ಪ್ರಧಾನ ಮಂತ್ರಿಯವರ ಕಛೇರಿ

ಸ್ವಾಮಿ ಆತ್ಮಸ್ಥಾನಾನಂದರ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 10 JUL 2022 11:33AM by PIB Bengaluru

ಎಲ್ಲಾ ಪೂಜ್ಯ ಸಂತರು, ಶಾರದಾ ಮಠದ ಸಾಧ್ವಿ ತಾಯಂದಿರು, ವಿಶೇಷ ಅತಿಥಿಗಳು ಮತ್ತು ಸಾತ್ವಿಕ ಪ್ರಜ್ಞೆಯಿಂದ ತುಂಬಿರುವ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಭಕ್ತರೇ! ಸರ್ವರಿಗೂ  ಶುಭಾಶಯಗಳು!

ಇಂದು ಸ್ವಾಮಿ ಆತ್ಮಸ್ಥಾನಾನಂದ ಜೀ ಅವರ ಜನ್ಮಶತಮಾನೋತ್ಸವವನ್ನು ಪೂಜ್ಯ ಸಂತರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು  ವೈಯಕ್ತಿಕವಾಗಿ ನನಗೆ ವಿಭಿನ್ನ ಭಾವನೆಗಳು ಮತ್ತು ನೆನಪುಗಳನ್ನು ತಂದಿದೆ. ಇದು ಬಹಳಷ್ಟು  ಮಹತ್ವವನ್ನು ಹೊಂದಿದೆ. ಸ್ವಾಮೀಜಿಯವರು ತಮ್ಮ 100ನೇ ವಯಸ್ಸಿಗೆ ಸನಿಹದಲ್ಲಿ  ತಮ್ಮ ಸ್ವರ್ಗೀಯ ನಿವಾಸಕ್ಕೆ ತೆರಳಿದ್ದಾರೆ. ನಾನು ಯಾವಾಗಲೂ ಅವರ ಆಶೀರ್ವಾದವನ್ನು ಪಡೆಯುತ್ತಿದ್ದೆ ಮತ್ತು ಅವರಿಗೆ ನಿಕಟವರ್ತಿಯಾಗಿರುವ ಅದೃಷ್ಟಶಾಲಿಯೂ ನಾನಾಗಿದ್ದೆ. ಅವರ ಬದುಕಿನ ಕೊನೆಯ ಕ್ಷಣಗಳವರೆಗೆ ಅವರೊಂದಿಗೆ ಸಂಪರ್ಕದಲ್ಲಿರುವಂತಹ  ಅದೃಷ್ಟಶಾಲಿಯಾಗಿದ್ದೆ. ಮಗುವಿನ ಮೇಲೆ ಪ್ರೀತಿಯ ಸುರಿಮಳೆ ಸುರಿಸುವಂತೆ, ಅವರು ನನ್ನ ಮೇಲೆ ಪ್ರೀತಿಯ ಮಳೆಯನ್ನು ನಿರಂತರವಾಗಿ ಸುರಿಸಿದ್ದರು.  ಅವರ ಕೊನೆಯ ಉಸಿರಿರುವವರೆಗೂ ಅವರ ಆಶೀರ್ವಾದ ನನ್ನೊಂದಿಗೆ ಇತ್ತು. ಮತ್ತು ಸ್ವಾಮೀಜಿ ಮಹಾರಾಜರು ತಮ್ಮ ಆತ್ಮರೂಪದಲ್ಲಿ ನಮ್ಮನ್ನು ಇನ್ನೂ ಆಶೀರ್ವದಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ.  ಅವರ ಜೀವನದ ಧ್ಯೇಯವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ, ಎರಡು ಸ್ಮರಣ ಸಂಚಿಕೆಗಳು, ಒಂದು ಚಿತ್ರ-ಜೀವನಚರಿತ್ರೆ ಮತ್ತು ಒಂದು ಸಾಕ್ಷ್ಯಚಿತ್ರವನ್ನು ಸಹ ಇಂದು ಬಿಡುಗಡೆ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. ಈ ಕಾರ್ಯಕ್ಕಾಗಿ ನಾನು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಪೂಜ್ಯ  ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಸ್ವಾಮಿ ಆತ್ಮಸ್ಥಾನಾನಂದ ಜೀ ಅವರು ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಪೂಜ್ಯ ಸ್ವಾಮಿ ವಿಜ್ಞಾನಾನಂದ ಜೀ ಅವರಿಂದ ದೀಕ್ಷೆ ಪಡೆದರು. ಇದು ಸ್ವಾಮಿ ರಾಮಕೃಷ್ಣ ಪರಮಹಂಸರಂತಹ ಸಂತರ ಸಾಕ್ಷಾತ್ಕಾರವನ್ನು ಮಾಡಿಸಿತು. ಮತ್ತು ಆ ಆಧ್ಯಾತ್ಮಿಕ ಶಕ್ತಿಯು ಅವರಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನಮ್ಮ ದೇಶದಲ್ಲಿ ಸನ್ಯಾಸದ ದೊಡ್ಡ ಸಂಪ್ರದಾಯವಿದೆ ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಸನ್ಯಾಸಗಳಲ್ಲಿ ಅನೇಕ ರೂಪಗಳೂ ಇವೆ. ವಾನಪ್ರಸ್ಥ ಆಶ್ರಮವನ್ನು ಸಹ ಸನ್ಯಾಸತ್ವದ ಕಡೆಗೆ ಒಂದು ಹೆಜ್ಜೆ ಎಂದು ಪರಿಗಣಿಸಲಾಗುತ್ತದೆ.

