ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾನ್ಪುರದ ಪರೌಂಖ್ ಗ್ರಾಮದಲ್ಲಿ, ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು


ರಾಷ್ಟ್ರಪತಿಯವರೊಂದಿಗೆ, ಅವರ ಪೂರ್ವಜರ ಗ್ರಾಮಕ್ಕೆ ತೆರಳಿದರು

“ಏಕ್ ಭಾರತ್ ಶ್ರೇಷ್ಠ ಭಾರತಕ್ಕೆ ಪರೌಂಖ್ ಒಂದು ಉತ್ತಮ ಉದಾಹರಣೆಯಾಗಿದೆ”

“ರಾಷ್ಟ್ರಪತಿಗಳು 'ಸಂವಿಧಾನ' ಮತ್ತು 'ಸಂಸ್ಕಾರ' ಎರಡನ್ನೂ ಸಾಕಾರಗೊಳಿಸುತ್ತಾರೆ ”

“ಭಾರತದಲ್ಲಿ, ಗ್ರಾಮದಲ್ಲಿ ಜನಿಸಿದ ಒಬ್ಬ ಕಡು ಬಡವನೂ ಸಹ ರಾಷ್ಟ್ರಪತಿ-ಪ್ರಧಾನಮಂತ್ರಿ-ರಾಜ್ಯಪಾಲ-ಮುಖ್ಯಮಂತ್ರಿ ಹುದ್ದೆಯನ್ನು ತಲುಪಬಹುದು”

“ಭಾರತದಲ್ಲಿನ ಹಳ್ಳಿಗಳ ಸಬಲೀಕರಣವು, ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ”

“ಬಡವರ ಕಲ್ಯಾಣಕ್ಕಾಗಿ ನಮ್ಮ ದೇಶ, ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡಿದೆ”

“ಪರಿವಾರವಾದಿ ರಾಜಕೀಯ ಪಕ್ಷಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಪಕ್ಷಗಳು, ಈ ರೋಗದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಬೇಕೆಂದು ಮತ್ತು ತಮ್ಮನ್ನು ತಾವು ಗುಣಪಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆಗ ಮಾತ್ರ ಭಾರತದ ಪ್ರಜಾಪ್ರಭುತ್ವ ಶಕ್ತಿಯುತವಾಗುತ್ತದೆ. ಮತ್ತು ದೇಶದ ಯುವಕರು ರಾಜಕೀಯಕ್ಕೆ ಸೇರಲು ಗರಿಷ್ಠ ಅವಕಾಶವನ್ನು ಪಡೆಯುತ್ತಾರೆ ”

Posted On: 03 JUN 2022 5:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸನ್ಮಾನ್ಯ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಕಾನ್ಪುರದ ಪರೌಂಖ್ ಗ್ರಾಮದಲ್ಲಿರುವ ಪತ್ರಿ ಮಾತಾ ಮಂದಿರಕ್ಕೆ ತೆರಳಿದರು. ನಂತರ ಅವರು ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಹಾಗೂ ಮಿಲನ್ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವು ಸನ್ಮಾನ್ಯ ರಾಷ್ಟ್ರಪತಿಯವರ ಪೂರ್ವಜರ ಮನೆಯಾಗಿತ್ತು, ಇದನ್ನು ಸಾರ್ವಜನಿಕ ಬಳಕೆಗಾಗಿ ದಾನ ಮಾಡಲಾಗಿದೆ ಮತ್ತು ಸಮುದಾಯ ಕೇಂದ್ರವಾಗಿ (ಮಿಲನ್ ಕೇಂದ್ರ) ಪರಿವರ್ತಿಸಲಾಗಿದೆ. ಉಭಯ ಗಣ್ಯರು ಪರೌಂಖ್ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪ್ರಥಮ ಮಹಿಳೆ ಶ್ರೀಮತಿ ಸವಿತಾ ಕೋವಿಂದ್, ಉತ್ತರ ಪ್ರದೇಶದ ಮಾನ್ಯ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರು, ರಾಜ್ಯ ಸಚಿವರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸನ್ಮಾನ್ಯ ರಾಷ್ಟ್ರಪತಿಯವರ ಬಾಲ್ಯವನ್ನು ಕಂಡ ಗ್ರಾಮಕ್ಕೆ ಭೇಟಿ ನೀಡಲು ತಮಗೆ ಸಂತೋಷವಾಗಿದೆ ಮತ್ತು ಸನ್ಮಾನ್ಯ ರಾಷ್ಟ್ರಪತಿಯವರು ದೇಶದ ಅತ್ಯುನ್ನತ ಹುದ್ದೆಗೆ ಏರಿರುವುದನ್ನೂ ಈ ಗ್ರಾಮ ಕಂಡಿದೆ ಎಂದು ಹೇಳಿದರು. ಭೇಟಿ ವೇಳೆ ಸನ್ಮಾನ್ಯ ರಾಷ್ಟ್ರಪತಿಯವರು ತಮ್ಮೊಂದಿಗೆ ಹಂಚಿಕೊಂಡ ನೆನಪುಗಳನ್ನು ನೆನಪಿಸಿಕೊಂಡರು. ಸನ್ಮಾನ್ಯ ರಾಷ್ಟ್ರಪತಿಯವರ ಜೀವನ ಪಯಣದ ಶಕ್ತಿಯನ್ನು ಅವರು ಶ್ಲಾಘಿಸಿದರು.

