ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕ್ಯಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಸಾಲು ಸಾಲು ಚಿತ್ರಗಳು


ರಾಕೆಟ್ರಿ – ದ ನಂಬಿ ಎಫೆಕ್ಟ್, ಕ್ಯಾನ್‌ ನಲ್ಲಿ ಪ್ರಥಮ ವಿಶ್ವ ಪ್ರದರ್ಶನ

ಪ್ರಮುಖವಾಗಿ ಗಮನಸೆಳೆಯಲಿರುವ ತಮಿಳು, ಮರಾಠಿ, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳು

Posted On: 12 MAY 2022 3:17PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಕ್ಯಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶ್ರೀ ಆರ್ ಮಾಧವನ್ ಅಭಿನಯಿಸಿ, ನಿರ್ದೇಶಿಸಿರುವ ರಾಕೆಟ್ರಿ ಚಿತ್ರದ ಪ್ರಥಮ ವಿಶ್ವ ಪ್ರದರ್ಶನವೂ ಸೇರಿದೆ. ರಾಕೆಟ್ರಿ- ದ ನಂಬಿ ಎಫೆಕ್ಟ್ ಪಲೈಸ್ ಕೆ ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದ್ದರೆ, ಇತರ ಚಲನಚಿತ್ರಗಳು ಒಲಂಪಿಯಾ ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿವೆ. ಚಲನಚಿತ್ರೋತ್ಸವದ 75 ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುವ ಚಲನಚಿತ್ರಗಳು ಈ ಕೆಳಗಿನಂತಿವೆ:


1. ರಾಕೆಟ್ರಿ – ದ ನಂಬಿ ಎಫೆಕ್ಟ್‌ 

ನಿರ್ದೇಶಕ: ಶ್ರೀ ಆರ್. ಮಾಧವನ್
ನಿರ್ಮಾಪಕ: ಶ್ರೀ ಆರ್. ಮಾಧವನ್
ಭಾಷೆ: ಹಿಂದಿ, ಇಂಗ್ಲೀಷ್, ತಮಿಳು
ಸಾರಾಂಶ
ರಾಕೆಟ್ರಿ – ದ ನಂಬಿ ಎಫೆಕ್ಟ್ ಶ್ರೀ ನಂಬಿ ನಾರಾಯಣನ್ ಅವರ ಜೀವನ ಕಥೆಯಾಗಿದೆ. ಇದು ಟಿವಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ನ ಪ್ರಸಿದ್ಧ ಸೂಪರ್‌ಸ್ಟಾರ್ ಮತ್ತು ಬಾದ್‌ಶಾ ಶಾರುಖ್ ಖಾನ್ ಅವರ ಸಂದರ್ಶನದಲ್ಲಿ ಬಿಚ್ಚಿಕೊಳ್ಳುತ್ತದೆ. ಅನೇಕ ಮಹಾನ್ ವ್ಯಕ್ತಿಗಳಂತೆ, ನಂಬಿ ಕೂಡ ನ್ಯೂನತೆ ಉಳ್ಳವರಾಗಿರುತ್ತಾರೆ. ಅವರ ಪ್ರತಿಭೆ ಮತ್ತು ಗೀಳು ಅವರಿಗೆ ಶತ್ರುಗಳು ಮತ್ತು ವಿರೋಧಿಗಳನ್ನು ಸೃಷ್ಟಿಗೆ ಕಾರಣವಾಗುತ್ತದೆ. ಇದು ಅವರನ್ನು ಬಲವಾದ ಆಧುನಿಕ ನಾಯಕನನ್ನಾಗಿ ಮಾಡುತ್ತದೆ.
ಈ ಚಲನಚಿತ್ರವು ಸಮಾಜದಲ್ಲಿನ ಮೌನ ಸಾಧಕರ ಸಮರ್ಥನೆಯ ಹೊರತಾಗಿ, ನಂಬಿ ನಾರಾಯಣನ್ ಆಗಿರಲಿ ಅಥವಾ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರಾಗಿರಲಿ, ಗಡಿ ಕಾಯುವ ಸೈನಿಕರಿರಲಿ, ದೂರದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಸ್ವಯಂಸೇವಕರಿರಲಿ ಅಂತಹ ವಿಶೇಷ ಕೊಡುಗೆ ನೀಡಿದವರನ್ನು ಗುರುತಿಸುವ ಮತ್ತು ಸಂಭ್ರಮಿಸುವ ಜವಾಬ್ದಾರಿಯ ಸವಾಲನ್ನು ಪ್ರೇಕ್ಷಕರಿಗೆ ನೀಡುತ್ತದೆ. ಪ್ರಬಲ ಶಕ್ತಿಗಳ ವಿರುದ್ಧ ನಮ್ಮ ಮುಗ್ಧ ಮತ್ತು ಬಲಹೀನರನ್ನು ರಕ್ಷಿಸಲು ನಾವು ಏಕೆ ಒಟ್ಟಾಗಿ ನಿಲ್ಲುತ್ತಿಲ್ಲ? ಎಂಬ ಪ್ರಬಲವಾದ ಪ್ರಶ್ನೆಯನ್ನು ಸಹ ಚಿತ್ರವು ಹುಟ್ಟುಹಾಕುತ್ತದೆ. ನ್ಯಾಯಕ್ಕಾಗಿ ಹೋರಾಡುವ ನಂಬಿಯಂತಹ ಸಾವಿರಾರು ಮೌನ ಸಾಧಕರಿದ್ದಾರೆ. 
ಈ ಕಥೆಗಳನ್ನು ಕೇಳಬೇಕು. ಇದು ನಂಬಿಯಿಂದ ಪ್ರಾರಂಭವಾಗುತ್ತದೆ, ಆದರೆ ಅವನು ಕೇವಲ ಆರಂಭ ಮಾತ್ರ.

