ಪ್ರಧಾನ ಮಂತ್ರಿಯವರ ಕಛೇರಿ

ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ʻಅಪ್ರತಿಮ ಸಪ್ತಾಹʼ (ಐಕಾನಿಕ್‌ ವೀಕ್‌) ಆಚರಣೆಗಳಿಗೆ ಚಾಲನೆ ನೀಡಿದ ಪ್ರಧಾನಿ


ಸಾಲ ಆಧರಿತ ಸರಕಾರಿ ಯೋಜನೆಗಳಿಗಾಗಿ ರಾಷ್ಟ್ರೀಯ ಪೋರ್ಟಲ್ - ʻಜನ ಸಮರ್ಥ್ ಪೋರ್ಟಲ್ʼಗೆ ಪ್ರಧಾನಮಂತ್ರಿಗಳಿಂದ ಚಾಲನೆ

"ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳಿಗೆ ಹೊಸ ಶಕ್ತಿಯನ್ನು ತುಂಬುವ ಮತ್ತು ಹೊಸ ಸಂಕಲ್ಪಗಳಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ಕ್ಷಣವಾಗಿದೆ"

"ಹೆಚ್ಚಿದ ಸಾರ್ವಜನಿಕ ಪಾಲ್ಗೊಳ್ಳುವಿಕೆಯು ದೇಶದ ಅಭಿವೃದ್ಧಿಗೆ ವೇಗ ನೀಡಿದೆ ಮತ್ತು ಕಡುಬಡವರನ್ನು ಸಶಕ್ತಗೊಳಿಸಿದೆ"

"ಕೊರತೆಯ ಮನಸ್ಥಿತಿಯಿಂದ ಹೊರಬರಲು ಮತ್ತು ದೊಡ್ಡ ಕನಸುಗಳನ್ನು ಕಾಣಲು ನಾಗರಿಕರಲ್ಲಿ ಹೊಸ ಆತ್ಮವಿಶ್ವಾಸ ಮೂಡಿರುವುದನ್ನು ನಾವು ನೋಡುತ್ತಿದ್ದೇವೆ"

"21 ನೇ ಶತಮಾನದ ಭಾರತವು ಜನ-ಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುಂದುವರಿಯುತ್ತಿದೆ"

"ನಾವು ಸುಧಾರಣೆಯ ಶಕ್ತಿ, ಸರಳೀಕರಣ ಮತ್ತು ಸರಾಗತೆಯೊಂದಿಗೆ ಸಾಗಿದಾಗ, ಹೊಸ ಮಟ್ಟದ ಅನುಕೂಲತೆಯನ್ನು ನಾವು ಪಡೆಯುತ್ತೇವೆ"

"ಒಂದು ಸಮರ್ಥ, ಕ್ರಾಂತಿಕಾರಕ, ಸೃಜನಶೀಲ, ನವೀನ ಪರಿಸರ ವ್ಯವಸ್ಥೆಯಾಗಿ ಭರವಸೆ ಮತ್ತು ವಿಶ್ವಾಸದೊಂದಿಗೆ ಜಗತ್ತು ನಮ್ಮನ್ನು ನೋಡುತ್ತಿದೆ"
"ನಾವು ಸಾಮಾನ್ಯ ಭಾರತೀಯರ ಬುದ್ಧಿವಂತಿಕೆಯನ್ನು ನಂಬಿದ್ದೇವೆ. ನಾವು ಬೆಳವಣಿಗೆಯ ಹಾದಿಯಲ್ಲಿ ಪ್ರತಿಭಾವಂತ ಸಾರ್ವಜನಿಕರು ಭಾಗಿಯಾಗುವುದನ್ನು ಪ್ರೋತ್ಸಾಹಿಸಿದೆವು"

