ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಶಾ ಫೌಂಡೇಶನ್ ನಿಂದ ಆಯೋಜಿಸಲಾದ ‘ಮಣ್ಣು ಉಳಿಸಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು


‘‘ಕಳೆದ 8 ವರ್ಷಗಳಲ್ಲಿ ಜಾರಿಗೊಳಿಸಿರುವ ಪ್ರಮುಖ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳುತ್ತವೆ”

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನವಾದ ಇಂದು ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು”

“ವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರವು ಅತ್ಯಲ್ಪವಾಗಿದೆ. ಆದರೆ, ಪರಿಸರವನ್ನು ರಕ್ಷಿಸುವಲ್ಲಿ ಅಂತರರಾಷ್ಟ್ರೀಯ ಸಮುದಾಯದ ಸಹಯೋಗದೊಂದಿಗೆ ಭಾರತವು ದೀರ್ಘಾವಧಿಯ ದೃಷ್ಟಿಯೊಂದಿಗೆ ಕೆಲಸ ಮಾಡುತ್ತಿದೆ”

“ಮಣ್ಣಿನ ಸಂರಕ್ಷಣೆಯ ಐದು ಅಂಶಗಳ ಕಾರ್ಯಕ್ರಮವನ್ನು ಭಾರತವು ಹೊಂದಿದೆ”

“ಭಾರತವು ಇಂದು ಅನುಸರಿಸುತ್ತಿರುವ ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ನೀತಿಗಳು, ವನ್ಯಜೀವಿಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳಕ್ಕೆ ಕಾರಣವಾಗಿವೆ”

“ನಿಗದಿತ ಅವಧಿಗಿಂತ 5 ತಿಂಗಳ ಮುಂಚಿತವಾಗಿ, ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಭಾರತ ಇಂದು ಸಾಧಿಸಿದೆ”


“ಎಥೆನಾಲ್ ಮಿಶ್ರಣವು 2014 ರಲ್ಲಿ ಶೇಕಡಾ 1.5 ರಷ್ಟಿತ್ತು”

“ಎಥೆನಾಲ್‌ನ ಶೇ 10ರಷ್ಟು ಮಿಶ್ರಣವು 27 ಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗಿದೆ. ಅಲ್ಲದೆ, 41 ಸಾವಿರ ಕೋಟಿ ಮೌಲ್ಯದ ವಿದೇಶಿ ವಿನಿಮಯವನ್ನು ಉಳಿಸಿದೆ. ಕಳೆದ 8 ವರ್ಷಗಳಲ್ಲಿ ನಮ್ಮ ರೈತರು ಇದರಿಂದ 40, 600 ಕೋಟಿಗಳನ್ನು ಗಳಿಸಿದ್ದಾರೆ”

Posted On: 05 JUN 2022 12:25PM by PIB Bengaluru

ಸಭೆಗೆ ಆರಂಭದಲ್ಲಿ ವಿಶ್ವ ಪರಿಸರ ದಿನದ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ ಅವರು, ‘ಮಣ್ಣು ಉಳಿಸಿ ಆಂದೋಲನ’ವನ್ನು ಶ್ಲಾಘಿಸಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶ ಹೊಸ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಮಯದಲ್ಲಿ, ಇಂತಹ ಚಳುವಳಿಗಳು ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ ಎಂದು  ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳ ಪ್ರಮುಖ ಕಾರ್ಯಕ್ರಮಗಳು ಪರಿಸರ ಸಂರಕ್ಷಣೆಯ ದೃಷ್ಟಿಕೋನವನ್ನು ಹೊಂದಿವೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಸ್ವಚ್ಛ ಭಾರತ್ ಮಿಷನ್ ಅಥವಾ ತ್ಯಾಜ್ಯದಿಂದ ಸಂಪತ್ತಿಗೆ ಸಂಬಂಧಿಸಿದ ಕಾರ್ಯಕ್ರಮ, ಏಕ ಬಳಕೆಯ ಪ್ಲಾಸ್ಟಿಕ್ ಕಡಿತ, ಒಂದು ಸೂರ್ಯ– ಒಂದು ಭೂಮಿ ಅಥವಾ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಪರಿಸರ ಸಂರಕ್ಷಣೆಗಾಗಿ ಭಾರತದ ಬಹು ಆಯಾಮದ ಪ್ರಯತ್ನಗಳ ಉದಾಹರಣೆಗಳಾಗಿ ಅವರು ಉಲ್ಲೇಖಿಖಿಸಿದರು.