 

2. ಗೋದಾವರಿ


ನಿರ್ದೇಶಕ: ಶ್ರೀ ನಿಖಿಲ್ ಮಹಾಜನ್
ನಿರ್ಮಾಣ: ಬ್ಲೂ ಡ್ರಾಪ್ ಫಿಲ್ಮ್ಸ್ ಪ್ರೈ. ಲಿಮಿಟೆಡ್
ಭಾಷೆ: ಮರಾಠಿ
ಸಾರಾಂಶ
ಇದು ನಿಶಿಕಾಂತ್ ದೇಶಮುಖ್ ಎನ್ನುವವರ ಕಥೆಯಾಗಿದೆ - ಅವರು ತಮ್ಮ ಕುಟುಂಬದೊಂದಿಗೆ ನದಿಯ ದಡದಲ್ಲಿ ಹಳೆಯ ಬಂಗಲೆಯಲ್ಲಿ ವಾಸಿಸುತ್ತಿರುತ್ತಾರೆ. ತಲೆಮಾರುಗಳಿಂದ ನಿಶಿ ಮತ್ತು ಅವರ ಕುಟುಂಬ ಬಾಡಿಗೆ ವಸೂಲಿಗಾರರಾಗಿರುತ್ತಾರೆ. ಅವರು ಪಟ್ಟಣದ ಹಳೆಯ ಭಾಗದಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಅವನ ಅಜ್ಜ ನರೋಪಂತ್ ಮರೆವಿನ ಕಾಯಿಲೆಯಿಂದ ಬಳಲುತ್ತಿರುತ್ತಾನೆ.
ಅವನ ರಕ್ತಸಂಬಂಧದ ಕೊನೆಯ ಕುಡಿಯಾದ ನಿಶಿಕಾಂತ್, ತನ್ನ ಜೀವನದಲ್ಲಿ ಹತಾಶನಾಗಿರುತ್ತಾನೆ. ಅವನು ಹಳೆಯ ಪಟ್ಟಣದ ಬೀದಿಗಳನ್ನು ದ್ವೇಷಿಸುತ್ತಾನೆ, ಅವನು ತನ್ನ ಅರ್ಥಹೀನತೆ ಜೀವನವನ್ನು ದ್ವೇಷಿಸುತ್ತಾನೆ, ಅವನು ತನ್ನ ಅಸಮರ್ಥತೆಯನ್ನು ದ್ವೇಷಿಸುತ್ತಾನೆ. ಆದರೆ ಹೆಚ್ಚಿನ ಭಾರತೀಯ ಪುರುಷರಂತೆ, ಅವನು ತನ್ನ ದ್ವೇಷವನ್ನು ಬಾಡಿಗೆದಾರರು ಮತ್ತು ಪಟ್ಟಣವನ್ನು ದೂಷಿಸಲು ಬಳಸಿಕೊಳ್ಳುತ್ತಾನೆ. ನಿಶಿಕಾಂತ್ ನದಿಯಿಂದ ದೂರದಲ್ಲಿರುವ ತನ್ನ ಚಿಕ್ಕ ಅಪಾರ್ಟ್ಮೆಂಟ್ ಗಳ ಬಾಡಿಗೆಯನ್ನು ಸಂಗ್ರಹಿಸುತ್ತಾನೆ ಮತ್ತು ವಿಡಿಯೋ ಗೇಮ್‌ ಗಳನ್ನು ಆಡುತ್ತಾನೆ. ಹೆಂಡತಿ ಮತ್ತು ಮಗಳನ್ನು ತನ್ನ ಹೆತ್ತವರೊಂದಿಗೆ ಬಿಟ್ಟು ಅವನು ತನ್ನ ಕುಟುಂಬದ ಬಂಗಲೆಯಿಂದ ಹೊರಬಂದಿರುತ್ತಾನೆ. ಅವನು ತನ್ನ ಸಮಯವನ್ನು ನದಿ ಮತ್ತು ಅದರೊಂದಿಗೆ ಬರುವ ಎಲ್ಲದರ ಮೇಲೆ ಕೋಪ ತೋರಿಸಲು ಕಳೆಯುತ್ತಾನೆ. ತಾನೊಬ್ಬ ಅಕಾರಣ ವ್ಯಕ್ತಿಯೆಂದು ಅವನಿಗೆ ತಿಳಿದಿದೆ.
ಆದಾಗ್ಯೂ, ಜೀವನ ಮತ್ತು ಸಾವು ಯಾವಾಗಲೂ ಕಾಕತಾಳೀಯವಾಗಿರುತ್ತದೆ, ಒಬ್ಬ ವ್ಯಕ್ತಿಯ ಸಾವು ಅನೇಕರಿಗೆ ಬದುಕುವ ಮಾರ್ಗವಾಗಿರುವ ಆ ಪಟ್ಟಣದಲ್ಲಿ ಅದು ಮತ್ತಷ್ಟು ಸ್ಪಷ್ಟವಾಗಿರುತ್ತದೆ.


