾರವು ಎಫ್.ಆರ್.ಪಿಯನ್ನು ಶೇ.34ಕ್ಕಿಂತ ಅಧಿಕ ಹೆಚ್ಚಿಸಿದೆ.  ಪ್ರಸಕ್ತ 2021-22ರ ಸಕ್ಕರೆ ಋತುವಿನಲ್ಲಿ, 1,15,196 ಕೋಟಿ ಮೌಲ್ಯದ ಸುಮಾರು 3,530 ಲಕ್ಷ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಖರೀದಿಸಿವೆ, ಇದು ಸಾರ್ವಕಾಲಿಕ ಗರಿಷ್ಠ ಆಗಿದೆ.
2022-23ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಎಕರೆವಾರು ವಿಸ್ತೀರ್ಣದ ಹೆಚ್ಚಳ ಮತ್ತು ನಿರೀಕ್ಷಿತ ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು, 3,600 ಲಕ್ಷ ಟನ್ ಗಳಿಗೂ ಹೆಚ್ಚು ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಖರೀದಿಸುವ ಸಾಧ್ಯತೆಯಿದೆ, ಇದಕ್ಕಾಗಿ ಕಬ್ಬು ಬೆಳೆಗಾರರಿಗೆ ಒಟ್ಟು 1,20,000 ಕೋಟಿ ರೂ.ಗಿಂತ ಹೆಚ್ಚು ಹಣ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರವು ತನ್ನ ರೈತಪರ ಕ್ರಮಗಳ ಮೂಲಕ ಕಬ್ಬು ಬೆಳೆಗಾರರು ಸಕಾಲದಲ್ಲಿ ತಮ್ಮ ಬಾಕಿ ಪಡೆಯುವುದನ್ನು ಖಚಿತಪಡಿಸುತ್ತದೆ.

ಹಿಂದಿನ ಸಕ್ಕರೆ ಋತುವಿನಲ್ಲಿ 2020-21 ರಲ್ಲಿ, ಸುಮಾರು 92,938 ಕೋಟಿ ರೂ.ಗಳ ಕಬ್ಬಿನ ಬಾಕಿಯನ್ನು ಪಾವತಿಸಬೇಕಾಗಿತ್ತು, ಅದರಲ್ಲಿ 92,710 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಮತ್ತು ಕೇವಲ 228 ಕೋಟಿ ರೂ.ಗಳ ಬಾಕಿ ಉಳಿದಿದೆ. ಪ್ರಸಕ್ತ ಸಕ್ಕರೆ ಋತುವಿನಲ್ಲಿ 2021-22ರಲ್ಲಿ, 1,15,196 ಕೋಟಿ ರೂ.ಗಳ ಕಬ್ಬಿನ ಬಾಕಿಯಲ್ಲಿ ಸುಮಾರು 1,05,322 ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ. ಹೀಗಾಗಿ, ಶೇ.91.42ರಷ್ಟು ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ, ಇದು ಹಿಂದಿನ ಋತುಗಳಿಗಿಂತಲೂ ಹೆಚ್ಚಾಗಿದೆ.