ಸನ್ಯಾಸಗಳ ಅರ್ಥವು ತನ್ನನ್ನು ತಾನು ಮೀರಿ ನಿಲ್ಲುವುದು, ಸಾಮೂಹಿಕ ಹಿತಕ್ಕಾಗಿ  ಕೆಲಸ ಮಾಡುವುದು ಮತ್ತು ಸಾಮೂಹಿಕವಾಗಿ ಬದುಕುವುದು. ಇದು ಆತ್ಮವನ್ನು ಸಂಪೂರ್ಣವಾಗಿ / ಸಮುದಾಯಕ್ಕೆ ವಿಸ್ತರಿಸುವುದು. ಒಬ್ಬ ಸನ್ಯಾಸಿಯು ಆತ್ಮದ ಸೇವೆಯಲ್ಲಿ ಭಗವಂತನ ಸೇವೆಯನ್ನು ನೋಡುವುದು ಅತ್ಯಗತ್ಯ, ಅಂದರೆ ಒಬ್ಬ ವ್ಯಕ್ತಿಯಲ್ಲಿ ಶಿವನನ್ನು ನೋಡುವುದು. ಸ್ವಾಮಿ ವಿವೇಕಾನಂದ ಜೀ ಅವರು ಸನ್ಯಾಸಗಳ ಈ ಮಹಾನ್ ಪರಂಪರೆಯನ್ನು ಅದರ ಆಧುನಿಕ ರೂಪದಲ್ಲಿ ರೂಪಿಸಿದ್ದರು. ಸ್ವಾಮಿ ಆತ್ಮಸ್ಥಾನಾನಂದ  ಜೀ ಅವರು ತಮ್ಮ ಜೀವನದಲ್ಲಿ ಈ ರೀತಿಯ ಸನ್ಯಾಸದಲ್ಲಿ ಬದುಕಿದ್ದರು  ಮತ್ತು ಅದನ್ನು ಸಾಬೀತುಪಡಿಸಿದ್ದರು. ಅವರ ನಿರ್ದೇಶನದಲ್ಲಿ ಬೇಲೂರು ಮಠ ಮತ್ತು ಶ್ರೀ ರಾಮಕೃಷ್ಣ ಮಿಷನ್ ಗಳು ಭಾರತದಲ್ಲಿ ಮಾತ್ರವಲ್ಲದೆ ನೇಪಾಳ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿಯೂ ಅದ್ಭುತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದವು. ಅವರು ಗ್ರಾಮೀಣ ಪ್ರದೇಶದ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡಿದರು ಮತ್ತು ಅದಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿದರು.
 ಇಂದು ಈ ಸಂಸ್ಥೆಗಳು ಬಡವರಿಗೆ ಉದ್ಯೋಗವನ್ನು ಪಡೆಯಲು ಮತ್ತು ಜೀವನೋಪಾಯವನ್ನು ಗಳಿಸಲು ಸಹಾಯ ಮಾಡುತ್ತಿವೆ. ಸ್ವಾಮೀಜಿಯವರು ಬಡವರ ಸೇವೆ, ಜ್ಞಾನದ ಪ್ರಸಾರ ಮತ್ತು ಆ ಸಂಬಂಧಿತ ಕೆಲಸಗಳನ್ನು ದೇವರ ಆರಾಧನೆ ಎಂದು ಪರಿಗಣಿಸುತ್ತಿದ್ದರು. ಆದ್ದರಿಂದ, ಆಂದೋಲನದೋಪಾದಿಯಲ್ಲಿ  ಕೆಲಸ ಮಾಡುವುದು, ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಸಂಸ್ಥೆಗಳನ್ನು ಬಲಪಡಿಸುವುದು ಅವರಿಗೆ ರಾಮಕೃಷ್ಣ ಮಿಷನ್ ನ ತತ್ವಗಳಾಗಿದ್ದವು. ಇಲ್ಲಿ ಹೇಳಿದಂತೆ, ಎಲ್ಲೆಲ್ಲಿ  ದೈವತ್ವದ ಚೈತನ್ಯವಿದೆಯೋ ಅಲ್ಲಿ ಒಂದು ಯಾತ್ರಾಸ್ಥಳವಿರುತ್ತದೆ. ಅಂತೆಯೇ, ಅಂತಹ ಸಂತರು ಎಲ್ಲೇ ಇದ್ದರೂ, ಮಾನವೀಯತೆ ಮತ್ತು ಸೇವಾ ಮನೋಭಾವವು ಕೇಂದ್ರಬಿಂದುವಾಗಿ ಉಳಿಯುತ್ತದೆ. ಸ್ವಾಮೀಜಿಯವರು ತಮ್ಮ ಸನ್ಯಾಸ ಜೀವನದ ಮೂಲಕ ಇದನ್ನು ಸಾಬೀತುಪಡಿಸಿದ್ದರು.