3. ಆಲ್ಫಾ ಬೀಟಾ ಗಾಮಾ


ನಿರ್ದೇಶಕ: ಶ್ರೀ ಶಂಕರ್ ಶ್ರೀಕುಮಾರ್
ನಿರ್ಮಾಣ: ಚೋಟಿ ಫಿಲ್ಮ್ ಪ್ರೊಡಕ್ಷನ್ಸ್
ಭಾಷೆ: ಹಿಂದಿ
ಸಾರಾಂಶ
ಜೈ ಅವರ ನಿರ್ದೇಶನದ ವೃತ್ತಿಜೀವನವು ಉತ್ತುಂಗದಲ್ಲಿದ್ದರೆ, ಅವರ ವೈವಾಹಿಕ ಜೀವನವು ಸಂಕಷ್ಟದಲ್ಲಿರುತ್ತದೆ. ಅವರು ತಮ್ಮ ಗೆಳತಿ ಕೈರಾಳೊಂದಿಗೆ ಜೀವನ ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ, ಅವರ ಪತ್ನಿ ಮಿತಾಲಿ ವಿಚ್ಛೇದನ ಪಡೆದು ತನ್ನ ಇಂಜಿನಿಯರ್ ಗೆಳೆಯ ರವಿಯನ್ನು ಮದುವೆಯಾಗಲು ಬಯಸುತ್ತಾಳೆ. ರವಿಯು ಸದ್ಯದಲ್ಲಿಯೇ ಮಾಜಿ ಗಂಡನಾಗಲಿರುವ ಜೈನಂತೆ ಮುಂಗೋಪಿಯಾಗಿರದೇ, ಸಮಚಿತ್ತದ ಕಾಳಜಿಯ ವ್ಯಕ್ತಿಯಾಗಿರುತ್ತಾನೆ. 
ಜೈ ವಿಚ್ಛೇದನದ ಬಗ್ಗೆ ಮಾತನಾಡಲು ಬಂದಾಗ, ರವಿ ಫ್ಲಾಟ್‌ನಲ್ಲಿರುತ್ತಾನೆ. ಅದು ಒಂದು ಕಾಲದಲ್ಲಿ ಜೈ ಮತ್ತು ಮಿತಾಲಿಯ ಮನೆಯಾಗಿತ್ತು. ಅವರಿಬ್ಬರು ತನ್ನ ಮುಂದೆ ವಿಚ್ಛೇದನದ ಬಗ್ಗೆ ಮಾತನಾಡುವುದು ಸರಿ ಕಾಣುವುದಿಲ್ಲ ಎಂದು ತಿಳಿದ ರವಿ ಅಲ್ಲಿಂದ ಹೊರಡಲು ನಿರ್ಧರಿಸುತ್ತಾನೆ.
ಆದರೆ ಮಿತಾಲಿಯ ಜೀವನದಲ್ಲಿ ಒಬ್ಬರು ಇನ್ನೊಬ್ಬರಿಗೆ ದಾರಿ ಮಾಡಿಕೊಡುವ ಮೊದಲೇ ಕೊರೊನಾ ವೈರಸ್ ಲಾಕ್‌ಡೌನ್ ಬಂದುಬಿಡುತ್ತದೆ. 
ಈಗ ಪ್ರೀತಿಯ ವೈರಸ್‌ನಿಂದ ಆ ಮೂರೂ ಜೀವಗಳು ಪೀಡಿತವಾಗುತ್ತವೆ.  ತಮಗೆ ಏನು ಬೇಕು ಮತ್ತು ಅದಕ್ಕೆ ಯಾವ ಬೆಲೆ ತೆರಬೇಕು ಎಂಬ ಜಿಜ್ಞಾಸೆಗೆ ಸಿಲುಕುತ್ತವೆ.

 


4.  ಬೂಂಬಾ ರೈಡ್


ನಿರ್ದೇಶಕ: ಶ್ರೀ ಬಿಸ್ವಜೀತ್ ಬೋರಾ
ನಿರ್ಮಾಣ: ಕ್ವಾಟರ್ಮೂನ್ ಪ್ರೊಡಕ್ಷನ್ಸ್
ಭಾಷೆ: ಮಿಶಿಂಗ್
ಸಾರಾಂಶ
ಗಾಡ್ ಆನ್ ದಿ ಬಾಲ್ಕನಿ ಚಿತ್ರದ ನಿರ್ದೇಶಕ ಬಿಸ್ವಜೀತ್ ಬೋರಾ ಅವರ ಬೂಂಬಾ ರೈಡ್ ಭಾರತದ ಗ್ರಾಮೀಣ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಕುರಿತ ಕಟುವಾದ ಹಾಸ್ಯ ವಿಡಂಬನೆಯಾಗಿದೆ. ಎಂಟು ವರ್ಷದ ಹುಡುಗನೊಬ್ಬ (ಹೊಸ ಪರಿಚಯ ಇಂದ್ರಜಿತ್ ಪೆಗು, ಗಮನಾರ್ಹ ನಟನೆ) ಆಟದಲ್ಲಿ ಮೋಸ ಮಾಡುವುದು ಹೇಗೆ ಎಂದು ತಿಳಿದಿರುತ್ತಾನೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಈ ಚಲನಚಿತ್ರವನ್ನು ಅಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ದಡದಲ್ಲಿ ಬಹುತೇಕ ವೃತ್ತಿಪರರಲ್ಲದ ತಾರಾಗಣದೊಂದಿಗೆ ಚಿತ್ರೀಕರಿಸಲಾಗಿದೆ.
ಕಥೆಯು ಒಂದು ದುಸ್ಥಿತಿಯಲ್ಲಿರುವ ಶಾಲೆಯ ಸುತ್ತ ಸುತ್ತುತ್ತದೆ, ಅಲ್ಲಿ ಒಬ್ಬನೇ ಒಬ್ಬ (ಇಷ್ಟವಿಲ್ಲದಿದ್ದರೂ) ವಿದ್ಯಾರ್ಥಿ ಬೂಂಬಾ. ತಮ್ಮ ಉದ್ಯೋಗ ಮತ್ತು ಧನಸಹಾಯವನ್ನು ಉಳಿಸಿಕೊಳ್ಳಲು ಶಿಕ್ಷಕರು, ನಿರ್ದಾಕ್ಷಿಣ್ಯದ ಮತ್ತು ಅಸಹಕಾರದ ಈ ಹುಡುಗ ತರಗತಿಗೆ ಬರುವಂತೆ ಮಾಡಲು ಅವನಿಗೆ ಲಂಚವನ್ನು ನೀಡುತ್ತಾರೆ. ಆದರೆ ಬೂಂಬಾನಿಗಿದ್ದ ಒಳ ಆಸೆಯೆಂದರೆ, ಸ್ವಲ್ಪ ವಯಸ್ಸಾದ ಮತ್ತು ತುಂಬಾ ಸುಂದರಿಯಾದ ಹುಡುಗಿಯೊಬ್ಬಳು ಓದುತ್ತಿರುವ ಪಟ್ಟಣದ ಉತ್ತಮ ಶಾಲೆಗೆ ಸೇರಬೇಕು ಎಂಬುದಾಗಿರುತ್ತದೆ.