ಪರಿಸರ ಸಂರಕ್ಷಿಸಲು ಭಾರತವು ಕೈಗೊಂಡಿರುವ ಪ್ರಯತ್ನಗಳು ಬಹುಮುಖಿಯಾಗಿವೆ ಎಂದು ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾಗಿರುವಾಗಿದ್ದರೂ, ಭಾರತ ಈ ಪ್ರಯತ್ನವನ್ನು ಮಾಡುತ್ತಿದೆ. ಪ್ರಪಂಚದ ದೊಡ್ಡ ಆಧುನಿಕ ದೇಶಗಳು ಭೂಮಿಯ ಹೆಚ್ಚು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿಲ್ಲ. ಆದರೆ, ಗರಿಷ್ಠ ಇಂಗಾಲದ ಹೊರಸೂಸುವಿಕೆಯು ಅವರ ಖಾತೆಗೆ ಹೋಗುತ್ತದೆ. ವಿಶ್ವದ ಸರಾಸರಿ ಇಂಗಾಲದ ಹೆಜ್ಜೆಗುರುತು ಪ್ರತಿ ವ್ಯಕ್ತಿಗೆ ವಾರ್ಷಿಕ 4 ಟನ್‌ಗಳಷ್ಟಿದೆ. ಭಾರತಕ್ಕೆ ಹೋಲಿಸಿದರೆ, ಪ್ರತಿ ವ್ಯಕ್ತಿಗೆ ವಾರ್ಷಿಕ ಕೇವಲ 0.5 ಟನ್‌ ಇದೆ ಎಂದು ಪ್ರಧಾನಮಂತ್ರಿ ಹೇಳಿದರು.  ಪರಿಸರ ರಕ್ಷಿಸುವ ಕುರಿತು ಭಾರತವು ಅಂತರಾಷ್ಟ್ರೀಯ ಸಮುದಾಯದ ಸಹಯೋಗದೊಂದಿಗೆ ದೀರ್ಘಾವಧಿಯ ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ವಿಪತ್ತು ನಿರೋಧಕ ಮೂಲಸೌಕರ್ಯಕ್ಕಾಗಿ ಸಹಯೋಗ ಹಾಗೂ ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಪ್ರಧಾನಮಂತ್ರಿ ಅವರು, 2070ರ ವೇಳೆಗೆ ಭಾರತವು ನಿವ್ವಳ ಶೂನ್ಯದ ಗುರಿ ಹೊಂದಿರುವುದನ್ನು ಪುನರುಚ್ಚರಿಸಿದರು.


ಮಣ್ಣು ಉಳಿಸುವುದಕ್ಕಾಗಿ ಪ್ರಮುಖವಾಗಿ ಐದು ವಿಷಯಗಳತ್ತ ನಾವು ಗಮನ ಹರಿಸಿದ್ದೇವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಮೊದಲನೆಯದು, ಮಣ್ಣನ್ನು ರಾಸಾಯನಿಕ ಮುಕ್ತವನ್ನಾಗಿ ಮಾಡುವುದು ಹೇಗೆ. ಎರಡನೆಯದು, ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನು ಹೇಗೆ ಉಳಿಸುವುದು, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಣ್ಣಿನ ಸಾವಯವ ವಸ್ತು ಎಂದು ಕರೆಯಲಾಗುತ್ತದೆ. ಮೂರನೆಯದು, ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವುದು ಹೇಗೆ,  ನೀರಿನ ಲಭ್ಯತೆ ಹೆಚ್ಚಿಸುವುದು ಹೇಗೆ? ನಾಲ್ಕನೆಯದು, ಕಡಿಮೆ ಅಂತರ್ಜಲದಿಂದಾಗಿ  ಮಣ್ಣಿಗೆ ಆಗುತ್ತಿರುವ ಹಾನಿಯನ್ನು  ಹೇಗೆ ತೆಗೆದುಹಾಕಬೇಕು ಹಾಗೂ ಐದನೆಯದಾಗಿ ಕಡಿಮೆಯಾಗುತ್ತಿರುವ ಕಾಡುಗಳಿಂದಾಗಿ ಮಣ್ಣಿನ ನಿರಂತರ ಸವೆತವನ್ನು ನಿಲ್ಲಿಸುವುದು ಹೇಗೆ ಎಂಬುದಾಗಿದೆ.


