ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

5ನೇ ಬಿಮ್ ಸ್ಟೆಕ್ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪಠ್ಯ

Posted On: 30 MAR 2022 12:10PM by PIB Bengaluru

ಗೌರವಾನ್ವಿತ ಶ್ರೀಲಂಕಾ ಅಧ್ಯಕ್ಷರೇ, 

ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ನನ್ನ ಸ್ನೇಹಿತರ ಮತ್ತು ಸಹವರ್ತಿ ನಾಯಕರೇ 
ಬಿಮ್ ಸ್ಟೆಕ್ ನ ಮಹಾ ಪ್ರಧಾನ ಕಾರ್ಯದರ್ಶಿಗಳೇ, 

ನಮಸ್ಕಾರ!

5ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಇಂದು ನಿಮ್ಮೆಲ್ಲರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ಬಿಮ್ ಸ್ಟೆಕ್ ಸ್ಥಾಪನೆಯ 25 ನೇ ವರ್ಷ, ಆದ್ದರಿಂದ ಇಂದಿನ ಶೃಂಗಸಭೆಯು ವಿಶೇಷವಾಗಿ ಮಹತ್ವದ್ದಾಗಿದೆ ಎಂದು ನಾನು ಪರಿಗಣಿಸುತ್ತೇನೆ. ಈ ಮಹತ್ವದ ಶೃಂಗಸಭೆಯ ಫಲಿತಾಂಶ ಬಿಮ್ ಸ್ಟೆಕ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆಯಲಿವೆ. 

ಗೌರವಾನ್ವಿತರೇ,

ಅಧ್ಯಕ್ಷ ರಾಜಪಕ್ಸೆ ಅವರು ಕಳೆದ ಎರಡು ವರ್ಷಗಳ ಸವಾಲಿನ ವಾತಾವರಣದಲ್ಲಿ ಬಿಮ್ ಸ್ಟೆಕ್ ಗೆ ಸಮರ್ಥ ನಾಯಕತ್ವವನ್ನು ಒದಗಿಸಿದ್ದಾರೆ. ಮೊದಲನೆಯದಾಗಿ, ನಾನು ಅವರನ್ನು ಅಭಿನಂದಿಸಲು ಬಯಸುತ್ತೇನೆ. ಇಂದಿನ ಸವಾಲಿನ ಜಾಗತಿಕ ಸನ್ನಿವೇಶದಿಂದ ನಮ್ಮ ಪ್ರದೇಶವು ಅಸ್ಪೃಶ್ಯವಾಗಿ ಉಳಿದಿಲ್ಲ. ನಮ್ಮ ಆರ್ಥಿಕತೆಗಳು, ನಮ್ಮ ಜನರು ಇನ್ನೂ ಕೋವಿಡ್-19 ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಯುರೋಪ್‌ನಲ್ಲಿನ ಬೆಳವಣಿಗೆಗಳು ಅಂತಾರಾಷ್ಟ್ರೀಯ ವ್ಯವಸ್ಥೆಯ ಸ್ಥಿರತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟುಹಾಕಿದೆ. ಈ ಸನ್ನಿವೇಶದಲ್ಲಿ, ಬಿಮ್ ಸ್ಟೆಕ್ ಪ್ರಾದೇಶಿಕ ಸಹಕಾರವನ್ನು ಹೆಚ್ಚು ಸಕ್ರಿಯವಾಗಿಸುವುದು ಮುಖ್ಯವಾಗಿದೆ. ನಮ್ಮ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದೂ ಕೂಡ ಅನಿವಾರ್ಯವಾಗಿದೆ.

