ಸಂಪುಟ
ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ
Posted On:
08 JUN 2022 5:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ದ್ವಿಪಕ್ಷೀಯ ತಿಳುವಳಿಕಾ ಒಡಂಬಡಿಕೆಗೆ (ಎಂ.ಓ.ಯು.) ಅಂಕಿತ ಹಾಕುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಬೆಳೆಯುತ್ತಿರುವ ಭಾರತ-ಯುಎಇ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳು ಎರಡೂ ದೇಶಗಳ ನಡುವಿನ ತ್ವರಿತ ವೈವಿಧ್ಯಮಯ ಮತ್ತು ಆಳವಾದ ದ್ವಿಪಕ್ಷೀಯ ಸಂಬಂಧದ ಸ್ಥಿರತೆ ಮತ್ತು ಶಕ್ತಿಗೆ ಕೊಡುಗೆ ನೀಡುತ್ತವೆ. 1970 ರ ದಶಕದಲ್ಲಿಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರವು ವಾರ್ಷಿಕ 180 ದಶಲಕ್ಷ ಅಮೆರಿಕನ್ ಡಾಲರ್ (1373 ಕೋಟಿ ರೂ.) ಮೌಲ್ಯದ್ದಾಗಿದೆ, ಇದು 60 ಶತಕೋಟಿ ಅಮೆರಿಕನ್ ಡಾಲರ್ (4.57 ಲಕ್ಷ ಕೋಟಿ ರೂ.) ಗೆ ಏರಿದೆ. ಇದು ಚೀನಾ ಮತ್ತು ಅಮೆರಿಕ ನಂತರ 2019-20 ನೇ ಸಾಲಿನಲ್ಲಿಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಯುಎಇಯಾಗಿದೆ. ಇದಲ್ಲದೆ, ಯುಎಇ 2019-2020 ನೇ ಸಾಲಿನಲ್ಲಿ29 ಶತಕೋಟಿ ಅಮೆರಿಕ ಡಾಲರ್ (2.21 ಲಕ್ಷ ಕೋಟಿ ರೂ.) ರಫ್ತು ಮೌಲ್ಯದೊಂದಿಗೆ ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ (ಯುಎಸ್ ನಂತರ). ಯುಎಇ ಭಾರತದಲ್ಲಿಎಂಟನೇ ಅತಿದೊಡ್ಡ ಹೂಡಿಕೆದಾರರಾಗಿದ್ದು, ಅಂದಾಜು 18 ಶತಕೋಟಿ ಅಮೆರಿಕನ್ ಡಾಲರ್ (1.37 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಯುಎಇಯಲ್ಲಿ ಭಾರತೀಯ ಹೂಡಿಕೆಗಳು ಸುಮಾರು 85 ಶತಕೋಟಿ ಅಮೆರಿಕನ್ ಡಾಲರ್ (6.48 ಲಕ್ಷ ಕೋಟಿ ರೂ.) ಎಂದು ಅಂದಾಜಿಸಲಾಗಿದೆ.
