ಪ್ರಧಾನ ಮಂತ್ರಿಯವರ ಕಛೇರಿ

ಕಾಮನ್‌ವೆಲ್ತ್ ಗೇಮ್ಸ್ - 2022ಕ್ಕೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಜುಲೈ 20ರಂದು ಪ್ರಧಾನ ಮಂತ್ರಿ ಸಂವಾದ

Posted On: 18 JUL 2022 5:06PM by PIB Bengaluru

ಕಾಮನ್‌ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)-2022ರಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾ ತಂಡದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 20ರಂದು ಬೆಳಗ್ಗೆ 10 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಸಂವಾದ ನಡೆಸಲಿದ್ದಾರೆ. ಸಂವಾದದಲ್ಲಿ ಇಬ್ಬರು ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರು ಪಾಲ್ಗೊಳ್ಳಲಿದ್ದಾರೆ.

ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೊದಲು ಕ್ರೀಡಾಪಟುಗಳನ್ನು ಪ್ರೇರೇಪಿಸುವ ಅವರ ನಿರಂತರ ಪ್ರಯತ್ನದ ಒಂದು ಭಾಗವಾಗಿ ಪ್ರಧಾನಮಂತ್ರಿಯವರ ಸಂವಾದ ಆಯೋಜಿಸಲಾಗಿದೆ. ಕಳೆದ ವರ್ಷ ಪ್ರಧಾನಿ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್-2020 ಮತ್ತು ಟೋಕಿಯೊ ಪ್ಯಾರಾಲಿಂಪಿಕ್-2020 ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಭಾರತೀಯ ಅಥ್ಲೀಟ್‌ಗಳ ತಂಡದೊಂದಿಗೆ ಸಂವಾದ ನಡೆಸಿದ್ದರು.

ಕ್ರೀಡಾಕೂಟ ನಡೆಯುತ್ತಿದ್ದಾಗಲೂ, ಪ್ರಧಾನ ಮಂತ್ರಿ ಅವರು ಕ್ರೀಡಾಪಟುಗಳ ಪ್ರದರ್ಶನದ ಬಗ್ಗೆ ತೀವ್ರ ಆಸಕ್ತಿ ವಹಿಸಿದ್ದರು. ಅನೇಕ ಸಂದರ್ಭಗಳಲ್ಲಿ, ಅವರು ವೈಯಕ್ತಿಕವಾಗಿ ಕ್ರೀಡಾಪಟುಗಳಿಗೆ ಕರೆ ಮಾಡಿ ಅವರ ಯಶಸ್ಸು ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಅಭಿನಂದಿಸಿದ್ದರು. ಅವರನ್ನು ಉತ್ತಮವಾಗಿ ಆಡುವಂತೆ ಪ್ರೇರೇಪಿಸಿದ್ದರು. ಇದಲ್ಲದೆ, ಕ್ರೀಡಾಪಟುಗಳು ದೇಶಕ್ಕೆ ಹಿಂದಿರುಗಿದ ನಂತರ, ಪ್ರಧಾನ ಮಂತ್ರಿ ಅವರು ಕ್ರೀಡಾ ತಂಡವನ್ನು ಭೇಟಿ ಮಾಡಿ, ಎಲ್ಲರೊಂದಿಗೆ ಸಂವಾದ ನಡೆಸಿದ್ದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್ 08ರ ವರೆಗೆ ಕಾಮನ್ ವೆಲ್ತ್ ಕ್ರೀಡಾಕೂಟ-2022 ಆಯೋಜಿಸಲಾಗಿದೆ. 19 ಕ್ರೀಡಾ ವಿಭಾಗಗಳಲ್ಲಿ ನಡೆಯುವ 141 ಸ್ಪರ್ಧೆಗಳಲ್ಲಿ ಭಾಗವಹಿಸುವ ಒಟ್ಟು 215 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.

********

 

 

 

 



(Release ID: 1842511) Visitor Counter : 147