ಮಣ್ಣಿನ ಸಮಸ್ಯೆ ನಿವಾರಣೆಗೆ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದನ್ನು  ಪ್ರಧಾನಮಂತ್ರಿ ಅವರು ಹೇಳಿದರು. ಹಿಂದೆ, ನಮ್ಮ ದೇಶದ ರೈತರಿಗೆ ಮಣ್ಣಿನ ವಿಧದ ಬಗ್ಗೆ ಹಾಗೂ ಅದರಲ್ಲಿ ಎಷ್ಟು ನೀರಿದೆ ಎಂಬ ಮಾಹಿತಿಯ ಕೊರತೆ ಇತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಪ್ರಧಾನಮಂತ್ರಿ ಅವರು ಹೇಳಿದರು.


ಮಳೆ ನೀರು ಸಂರಕ್ಷಿಸುವ ಅಭಿಯಾನಗಳ ಮೂಲಕ, ಸರ್ಕಾರವು ದೇಶದ ಜನರನ್ನು ಜಲ ಸಂರಕ್ಷಣೆಯಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ  ಎಂದು ಪ್ರಧಾನಮಂತ್ರಿ ತಿಳಿಸಿದರು. ಆ ನಿಟ್ಟಿನಲ್ಲಿ, ದೇಶದ 13 ದೊಡ್ಡ ನದಿಗಳನ್ನು ಸಂರಕ್ಷಿಸುವ ಅಭಿಯಾನವು ಈ ವರ್ಷದ ಮಾರ್ಚ್‌ನಲ್ಲಿ ಆರಂಭವಾಗಿದೆ. ಇದರಲ್ಲಿ ನೀರಿನ ಮಾಲಿನ್ಯವನ್ನು ಕಡಿಮೆ ಮಾಡುವುದರೊಂದಿಗೆ, ನದಿಗಳ ದಡದಲ್ಲಿ ಕಾಡುಗಳನ್ನು ಬೆಳೆಸುವ ಕೆಲಸವನ್ನೂ ಮಾಡಲಾಗುತ್ತಿದೆ. ಅಂದಾಜಿನ ಪ್ರಕಾರ ಇದು 7,400 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಸೇರಿಸುತ್ತದೆ. ಅಲ್ಲದೆ, ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ 20 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಇದು ಹೆಚ್ಚಳ ಮಾಡುತ್ತದೆ ಎಂದು ಅವರು ಹೇಳಿದರು.


ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಭಾರತವು ಇಂದು ಅನುಸರಿಸುತ್ತಿರುವ ನೀತಿಗಳು, ವನ್ಯಜೀವಿಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಪ್ರಧಾನಮಂತ್ರಿ ಅವರು ಗಮನ ಸೆಳೆದರು. ದೇಶದಲ್ಲಿ ಇಂದು ಹುಲಿ, ಸಿಂಹ, ಚಿರತೆ, ಆನೆ ಸೇರಿದಂತೆ  ಎಲ್ಲಾ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲ ಬಾರಿಗೆ ಸ್ವಚ್ಚತಾ, ಇಂಧನದಲ್ಲಿ ಸ್ವಾವಲಂಬನೆಗೆ ಸಂಬಂಧಿಸಿದ ಉಪಕ್ರಮಗಳ ಬಗ್ಗೆಯೂ ಒತ್ತಿ ಹೇಳಿದರು. ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಮಣ್ಣಿನ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಅದಕ್ಕೆ ಗೋಬರ್ಧನ್ ಯೋಜನೆಯ ಉದಾಹರಣೆಯನ್ನು ನೀಡಿದರು.