ಸ್ನೇಹಿತರೇ,

ನೂರಾರು ವರ್ಷಗಳ ಹಿಂದೆ ಬದುಕಿದ್ದ ಆದಿ ಶಂಕರಾಚಾರ್ಯರಾಗಲಿ ಅಥವಾ ಆಧುನಿಕ ಕಾಲದ ಸ್ವಾಮಿ ವಿವೇಕಾನಂದರೇ ಇರಲಿ, ನಮ್ಮ ಸಂತ ಪರಂಪರೆಯು ಯಾವಾಗಲೂ 'ಏಕ್ ಭಾರತ್, ಶ್ರೇಷ್ಠ ಭಾರತ' ಎಂದು ಘೋಷಿಸುತ್ತಾ ಬಂದಿದೆ. ರಾಮಕೃಷ್ಣ ಮಿಷನ್ ನ ಸ್ಥಾಪನೆಯು 'ಏಕ್ ಭಾರತ್, ಶ್ರೇಷ್ಠ ಭಾರತ್' ಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ. ಸ್ವಾಮಿ ವಿವೇಕಾನಂದರು ಈ ನಿರ್ಣಯಕ್ಕೆ ಬದ್ದರಾಗಿ ಬದುಕಿದ್ದರು.  ಅವರು ಬಂಗಾಳದಲ್ಲಿ ಜನಿಸಿದರು. ಆದರೆ ನೀವು ದೇಶದ ಯಾವುದೇ ಭಾಗಕ್ಕೆ ಭೇಟಿ ನೀಡಿದರೆ, ವಿವೇಕಾನಂದರು ನೆಲೆನಿಲ್ಲದ ಅಥವಾ ಅವರಿಂದ ಪ್ರಭಾವಿತವಾಗಿಲ್ಲದ ಸ್ಥಳವನ್ನು ನೀವು ಕಾಣುವುದು ಕಷ್ಟ. ಅವರ ಪ್ರವಾಸವು ವಸಾಹತುಶಾಹಿಯ ಆ ಯುಗದಲ್ಲಿ ದೇಶವು ತನ್ನ ಪ್ರಾಚೀನ ರಾಷ್ಟ್ರೀಯ ಪ್ರಜ್ಞೆಯನ್ನು ಅರಿತುಕೊಳ್ಳುವಂತೆ ಮಾಡಿತು ಮತ್ತು ಅದರಲ್ಲಿ ಹೊಸ ವಿಶ್ವಾಸವನ್ನು ತುಂಬಿತು. ರಾಮಕೃಷ್ಣ ಮಿಷನ್ ನ ಈ ಸಂಪ್ರದಾಯವನ್ನು ಸ್ವಾಮಿ ಆತ್ಮಸ್ಥಾನಾನಂದ ಜೀ ಅವರು ತಮ್ಮ ಜೀವನದುದ್ದಕ್ಕೂ ಮುಂದುವರಿಸಿದರು. ಅವರು ತಮ್ಮ ಜೀವನವನ್ನು ದೇಶದ ವಿವಿಧ ಭಾಗಗಳಲ್ಲಿ ಕಳೆದಿದ್ದರು ಮತ್ತು ವಿವಿಧ ಉಪಕ್ರಮಗಳನ್ನು ಕೈಗೊಂಡಿದ್ದರು. ಅವರು ಎಲ್ಲಿಯೇ ವಾಸಿಸುತ್ತಿರಲಿ, ಅವರು ಆ ಸ್ಥಳದೊಂದಿಗೆ ತಮ್ಮನ್ನು ಸಂಪೂರ್ಣವಾಗಿ ಹೊಂದಿಸಿಕೊಂಡರು. ಗುಜರಾತ್ ನಲ್ಲಿ ವಾಸಿಸುತ್ತಿದ್ದಾಗ ಅವರು ಗುಜರಾತಿಯನ್ನು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಮತ್ತು ಅವರ ಜೀವನದ ಕೊನೆಯ ಸಂದರ್ಭದಲ್ಲಿಯೂ  ಅವರೊಂದಿಗೆ ಗುಜರಾತಿ ಭಾಷೆಯಲ್ಲಿ ಮಾತನಾಡುವಂತಹ ಅದೃಷ್ಟಶಾಲಿ ನಾನಾಗಿದ್ದೆ. ಅವರ ಗುಜರಾತಿ ಮಾತುಗಳನ್ನು ಕೇಳಲು ನಾನು ಬಹಳ ಇಷ್ಟಪಡುತ್ತಿದ್ದೆ.  ಮತ್ತು ಇಂದು ನಾನು ಒಂದು ಘಟನೆಯನ್ನು ನೆನಪಿಸಿಕೊಳ್ಳಬಯಸುತ್ತೇನೆ. ಕಛ್ ಭೂಕಂಪದ ಸಮಯದಲ್ಲಿ, ಸಮಯವನ್ನು ಒಂದಿನಿತೂ  ವ್ಯರ್ಥ ಮಾಡದೆ, ಅವರು ನನ್ನೊಂದಿಗೆ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಕಛ್ ನಲ್ಲಿ ರಾಮಕೃಷ್ಣ ಮಿಷನ್ ಮಾಡಬಹುದಾದ  ಕೆಲಸ ಮತ್ತು ಬೆಂಬಲದ ಬಗ್ಗೆ ಕೇಳಿದರು. ಮತ್ತು ಆ ಸಮಯದಲ್ಲಿ, ನಾನು ಯಾವುದೇ ರಾಜಕೀಯ ಸ್ಥಾನವನ್ನು ಹೊಂದಿರಲಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೆ. ಅವರು ಅದನ್ನು ವಿವರವಾಗಿ ಚರ್ಚಿಸಿದರು. ಮತ್ತು ಆ ಸಮಯದಲ್ಲಿ ಅವರ ಮಾರ್ಗದರ್ಶನದಲ್ಲಿ, ಕಛ್ ನಲ್ಲಿ ಭೂಕಂಪ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ಸಾಕಷ್ಟು ಕೆಲಸಗಳನ್ನು ಮಾಡಲಾಯಿತು. ಅದರಿಂದಾಗಿಯೇ, ರಾಮಕೃಷ್ಣ ಮಿಷನ್ ನ ಸಂತರನ್ನು ದೇಶದಲ್ಲಿ ರಾಷ್ಟ್ರೀಯ ಏಕತೆಯ ಸಂಕೇತವೆಂದು ಪ್ರತಿಯೊಬ್ಬರೂ ತಿಳಿದಿದ್ದಾರೆ. ಮತ್ತು, ಅವರು ವಿದೇಶಗಳಿಗೆ ಪ್ರಯಾಣಿಸುವಾಗ, ಅವರು ಅಲ್ಲಿ ಭಾರತೀಯತೆಯನ್ನು ಪ್ರತಿನಿಧಿಸುತ್ತಾರೆ

