ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಸಂದೇಶ


"ನವೋದ್ಯಮಗಳು ಮತ್ತು ಕ್ರೀಡೆಗಳ ಸಂಗಮವು ಮಹತ್ವದ್ದಾಗಿದೆ. ಬೆಂಗಳೂರಿನಲ್ಲಿ ನಡೆಯುವ ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼವು ಈ ಸುಂದರ ನಗರದ ಶಕ್ತಿಯನ್ನು ಹೆಚ್ಚಿಸಲಿದೆ.

"ಸಾಂಕ್ರಾಮಿಕ ರೋಗದ ಸವಾಲುಗಳ ನಡುವೆ ಕ್ರೀಡಾಕೂಟದ ಆಯೋಜನೆಯು ನವ ಭಾರತದ ದೃಢನಿರ್ಧಾರ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಈ ಯುವ ಉತ್ಸಾಹವು ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವೇಗದೊಂದಿಗೆ ಮುನ್ನಡೆಸುತ್ತಿದೆ"

"ಸಮಗ್ರ ವಿಧಾನ ಮತ್ತು 100 ಪ್ರತಿಶತ ಸಮರ್ಪಣೆಯು ಕ್ರೀಡೆ ಮತ್ತು ಜೀವನದಲ್ಲಿ ಯಶಸ್ಸಿನ ಪ್ರಮುಖ ಅಗತ್ಯಗಳಾಗಿವೆ"

"ವಿಜಯದ ಮುಕುಟವನ್ನು ಚೆನ್ನಾಗಿ ಧರಿಸುವುದು ಮತ್ತು ಸೋಲಿನಿಂದ ಕಲಿಯುವುದು ಕ್ರೀಡಾ ಕ್ಷೇತ್ರದಲ್ಲಿ ನಾವು ಕಲಿಯುವ ಒಂದು ಪ್ರಮುಖ ಕಲೆಯಾಗಿದೆ"

"ಸರಕಾರದ ಅನೇಕ ಉಪಕ್ರಮಗಳು ಕ್ರೀಡೆಗಳನ್ನು ಹಳೆಯ ಆಲೋಚನಾ ವಿಧಾನದ ಸಂಕೋಲೆಗಳಿಂದ ಮುಕ್ತಗೊಳಿಸುತ್ತಿವೆ"

"ಕ್ರೀಡೆಗೆ ಮಾನ್ಯತೆಯು ದೇಶಕ್ಕೆ ಮಾನ್ಯತೆಯನ್ನು ಹೆಚ್ಚಿಸುತ್ತದೆ"

Posted On: 24 APR 2022 7:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ’ದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡರು. ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಇಂದು ಬೆಂಗಳೂರಿನಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ,  ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಬೆಂಗಳೂರು ನಗರವು ದೇಶದ ಯುವ ಉತ್ಸಾಹವನ್ನು ಸಂಕೇತಿಸುತ್ತದೆ ಮತ್ತು ವೃತ್ತಿಪರರ ಹೆಮ್ಮೆಯಾಗಿದೆ ಎಂದು ಪ್ರಧಾನಿ ಹೇಳಿದರು. ನವೋದ್ಯಮಗಳು ಮತ್ತು ಕ್ರೀಡೆಗಳ ಸಂಗಮವು ಇಲ್ಲಿ ನಡೆಯುತ್ತಿರುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು. ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼವನ್ನು ಬೆಂಗಳೂರಿನಲ್ಲಿ ಆಯೋಜಿಸುವುದರಿಂದ ಈ ಸುಂದರ ನಗರದ ಶಕ್ತಿ ಹೆಚ್ಚಲಿದೆ ಎಂದರು. ಸಾಂಕ್ರಾಮಿಕ ರೋಗದ ಸವಾಲುಗಳ ನಡುವೆ ಕ್ರೀಡಾಕೂಟದ ಆಯೋಜನೆಯು ದೃಢನಿಶ್ಚಯ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಪ್ರಧಾನಿಯವರು, ಕ್ರೀಡಾಕೂಟ ಸಂಘಟಕರ ಸಂಕಲ್ಪವನ್ನು ಮೆಚ್ಚಿಕೊಂಡರು. ಈ ತರುಣ ಉತ್ಸಾಹವು ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವೇಗದೊಂದಿಗೆ ಮುನ್ನಡೆಸುತ್ತಿದೆ ಎಂದು ಪ್ರಧಾನಿ ಹೇಳಿದರು. 