ನಮ್ಮ ಕೆಲವು ದೊಡ್ಡ ಸಮಸ್ಯೆಗಳಿಗೆ ನೈಸರ್ಗಿಕ ಕೃಷಿಯಲ್ಲಿ ದೊಡ್ಡ ಪರಿಹಾರವಿದೆ. ಅದಕ್ಕಾಗಿ, ಈ ಬಾರಿಯ ಬಜೆಟ್‌ನಲ್ಲಿ ಗಂಗಾ ನದಿಯ ದಡದಲ್ಲಿರುವ ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇದು ನೈಸರ್ಗಿಕ ಕೃಷಿಯ ಬೃಹತ್ ಕಾರಿಡಾರ್ ಆಗಲಿದೆ. ಇದರಿಂದ ನಮ್ಮ ಹೊಲಗಳು ರಾಸಾಯನಿಕ ಮುಕ್ತವಾಗುವುದಲ್ಲದೆ, ನಮಾಮಿ ಗಂಗೆ ಅಭಿಯಾನಕ್ಕೆ ಹೊಸ ಶಕ್ತಿ ಬರಲಿದೆ. 2030ರ ವೇಳೆಗೆ 26 ದಶಲಕ್ಷ ಹೆಕ್ಟೇರ್ ಭೂಮಿಯನ್ನು ಮರುಸ್ಥಾಪಿಸುವ ಗುರಿಯೊಂದಿಗೆ ಭಾರತ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿ, ಬಿಎಸ್ –5 ಮಾನದಂಡಗಳನ್ನು ಅಳವಡಿಸಿಕೊಳ್ಳುವ ಜೊತೆಗೆ, ಎಲ್ಇಡಿ ಬಲ್ಬ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.


ನಮ್ಮ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಿಂದ  ಪಳೆಯುಳಿಕೆಯಲ್ಲದ ಇಂಧನದಿಂದ ಶೇಕಡಾ 40ರಷ್ಟು ಶಕ್ತಿಯನ್ನು ಪಡೆಯಲಾಗುತ್ತಿದ್ದು, ನಿಗದಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿ ಈ ಸಂಪನ್ಮೂಲವನ್ನು ಪಡೆಯುವ ಗುರಿಯನ್ನು ಭಾರತ ಸಾಧಿಸಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಸೌರಶಕ್ತಿ ಸಾಮರ್ಥ್ಯವು 18 ಪಟ್ಟು ಹೆಚ್ಚಾಗಿದೆ. ಹೈಡ್ರೋಜನ್ ಗುರಿ ಮತ್ತು ಸರ್ಕ್ಯೂಲರ್ ಆರ್ಥಿಕತೆಯ ನೀತಿಗಳು ಹಾಗೂ ಗುಜರಿಗೆ ಸಂಬಂಧಿಸಿದ ನೀತಿಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ನಮ್ಮ ಬದ್ಧತೆಗೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.