ಗೌರವಾನ್ವಿತರೇ,
ಇಂದು, ನಮ್ಮ ಬಿಮ್ ಸ್ಟೆಕ್  ಒಪ್ಪಂದವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಾಂಸ್ಥಿಕ ವಿನ್ಯಾಸ ರಚಿಸುವ ನಮ್ಮ ಪ್ರಯತ್ನಗಳಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಅದಕ್ಕಾಗಿ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಪ್ಪಂದದಲ್ಲಿ ನಾವು ಪ್ರತಿ 2 ವರ್ಷಗಳಿಗೊಮ್ಮೆ ಶೃಂಗಸಭೆ ಮತ್ತು ಪ್ರತಿ ವರ್ಷ ವಿದೇಶಾಂಗ ಸಚಿವರ ಸಭೆಗಳನ್ನು ನಡೆಸಲು ನಿರ್ಧರಿಸಿದ್ದೇವೆ. ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈಗ ನಾವು ಈ ರೂಪುರೇಷೆಯನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂಬುದರತ್ತ ಹೆಚ್ಚಿನ  ಗಮನಹರಿಸಬೇಕಾಗಿದೆ. 
ಈ ಹಿನ್ನೆಲೆಯಲ್ಲಿ ಮುನ್ನೋಟದ ದಾಖಲೆ ಸಿದ್ಧಪಡಿಸಲು ಗಣ್ಯ ವ್ಯಕ್ತಿಗಳ ಸಮಿತಿಯನ್ನು ರಚಿಸುವಂತೆ ಮಹಾಪ್ರಧಾನಕಾರ್ಯದರ್ಶಿ ಸೂಚಿಸಿದ್ದಾರೆ. ನಾನು ಈ ಸಲಹೆಯನ್ನು ಒಪ್ಪುತ್ತೇನೆ. ಬಿಮ್ ಸ್ಟೆಕ್  ನಮ್ಮ ನಿರೀಕ್ಷೆಗಳನ್ನು ಪೂರೈಸಲು, ಸಚಿವಾಲಯದ ಸಾಮರ್ಥ್ಯವನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ಈ ಗುರಿಯನ್ನು ಸಾಧಿಸಲು ಪ್ರಧಾನ ಕಾರ್ಯದರ್ಶಿ ನೀಲ ನಕ್ಷೆಯನ್ನು ಸಿದ್ಧಪಡಿಸಬೇಕೆಂಬುದು ನನ್ನ ಸಲಹೆಯಾಗಿದೆ. ಈ ಮಹತ್ವದ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರೀಕ್ಷೆಯಂತೆ ಪೂರ್ಣಗೊಳಿಸಲು ಸಚಿವಾಲಯದ ಕಾರ್ಯಾಚರಣೆಯ ಬಜೆಟ್ ಅನ್ನು ಹೆಚ್ಚಿಸಲು ಒಂದು ಮಿಲಿಯನ್ ಡಾಲರ್‌ಗಳ ಆರ್ಥಿಕ ಸಹಾಯವನ್ನು ಭಾರತವು ನೀಡುತ್ತದೆ. 

ಗೌರವಾನ್ವಿತರೇ,
ನಮ್ಮ ಪರಸ್ಪರ ವ್ಯಾಪಾರವನ್ನು ವೃದ್ಧಿಸಲು ಬಿಮ್ ಸ್ಟೆಕ್, ಎಫ್ ಟಿಎ ಪ್ರಸ್ತಾವನೆಯಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುವುದು ಅತ್ಯವಶ್ಯಕವಾಗಿದೆ. ನಾವು ನಮ್ಮ ದೇಶಗಳ ಉದ್ಯಮಿಗಳು ಮತ್ತು ನವೋದ್ಯಮಗಳ ನಡುವೆ ವಿನಿಮಯ ಹೆಚ್ಚಿಸಬೇಕು. ಅಲ್ಲದೆ, ಇದೇ ವೇಳೆ ನಾವು ವ್ಯಾಪಾರ ಸೌಲಭ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ.  ಇದು ಬಿಮ್ ಸ್ಟೆಕ್ ರಾಷ್ಟ್ರಗಳ ನಡುವಿನ ಅಂತರ ವ್ಯಾಪಾರ ಮತ್ತು ಆರ್ಥಿಕ ಏಕೀಕರಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳ ಅರಿವನ್ನು ಹೆಚ್ಚಿಸಲು ಭಾರತೀಯ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯು ಎಡಿಬಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಎಲ್ಲಾ ದೇಶಗಳ ಸಂಬಂಧಪಟ್ಟ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆಂಬ ಭರವಸೆ ನನಗಿದೆ. 

ಗೌರವಾನ್ವಿತರೇ,


ನಮ್ಮ ನಡುವಿನ ಉತ್ತಮ ಏಕೀಕರಣ, ಉತ್ತಮ ವ್ಯಾಪಾರ ಮತ್ತು ಉತ್ತಮ ಜನರಿಂದ ಜನರ ಸಂಬಂಧಗಳ ಮುಖ್ಯ ಆಧಾರವೆಂದರೆ ಉತ್ತಮ ಸಂಪರ್ಕವಾಗಿದೆ. ನಾವು ಅದಕ್ಕೆ ಎಷ್ಟು ಒತ್ತು ಕೊಟ್ಟರೂ ಕಡಿಮೆಯೇ, ಇಂದು ನಾವು ಸಾರಿಗೆ ಸಂಪರ್ಕಕ್ಕಾಗಿ ಬಿಮ್ ಸ್ಟೆಕ್ ನ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ; ಅದನ್ನು ಸಿದ್ಧಪಡಿಸಿದ್ದಕ್ಕಾಗಿ ನಾನು ಎಡಿಬಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಈ ಕ್ರಿಯಾ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತು ನೀಡಬೇಕು. 