ಬೂಂಬಾ ರೈಡ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ. ನಾನು ಅಸ್ಸಾಂನ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವನು. ಸರ್ಕಾರ ನಡೆಸುವ ಶಾಲೆಗಳಲ್ಲಿ ಶಾಲೆಗೆ ಇರಬೇಕಾದ ಸರಿಯಾದ ಸೌಲಭ್ಯಗಳಿಲ್ಲದ ಇಂತಹ ಕಥೆಗಳನ್ನು ನಾನು ಅಲ್ಲಿ ನೋಡಿದ್ದೇನೆ ಎಂದು ನಿರ್ದೇಶಕ ಬಿಸ್ವಜೀತ್ ಬೋರಾ ಹೇಳುತ್ತಾರೆ. "ನಮ್ಮ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ನಾವು ವಿಶಾಲವಾದ ಬದಲಾವಣೆಯನ್ನು ತರಬಹುದು ಎಂದು ನಾನು ನಂಬುತ್ತೇನೆ. ನಾನು ನಟರಲ್ಲದವರೊಂದಿಗೆ ಚಿತ್ರೀಕರಣ ಮಾಡಿದ್ದರಿಂದ ಮತ್ತು ನಮ್ಮ ನಡುವೆ ಭಾಷೆಯ ಅಡೆತಡೆಗಳು ಇದ್ದುದರಿಂದ ಚಿತ್ರ ಮಾಡುವುದು ಸುಲಭವಾಗಿರಲಿಲ್ಲ. ಆದರೂ ಇದು ನನಗೆ ಇದುವರೆಗಿನ ಅತ್ಯುತ್ತಮ ಅನುಭವಗಳಲ್ಲಿ ಒಂದೆಂದು ಪರಿಗಣಿಸುತ್ತೇನೆ. ಏಕೆಂದರೆ ಹಳ್ಳಿಯ ಸುತ್ತಮುತ್ತಲಿನ ಜನರು ತುಂಬಾ ನೇರ ಮತ್ತು ಮುಗ್ಧರಾಗಿದ್ದರು, ಇದು ನಿಜವಾಗಿಯೂ ನನ್ನ ಹೃದಯವನ್ನು ತಟ್ಟಿತು. ಹಳ್ಳಿಯ ಸ್ಥಳವು ನಿಷ್ಕಳಂಕವಾಗಿತ್ತು. ಅತ್ಯಂತ ಆಸಕ್ತಿದಾಯಕವಾಗಿ ನಾವು ಸ್ಥಳೀಯ ಜನರೊಂದಿಗೆ ನೈಜ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಥಾನಾಯಕ ಬೂಂಬಾ ಕೂಡ ಅಷ್ಟೇ ಮುಗ್ಧ ಮತ್ತು ಅವನು ತನ್ನ ಜೀವನದಲ್ಲಿ ಥಿಯೇಟರ್ ಹಾಲ್ ಕೂಡ ನೋಡಿಲ್ಲ ಎಂದು ನಂಬುವುದು ಕಷ್ಟ. ಜನರು ಈ ಸೀರಿಯೊ-ಕಾಮಿಕ್ ನಿರೂಪಣೆಯನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ನನಗಿದೆ. ಇದು ಇಂದಿನ ಜಗತ್ತಿನಲ್ಲಿ ನಿಜವಾಗಿ ಅಸ್ತಿತ್ವದಲ್ಲಿರುವ ನೈಜ ಪ್ರಪಂಚದ ಪ್ರಾತಿನಿಧಿಕ ರೂಪವಲ್ಲದೇ ಬೇರೇನೂ ಅಲ್ಲ.” ಎಂದು ಅವರು ಹೇಳುತ್ತಾರೆ.