Posted On: 06 JUN 2022 12:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ `ಅಪ್ರತಿಮ ಸಪ್ತಾಹ’ (ಐಕಾನಿಕ್‌ ವೀಕ್‌) ಆಚರಣೆಗಳಿಗೆ ಚಾಲನೆ ನೀಡಿದರು. 2022ರ ಜೂನ್ 6ರಿಂದ  11ರ ವರೆಗೆ ʻಆಜಾದಿ ಕಾ ಅಮೃತ ಮಹೋತ್ಸವ' (ಎ.ಕೆ.ಎ.ಎಂ) ಭಾಗವಾಗಿ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ.  ಸಾಲ ಆಧರಿತ ಸರಕಾರಿ ಯೋಜನೆಗಳಿಗಾಗಿ ರಾಷ್ಟ್ರೀಯ ಪೋರ್ಟಲ್ - ʻಜನ ಸಮರ್ಥ್ ಪೋರ್ಟಲ್ʼಗೆ ಸಹ ಪ್ರಧಾನಿ ಚಾಲನೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ಎರಡೂ ಸಚಿವಾಲಯಗಳ ಪ್ರಯಾಣವನ್ನು ಅನಾವರಣ ಮಾಡುವ ಡಿಜಿಟಲ್ ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ₹1, ₹2, ₹5, ₹10 ಮತ್ತು ₹20 ನಾಣ್ಯಗಳ ವಿಶೇಷ ಸರಣಿಯನ್ನು ಬಿಡುಗಡೆ ಮಾಡಿದರು. ಈ ವಿಶೇಷ ಸರಣಿಯ ನಾಣ್ಯಗಳು ʻಆಜಾದಿ ಕಾ ಅಮೃತ ಮಹೋತ್ಸವʼದ ಲೋಗೋದ ಥೀಮ್ ಅನ್ನು ಹೊಂದಿವೆ ಮತ್ತು ದೃಷ್ಟಿ ಚೇತನ ವ್ಯಕ್ತಿಗಳು ಸುಲಭವಾಗಿ ಇವುಗಳನ್ನು ಗುರುತಿಸಬಹುದಾಗಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯಕ್ಕಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಯಾರೇ ಭಾಗವಹಿಸಿದರೂ, ಅವರೆಲ್ಲರೂ ಈ ಆಂದೋಲನಕ್ಕೆ ವಿಭಿನ್ನ ಆಯಾಮವನ್ನು ಒದಗಿಸಿಕೊಟ್ಟರು ಮತ್ತು ಅದರ ಶಕ್ತಿಯನ್ನು ಹೆಚ್ಚಿಸಿದರು ಎಂದರು. ಕೆಲವರು ಸತ್ಯಾಗ್ರಹದ ಮಾರ್ಗವನ್ನು ಆರಿಸಿಕೊಂಡರು, ಕೆಲವರು ಆಯುಧಗಳ ಮಾರ್ಗವನ್ನು ಹಿಡಿದರು, ಮತ್ತೆ ಕೆಲವರು ನಂಬಿಕೆ ಮತ್ತು ಆಧ್ಯಾತ್ಮಿಕತೆಯನ್ನು ಆರಿಸಿಕೊಂಡರು, ಮತ್ತು ಕೆಲವರು ಸ್ವಾತಂತ್ರ್ಯದ ಜ್ವಾಲೆಯನ್ನು ಪ್ರಕಾಶಮಾನವಾಗಿ ಬೆಳಗಿಸಲು ಬೌದ್ಧಿಕವಾಗಿ ಸಹಾಯ ಮಾಡಿದರು. ಇಂದು ನಾವು ಅವರೆಲ್ಲರನ್ನೂ ಸ್ಮರಿಸುವ ದಿನವಾಗಿದೆ ಎಂದರು.
ಇಂದು ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ, ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ಮಟ್ಟದಲ್ಲಿ ವಿಶೇಷ ಕೊಡುಗೆ ನೀಡುವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಹೊಸ ಶಕ್ತಿಯಿಂದ ತುಂಬುವ ಮತ್ತು ಹೊಸ ಪ್ರತಿಜ್ಞೆಗಳಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ಕ್ಷಣವಾಗಿದೆ ಎಂದು ಅವರು ಹೇಳಿದರು.