ಯಶಸ್ಸಿನ ಮೊದಲ ಮಂತ್ರವಾಗಿ ʻತಂಡದ ಸ್ಫೂರ್ತಿʼ (ಟೀಮ್ ಸ್ಪಿರಿಟ್) ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಈ ತಂಡದ ಸ್ಫೂರ್ತಿಯನ್ನು ನಾವು ಕ್ರೀಡೆಯಿಂದ ಕಲಿಯುತ್ತೇವೆ. ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼದಲ್ಲಿ ನೀವು ಅದನ್ನು ನೇರವಾಗಿ ಅನುಭವಿಸುತ್ತೀರಿ. ಈ ತಂಡದ ಸ್ಫೂರ್ತಿಯು ನಮಗೆ ಜೀವನವನ್ನು ನೋಡುವ ಹೊಸ ಮಾರ್ಗವನ್ನು ಸಹ ತೋರಿಸುತ್ತದೆ,ʼʼ ಎಂದು ಪ್ರಧಾನಿ ಹೇಳಿದರು. ಅಂತೆಯೇ, ಸಮಗ್ರ ವಿಧಾನ ಮತ್ತು 100 ಪ್ರತಿಶತ ಸಮರ್ಪಣೆಯು ಕ್ರೀಡೆಗಳಲ್ಲಿ ಯಶಸ್ಸಿಗೆ ಪ್ರಮುಖ ಅಗತ್ಯವಾಗಿದೆ. ಕ್ರೀಡಾ ಕ್ಷೇತ್ರದ ಸಾಮರ್ಥ್ಯಗಳು ಮತ್ತು ಕಲಿಕೆಗಳು ಸಹ ಜೀವನದಲ್ಲಿ ವ್ಯಕ್ತಿಯನ್ನು ಮುನ್ನಡೆಸುತ್ತವೆ. "ಕ್ರೀಡೆ, ನಿಜವಾದ ಅರ್ಥದಲ್ಲಿ, ಜೀವನದ ನಿಜವಾದ ಬೆಂಬಲ ವ್ಯವಸ್ಥೆಯಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಉತ್ಸಾಹ, ಸವಾಲುಗಳು, ಸೋಲಿನಿಂದ ಕಲಿಕೆ, ಸಮಗ್ರತೆ ಮತ್ತು ವರ್ತಮಾನದಲ್ಲಿ ಬದುಕುವ ಸಾಮರ್ಥ್ಯದಂತಹ ವಿವಿಧ ವಿಚಾರಗಳಲ್ಲಿ ಕ್ರೀಡೆ ಮತ್ತು ಜೀವನದ ನಡುವೆ ಹೋಲಿಕೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. "ವಿಜಯವನ್ನು ಮುಕುಟವನ್ನು ಚೆನ್ನಾಗಿ ಧರಿಸುವುದು ಮತ್ತು ಸೋಲಿನಿಂದ ಕಲಿಯುವುದು ಕ್ರೀಡಾ ಕ್ಷೇತ್ರದಲ್ಲಿ ನಾವು ಕಲಿಯುವ ಪ್ರಮುಖ ಕಲೆಯಾಗಿದೆ," ಎಂದು ಅವರು ಹೇಳಿದರು. 
ಕ್ರೀಡಾಪಟುಗಳು ನವ ಭಾರತದ ಯುವಶಕ್ತಿ. ಜೊತೆಗೆ ಅವರು ʻಏಕ್ ಭಾರತ್-ಶ್ರೇಷ್ಠ್ ಭಾರತ್ʼನ ಧ್ವಜಧಾರಿಗಳು ಎಂದು ಪ್ರಧಾನಿ ಹೇಳಿದರು. ಯುವ ಚಿಂತನೆ ಮತ್ತು ದೃಷ್ಟಿಕೋನವು ಇಂದು ದೇಶದ ನೀತಿಗಳನ್ನು ರೂಪಿಸುತ್ತಿದೆ. ಇಂದಿನ ಯುವಜನತೆ ದೇಹದಾರ್ಢ್ಯತೆಯನ್ನು(ಫಿಟ್ನೆಸ್) ದೇಶದ ಪ್ರಗತಿಯ ಮಂತ್ರವನ್ನಾಗಿಸಿ ಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಅನೇಕ ಉಪಕ್ರಮಗಳು ಕ್ರೀಡೆಗಳನ್ನು ಹಳೆಯ ಆಲೋಚನಾ ವಿಧಾನದ ಸಂಕೋಲೆಗಳಿಂದ ಮುಕ್ತಗೊಳಿಸುತ್ತಿವೆ. ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಒತ್ತು, ಕ್ರೀಡೆಗೆ ಆಧುನಿಕ ಮೂಲಸೌಕರ್ಯ, ಪಾರದರ್ಶಕ ಆಯ್ಕೆ ಪ್ರಕ್ರಿಯೆ ಅಥವಾ ಕ್ರೀಡೆಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಹೆಚ್ಚಳ ಮುಂತಾದ ಕ್ರಮಗಳು ತ್ವರಿತಗತಿಯಲ್ಲಿ ನವ ಭಾರತದ ಅಸ್ಮಿತೆಯಾಗುತ್ತಿವೆ. ಜೊತೆಗೆ ದೇಶದ ಯುವಕರ ಭರವಸೆಗಳು, ಆಕಾಂಕ್ಷೆಗಳು ಹಾಗೂ ನವ ಭಾರತದ ನಿರ್ಧಾರಗಳ ಅಡಿಪಾಯವಾಗುತ್ತಿವೆ ಎಂದರು. "ಈಗ ದೇಶದಲ್ಲಿ ಹೊಸ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯಗಳು ಬರುತ್ತಿವೆ. ಇದು ನಿಮ್ಮ ಅನುಕೂಲಕ್ಕಾಗಿ ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು," ಎಂದು ಪ್ರಧಾನಿ ಹೇಳಿದರು. 

ಕ್ರೀಡಾ ಶಕ್ತಿ ಮತ್ತು ದೇಶದ ಶಕ್ತಿಯ ನಡುವಿನ ಸಂಬಂಧವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಕ್ರೀಡೆಗೆ ನೀಡುವ ಮಾನ್ಯತೆಯು ದೇಶಕ್ಕೆ ಮಾನ್ಯತೆಯನ್ನು ಹೆಚ್ಚಿಸುತ್ತದೆ ಎಂದ ಅವರು, ಟೋಕಿಯೋ ಒಲಿಂಪಿಕ್ ತಂಡದೊಂದಿಗಿನ ತಮ್ಮ ಭೇಟಿಯನ್ನು ಸ್ಮರಿಸಿದರು. ಈ ಭೇಟಿಯ ಸಂದರ್ಭದಲ್ಲಿ ಕ್ರೀಡಾಪಟುಗಳ ಮೊಗದಲ್ಲಿ ದೇಶಕ್ಕಾಗಿ ಏನಾದರೂ ಸಾಧನೆ ಮಾಡಿದ ಹೊಳಪು ಮತ್ತು ತೃಪ್ತಿಯ ಭಾವ ಇದ್ದದ್ದನ್ನು ನೆನಪಿಸಿಕೊಂಡರು. ಕ್ರೀಡಾಕೂಟದಲ್ಲಿ ಭಾಗವಹಿಸುವಾಗ ದೇಶಕ್ಕಾಗಿ ಆಡುವಂತೆ ಪ್ರಧಾನಮಂತ್ರಿಯವರು ಆಟಗಾರರನ್ನು ಪ್ರೇರೇಪಿಸಿದರು.

 

*****


(Release ID: 1819832) Visitor Counter : 233