ಸ್ನೇಹಿತರೇ,

ರಾಮಕೃಷ್ಣ ಪರಮಹಂಸರಂತಹ ದೈವಿಕ ವ್ಯಕ್ತಿಯ ಆಧ್ಯಾತ್ಮಿಕ ಸಾಧನೆಯ ಮೂಲಕ ರಾಮಕೃಷ್ಣ ಮಿಷನ್ ನ ಈ ಜಾಗೃತ ಸಂಪ್ರದಾಯವು ಪ್ರಕಟಗೊಂಡಿದೆ. ಸ್ವಾಮಿ ರಾಮಕೃಷ್ಣ ಪರಮಹಂಸರು ಅಂತಹ ಒಬ್ಬ ಸಂತರಾಗಿದ್ದರು, ಅವರು ಕಾಳಿ ದೇವಿಯ ಸ್ಪಷ್ಟ ದರ್ಶನವನ್ನು ಹೊಂದಿದ್ದರು ಮತ್ತು ಕಾಳಿ ದೇವಿಯ ಪಾದಗಳಲ್ಲಿ ತಮ್ಮ ಸಂಪೂರ್ಣ ಆತ್ಮವನ್ನು ಸಮರ್ಪಿಸಿದ್ದರು.ಅವರು ಹೇಳುತ್ತಿದ್ದರು - ಈ ಇಡೀ ಜಗತ್ತು, ಈ ಅಸ್ಥಿರ ಮತ್ತು ಸ್ಥಿರ, ಎಲ್ಲವೂ ತಾಯಿಯ ಪ್ರಜ್ಞೆಯಿಂದ ವ್ಯಾಪಿಸಿದೆ. ಬಂಗಾಳದ ಕಾಳಿ ಪೂಜೆಯಲ್ಲಿ ಇದೇ ಪ್ರಜ್ಞೆ ಕಂಡುಬರುತ್ತದೆ. ಈ ಪ್ರಜ್ಞೆಯೇ ಬಂಗಾಳದ ಮತ್ತು ಇಡೀ ಭಾರತದ ಭಕ್ತಿಯಲ್ಲಿ ಕಂಡುಬರುತ್ತದೆ. ಈ ಪ್ರಜ್ಞೆ ಮತ್ತು ಶಕ್ತಿಯ ಕಿರಣವನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಂತೆ ಯುಗಪುರುಷರ ರೂಪದಲ್ಲಿ ಬೆಳಗಿಸಿದರು. ಸ್ವಾಮಿ ವಿವೇಕಾನಂದರು ಕಾಳಿ ಮಾತೆಯ ಬಗ್ಗೆ ಹೊಂದಿದ್ದ ಆಧ್ಯಾತ್ಮಿಕ ದೃಷ್ಟಿಕೋನವು ಅವರೊಳಗೆ ಅಸಾಧಾರಣ ಶಕ್ತಿಯನ್ನು ತುಂಬಿತ್ತು. ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿ ಕಾಳಿ ಮಾತೆಯ ಭಕ್ತಿಯ ಪ್ರವಾಹದಲ್ಲಿ ಸಣ್ಣ ಮಗುವಿನಂತೆ ನಡುಗುತ್ತಿದ್ದರು. ಸ್ವಾಮಿ ಆತ್ಮಸ್ಥಾನಾನಂದಜೀಯವರಲ್ಲಿಯೂ ಅದೇ ಭಕ್ತಿಯ ಪ್ರಾಮಾಣಿಕತೆ ಮತ್ತು ಅದೇ ಶಕ್ತಿ ಸಾಧನವನ್ನು ನಾನು ನೋಡಿದ್ದೇನೆ ಮತ್ತು ಅವರು ತಮ್ಮ ಭಾಷಣಗಳು ಅಥವಾ ಮಾತುಕತೆಗಳಲ್ಲಿ ಕಾಳಿ ದೇವಿಯ ಬಗ್ಗೆ ಮಾತನಾಡುತ್ತಿದ್ದರು. ನನಗೆ ನೆನಪಿದೆ, ನಾನು ಬೇಲೂರು ಮಠಕ್ಕೆ ಭೇಟಿ ನೀಡಬೇಕಾಗಿ ಬಂದಾಗ, ಗಂಗಾನದಿಯ ದಡದಲ್ಲಿ ಕುಳಿತು ಕಾಳಿ ಮಾತೆಯ ದೇವಾಲಯವನ್ನು ದೂರದಿಂದ ನೋಡುತ್ತಾ, ದೈವತ್ವದ ಬಗ್ಗೆ ವ್ಯಾಮೋಹವನ್ನು ಬೆಳೆಸಿಕೊಳ್ಳುತ್ತಿದ್ದೆ. ಭಕ್ತಿಯು ತುಂಬಾ ಪರಿಶುದ್ಧವಾದಾಗ, ದೇವಿಯು ಸ್ವತಃ ನಮಗೆ ಮಾರ್ಗವನ್ನು ತೋರಿಸುತ್ತಾಳೆ. ಅದಕ್ಕಾಗಿಯೇ ಕಾಳಿ ಮಾತೆಯ ಅನಂತವಾದಂತಹ  ಆಶೀರ್ವಾದವು ಯಾವಾಗಲೂ ಭಾರತದೊಂದಿಗೆ ಇರುತ್ತದೆ. ಇಂದು ಭಾರತವು ಈ ಆಧ್ಯಾತ್ಮಿಕ ಶಕ್ತಿಯೊಂದಿಗೆ ಜಾಗತಿಕ ಕಲ್ಯಾಣದ ಮನೋಭಾವದೊಂದಿಗೆ ಮುಂದುವರಿಯುತ್ತಿದೆ.