ಕಳೆದ ಎಂಟು ವರ್ಷಗಳಲ್ಲಿ ಭಾರತವು ವಿವಿಧ ಆಯಾಮಗಳಲ್ಲಿ ಕಾರ್ಯಮಗ್ನವಾಗಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಈ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿದ ಸಾರ್ವಜನಿಕ ಪಾಲ್ಗೊಳ್ಳುವಿಕೆಯು ದೇಶದ ಅಭಿವೃದ್ಧಿಗೆ ವೇಗ ನೀಡಿದೆ ಮತ್ತು ದೇಶದ ಕಡುಬಡವರನ್ನು ಸಶಕ್ತಗೊಳಿಸಿದೆ. ಸ್ವಚ್ಛ ಭಾರತ ಅಭಿಯಾನವು ಬಡವರಿಗೆ ಘನತೆಯಿಂದ ಬದುಕಲು ಒಂದು ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸದೃಢ ವಸತಿ, ವಿದ್ಯುತ್, ಅನಿಲ, ನೀರು ಮತ್ತು ಉಚಿತ ಚಿಕಿತ್ಸೆಯಂತಹ ಸೌಲಭ್ಯಗಳು ಬಡವರ ಘನತೆಯನ್ನು ಹೆಚ್ಚಿಸಿವೆ ಮತ್ತು ಅವರಿಗೆ ಸುಧಾರಿತ ಸೌಕರ್ಯಗಳ ಲಭ್ಯತೆಯನ್ನು ಹೆಚ್ಚಿಸಿವೆ. ಕರೋನಾ ಅವಧಿಯಲ್ಲಿ ಉಚಿತ ಪಡಿತರದ ಯೋಜನೆಯು 80 ಕೋಟಿಗೂ ಹೆಚ್ಚು ದೇಶವಾಸಿಗಳನ್ನು ಹಸಿವಿನ ಆತಂಕದಿಂದ ಮುಕ್ತಗೊಳಿಸಿತು. "ಕೊರತೆಯ ಮನಸ್ಥಿತಿಯಿಂದ ಹೊರಬರಲು ಮತ್ತು ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ನಾಗರಿಕರಲ್ಲಿ ಹೊಸ ವಿಶ್ವಾಸ ಮೂಡಿರುವುದನ್ನು ನಾವೆಲ್ಲಾ ಇಂದು ಕಾಣುತ್ತಿದ್ದೇವೆ,ʼʼ ಎಂದು ಅವರು ಹೇಳಿದರು.
ಈ ಹಿಂದೆ ಸರಕಾರಿ-ಕೇಂದ್ರಿತ ಆಡಳಿತದ ವ್ಯವಸ್ಥೆಯ ಭಾರದಿಂದ ದೇಶವು ನಲುಗಿದೆ. ಆದರೆ ಇಂದು 21ನೇ  ಶತಮಾನದ ಭಾರತವು ಜನ-ಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುಂದುವರಿಯುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಈ ಮೊದಲು ಯೋಜನೆಗಳ ಪ್ರಯೋಜನವನ್ನು ಪಡೆಯಲು ಸರಕಾರಗಳ ಬಳಿಗೆ ಹೋಗುವುದು ಜನರ ಜವಾಬ್ದಾರಿಯಾಗಿತ್ತು. ಆದರೆ, ಈಗ ಆಡಳಿತವನ್ನೇ ಜನರ ಬಳಿಗೆ ಕೊಂಡೊಯ್ಯಲು ಒತ್ತು ನೀಡಲಾಗಿದೆ. ವಿವಿಧ ಸಚಿವಾಲಯಗಳು ಮತ್ತು ವೆಬ್‌ಸೈಟ್‌ಗಳ ಸುತ್ತಲೂ ಸುತ್ತುವ ಪರದಾಟದಿಂದ ಜನರನ್ನು ಮುಕ್ತಗೊಳಿಸಲಾಗಿದೆ ಎಂದರು. ಸಾಲ ಆಧರಿತ ಸರಕಾರಿ ಯೋಜನೆಗಳಿಗಾಗಿ ರಾಷ್ಟ್ರೀಯ ಪೋರ್ಟಲ್ - ʻಜನ ಸಮರ್ಥ್ ಪೋರ್ಟಲ್ʼ ಆರಂಭವು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಪೋರ್ಟಲ್ ವಿದ್ಯಾರ್ಥಿಗಳು, ರೈತರು, ಉದ್ಯಮಿಗಳು, ಎಂಎಸ್ಎಂಇ ಉದ್ಯಮಿಗಳ ಜೀವನವನ್ನು ಸುಧಾರಿಸುತ್ತದೆ ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಯಾವುದೇ ಸುಧಾರಣೆಯೇ ಆದರೂ ಅದರ ಉದ್ದೇಶಗಳು ಮತ್ತು ಗುರಿಗಳು ಸ್ಪಷ್ಟವಾಗಿದ್ದರೆ ಮತ್ತು ಅದರ ಅನುಷ್ಠಾನದಲ್ಲಿ ಗಂಭೀರತೆ ಇದ್ದರೆ ಉತ್ತಮ ಫಲಿತಾಂಶಗಳು ನೀಡುವುದು ಖಚಿತ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಎಂಟು ವರ್ಷಗಳಲ್ಲಿ ದೇಶವು ಕೈಗೊಂಡಿರುವ ಸುಧಾರಣೆಗಳ ಹೃದಯ ಭಾಗದಲ್ಲಿ ನಮ್ಮ ದೇಶದ ಯುವಕರನ್ನು ಇರಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇದು ಅವರ ಸಾಮರ್ಥ್ಯವನ್ನು ಪ್ರದರ್ಶಿಸಲು ಯುವಕರಿಗೆ ಸಹಾಯ ಮಾಡುತ್ತದೆ. "ನಮ್ಮ ಯುವಕರು ತಮಗೆ ಬೇಕಾದ ಕಂಪನಿಯನ್ನು ಸುಲಭವಾಗಿ ತೆರೆಯಬಹುದು, ಅವರು ತಮ್ಮ ಉದ್ಯಮಗಳನ್ನು ಸುಲಭವಾಗಿ ಪ್ರಾರಂಭಿಸಬಹುದು ಮತ್ತು ಅವರು ಅವುಗಳನ್ನು ಸುಲಭವಾಗಿ ನಡೆಸಬಹುದು. 30 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡುವ ಮೂಲಕ, 1500ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಮತ್ತು ಕಂಪನಿಗಳ ಕಾಯ್ದೆಯ ಹಲವಾರು ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸುವ ಮೂಲಕ, ಭಾರತೀಯ ಕಂಪನಿಗಳು ಮುಂದುವರಿಯುವುದು ಮಾತ್ರವಲ್ಲದೆ ಹೊಸ ಎತ್ತರಕ್ಕೆ ತಲುಪುವುದನ್ನು ನಾವು ಖಚಿತಪಡಿಸಿದ್ದೇವೆ,ʼʼ ಎಂದು ಅವರು ಹೇಳಿದರು.
ಸರಕಾರವು ತನ್ನ ಸುಧಾರಣೆಗಳಲ್ಲಿ ಸರಳೀಕರಣದತ್ತ ಗಮನ ಹರಿಸಿದೆ. ಜಿಎಸ್‌ಟಿ ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಅನೇಕ ತೆರಿಗೆಗಳ ಜಾಲವನ್ನು ಬದಲಾಯಿಸಿದೆ. ಈ ಸರಳೀಕರಣದ ಫಲಿತಾಂಶಕ್ಕೆ ಇಡೀ ದೇಶವು ಸಾಕ್ಷಿಯಾಗುತ್ತಿದೆ. ಈಗ ಜಿಎಸ್‌ಟಿ ಸಂಗ್ರಹವು ಪ್ರತಿ ತಿಂಗಳು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟುವುದು ಸಾಮಾನ್ಯವಾಗಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ʻಜಿಇಎಂ ಪೋರ್ಟಲ್ʼ ಸರಕಾರದಲ್ಲಿ ಖರೀದಿ ಪ್ರಕ್ರಿಯೆನ್ನು ಸರಳಗೊಳಿಸಿದ್ದು, ಸರಕಾರಕ್ಕೆ ಸರಕು-ಸೇವೆಗಳ ಮಾರಾಟವನ್ನು ಬಹಳ ಸುಲಭಗೊಳಿಸಿದೆ ಎಂದು ಅವರು ಹೇಳಿದರು. ಪೋರ್ಟಲ್‌ ಮೂಲಕ ಖರೀದಿ ಪ್ರಮಾಣ 1 ಲಕ್ಷ ಕೋಟಿ ರೂ. ದಾಟಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ವ್ಯವಹಾರವನ್ನು