ಭಾರತ ಮತ್ತು ಯುಎಇ 18/02/2022 ರಂದು ದ್ವಿಪಕ್ಷೀಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿವೆ. ಈ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿಭಾರತ ಮತ್ತು ಯುಎಇ ನಡುವಿನ ವ್ಯಾಪಾರವನ್ನು 60 ಶತಕೋಟಿ ಅಮೆರಿಕನ್ ಡಾಲರ್ (4.57 ಲಕ್ಷ ಕೋಟಿ ರೂ.) ನಿಂದ 100 ಶತಕೋಟಿ ಅಮೆರಿಕನ್ ಡಾಲರ್ (7.63 ಲಕ್ಷ ಕೋಟಿ ರೂ.) ಗೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ತಿಳುವಳಿಕಾ ಒಡಂಬಡಿಕೆಯು ಈ ಕೆಳಕಂಡ ಕ್ಷೇತ್ರಗಳಲ್ಲಿ ಪರಸ್ಪರ ಲಾಭದಾಯಕ ತಳಹದಿಯ ಮೇಲೆ ಸಹಕಾರವನ್ನು ಕಲ್ಪಿಸುತ್ತದೆ:
ಎ. ಕೈಗಾರಿಕೆಗಳ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು
ಬಿ. ನವೀಕರಿಸಬಹುದಾದ ಮತ್ತು ಇಂಧನ ದಕ್ಷ ತೆ
ಸಿ. ಆರೋಗ್ಯ ಮತ್ತು ಜೀವ ವಿಜ್ಞಾನಗಳು
ಡಿ. ಸ್ಪೇಸ್ ಸಿಸ್ಟಮ್ಸ…
ಇ. ಕೃತಕ ಬುದ್ಧಿಮತ್ತೆ
ಎಫ್. ಕೈಗಾರಿಕೆ 4.0 ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸುವುದು
ಜಿ. ಪ್ರಮಾಣೀಕರಣ, ಮಾಪನಶಾಸ್ತ್ರ, ಅನುರೂಪತೆಯ ಮೌಲ್ಯಮಾಪನ, ಮಾನ್ಯತೆ, ಮತ್ತು ಹಲಾಲ್ ಪ್ರಮಾಣೀಕರಣ.
ಈ ತಿಳುವಳಿಕಾ ಒಡಂಬಡಿಕೆಯು ಹೂಡಿಕೆ, ತಂತ್ರಜ್ಞಾನ ವರ್ಗಾವಣೆ ಮತ್ತು ಕೈಗಾರಿಕೆಗಳಲ್ಲಿ ಪ್ರಮುಖ ತಂತ್ರಜ್ಞಾನಗಳ ನಿಯೋಜನೆಯ ಮೂಲಕ ಎರಡೂ ರಾಷ್ಟ್ರಗಳಲ್ಲಿಕೈಗಾರಿಕೆಗಳನ್ನು ಬಲಪಡಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದು ಆರ್ಥಿಕತೆಯಾದ್ಯಂತ ಉದ್ಯೋಗವನ್ನು ಸೃಷ್ಟಿಸುವ ಸಾಧ್ಯತೆಯಿದೆ.
ಈ ತಿಳುವಳಿಕಾ ಒಡಂಬಡಿಕೆಯ ಅನುಷ್ಠಾನವು ಪರಸ್ಪರ ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ನವೀಕರಿಸಬಹುದಾದ ಇಂಧನ, ಕೃತಕ ಬುದ್ಧಿಮತ್ತೆ, ಕೈಗಾರಿಕೆಯನ್ನು ಶಕ್ತಗೊಳಿಸುವ ತಂತ್ರಜ್ಞಾನಗಳು ಮತ್ತು ಆರೋಗ್ಯ ಮತ್ತು ಜೀವನ ವಿಜ್ಞಾನ ಕ್ಷೇತ್ರಗಳಲ್ಲಿಸಂಶೋಧನೆ ಮತ್ತು ನಾವಿನ್ಯತೆಯಲ್ಲಿಹೆಚ್ಚಳಕ್ಕೆ ಕಾರಣವಾಗಬಹುದು. ಇದು ಈ ವಲಯಗಳ ಬೆಳವಣಿಗೆಗೆ ಕಾರಣವಾಗಬಹುದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬಹುದು, ರಫ್ತುಗಳನ್ನು ಹೆಚ್ಚಿಸಬಹುದು ಮತ್ತು ಆಮದುಗಳಲ್ಲಿಕಡಿತಕ್ಕೆ ಕಾರಣವಾಗಬಹುದು.
ಈ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕುವುದರಿಂದ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಭಾರತದ ಗೌರವಾನ್ವಿತ ಪ್ರಧಾನಮಂತ್ರಿಯವರು ನೀಡಿದ ಕರೆಯಾದ ಆತ್ಮನಿರ್ಭರ ಭಾರತದ ಗುರಿಯನ್ನು ಈಡೇರಿಸಲು ಸಾಧ್ಯವಾಗುತ್ತದೆ.
(Release ID: 1832332)
Visitor Counter : 358
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam