ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಸೆಮಿಕಾನ್ ಇಂಡಿಯಾ ಸಮ್ಮೇಳನ-2022ʼರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯರೂಪ

Posted On: 29 APR 2022 11:41AM by PIB Bengaluru

ನಮಸ್ಕಾರ!
ನಮಸ್ಕಾರ ಬೆಂಗಳೂರು!
ಸೆಮಿಕಾನ್‌ ಇಂಡಿಯಾಗೆ ನಮಸ್ಕಾರ!
 
ಮಂತ್ರಿಮಂಡಲದ ನನ್ನ ಸಹೋದ್ಯೋಗಿಗಳೇ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಉದ್ಯಮದ ನಾಯಕರೇ; ಹೂಡಿಕೆದಾರರೇ; ಚಿಂತಕರೇ, ರಾಜತಾಂತ್ರಿಕ ಸದಸ್ಯರೇ, ಮತ್ತು ಸ್ನೇಹಿತರೇ,
 
ಸೆಮಿ-ಕಾನ್ ಇಂಡಿಯಾ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸಲು ಇಂದು ನನಗೆ ತುಂಬಾ ಸಂತೋಷವಾಗುತ್ತಿದೆ. ಭಾರತದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ನನಗೆ ಸಂತಸ ತಂದಿದೆ. ಸೆಮಿ ಕಂಡಕ್ಟರ್‌ಗಳು ಇಂದು ನಾವು ಊಹಿಸಬಹುದಾದುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಜಗತ್ತಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಜಾಗತಿಕ ಸೆಮಿ ಕಂಡಕ್ಟರ್‌ ಪೂರೈಕೆ ಸರಪಳಿಗಳಲ್ಲಿ ಭಾರತವನ್ನು ಪ್ರಮುಖ ಪಾಲುದಾರನಾಗಿಸುವುದು ನಮ್ಮ ಸಾಮೂಹಿಕ ಗುರಿಯಾಗಿದೆ. ಉನ್ನತ ತಂತ್ರಜ್ಞಾನ, ಉನ್ನತ ಗುಣಮಟ್ಟ ಮತ್ತು ಹೆಚ್ಚಿನ ವಿಶ್ವಾಸಾರ್ಹತೆಯ ತತ್ವದ ಆಧಾರದ ಮೇಲೆ ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಲು ಬಯಸುತ್ತೇವೆ.
 
ಸ್ನೇಹಿತರೇ,
 ಸೆಮಿ ಕಂಡಕ್ಟರ್ ತಂತ್ರಜ್ಞಾನಗಳಿಗೆ ಭಾರತವು ಆಕರ್ಷಕ ಹೂಡಿಕೆಯ ತಾಣವಾಗಲು  ಆರು ಕಾರಣಗಳು ನನಗೆ ಕಾಣಿಸುತ್ತಿವೆ.

ಮೊದಲನೆಯದಾಗಿ, ನಾವು 1.3 ಶತಕೋಟಿ ಭಾರತೀಯರನ್ನು ಸಂಪರ್ಕಿಸಲು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ. ನೀವೆಲ್ಲರೂ ಭಾರತದ ಹಣಕಾಸು ಒಳಗೊಳ್ಳುವಿಕೆ, ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ರಾಂತಿಯ ಬಗ್ಗೆ ಕೇಳಿದ್ದೀರಿ. ʻಯುಪಿಐʼ ಇಂದು ವಿಶ್ವದ ಅತ್ಯಂತ ದಕ್ಷ ಪಾವತಿ ಮೂಲಸೌಕರ್ಯವಾಗಿದೆ. ಆರೋಗ್ಯ ಮತ್ತು ಕಲ್ಯಾಣದಿಂದ ಹಿಡಿದು ಒಳಗೊಳ್ಳುವಿಕೆ ಮತ್ತು ಸಬಲೀಕರಣವರೆಗೆ ಆಡಳಿತದ ಎಲ್ಲಾ ವಲಯಗಳಲ್ಲಿನ ಜೀವನವನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಭಾರತವು ತಲಾವಾರು ಡೇಟಾದ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದೆ ಮತ್ತು ಈ ನಿಟ್ಟಿನಲ್ಲಿ  ನಾವು ಬೆಳೆಯುತ್ತಲೇ ಇದ್ದೇವೆ.

ಎರಡನೆಯದಾಗಿ, ಮುಂದಿನ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸಲು ನಾವು ಭಾರತಕ್ಕೆ ದಾರಿ ಮಾಡಿಕೊಡುತ್ತಿದ್ದೇವೆ. ನಾವು ಆರು ಲಕ್ಷ ಹಳ್ಳಿಗಳನ್ನು ಬ್ರಾಡ್‌ಬ್ಯಾಂಡ್‌ನೊಂದಿಗೆ ಸಂಪರ್ಕಿಸಲು ಹೊರಟಿದ್ದೇವೆ. ನಾವು 5ಜಿ, ʻಐಒಟಿʼ ಮತ್ತು ʻಶುದ್ಧ ಇಂಧನʼ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದ್ದೇವೆ. ಡೇಟಾ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯ ಮುಂದಿನ ಅಲೆಯನ್ನು ಅನಾವರಣಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ಮೂರನೆಯದಾಗಿ, ಭಾರತವು ದೃಢವಾದ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದೆ. ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಪ್ರತಿ ಕೆಲವು ವಾರಗಳಿಗೊಮ್ಮೆ ಹೊಸ ʻಯೂನಿಕಾರ್ನ್‌ʼಗಳು ಹೊರಹೊಮ್ಮುತ್ತಿವೆ. ಭಾರತ ದೇಶವೊಂದರಲ್ಲೇ ಸೆಮಿ ಕಂಡಕ್ಟರ್‌ಗಳ ಬಳಕೆಯು 2026ರ ವೇಳೆಗೆ 80 ಶತಕೋಟಿ ಡಾಲರ್ ಮತ್ತು 2030ರ ವೇಳೆಗೆ 110 ಶತಕೋಟಿ ಡಾಲರ್‌ ದಾಟುವ ನಿರೀಕ್ಷೆಯಿದೆ.

ನಾಲ್ಕನೆಯದಾಗಿ, ಭಾರತದಲ್ಲಿ ಸುಗಮ ವ್ಯಾಪಾರೋದ್ಯಮವನ್ನು ಸುಧಾರಿಸಲು ನಾವು ವ್ಯಾಪಕವಾದ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಕಳೆದ ವರ್ಷ, ನಾವು 25,000ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಗೊಳಿಸಿದ್ದೇವೆ ಮತ್ತು ಪರವಾನಗಿಗಳ ಸ್ವಯಂ-ನವೀಕರಣಕ್ಕೆ ಉತ್ತೇಜನ ನೀಡಿದ್ದೇವೆ. ಹಾಗೆಯೇ, ಡಿಜಿಟಲೀಕರಣದಿಂದ ನಿಯಂತ್ರಕ ಚೌಕಟ್ಟಿಗೆ ವೇಗ ಮತ್ತು ಪಾರದರ್ಶಕತೆ ದೊರೆಯುತ್ತಿದೆ. ಇಂದು, ನಾವು ವಿಶ್ವದ ಅತ್ಯಂತ ಅನುಕೂಲಕರ ತೆರಿಗೆ ವ್ಯವಸ್ಥೆಯನ್ನು ಹೊಂದಿದ್ದೇವೆ.

ಐದನೆಯದಾಗಿ, ನಾವು 21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಯುವ ಭಾರತೀಯರಿಗೆ ಕೌಶಲ್ಯ ಮತ್ತು ತರಬೇತಿ ನೀಡಲು ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ನಾವು ಅಸಾಧಾರಣವಾದ ಸೆಮಿ ಕಂಡಕ್ಟರ್ ವಿನ್ಯಾಸ ಪ್ರತಿಭೆಯ ಭಂಡಾರವನ್ನು ಹೊಂದಿದ್ದೇವೆ, ಈ ಪ್ರಮಾಣವು ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸ ಎಂಜಿನಿಯರ್‌ಗಳ 20%ರಷ್ಟಿದೆ. ಅಗ್ರ 25 ಸೆಮಿ ಕಂಡಕ್ಟರ್ ವಿನ್ಯಾಸ ಕಂಪನಿಗಳು ನಮ್ಮ ದೇಶದಲ್ಲಿ ತಮ್ಮ ವಿನ್ಯಾಸ ಅಥವಾ ʻಆರ್ & ಡಿʼ ಕೇಂದ್ರಗಳನ್ನು ಹೊಂದಿವೆ.

ಮತ್ತು ಆರನೆಯದಾಗಿ, ನಾವು ಭಾರತೀಯ ಉತ್ಪಾದನಾ ವಲಯವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಶತಮಾನದಲ್ಲೇ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಮನುಕುಲ ಹೋರಾಡುತ್ತಿದ್ದ ಸಮಯದಲ್ಲಿ, ಭಾರತವು ನಮ್ಮ ಜನರ ಆರೋಗ್ಯವನ್ನು ಮಾತ್ರವಲ್ಲದೆ ನಮ್ಮ ಆರ್ಥಿಕತೆಯ ಆರೋಗ್ಯವನ್ನು ಸಹ ಸುಧಾರಿಸುತ್ತಿತ್ತು.
 
  
ಸ್ನೇಹಿತರೇ,
ನಮ್ಮ "ಉತ್ಪಾದನೆ ಆಧರಿತ ಪ್ರೋತ್ಸಾಹಧನ" ಯೋಜನೆಗಳು 14 ಪ್ರಮುಖ ವಲಯಗಳಲ್ಲಿ 26 ಶತಕೋಟಿ ಡಾಲರ್‌ಗಳಿಗೂ ಹೆಚ್ಚು ಪ್ರೋತ್ಸಾಹಕಗಳನ್ನು ನೀಡುತ್ತವೆ. ಮುಂದಿನ 5 ವರ್ಷಗಳಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ. ನಾವು ಇತ್ತೀಚೆಗೆ ʻಸೆಮಿ-ಕಾನ್ ಇಂಡಿಯಾʼ ಕಾರ್ಯಕ್ರಮವನ್ನು ಘೋಷಿಸಿದ್ದೇವೆ, ಒಟ್ಟು 10 ಶತಕೋಟಿ ಡಾಲರ್‌ಗಿಂತಲೂ ಅಧಿಕ ವೆಚ್ಚ ಮಾಡಿದ್ದೇವೆ. ಈ ಕಾರ್ಯಕ್ರಮವು ಸೆಮಿ ಕಂಡಕ್ಟರ್‌ಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ, ಪ್ರದರ್ಶನ ಉತ್ಪಾದನೆ ಮತ್ತು ವಿನ್ಯಾಸ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರಬೇಕಾದರೆ, ಸರಕಾರದಿಂದ ಸಾಕಷ್ಟು ಬೆಂಬಲವನ್ನು ಖಾತರಿಪಡಿಸುವುದು ಅತ್ಯಗತ್ಯ ಎಂದು ನಮಗೆ ತಿಳಿದಿದೆ. ನಮ್ಮ ಕಾರ್ಯವಿಧಾನವನ್ನು ಅರೆವಾಹಕಗಳ ಭಾಷೆಯಲ್ಲಿಯೇ ಹೇಳಲು ನಾನು ಬಯಸುತ್ತೇನೆ. ಹಿಂದಿನ ಕಾಲದಲ್ಲಿ, ಕೈಗಾರಿಕೆಗಳು ತಮ್ಮ ಕೆಲಸವನ್ನು ಮಾಡಲು ಸಿದ್ಧವಾಗಿದ್ದವು, ಆದರೆ ಸರಕಾರವು 'ನಾಟ್ ಗೇಟ್'ನಂತೆ ಇತ್ತು.  'ನಾಟ್ ಗೇಟ್'ಗೆ ಯಾವುದೇ ಇನ್‌ಪುಟ್ ಹರಿದಾಗ, ಅದು ನಿರಾಕರಿಸಲ್ಪಡುತ್ತದೆ. ಅನೇಕ ಅನಗತ್ಯ ಅನುಸರಣೆಗಳ ಅಡಚಣೆಯ ಜೊತೆಗೆ 'ಸುಲಭ ವ್ಯಾಪಾರದ ವಾತಾವರಣʼದ ಅಲಭ್ಯತೆ ದೊಡ್ಡ ಸಮಸ್ಯೆಯಾಗಿತ್ತು. ಆದರೆ, ಸರಕಾರವು 'ಆಂಡ್‌ ಗೇಟ್' ನಂತೆ ಇರಬೇಕೆಂದು ನಾವು ಅರಿತುಕೊಂಡಿದ್ದೇವೆ. ಉದ್ಯಮವು ಕಷ್ಟಪಟ್ಟು ಕೆಲಸ ಮಾಡುವಾಗ, ಸರಕಾರವು ಇನ್ನೂ ಹೆಚ್ಚು ಶ್ರಮಿಸಬೇಕು. ಭವಿಷ್ಯದಲ್ಲಿಯೂ ನಾವು ಉದ್ಯಮಕ್ಕೆ ಬೆಂಬಲವನ್ನು ಮುಂದುವರಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ʻಸೆಮಿ-ಕಾನ್ ಇಂಡಿಯಾʼ ಕಾರ್ಯಕ್ರಮವು ಸೆಮಿ-ಕಂಡಕ್ಟರ್ ಫ್ಯಾಬ್, ಡಿಸ್‌ಪ್ಲೇ ಫ್ಯಾಬ್, ವಿನ್ಯಾಸ, ಅಸೆಂಬ್ಲಿ, ಟೆಸ್ಟ್, ಮಾರ್ಕಿಂಗ್ ಮತ್ತು ಸೆಮಿ ಕಂಡಕ್ಟರ್‌ಗಳ ಪ್ಯಾಕೇಜಿಂಗ್‌ನಂತಹ ಪರಿಸರ ವ್ಯವಸ್ಥೆಯ ವಿವಿಧ ಭಾಗಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನೋಡಲು ನಾವು ಕಾತುರರಾಗಿದ್ದೇವೆ. 
 
ಸ್ನೇಹಿತರೇ,
ಒಂದು ಹೊಸ ವಿಶ್ವ ವ್ಯವಸ್ಥೆ ರೂಪುಗೊಳ್ಳುತ್ತಿದೆ ಮತ್ತು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಬೆಳವಣಿಗೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲು ನಾವು ಕಳೆದ ಕೆಲವು ವರ್ಷಗಳಿಂದ ಶ್ರಮಿಸಿದ್ದೇವೆ. ಭಾರತವು ತಂತ್ರಜ್ಞಾನದ ಹಸಿವು ಮತ್ತು ರಿಸ್ಕ್ ತೆಗೆದುಕೊಳ್ಳುವ ವಿಚಾರದಲ್ಲಿ ಹಸಿವನ್ನು ಹೊಂದಿದೆ. ಬೆಂಬಲಕಾರಿ ನೀತಿಯ ವಾತಾವರಣದ ಮೂಲಕ ನಾವು ಸಾಧ್ಯವಾದಷ್ಟು ಅಡೆತಡೆಗಳನ್ನು ತೊಡೆದು ಹಾಕಿದ್ದೇವೆ. ಭಾರತ ಎಂದರೆ ವ್ಯಾಪಾರ ಎಂದು ನಾವು ತೋರಿಸಿಕೊಟ್ಟಿದ್ದೇವೆ! ಈಗ, ನಿಮ್ಮ ಸರದಿ ಶುರುವಾಗಿದೆ. 
 
ಸ್ನೇಹಿತರೇ,
ಮುಂಬರುವ ವರ್ಷಗಳಲ್ಲಿ, ಭಾರತವನ್ನು ಇಡೀ ವಿಶ್ವದ ಸೆಮಿ ಕಂಡಕ್ಟರ್‌ಗಳ ಕೇಂದ್ರವಾಗಿಸುವ ಗುರಿಯತ್ತ ನಾವು ಹೇಗೆ ಸಾಗಬಹುದು ಎಂಬುದರ ಬಗ್ಗೆ ನಿಮ್ಮೆಲ್ಲರ ಪ್ರಾಯೋಗಿಕ ಸಲಹೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಈ ಸಮ್ಮೇಳನದ ಮೂಲಕ ನಾವು ಡೊಮೇನ್ ತಜ್ಞರೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಸದೃಢ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನದನ್ನು ಏನು ಮಾಡಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಈ ಸಮ್ಮೇಳನವು ಸಮೃದ್ಧ ಚರ್ಚೆಗಳನ್ನು ಹೊಂದಿರುತ್ತದೆ, ಇದು ಭಾರತವನ್ನು ಹೊಸ ಭವಿಷ್ಯದತ್ತ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
 
ಧನ್ಯವಾದಗಳು.
ನಮಸ್ಕಾರ.

***
 


(Release ID: 1821279) Visitor Counter : 211