 

ಭಾರತವು - ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ರಫ್ತುದಾರನಾಗಿದೆ:
ಪ್ರಸಕ್ತ ಸಕ್ಕರೆ ಋತುವಿನಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಭಾರತವು ಬ್ರೆಜಿಲ್ ಅನ್ನು ಹಿಂದೆ ತಳ್ಳಿದೆ. ಕಳೆದ 8 ವರ್ಷಗಳಲ್ಲಿ ಸಕ್ಕರೆ ಉತ್ಪಾದನೆಯಲ್ಲಿನ ಹೆಚ್ಚಳದೊಂದಿಗೆ, ಭಾರತವು ದೇಶೀಯ ಬಳಕೆಯ ಅಗತ್ಯವನ್ನು ಪೂರೈಸುವುದರ ಜೊತೆಗೆ ನಿರಂತರವಾಗಿ ಸಕ್ಕರೆಯನ್ನು ರಫ್ತು ಮಾಡುತ್ತಿದೆ, ಇದು ನಮ್ಮ ವಿತ್ತೀಯ ಕೊರತೆಯನ್ನು ತಗ್ಗಿಸಲು ಸಹಾಯ ಮಾಡಿದೆ.  ಕಳೆದ 4 ಸಕ್ಕರೆ ಋತುಗಳಲ್ಲಿ 2017-18, 2018-19, 2019-20 ಮತ್ತು 2020-21ರಲ್ಲಿ, ಅನುಕ್ರಮವಾಗಿ ಸುಮಾರು 6 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ), 38 ಎಲ್ಎಂಟಿ, 59.60 ಎಲ್ಎಂಟಿ ಮತ್ತು 70 ಎಲ್ಎಂಟಿ ಸಕ್ಕರೆ ರಫ್ತು ಮಾಡಲಾಗಿದೆ. ಪ್ರಸಕ್ತ 2021-22ರ ಸಕ್ಕರೆ ಋತುವಿನಲ್ಲಿ 01.08.2022 ರವರೆಗೆ ಸುಮಾರು 100 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿದೆ ಮತ್ತು ರಫ್ತು, 112 ಲಕ್ಷ ಮೆಟ್ರಿಕ್ ಟನ್ ತಲುಪುವ ಸಾಧ್ಯತೆಯಿದೆ.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮ ಈಗ ಇಂಧನ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದೆ:
ಭಾರತದ ಶೇ.85ರಷ್ಟು ಕಚ್ಚಾ ತೈಲದ ಅಗತ್ಯವನ್ನು ಆಮದು ಮೂಲಕ ಪೂರೈಸಲಾಗುತ್ತದೆ. ಆದರೆ ಕಚ್ಚಾ ತೈಲದ ಮೇಲಿನ ಆಮದು ವೆಚ್ಚ ತಗ್ಗಿಸುವ, ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಪೆಟ್ರೋಲಿಯಂ ವಲಯದಲ್ಲಿ ಭಾರತವನ್ನು ಆತ್ಮನಿರ್ಭರ ಮಾಡುವ ಉದ್ದೇಶದಿಂದ, ಪೆಟ್ರೋಲ್ ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಕಾರ್ಯಕ್ರಮದ ಅಡಿಯಲ್ಲಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಪೆಟ್ರೋಲ್ ನೊಂದಿಗೆ ಎಥೆನಾಲ್ ಅನ್ನು ಬೆರೆಸಲು ಸರ್ಕಾರ ಸಕ್ರಿಯವಾಗಿ ಮುಂದಡಿ ಇಟ್ಟಿದೆ. ಹೆಚ್ಚುವರಿ ಕಬ್ಬನ್ನು ಎಥೆನಾಲ್ ಗೆ ತಿರುಗಿಸಲು ಸರ್ಕಾರವು ಸಕ್ಕರೆ ಕಾರ್ಖಾನೆಗಳನ್ನು ಉತ್ತೇಜಿಸುತ್ತಿದೆ, ಇದು ಪೆಟ್ರೋಲ್ ನೊಂದಿಗೆ ಮಿಶ್ರಣವಾಗುತ್ತಿದೆ, ಇದು ಹಸಿರು ಇಂಧನವಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲದೆ ಕಚ್ಚಾ ತೈಲ ಆಮದು ಕಾರಣದಿಂದಾಗಿ ವಿದೇಶಿ ವಿನಿಮಯವನ್ನೂ ಉಳಿಸುತ್ತದೆ. 2018-19, 2019-20 ಮತ್ತು 2020-21ರ ಸಕ್ಕರೆ ಋತುಗಳಲ್ಲಿ, ಸುಮಾರು 3.37 ಎಲ್.ಎಂ.ಟಿ., 9.26 ಎಲ್.ಎಂ.ಟಿ. ಮತ್ತು 22 ಎಲ್.ಎಂ.ಟಿ. ಸಕ್ಕರೆಯನ್ನು ಎಥೆನಾಲ್ ನತ್ತ ತಿರುಗಿಸಲಾಗಿದೆ. ಪ್ರಸ್ತುತ ಸಕ್ಕರೆ ಋತುವಿನಲ್ಲಿ 2021-22 ರಲ್ಲಿ, ಸುಮಾರು 35 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ತಿರುಗಿಸಲಾಗುವುದು ಎಂದು ಅಂದಾಜಿಸಲಾಗಿದೆ ಮತ್ತು 2025-26ರ ವೇಳೆಗೆ 60 ಲಕ್ಷ ಮೆಟ್ರಿಕ್ ಟನ್ ಗಿಂತ ಹೆಚ್ಚು ಸಕ್ಕರೆಯನ್ನು ಎಥೆನಾಲ್ ಗೆ ತಿರುಗಿಸುವ ಗುರಿಯನ್ನು ಹೊಂದಲಾಗಿದೆ, ಇದು ಹೆಚ್ಚುವರಿ ಕಬ್ಬಿನ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ರೈತರೂ ಸಕಾಲದಲ್ಲಿ ಹಣ ಪಡೆಯುತ್ತಾರೆ.
2022 ರ ವೇಳೆಗೆ ಪೆಟ್ರೋಲ್ ನೊಂದಿಗೆ ಇಂಧನ ದರ್ಜೆಯ ಎಥೆನಾಲ್ ಅನ್ನು ಶೇ.10ರಷ್ಟು ಮಿಶ್ರಣ ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಮತ್ತು 2025 ರ ವೇಳೆಗೆ ಶೇ.20ರಷ್ಟು ಮಿಶ್ರಣ ಮಾಡುವ ಗುರಿಯನ್ನೂ ಹೊಂದಲಾಗಿದೆ.
2014ರವರೆಗೆ, ಕಾಕಂಬಿ ಆಧಾರಿತ ಡಿಸ್ಟಿಲರಿಗಳ ಎಥೆನಾಲ್ ಭಟ್ಟಿ ಇಳಿಸುವ ಸಾಮರ್ಥ್ಯವು ಕೇವಲ 215 ಕೋಟಿ ಲೀಟರ್ ಗಳಷ್ಟಿತ್ತು. ಆದರೆ, ಕಳೆದ 8 ವರ್ಷಗಳಲ್ಲಿ, ಸರ್ಕಾರವು ಮಾಡಿದ ನೀತಿ ಬದಲಾವಣೆಗಳಿಂದಾಗಿ, ಕಾಕಂಬಿ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯವು 595 ಕೋಟಿ ಲೀಟರ್ ಗೆ ಏರಿದೆ. 2014 ರಲ್ಲಿ ಸುಮಾರು 206 ಕೋಟಿ ಲೀಟರ್ ಗಳಷ್ಟಿದ್ದ ಧಾನ್ಯ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯವು ಈಗ 298 ಕೋಟಿ ಲೀಟರ್ ಗೆ ಏರಿದೆ. ಹೀಗಾಗಿ, ಕಳೆದ 8 ವರ್ಷಗಳಲ್ಲಿ ಎಥೆನಾಲ್ ಉತ್ಪಾದನೆಯ ಒಟ್ಟಾರೆ ಸಾಮರ್ಥ್ಯವು 2014 ರಲ್ಲಿದ್ದ 421 ಕೋಟಿ ಲೀಟರ್ ಗಳಿಂದ 2022 ರ ಜುಲೈನಲ್ಲಿ 893 ಕೋಟಿ ಲೀಟರ್ ಗೆ ದುಪ್ಪಟ್ಟಾಗಿದೆ. ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಸರ್ಕಾರವು ಸಕ್ಕರೆ ಕಾರ್ಖಾನೆಗಳು / ಡಿಸ್ಟಿಲರಿಗಳಿಗೆ ಬಡ್ಡಿ ಸಹಾಯಧನವನ್ನು ಸಹ ವಿಸ್ತರಿಸುತ್ತಿದೆ. ಎಥೆನಾಲ್ ವಲಯದಲ್ಲಿ ಸುಮಾರು 41,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುತ್ತಿದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