5. ಧುಯಿನ್

 ನಿರ್ದೇಶಕ: ಶ್ರೀ ಅಚಲ್ ಮಿಶ್ರಾ
ನಿರ್ಮಾಣ: ಅಚಲಚಿತ್ರ
ಭಾಷೆ: ಹಿಂದಿ, ಮರಾಠಿ
ಸಾರಾಂಶ
ಪಂಕಜ್, ಸ್ಥಳೀಯ ಪುರಸಭೆಗಾಗಿ ಬೀದಿ ನಾಟಕಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವ ಮಹತ್ವಾಕಾಂಕ್ಷಿ ನಟ. ಅದನ್ನೇ ದೊಡ್ಡದು ಮಾಡುವ ಕನಸು ಕಾಣುತ್ತಿದ್ದವನು. ಗೆಳೆಯ ಪ್ರಶಾಂತ್ ಜತೆ ಸೇರಿ ಒಂದು ತಿಂಗಳ ಅವಧಿಯಲ್ಲಿ ಮುಂಬೈಗೆ ತೆರಳುವಷ್ಟು ಹಣ ಉಳಿತಾಯ ಮಾಡುತ್ತಾನೆ. ಅವರ ಮನೆಯಲ್ಲಿ, ಅವರ ಕುಟುಂಬವು ಲಾಕ್‌ಡೌನ್ ನಂತರ ಆರ್ಥಿಕ ಒತ್ತಡದಲ್ಲಿರುತ್ತದೆ ಮತ್ತು ಅವರ ನಿವೃತ್ತ ತಂದೆ ಈಗ ಕೆಲಸವನ್ನು ಹುಡುಕುತ್ತಿದ್ದಾರೆ.
ಪಂಕಜ್ ದಿನವಿಡೀ ಊರೂರು ಅಲೆಯುತ್ತಾನೆ, ರಂಗಭೂಮಿಯ ಗೆಳೆಯರನ್ನು ಭೇಟಿಯಾಗುತ್ತಾನೆ, ಮತ್ತು ತನ್ನ ಕಿರಿಯರಿಗೆ ಜೀವನ ಸಲಹೆಗಳನ್ನು ನೀಡುತ್ತಾನೆ. ಮುಂಬೈ ಮೂಲದ ಚಲನಚಿತ್ರ ನಿರ್ಮಾಪಕರೊಂದಿಗಿನ ಭೇಟಿಯು ಅನಿರೀಕ್ಷಿತ ರೀತಿಯಲ್ಲಿ ಕೊನೆಗೊಂಡ ನಂತರ, ಆತ ಮನಸ್ಸು ಬದಲಾಯಿಸುತ್ತಾನೆ ಮತ್ತು ತಂದೆಯ ಕೆಲಸಕ್ಕಾಗಿ ತನ್ನ ಉಳಿತಾಯವನ್ನು ತ್ಯಜಿಸಲು ನಿರ್ಧರಿಸುತ್ತಾನೆ.
ಒಂದು ಸಂಜೆ ಮನೆಗೆ ಹಿಂದಿರುಗಿದ ನಂತರ, ಒಂದೆರಡು ದಿನಗಳಲ್ಲಿ ಹತ್ತಿರದ ಪಟ್ಟಣದಲ್ಲಿ ಉದ್ಯೋಗಾವಕಾಶಕ್ಕಾಗಿ ತನ್ನ ತಂದೆಯೊಂದಿಗೆ ಹೋಗುವಂತೆ ಹೇಳಲಾಗುತ್ತದೆ. ಪ್ರಯಾಣ ಮತ್ತು ಉದ್ಯೋಗಕ್ಕೆ ಹಣ ಖರ್ಚಾಗಲಿದ್ದು, ಅಲ್ಲಿಯವರೆಗೆ ಕುಟುಂಬದವರು ವ್ಯವಸ್ಥೆ ಮಾಡಬೇಕು. ಪ್ರಯಾಣಕ್ಕೆ ಬೈಕ್ ವ್ಯವಸ್ಥೆ ಮಾಡುವಂತೆ ಪಂಕಜ್ ಗೆ ಕೇಳಿದಾಗ, ಅವನು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ.


6. ಟ್ರೀ ಫುಲ್‌ ಆಫ್‌ ಪ್ಯಾರಟ್ಸ್‌ 


ನಿರ್ದೇಶಕ: ಶ್ರೀ ಜಯರಾಜ್
ನಿರ್ಮಾಣ: ನವನೀತ್ ಫಿಲ್ಮ್ಸ್
ಭಾಷೆ: ಮಲಯಾಳಂ
ಸಾರಾಂಶ
ಎಂಟು ವರ್ಷದ ಬಾಲಕ ಪೂಂಜನ್ ಸಾಮಾನ್ಯ ಹುಡುಗನಲ್ಲ. ಈತ ಹಿನ್ನೀರಿನಲ್ಲಿ ಮೀನು ಹಿಡಿಯುವಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಕುಡುಕ ತಂದೆ, ತಾತ, ಮುತ್ತಜ್ಜನಿರುವ ಕುಟುಂಬದ ಜವಾಬ್ದಾರಿ ಈತನ ಮೇಲಿರುತ್ತದೆ. ಅವನ ತಾಯಿ ವರ್ಷಗಳ ಹಿಂದೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿದ್ದರು.
ಒಂದು ದಿನ ಪೂಂಜನ್ ಮೀನು ಹಿಡಿಯುತ್ತಿದ್ದಾಗ ಬೋಟ್ ಯಾರ್ಡ್‌ನಲ್ಲಿ ಒಬ್ಬ ಕುರುಡ ಕುಳಿತಿರುತ್ತಾನೆ. ಆತ ತನ್ನ ಮನೆಯ ದಾರಿ ತಪ್ಪಿದಂತಿದ್ದ. ಅವನೊಬ್ಬ ಬುದ್ಧಿಮಾಂದ್ಯ, ಅವನ ಮನೆಯ ಮುಂದೆ ಗಿಳಿಗಳಿಂದ ತುಂಬಿದ ಮರವನ್ನು ಮಾತ್ರ ನೆನಪಿಸಿಕೊಳ್ಳುತ್ತಾನೆ. ಈ ವ್ಯಕ್ತಿಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮಾಡಿದ ಪ್ರಯತ್ನ ವ್ಯರ್ಥವಾಗುತ್ತದೆ.
ಈ ವ್ಯಕ್ತಿಯ ಮನೆಯ ಬಗ್ಗೆ ನದಿಯ ತೀರದಲ್ಲಿ ಅವನು ವಿಚಾರಿಸುತ್ತಾನೆ, ಆದರೆ ಯಾರೂ ಅವರಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರ ಪ್ರಯಾಣದ ಫಲಿತಾಂಶದಿಂದ ನಿರಾಶೆಗೊಂಡ ಪೂಂಜನ್ ಹುಡುಕಾಟ ನಿಲ್ಲಿಸಲು ನಿರ್ಧರಿಸುತ್ತಾನೆ. ಅಷ್ಟರಲ್ಲಿ, ಗಿಳಿಯ ಸದ್ದು ಕೇಳುತ್ತದೆ, ಅದು ಅವನನ್ನು "ಗಿಳಿಗಳಿಂದ ತುಂಬಿದ ಮರ" (ಟ್ರೀ ಫುಲ್‌ ಆಫ್‌ ಪ್ಯಾರಟ್ಸ್‌) ದ ಬಳಿ ಕರೆದೊಯ್ಯುತ್ತದೆ!
