ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಇಂಟರ್ ಸೋಲಾರ್ ಯೂರೋಪ್ 2022ರಲ್ಲಿ "ಭಾರತದ ಸೌರ ಶಕ್ತಿ ಮಾರುಕಟ್ಟೆ" ಕುರಿತು ಪ್ರಧಾನ ಭಾಷಣ ಮಾಡಿದ ಶ್ರೀ ಭಗವಂತ್ ಖೂಬಾ


ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ ಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಬದ್ಧ: ಶ್ರೀ ಖೂಬಾ

ಆರ್.ಇ. ವಲಯದಲ್ಲಿ ಹೂಡಿಕೆಗೆ ಭಾರತವು ಉತ್ತಮ ಅವಕಾಶವನ್ನು ಒದಗಿಸುತ್ತದೆ; ಭಾರತದಲ್ಲಿ 196.98 ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳು ನಡೆಯುತ್ತಿವೆ

Posted On: 13 MAY 2022 1:20PM by PIB Bengaluru

 ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀ ಭಗವಂತ್ ಖೂಬಾ ಅವರು ಜರ್ಮನಿಯ ಮ್ಯೂನಿಚ್ ನಲ್ಲಿ ನಡೆದ ಇಂಟರ್ ಸೋಲಾರ್ ಯೂರೋಪ್ 2022 ರಲ್ಲಿ ಪಾಲ್ಗೊಂಡಿದ್ದರು. "ಭಾರತದ ಸೌರಶಕ್ತಿ ಮಾರುಕಟ್ಟೆ" ಕುರಿತ ಹೂಡಿಕೆ ಉತ್ತೇಜನ ಕಾರ್ಯಕ್ರಮದಲ್ಲಿ ಸಚಿವರು ಪ್ರಧಾನ ಭಾಷಣ ಮಾಡಿದರು.
ಶ್ರೀ ಭಗವಂತ್ ಖೂಬಾ ಅವರು ತಮ್ಮ ಪ್ರಧಾನ ಭಾಷಣದಲ್ಲಿ, 'ಕಾಪ್-26ರ ವೇಳೆ ಮಾನ್ಯ ಪ್ರಧಾನಮಂತ್ರಿ ಮೋದಿ ಅವರು ನಿಗದಿ ಮಾಡಿದ ಮಹತ್ವಾಕಾಂಕ್ಷೆಯ ಪಂಚಾಮೃತ ಗುರಿಗಳಂತೆ ಭಾರತವು 2070ರ ಹೊತ್ತಿಗೆ ಹೊರಸೂಸುವಿಕೆಯಲ್ಲಿ ಶೂನ್ಯವನ್ನು ಸಾಧಿಸಲು ಮತ್ತು 2030ರ ವೇಳೆಗೆ 500 ಗೀಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸ್ಥಾವರ ಸ್ಥಾಪಿಸಲು ಸಜ್ಜಾಗಿದೆ' ಎಂದು ಹೇಳಿದರು. ಭಾರತದ ಅಪಾರ ನವೀಕರಿಸಬಹುದಾದ ಇಂಧನ ಸಂಪನ್ಮೂಲ ಸಾಮರ್ಥ್ಯ ಮತ್ತು ಬಲವಾದ ನೀತಿ ಬೆಂಬಲವು ಈ ಗುರಿಗಳನ್ನು ಸಾಧಿಸಲು ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಶ್ರೀ ಖೂಬಾ ಹೇಳಿದರು.
ಕಳೆದ 7 ವರ್ಷಗಳಲ್ಲಿ ಭಾರತವು ಆರ್.ಇ. ಸಾಮರ್ಥ್ಯದಲ್ಲಿ ಅನೂಹ್ಯ ಬೆಳವಣಿಗೆಯನ್ನು ಕಂಡಿದ್ದು 2021 ರಲ್ಲಿ ಪಳೆಯುಳಿಕೆಯೇತರ ಇಂಧನದಿಂದ ಶೇ. 40ರಷ್ಟು ಸಂಚಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ಸಾಧಿಸಿದೆ, ಇದು 2030ರ ನಿಗದಿತ ಗುರಿಗಿಂತ 9 ಪೂರ್ಣ ವರ್ಷ ಮುಂಚಿತವಾಗಿದೆ ಎಂದು ಅವರು ಹೇಳಿದರು. ತನ್ನ ಮಹತ್ವಾಕಾಂಕ್ಷೆಯ ನಿಯೋಜಿತ ಗುರಿಗಳನ್ನು ಸಾಧಿಸಲು ಸೌರ ಪಿ.ವಿ. ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಬದ್ಧವಾಗಿದೆ. ದೇಶೀಯ ಪಿ.ವಿ. ಉತ್ಪಾದನಾ ವಲಯವನ್ನು ಬೆಂಬಲಿಸಲು ಹಲವಾರು ನೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್ ಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ ಎಂದು ಸಚಿವರು ಒತ್ತಿ ಹೇಳಿದರು, ಇದಕ್ಕಾಗಿ ಒಟ್ಟು 24,000 ಕೋಟಿ ರೂ.ಗಳ ಬಜೆಟ್ ಹಂಚಿಕೆ ಮಾಡಲಾಗಿದೆ. ಇದಲ್ಲದೆ ಹಸಿರು ಹೈಡ್ರೋಜನ್ ಆರ್ಥಿಕತೆಯನ್ನು ಉತ್ತೇಜಿಸಲು ಭಾರತವು 25,425 ಕೋಟಿ ರೂ.ಗಳ ಅಂದಾಜು ವೆಚ್ಚ ಮಾಡಲಿದೆ. ಹಸಿರು ಹೈಡ್ರೋಜನ್ ಅಭಿಯಾನ ವಾರ್ಷಿಕ 4.1 ದಶಲಕ್ಷ ಟನ್ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸುವ ನಿರೀಕ್ಷಿಸಿದೆ ಎಂದರು.
'ಇದಲ್ಲದೆ ಭಾರತವು ಹೂಡಿಕೆಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಪ್ರಸ್ತುತ ಭಾರತದಲ್ಲಿ ಸುಮಾರು 196.98 ಶತಕೋಟಿ ಡಾಲರ್ ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ. ಭಾರತವು ವಿಶ್ವಕ್ಕೆ ನೀಡುತ್ತಿರುವ ಅವಕಾಶವನ್ನು ಬಳಸಿಕೊಳ್ಳುವಂತೆ ನಾನು ಮತ್ತೊಮ್ಮೆ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಪ್ರಮುಖ ಆರ್.ಇ. ವಲಯದ ಗಣ್ಯರನ್ನು ಆಹ್ವಾನಿಸುತ್ತೇನೆ' ಎಂದು ಸಚಿವರು ಹೇಳಿದರು. 

***


(Release ID: 1825085) Visitor Counter : 210