2013-14ರ ಎಥೆನಾಲ್ ಪೂರೈಕೆ ವರ್ಷದಲ್ಲಿ (ಇ.ಎಸ್.ವೈ.) ಒಎಂಸಿಗಳಿಗೆ ಕೇವಲ 38 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿದ್ದು, ಕೇವಲ ಶೇ.1.53 ಮಿಶ್ರಣ ಮಟ್ಟವಿತ್ತು. ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು ಒಎಂಸಿಗಳಿಗೆ ಅದರ ಪೂರೈಕೆ 2013-14 ರಿಂದ 8 ಪಟ್ಟು ಹೆಚ್ಚಾಗಿದೆ. 2020-21ರ ಎಥೆನಾಲ್ ಪೂರೈಕೆ ವರ್ಷದಲ್ಲಿ (ಡಿಸೆಂಬರ್ -ನವೆಂಬರ್), ಸುಮಾರು 302.30 ಕೋಟಿ ಲೀಟರ್ ಎಥೆನಾಲ್ ಅನ್ನು ಒಎಂಸಿಗಳಿಗೆ ಪೂರೈಸಲಾಗಿದೆ, ಆ ಮೂಲಕ ಶೇ.8.1ರಷ್ಟು ಮಿಶ್ರಣ ಮಟ್ಟವನ್ನು ಸಾಧಿಸಲಾಗಿದೆ. ಪ್ರಸಕ್ತ ಇ.ಎಸ್.ವೈ. 2021-22 ರಲ್ಲಿ, ನಾವು ಶೇ.10.17ರಷ್ಟು ಮಿಶ್ರಣ ಮಟ್ಟಗಳನ್ನು ಸಾಧಿಸಲು ಸಾಧ್ಯವಾಗಿದೆ. ಪ್ರಸಕ್ತ 2021-22 ರಲ್ಲಿ ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡಲು ಸಕ್ಕರೆ ಕಾರ್ಖಾನೆಗಳು / ಡಿಸ್ಟಿಲರಿಗಳಿಂದ 400 ಕೋಟಿ ಲೀಟರ್ ಗಿಂತ ಹೆಚ್ಚು ಎಥೆನಾಲ್ ಪೂರೈಕೆಯಾಗುವ ಸಾಧ್ಯತೆಯಿದೆ, ಇದು 2013-14 ರಲ್ಲಿ ಪೂರೈಕೆಗೆ ಹೋಲಿಸಿದರೆ 10 ಪಟ್ಟು ಹೆಚ್ಚಾಗಿರುತ್ತದೆ.
ಸ್ವಯಂ ಸುಸ್ಥಿರವಾಗುತ್ತಿರುವ ಸಕ್ಕರೆ ಉದ್ಯಮ:
ಈ ಮೊದಲು, ಸಕ್ಕರೆ ಕಾರ್ಖಾನೆಗಳು ಆದಾಯವನ್ನು ಗಳಿಸಲು ಮುಖ್ಯವಾಗಿ ಸಕ್ಕರೆ ಮಾರಾಟದ ಮೇಲೆ ಅವಲಂಬಿತವಾಗಿದ್ದವು. ಯಾವುದೇ ಋತುವಿನಲ್ಲಿ ಹೆಚ್ಚುವರಿ ಉತ್ಪಾದನೆಯು ಅವುಗಳ ಹಣ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು, ಇದು ರೈತರ ಕಬ್ಬಿನ ಬಾಕಿ ಹಣ ಬೆಳೆಯಲು ಕಾರಣವಾಗುತ್ತಿತ್ತು. ಅವುಗಳ ಹಣ ಹರಿವನ್ನು ಸುಧಾರಿಸಲು ಕಾಲಕಾಲಕ್ಕೆ ಸರ್ಕಾರದ ಮಧ್ಯಪ್ರವೇಶ ಮಾಡಲಾಗುತ್ತಿತ್ತು. ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚುವರಿ ಸಕ್ಕರೆಯನ್ನು ರಫ್ತು ಮಾಡಲು ಉತ್ತೇಜನ ಮತ್ತು ಎಥೆನಾಲ್ ಗೆ ಸಕ್ಕರೆಯನ್ನು ತಿರುಗಿಸುವುದು ಸೇರಿದಂತೆ ಕೇಂದ್ರ ಸರ್ಕಾರದ ಕ್ರಿಯಾಶೀಲ ನೀತಿಗಳಿಂದಾಗಿ, ಸಕ್ಕರೆ ಉದ್ಯಮವು ಈಗ ಸ್ವಯಂ-ಸುಸ್ಥಿರವಾಗಿದೆ.