ಸ್ನೇಹಿತರೇ,

ನಮ್ಮ ಆಲೋಚನೆಗಳು ವಿಶಾಲವಾಗಿರುವಾಗ, ನಮ್ಮ ಪ್ರಯತ್ನಗಳಲ್ಲಿ ನಾವು ಎಂದಿಗೂ ಏಕಾಂಗಿಯಾಗಿರುವುದಿಲ್ಲ ಎಂದು ನಮ್ಮ ಋಷಿಮುನಿಗಳು ನಮಗೆ ತೋರಿಸಿದ್ದಾರೆ! ಭಾರತದಲ್ಲಿ ಅಂತಹ ಅನೇಕ ಸಂತರ ಜೀವನ ಯಾನವನ್ನು ನೀವು ನೋಡಿದರೆ, ಅವರು ಶೂನ್ಯ ಸಂಪನ್ಮೂಲಗಳೊಂದಿಗೆ ಬೃಹತ್ ನಿರ್ಣಯಗಳನ್ನು ಪೂರೈಸಿದ್ದಾರೆ ಎಂಬುದನ್ನು  ನೀವು ಮನಗಾಣುತ್ತೀರಿ. ಪೂಜ್ಯ ಆತ್ಮಸ್ಥಾನಾನಂದಜೀಯವರ ಜೀವನದಲ್ಲೂ ಇದೇ ಭಕ್ತಿ ಮತ್ತು ಸಮರ್ಪಣೆಯನ್ನು ನಾನು ನೋಡಿದ್ದೇನೆ. ನಾವು ಒಂದು ರೀತಿಯಲ್ಲಿ ಗುರು-ಶಿಷ್ಯ ಸಂಬಂಧವನ್ನು ಹೊಂದಿದ್ದೆವು. ಅವರಂತಹ ಸಂತರಿಂದ, ನಾನು ನಿಸ್ವಾರ್ಥವಾಗಿರಲು ಮತ್ತು ಸೇವೆಗೆ ನನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಕಲಿತಿದ್ದೇನೆ. ಆದ್ದರಿಂದಲೇ ನಾನು ಯಾವಾಗಲೂ ಹೇಳುವುದೇನಂದರೆ, ಒಬ್ಬ ಭಾರತೀಯ, ಒಬ್ಬ ಋಷಿ ಅಷ್ಟು ಕೆಲಸ ಮಾಡಬಲ್ಲವರಾಗಿದ್ದಾಗ, 130 ಕೋಟಿ ದೇಶವಾಸಿಗಳ ಸಾಮೂಹಿಕ ಸಂಕಲ್ಪದಿಂದ ಸಾಧಿಸಲಾಗದ್ದು ಯಾವುದೂ ಇಲ್ಲ ಎಂಬುದಾಗಿ. ಸ್ವಚ್ಛ ಭಾರತ ಅಭಿಯಾನದಲ್ಲಿ ಈ ಸಂಕಲ್ಪದ ಶಕ್ತಿಯನ್ನು ನಾವು ನೋಡಬಹುದು. ಅಂತಹ ಒಂದು ಆಂದೋಲನ ಭಾರತದಲ್ಲಿ ಯಶಸ್ವಿಯಾಗುತ್ತದೆ ಎಂದು ಜನರು ನಂಬಿರಲಿಲ್ಲ. ಆದರೆ, ದೇಶವಾಸಿಗಳು ಪ್ರತಿಜ್ಞೆ ಮಾಡಿದ್ದರು, ಮತ್ತು ಜಗತ್ತು ಫಲಿತಾಂಶಗಳನ್ನು ನೋಡುತ್ತಿದೆ. ನಮ್ಮ ಮುಂದೆ ಡಿಜಿಟಲ್ ಇಂಡಿಯಾದ ಉದಾಹರಣೆಯೂ ಇದೆ. ಡಿಜಿಟಲ್ ಪಾವತಿಗಳನ್ನು ಪರಿಚಯಿಸುವ ಸಮಯದಲ್ಲಿ, ಈ ತಂತ್ರಜ್ಞಾನವು ಭಾರತದಂತಹ ದೇಶಕ್ಕೆ ಅಲ್ಲ ಎಂದು ಹೇಳಲಾಗಿತ್ತು. ಆದರೆ ಇಂದು ಅದೇ ಭಾರತವು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಿದೆ. ಅಂತೆಯೇ, ಇತ್ತೀಚಿನ ಉದಾಹರಣೆಯೆಂದರೆ ಕೊರೋನ ವೈರಸ್ ವಿರುದ್ಧ ಲಸಿಕೆ ನೀಡುವುದು. ಎರಡು ವರ್ಷಗಳ ಹಿಂದೆ ಭಾರತದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಲು ತೆಗೆದುಕೊಳ್ಳಬೇಕಾದ ಸಮಯವನ್ನು ಅನೇಕ ಜನರು ಲೆಕ್ಕಹಾಕುತ್ತಿದ್ದರು. ಕೆಲವರು 5 ವರ್ಷಗಳು ಎಂದು ಹೇಳುತ್ತಿದ್ದರು, ಕೆಲವರು 10 ವರ್ಷಗಳು ಎಂದು ಹೇಳುತ್ತಿದ್ದರು, ಮತ್ತೆ ಕೆಲವರು 15 ವರ್ಷಗಳು ಎಂದು ಸಹ ಹೇಳುತ್ತಿದ್ದರು! ಇಂದು ನಾವು ಒಂದೂವರೆ ವರ್ಷದಲ್ಲಿ ಸುಮಾರು 200 ಕೋಟಿ ಲಸಿಕೆ ಡೋಸ್ ಗಳನ್ನು   ತಲುಪಿದ್ದೇವೆ. ಆಲೋಚನೆಗಳು ಪರಿಶುದ್ಧವಾಗಿರುವಾಗ, ಗುರಿಗಳನ್ನು ಸಾಧಿಸಲು ಪ್ರಯತ್ನಗಳು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಅಡೆತಡೆಗಳು ಕೂಡಾ  ನಿವಾರಣೆಯಾಗುತ್ತವೆ ಎಂಬ ಅಂಶವನ್ನು ಈ ಉದಾಹರಣೆಗಳು ಸಂಕೇತಿಸುತ್ತವೆ.