ಕೊನೆಗೆ ಪೂಂಜನ್ ಗಿಳಿಗಳಿಂದ ತುಂಬಿರುವ ಮರದ ಮೂಲಕ ಕುರುಡನ ಮನೆಯ ಹಾದಿಯನ್ನು ಕಂಡುಕೊಳ್ಳಲು ನಿರ್ಧರಿಸುತ್ತಾನೆ. 
ಕುರುಡನ ಮಗ ಮತ್ತು ಸೊಸೆ ಆತ್ಮೀಯ ಸ್ವಾಗತವನ್ನು ನೀಡಿದರೂ, ಎಲ್ಲವೂ ಸರಿಯಿದ್ದಂತೆ ಕಾಣಲಿಲ್ಲ.
ಅವರ ನಡುವಿನ ಮಾತುಕತೆಯನ್ನು ಕೇಳಿಸಿಕೊಂಡಾಗ ಪೂಂಜನ್ ಅನುಮಾನ ದೃಢವಾಯಿತು. ತಮ್ಮ ಈ ಮನೆಯನ್ನು ಮಾರಿ ಹೊಸ ಮನೆಗೆ ಹೋಗುವ ಮೊದಲು ಅವರು ಕುರುಡನನ್ನು ಮುಗಿಸಲು ಬಯಸಿದ್ದರು. ಅವರ ಮಾತುಕತೆಯ ಮೂಲಕ ತಿಳಿದಿದ್ದೆಂದರೆ, ಅವರು ಕುರುಡನನ್ನು ಹೊರೆ ಎಂದು ತಿಳಿದಿದ್ದರು ಮತ್ತು ಆತನನ್ನು ಮುಗಿಸಲು ತೀರ್ಮಾನಿಸಿದ್ದರು.
ಪೂಂಜನ್ ಕುರುಡನಿಗೆ ವಿದಾಯ ಹೇಳಿ ದೋಣಿ ಹತ್ತಿದ. ಆದಾಗ್ಯೂ, ಕುರುಡನ ಭವಿಷ್ಯದ ಬಗ್ಗೆ ತಿಳಿದಿದ್ದ ಪೂಂಜನ್ ಗೆ ಆತನನ್ನು ಒಂಟಿಯಾಗಿ ಬಿಟ್ಟು ಹೊರಡಲು ಆತ್ಮಸಾಕ್ಷಿ ಒಪ್ಪಲಿಲ್ಲ. ಯಾರಿಗೂ ತಿಳಿಯದಂತೆ, ಅವನು ಕುರುಡನನ್ನು ತನ್ನೊಂದಿಗೆ ಬರುವಂತೆ ಕೇಳಲು ನಿರ್ಧರಿಸುತ್ತಾನೆ. ಪೂಂಜನ್ ಕುರುಡನೊಂದಿಗೆ ದೋಣಿಯನ್ನು ದಿಗಂತದೆಡೆಗೆ ಚಲಾಯಿಸುತ್ತಾನೆ.

***


(Release ID: 1824954) Visitor Counter : 202