2013-14ರಿಂದ ಇಲ್ಲಿಯವರೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 49,000 ಕೋಟಿ ರೂ.ಗಳ ಆದಾಯವನ್ನು ಗಳಿಸಿವೆ. ಪ್ರಸಕ್ತ 2021-22ರ ಸಕ್ಕರೆ ಋತುವಿನಲ್ಲಿ, ಒಎಂಸಿಗಳಿಗೆ ಎಥೆನಾಲ್ ಮಾರಾಟದಿಂದ ಸುಮಾರು 20,000 ಕೋಟಿ ರೂ.ಗಳ ಆದಾಯವನ್ನು ಸಕ್ಕರೆ ಕಾರ್ಖಾನೆಗಳು ಗಳಿಸಿವೆ; ಇದು ಸಕ್ಕರೆ ಕಾರ್ಖಾನೆಗಳ ಹಣ ಹರಿವನ್ನು ಸುಧಾರಿಸಿದೆ, ಇದು ರೈತರ ಕಬ್ಬಿನ ಬಾಕಿಯನ್ನು ಪಾವತಿಸಲು ಅನುವು ಮಾಡಿಕೊಡುತ್ತಿದೆ. ಸಕ್ಕರೆ ಮತ್ತು ಅದರ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯ, ಒಎಂಸಿಗಳಿಗೆ ಎಥೆನಾಲ್ ಪೂರೈಕೆ, ಬಗಾಸೆ ಆಧಾರಿತ ಸಹ ಉತ್ಪಾದನೆ ಘಟಕಗಳಿಂದ ವಿದ್ಯುತ್ ಉತ್ಪಾದನೆ ಮತ್ತು ಸಕ್ಕರೆ ತ್ಯಾಜ್ಯ (ಪ್ರೆಸ್ ಮಡ್)ದಿಂದ  ಉತ್ಪಾದಿಸಲಾದ ಪೊಟ್ಯಾಷ್ ಮಾರಾಟದಿಂದ ಬರುವ ಆದಾಯವು ಸಕ್ಕರೆ ಕಾರ್ಖಾನೆಗಳ ಮೇಲ್ ಸ್ತರ ಮತ್ತು ಕೆಳ ಸ್ತರದ ವೃದ್ಧಿಯನ್ನು ಉತ್ತಮಪಡಿಸಿದೆ.
ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಎಫ್.ಆರ್.ಪಿ. ವರ್ಧನೆಯು ಕಬ್ಬು ಬೆಳೆಯಲು ರೈತರನ್ನು ಉತ್ತೇಜಿಸುತ್ತಿದೆ ಮತ್ತು ದೇಶೀಯ ಸಕ್ಕರೆ ಉತ್ಪಾದನೆಗಾಗಿ ಸಕ್ಕರೆ ಕಾರ್ಖಾನೆಗಳ ಕಾರ್ಯಾಚರಣೆಯನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿದೆ. ಸಕ್ಕರೆ ವಲಯಕ್ಕಾಗಿ ಸರ್ಕಾರವು ಮಾಡಿದ ಕ್ರಿಯಾಶೀಲ ನೀತಿಗಳಿಂದಾಗಿ, ಭಾರತವು ಈಗ ಇಂಧನ ಕ್ಷೇತ್ರದಲ್ಲಿಯೂ ಆತ್ಮನಿರ್ಭರವಾಗುತ್ತಿದೆ.

 

********
 



(Release ID: 1852463) Visitor Counter : 803