ಸುಲಭಗೊಳಿಸುವ ಪೋರ್ಟಲ್‌ಗಳ ಬಗ್ಗೆಯೂ ಅವರು ಮಾತನಾಡಿದರು. ಹೂಡಿಕೆ ಅವಕಾಶಗಳ ಬಗ್ಗೆ ಮಾಹಿತಿಗಾಗಿ ʻಇನ್ವೆಸ್ಟ್ ಇಂಡಿಯಾ ಪೋರ್ಟಲ್ʼ, ವ್ಯವಹಾರ ಔಪಚಾರಿಕತೆಗಳಿಗಾಗಿ ಏಕಗವಾಕ್ಷಿ ಕ್ಲಿಯರೆನ್ಸ್ ಪೋರ್ಟಲ್ ಬಗ್ಗೆ ಅವರು ಉಲ್ಲೇಖಿಸಿದರು. “ಇದೇ ರೀತಿಯಲ್ಲಿ ಈ ʻಜನ ಸಮರ್ಥ್ ಪೋರ್ಟಲ್ʼ ಸಹ ದೇಶದ ಯುವಜನತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗೆ ನೆರವಾಗಲಿದೆ,ʼʼ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
"ಇಂದು ನಾವು ಸುಧಾರಣೆಯ ಶಕ್ತಿ, ಸರಳೀಕರಣ ಮತ್ತು ಸರಾಗತೆಯೊಂದಿಗೆ ಸಾಗುತ್ತಿದ್ದು, ಹೊಸ ಮಟ್ಟದ ಅನುಕೂಲತೆಯನ್ನು ಸಾಧಿಸುತ್ತೇವೆ...ಭಾರತವು ಸಾಮೂಹಿಕವಾಗಿ ಏನನ್ನಾದರೂ ಮಾಡಲು ನಿರ್ಧರಿಸಿದ್ದಾದರೆ, ಭಾರತವು ವಿಶ್ವಕ್ಕೆ ಹೊಸ ಭರವಸೆಯಾಗುತ್ತದೆ ಎಂದು ನಾವು ಕಳೆದ 8 ವರ್ಷಗಳಲ್ಲಿ ತೋರಿಸಿಕೊಟ್ಟಿದ್ದೇವೆ. ಇಂದು ಜಗತ್ತು ನಮ್ಮನ್ನು ಕೇವಲ ಒಂದು ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ನೋಡುತ್ತಿಲ್ಲ. ಬದಲಿಗೆ ಒಂದು ಸಮರ್ಥ, ಕ್ರಾಂತಿಕಾರಿ, ಸೃಜನಶೀಲ, ನವೀನ ಪರಿಸರ ವ್ಯವಸ್ಥೆಯಾಗಿ ಹೊಸ ಭರವಸೆ ಮತ್ತು ವಿಶ್ವಾಸದಿಂದ ನಮ್ಮನ್ನು ನೋಡುತ್ತಿದೆ,ʼʼ ಎಂದು ಪ್ರಧಾನಿ ಹೇಳಿದರು.
ಭಾರತವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಎಂದು ವಿಶ್ವದ ಹೆಚ್ಚಿನ ಭಾಗವು ನಿರೀಕ್ಷಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕಳೆದ 8 ವರ್ಷಗಳಲ್ಲಿ ನಾವು ಸಾಮಾನ್ಯ ಭಾರತೀಯನ ಬುದ್ಧಿವಂತಿಕೆಯ ಮೇಲೆ ನಂಬಿಕೆ ಇರಿಸಿರುವುದರಿಂದ ಇದು ಸಾಧ್ಯವಾಗಿದೆ. "ನಾವು ಬೆಳವಣಿಗೆಯಲ್ಲಿ ಭಾಗಿಯಾಗುವಂತೆ ಪ್ರತಿಭಾವಂತ ಸಾರ್ವಜನಿಕರನ್ನು ಪ್ರೋತ್ಸಾಹಿಸಿದೆವು. ಉತ್ತಮ ಆಡಳಿತಕ್ಕಾಗಿ ಬಳಸಲಾಗುವ ಯಾವುದೇ ತಂತ್ರಜ್ಞಾನವನ್ನು ಜನರು ಕೇವಲ ತಾವು ಅಳವಡಿಸಿಕೊಳ್ಳುವುದಿಲ್ಲ ಮಾತ್ರವಲ್ಲ, ಅದರ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುವುದನ್ನು ನಾವು ಸದಾ ನೋಡುತ್ತಿದ್ದೇವೆ," ಎಂದು ಯುಪಿಐ ಸಾಧನೆಯನ್ನು ಉಲ್ಲೇಖಿಸುವ ಮೂಲಕ ಪ್ರಧಾನಿ ಹೇಳಿದರು.

 

*****



(Release ID: 1831495) Visitor Counter : 240