ಪರೌಂಖ್‌ ನಲ್ಲಿ, ಭಾರತದ ಆದರ್ಶ ಗ್ರಾಮಗಳ ಶಕ್ತಿ ತಮ್ಮ ಅನುಭವಕ್ಕೆ ಬಂದಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. ಏಕ್ ಭಾರತ್ ಶ್ರೇಷ್ಠ ಭಾರತಕ್ಕೆ ಈ ಗ್ರಾಮ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಪತ್ರಿ ಮಾತಾ ಮಂದಿರವು ದೈವ ಭಕ್ತಿ ಮತ್ತು ದೇಶ ಭಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಸನ್ಮಾನ್ಯ ರಾಷ್ಟ್ರಪತಿಯವರ ತಂದೆಯ ಚಿಂತನಾ ಕ್ರಮ ಮತ್ತು ಕಲ್ಪನೆಗೆ ಮತ್ತು ತೀರ್ಥಯಾತ್ರೆ ಬಗ್ಗೆ ಅವರ ತಂದೆಯವರಿಗಿದ್ದ ಒಲವು ಹಾಗೂ ದೇಶಾದ್ಯಂತದ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದ ನಂಬಿಕೆ ಮತ್ತು ವಿಶ್ವಾಸದ ಬಗೆಗಿನ ಲೇಖನಗಳು ಮತ್ತು ಕಲ್ಲುಗಳನ್ನು ಇಲ್ಲಿಗೆ ತಂದಿದ್ದಕ್ಕಾಗಿ ಪ್ರಧಾನಮಂತ್ರಿಯವರು ತಲೆ ಬಾಗಿದರು.

ಪರೌಂಖ್‌ ಗ್ರಾಮದ ಮಣ್ಣಿನಿಂದ ಸನ್ಮಾನ್ಯ ರಾಷ್ಟ್ರಪತಿಯವರು ಪಡೆದ ‘ಸಂಸ್ಕಾರ’ ಕ್ಕೆ ಇಂದು ಜಗತ್ತೇ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ‘ಸಂವಿಧಾನ’ ಮತ್ತು ‘ಸಂಸ್ಕಾರ’ ಎರಡನ್ನೂ ಪ್ರತಿನಿಧಿಸುವ ಸನ್ಮಾನ್ಯ ರಾಷ್ಟ್ರಪತಿಯವರು ಶಿಷ್ಟಾಚಾರವನ್ನು ಮುರಿದು ಹೆಲಿಪ್ಯಾಡ್‌ ಗೆ ಬಂದು ತಮ್ಮನ್ನು ಬರಮಾಡಿಕೊಳ್ಳುವದರೊಂದಿಗೆ ಪ್ರಧಾನಮಂತ್ರಿಯವರನ್ನು ಅಚ್ಚರಿಗೊಳಿಸಿದರು. ಅತಿಥಿಯನ್ನು ಸ್ವಾಗತಿಸುವ ‘ಸಂಸ್ಕಾರವನ್ನು’ ತಾವು ಪಾಲಿಸುತ್ತಿರುವುದಾಗಿ ಅವರು ಹೇಳಿದ್ದನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಸನ್ಮಾನ್ಯ ರಾಷ್ಟ್ರಪತಿಯವರ ಉದಾರ ಗುಣಕ್ಕಾಗಿ ಪ್ರಧಾನಮಂತ್ರಿಯವರು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು

ಸನ್ಮಾನ್ಯ ರಾಷ್ಟ್ರಪತಿಯವರು ತಮ್ಮ ಪೂರ್ವಜರ ನಿವಾಸವನ್ನು ‘ಮಿಲನ್ ಕೇಂದ್ರ’ ವನ್ನು ಅಭಿವೃದ್ಧಿಪಡಿಸಲು ನೀಡಿದ್ದರು ಎಂದು ಶ್ರೀ ಮೋದಿ ಅವರು ಹೇಳಿದರು. ಸಮಾಲೋಚನೆ ಮತ್ತು ತರಬೇತಿ ಕೇಂದ್ರದ ರೂಪದಲ್ಲಿ ಇಂದು ಈ ಕೇಂದ್ರ ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ನೀಡುತ್ತಿದೆ. ಹಾಗೆಯೇ, ಡಾ.ಬಿ.ಆರ್.ಅಂಬೇಡ್ಕರ್ ಭವನವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರಚಾರ ಮಾಡುತ್ತಿದೆ. ಗ್ರಾಮದ ಜನರ ಸಾಮೂಹಿಕ ಪ್ರಯತ್ನದಿಂದ ಪರೌಂಖ್ ಅಭಿವೃದ್ಧಿ ಹೊಂದುತ್ತಲೇ ಇರುತ್ತದೆ ಮತ್ತು ಇದು ದೇಶದ ಒಂದು ಪರಿಪೂರ್ಣ ಗ್ರಾಮದ ಮಾದರಿಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಅವನಾಗಲಿ ಅಥವಾ ಆಕೆಯಾಗಲಿ, ಒಬ್ಬ ವ್ಯಕ್ತಿ ಎಲ್ಲಿಗೇ ಹೋದರೂ, ಅವರ ಗ್ರಾಮವೂ ಅವರೊಂದಿಗೇ ಇರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಗ್ರಾಮಗಳನ್ನು ಒಗ್ಗೂಡಿಸುವುದರೊಂದಿಗೆ, ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯವನ್ನು ಕಾಣುತ್ತಿದ್ದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಗ್ರಾಮ ಎಂದರೆ, ಎಲ್ಲಿ ಆಧ್ಯಾತ್ಮಿಕತೆಯೊಂದಿಗೆ ಆದರ್ಶಗಳೂ ನೆಲೆಸಿರುವ ತಾಣ. ಭಾರತದ ಗ್ರಾಮ ಎಂದರೆ, ಸಂಪ್ರದಾಯಗಳೊಂದಿಗೆ ಪ್ರಗತಿಯೂ ಇರುವ ಸ್ಥಳ. ಭಾರತದ ಗ್ರಾಮ ಎಂದರೆ, ಎಲ್ಲೆಲ್ಲಿ ಸಂಸ್ಕೃತಿ ಇದೆಯೋ ಅಲ್ಲಿ ಸಹಕಾರವೂ ಇರಬೇಕು ಎಂದರ್ಥ. ಪ್ರೀತಿಯಿರುವೆಡೆ, ಸಮಾನತೆಯೂ ಇರುತ್ತದೆ. ಅಮೃತ ಕಾಲದ ಈ ಸಮಯದಲ್ಲಿ ಇಂತಹ ಗ್ರಾಮಗಳಿಗೆ ಶಕ್ತಿ ತುಂಬುವ ಅಗತ್ಯವಿದೆ. ಗ್ರಾಮಗಳು, ರೈತರು, ಬಡವರು ಮತ್ತು ಪಂಚಾಯತ್ ಪ್ರಜಾಪ್ರಭುತ್ವಕ್ಕಾಗಿ ಕಾರ್ಯ ನಿರ್ವಹಿಸುವ ಒಂದು ಪ್ರತಿಜ್ಞೆಯೊಂದಿಗೆ ದೇಶವು ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. “ನಮ್ಮ ಗ್ರಾಮಗಳು ಹೆಚ್ಚು ಸಮರ್ಥವಂತ ಮತ್ತು ಕಾರ್ಮಿಕ ಬಲವನ್ನು ಹೊಂದಿವೆ ಹಾಗು ಹೆಚ್ಚಿನ ಸಮರ್ಪಣೆಯನ್ನು ಹೊಂದಿವೆ. ಆದ್ದರಿಂದಲೇ, ಭಾರತದ ಗ್ರಾಮಗಳ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು.

ಜನ್ ಧನ್ ಯೋಜನೆ, ಪಿಎಂಎವೈ, ಉಜ್ವಲ ಮತ್ತು ಹರ್ ಘರ್ ಜಲ್ ಮುಂತಾದ ಯೋಜನೆಗಳಿಂದ ಕೋಟ್ಯಂತರ ಗ್ರಾಮೀಣ ಪ್ರದೇಶದ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. “ಬಡವರ ಕಲ್ಯಾಣಕ್ಕಾಗಿ ನಮ್ಮ ದೇಶ, ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡಿದೆ” ಎಂದು ಅವರು ಹೇಳಿದರು. ಈಗ ದೇಶವು, ಎಲ್ಲಾ ಯೋಜನೆಗಳ ಶೇಕಡಾ 100 ರಷ್ಟು ಪ್ರಯೋಜನವನ್ನು, ಶೇಕಡಾ 100 ರಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ಇದರಿಂದ ಯಾವುದೇ ತಾರತಮ್ಯವಿಲ್ಲದೆ ಎಲ್ಲರ ಸಬಲೀಕರಣವಾಗುತ್ತದೆ ಎಂದು ಅವರು ತಿಳಿಸಿದರು. 

ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ನಾಲ್ವರು ಗಣ್ಯರು, ಸನ್ಮಾನ್ಯ ರಾಷ್ಟ್ರಪತಿಯವರು, ಪ್ರಧಾನಮಂತ್ರಿಯವರು, ರಾಜ್ಯಪಾಲರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ, ಗ್ರಾಮಗಳು ಅಥವಾ ಚಿಕ್ಕ ಪಟ್ಟಣಗಳಿಂದ ಹೊರಹೊಮ್ಮಿದವರಾಗಿದ್ದಾರೆ ಎಂದು ಹೇಳಿದರು. ನಮ್ಮ ಹೋರಾಟಗಳು ಮತ್ತು ಬಡತನದೊಂದಿದಿಗಿನ ನೇರ ಅನುಭವ ಹಾಗೂ ಗ್ರಾಮೀಣ ಜೀವನ ನಮ್ಮ ಸಂಸ್ಕಾರಗಳನ್ನು ಬಲಪಡಿಸಿದೆ, ಇದೇ ನಮ್ಮ ಪ್ರಜಾಪ್ರಭುತ್ವದ ಶಕ್ತಿ. “ಭಾರತದಲ್ಲಿ, ಗ್ರಾಮದಲ್ಲಿ ಜನಿಸಿದ ಒಬ್ಬ ಕಡು ಬಡವನೂ ಸಹ ರಾಷ್ಟ್ರಪತಿ-ಪ್ರಧಾನಮಂತ್ರಿ-ರಾಜ್ಯಪಾಲ-ಮುಖ್ಯಮಂತ್ರಿ ಹುದ್ದೆಯನ್ನು ತಲುಪಬಹುದು” ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಪರಿವಾರವಾದಿ ರಾಜಕಾರಣದ ವಿರುದ್ಧ ಎಚ್ಚರಿಕೆ ನೀಡಿದರು. ಪರಿವಾರವಾದಿ ರಾಜಕಾರಣವು, ರಾಜಕೀಯದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭೆಗಳನ್ನು ಹಿಮ್ಮೆಟ್ಟಿಸುತ್ತದೆ ಮತ್ತು ಹೊಸ ಪ್ರತಿಭೆಗಳನ್ನು ಬೆಳೆಯದಂತೆ ತಡೆಯುತ್ತದೆ ಎಂದು ಅವರು ಹೇಳಿದರು. “ನನಗೆ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ದೇಶದಲ್ಲಿ ಪ್ರಬಲವಾದ ಪ್ರತಿಪಕ್ಷವಿರಬೇಕು ಮತ್ತು ಪ್ರಜಾಪ್ರಭುತ್ವಕ್ಕೆ ಮೀಸಲಾದ ರಾಜಕೀಯ ಪಕ್ಷಗಳು ಇರಬೇಕು ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು. “ಪರಿವಾರವಾದಿ ರಾಜಕೀಯ ಪಕ್ಷಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಪಕ್ಷಗಳು, ಈ ರೋಗದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಬೇಕೆಂದು ಮತ್ತು ತಮ್ಮನ್ನು ತಾವು ಗುಣಪಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆಗ ಮಾತ್ರ ಭಾರತದ ಪ್ರಜಾಪ್ರಭುತ್ವ ಶಕ್ತಿಯುತವಾಗುತ್ತದೆ. ಮತ್ತು ದೇಶದ ಯುವಕರು ರಾಜಕೀಯಕ್ಕೆ ಸೇರಲು ಗರಿಷ್ಠ ಅವಕಾಶವನ್ನು ಪಡೆಯುತ್ತಾರೆ” ಎಂದೂ ಅವರು ಹೇಳಿದರು

ಗ್ರಾಮದಲ್ಲಿ ಅಮೃತ ಸರೋವರ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸುವಂತೆ ಪ್ರಧಾನಮಂತ್ರಿಯವರು ಗ್ರಾಮಸ್ಥರನ್ನು ಆಗ್ರಹಿಸಿದರು ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ಹೇಳಿದರು. ಸ್ವಾವಲಂಬಿ ಭಾರತವನ್ನು ನಿರ್ಮಿಸಲು ‘ಸಬ್ಕಾ ಪ್ರಾಯಸ್’ (ಎಲ್ಲರ ಪ್ರಯತ್ನ) ಒಂದೇ ಮಾರ್ಗವಾಗಿದೆ ಮತ್ತು ಸ್ವಾವಲಂಬಿ ಗ್ರಾಮವೇ, ಸ್ವಾವಲಂಬಿ ಭಾರತದ ಯಶಸ್ಸಿನ ಪ್ರಮುಖ ಮೂಲವಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಭಾರತದ ಸನ್ಮಾನ್ಯ ರಾಷ್ಟ್ರಪತಿಯವರೂ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 

 

*****


(Release ID: 1831150)