ನಿಗದಿತ ಅವಧಿಗಿಂತ 5 ತಿಂಗಳ ಮುಂಚೆಯೇ ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಭಾರತ ಸಾಧಿಸಿದೆ ಎಂಬ ವಿಷಯವನ್ನು ಪ್ರಧಾನಮಂತ್ರಿ ಅವರು ಇಂದು ಬಹಿರಂಗಪಡಿಸಿದರು. 2014ರಲ್ಲಿ ಎಥೆನಾಲ್ ಮಿಶ್ರಣವು ಶೇಕಡಾ 1.5ರಷ್ಟಿತ್ತು ಎಂದು ಸಾಧನೆಯ ಅಗಾಧತೆಯನ್ನು ವಿವರಿಸಿದ ಪ್ರಧಾನಮಂತ್ರಿ, ಈ ಗುರಿ ಸಾಧಿಸುವುದರಿಂದ ನಮಗೆ ಮೂರು ರೀತಿಯ ಪ್ರಯೋಜನವಿದೆ ಎಂದು ಅವರು ವಿವರಿಸಿದರು. ಮೊದಲನೆಯದಾಗಿ, 27 ಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಕಾರಣವಾಗಿದೆ. ಎರಡನೆಯದಾಗಿ, ಇದು 41 ಸಾವಿರ ಕೋಟಿ ಮೌಲ್ಯದ ವಿದೇಶಿ ವಿನಿಮಯವನ್ನು ಉಳಿಸಿದೆ ಹಾಗೂ ಮೂರನೆಯದಾಗಿ, ಎಥೆನಾಲ್ ಮಿಶ್ರಣದ ಹೆಚ್ಚಳದಿಂದಾಗಿ ಕಳೆದ 8 ವರ್ಷಗಳಲ್ಲಿ ದೇಶದ ರೈತರು 40, 600 ಕೋಟಿ ಗಳಿಸಿದ್ದಾರೆ ಎಂದ ಪ್ರಧಾನಮಮಂತ್ರಿ ಅವರು, ಈ ಸಾಧನೆಗಾಗಿ ದೇಶದ ಜನರು, ರೈತರು  ಹಾಗೂ ತೈಲ ಕಂಪನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಧಾನಮಂತ್ರಿ ರಾಷ್ಟ್ರೀಯ ಗತಿಶಕ್ತಿ ಮಾಸ್ಟರ್ ಪ್ಲಾನ್‌ನಿಂದಾಗಿ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗುವುದು. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಕಾರಣವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 100ಕ್ಕೂ ಹೆಚ್ಚು ಜಲಮಾರ್ಗಗಳಲ್ಲಿ ಬಹುಮಾದರಿಯ ಸಂಪರ್ಕವು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಲಿನ್ಯರಹಿತ ಉದ್ಯೋಗಳ ಕುರಿತು ಸಭೆಗೆ ಗಮನ ಸೆಳೆದ ಪ್ರದಾನಮಂತ್ರಿ ಅವರು,  ಪರಿಸರ ಸಂರಕ್ಷಣೆಯಲ್ಲಿ ಭಾರತದ ವೇಗವು ಮಾಲಿನ್ಯರಹಿತ ಹೆಚ್ಚಿನ ಸಂಖ್ಯೆಯ ಉದ್ಯೋಗಾವಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಪರಿಸರ ಮತ್ತು ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಾಣಕ್ಕಾಗಿ ಜನಾಂದೋಲನಕ್ಕೆ ಕರೆ ನೀಡುವುದರೊಂದಿಗೆ, ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಮುಗಿಸಿದರು.


‘ಮಣ್ಣು ಉಳಿಸಿ ಚಳುವಳಿ’ ಜಾಗತಿಕ ಆಂದೋಲನವಾಗಿದ್ದು,  ಹದಗೆಡುತ್ತಿರುವ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಸುಧಾರಣೆಗೆ ನಮ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುವುವ ಉದ್ದೇಶ ಹೊಂದಿದೆ. ಮಾರ್ಚ್ 2022ರಲ್ಲಿ ಈ ಆಂದೋಲನ ಪ್ರಾರಂಭಿಸಿದ ಸದ್ಗುರುಗಳು, 100 ದಿನಗಳಲ್ಲಿ 27 ದೇಶಗಳನ್ನು ಹಾದುಹೋಗುವ ಮೋಟಾರ್ ಸೈಕಲ್ ಪ್ರಯಾಣ ಪ್ರಾರಂಭಿಸಿದರು. 100 ದಿನಗಳ ಪ್ರಯಾಣದ 75ನೇ ದಿನವನ್ನು ಜೂನ್ 5 ಸೂಚಿಸುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆಯು, ಭಾರತದಲ್ಲಿ ಮಣ್ಣಿನ ಆರೋಗ್ಯ ಸುಧಾರಿಸುವ ಹಾಗೂ ಕಾಳಜಿ ಮಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.\

 

 

 

 

*****

 


(Release ID: 1831323) Visitor Counter : 281