ಈ ರೀತಿಯಾಗಿ ದೇಶವು ನಮ್ಮ ಸಂತರಿಂದ ಆಶೀರ್ವಾದ ಮತ್ತು ಸ್ಫೂರ್ತಿಯನ್ನು, ಪ್ರೇರಣೆಯನ್ನು ಗಳಿಸುತ್ತಿರುತ್ತದೆ ಎಂಬ ಬಗ್ಗೆ  ನನಗೆ ಖಾತ್ರಿಯಿದೆ. ಮುಂದಿನ ದಿನಗಳಲ್ಲಿ, ಸ್ವಾಮಿ ವಿವೇಕಾನಂದರು ನಮ್ಮಲ್ಲಿ  ವಿಶ್ವಾಸ ತುಂಬಿಸಿದ ಮತ್ತು ಸ್ವಾಮಿ ಆತ್ಮಸ್ಥಾನಂದರಂತಹ ಸಂತರು ನಿರ್ಮಾಣ ಮಾಡಲು ಶ್ರಮಿಸಿದ ಅದೇ ಭವ್ಯ ಭಾರತವನ್ನು ನಾವು ನಿರ್ಮಿಸುತ್ತೇವೆ. ಮತ್ತು ಇಂದು ನಿಮ್ಮಂತಹ ಎಲ್ಲಾ ಪೂಜ್ಯ ಸಂತರನ್ನು ಭೇಟಿ ಮಾಡುವುದು ನನ್ನ ಕುಟುಂಬವನ್ನು ಭೇಟಿ ಮಾಡಿದಂತೆ. ವಾಸ್ತವವಾಗಿ, ನಾನು ಇದೇ ಮನೋಭಾವದಿಂದ ಮಾತನಾಡುತ್ತಿದ್ದೇನೆ. ನೀವು ಯಾವಾಗಲೂ ನನ್ನನ್ನು ನಿಮ್ಮ ಕುಟುಂಬದ ಸದಸ್ಯನೆಂದು ಪರಿಗಣಿಸಿದ್ದೀರಿ. ನಾವು ಪ್ರಸ್ತುತ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, ಪ್ರತಿ ಜಿಲ್ಲೆಯಲ್ಲೂ 75 ಅಮೃತ್ ಸರೋವರ್ ಗಳನ್ನು ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ. ನೀವು ಎಲ್ಲಿ ಕೆಲಸ ಮಾಡುತ್ತಿದ್ದರೂ, ನೀವು ಜನರನ್ನು ಪ್ರೇರೇಪಿಸಬೇಕು ಮತ್ತು ಆಂದೋಲನಕ್ಕೆ ಕೈಜೋಡಿಸಬೇಕು. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಸಮಯದಲ್ಲಿ ಮಾನವೀಯತೆಗೆ ಸಲ್ಲಿಸುವ ಉದಾತ್ತ ಸೇವೆಯಿಂದ ನಿಮ್ಮ ಕ್ರಿಯಾಶೀಲತೆಯಿಂದ ಸಾಗರದೋಪಾದಿಯ ಬೃಹತ್ ಬದಲಾವಣೆಯನ್ನು ತರಲು ಸಾಧ್ಯವಾಗಬಹುದು. ನೀವು ಎಲ್ಲಾ ಸಮಯದಲ್ಲೂ ಸಮಾಜದ ಜನರೊಂದಿಗೆ ನಿಂತಿದ್ದೀರಿ. ಶತಮಾನೋತ್ಸವ ವರ್ಷವು ಹೊಸ ಶಕ್ತಿ ಮತ್ತು ಹೊಸ ಸ್ಫೂರ್ತಿಯ ವರ್ಷವಾಗಿದೆ. ದೇಶದಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ' ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮೆಲ್ಲರ ಸಾಮೂಹಿಕ ಕೊಡುಗೆಯು ಒಂದು ಪ್ರಮುಖ ಸುಧಾರಣೆಯನ್ನು ತರಬಲ್ಲದು. ಈ ಸ್ಫೂರ್ತಿಯೊಂದಿಗೆ,ಮನೋಭಾವದೊಂದಿಗೆ ಮತ್ತೊಮ್ಮೆ ಎಲ್ಲಾ ಸಂತರಿಗೆ ನನ್ನ ನಮಸ್ಕಾರಗಳು!

 

ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

*************



(Release ID: 1842402) Visitor Counter : 124