ಕ್ರಮೇಣ, ಸಂಪರ್ಕ ಕ್ಷೇತ್ರದಲ್ಲಿ ಈಗಾಗಲೇ ನಡೆಯುತ್ತಿರುವ ಉಪಕ್ರಮಗಳ ಮೇಲೆ ನಾವು ಮುಂದುವರಿಯಬೇಕಾಗಿದೆ. ಬಂಗಾಳ ಕೊಲ್ಲಿಯಲ್ಲಿ “ಕರಾವಳಿ ಶಿಪ್ಪಿಂಗ್ ಪರಿಸರ ವ್ಯವಸ್ಥೆ” ಸ್ಥಾಪಿಸಲು, ಶೀಘ್ರದಲ್ಲೇ ಕಾನೂನು ಚೌಕಟ್ಟನ್ನು ಅಭಿವೃದ್ಧಿಪಡಿಸಬೇಕು. ಚರ್ಚೆಗಳನ್ನು ಮೀರಿ ವಿದ್ಯುತ್ ಗ್ರಿಡ್  ಅಂತರ ಸಂಪರ್ಕ ಪಡೆದುಕೊಂಡು ಅದನ್ನು ಅನುಷ್ಠಾನದ ಹಂತಕ್ಕೆ ಕೊಂಡೊಯ್ಯಲು ಇದು ಸಕಾಲ. ಅಂತೆಯೇ, ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಕಾನೂನು ನೀತಿಯನ್ನು ಸ್ಥಾಪಿಸುವುದು ಸಹ ಮುಖ್ಯವಾಗಿದೆ. 

ಗೌರವಾನ್ವಿತರೇ,
ನಮ್ಮ ಪ್ರದೇಶವು ಯಾವಾಗಲೂ ನೈಸರ್ಗಿಕ ವಿಪತ್ತುಗಳಿಗೆ ಗುರಿಯಾಗುತ್ತದೆ. ಹವಾಮಾನ ಮತ್ತು ಹವಾಗುಣಕ್ಕಾಗಿ ಬಿಮ್ ಸ್ಟೆಕ್ ಕೇಂದ್ರವು ವಿಪತ್ತು ನಿರ್ವಹಣೆಯಲ್ಲಿ ಸಹಕಾರಕ್ಕಾಗಿ ಪ್ರಮುಖ ಸಂಸ್ಥೆಯಾಗಿದೆ, ವಿಶೇಷವಾಗಿ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಮತ್ತು ಅದನ್ನು ಹೆಚ್ಚು ಸಕ್ರಿಯವಾಗಿಸಲು ನಿಮ್ಮ ಸಹಕಾರವನ್ನು ನಾನು ಬಯಸುತ್ತೇನೆ. ಈ ಕೇಂದ್ರದ ಕೆಲಸವನ್ನು ಮತ್ತೆ ಪುನಾರಂಭಿಸಲು ಭಾರತವು ಮೂರು ಮಿಲಿಯನ್ ಡಾಲರ್‌ಗಳನ್ನು ನೀಡಲು ಸಿದ್ಧವಿದೆ. 
ಭಾರತವು ಇತ್ತೀಚೆಗೆ 3 ನೇ ಬಿಮ್ ಸ್ಟೆಕ್ ವಿಪತ್ತು ನಿರ್ವಹಣಾ ಅಭ್ಯಾಸ “ಫನೆಕ್ಸ್21’’ ನಡೆಸಿದೆ, ಇಂತಹ ಅಭ್ಯಾಸಗಳನ್ನು ನಿಯಮಿತವಾಗಿ ಮಾಡಬೇಕು, ಇದರಿಂದ ನಮ್ಮ ಅಧಿಕಾರಿಗಳು ವಿಪತ್ತಿನ ಸಮಯದಲ್ಲಿ ಒಗಟ್ಟಿನಿಂದ ಕೆಲಸ ಮಾಡುವ ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸಬೇಕು. 

ಗೌರವಾನ್ವಿತರೇ,

ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ನಮ್ಮ ರಾಷ್ಟ್ರೀಯ ನೀತಿಗಳ ಪ್ರಮುಖ ಭಾಗವಾಗಿದೆ. ನಳಂದಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವು ನೀಡುವ ಬಿಮ್ ಸ್ಟೆಕ್ ವಿದ್ಯಾರ್ಥಿವೇತನ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಂಗಾಳಕೊಲ್ಲಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಸಾಗರ ವಿಜ್ಞಾನಗಳ ಜಂಟಿ ಸಂಶೋಧನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದೇವೆ. ಕೃಷಿ ಕ್ಷೇತ್ರವು ಎಲ್ಲಾ  ಬಿಮ್ ಸ್ಟೆಕ್ ದೇಶಗಳ ಆರ್ಥಿಕತೆಯ ಆಧಾರವಾಗಿದೆ. ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಪ್ರಾದೇಶಿಕ ಮೌಲ್ಯ ಸರಪಳಿಗಳನ್ನು ರಚಿಸಲು ನಾವು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದೇವೆ. ಅದಕ್ಕಾಗಿ ನಾವು ಭಾರತೀಯ ಸಂಸ್ಥೆ ಆರ್‌ಐಎಸ್‌ ಗೆ ಸಮಗ್ರ ಅಧ್ಯಯನ ನಡೆಸುವ ಕಾರ್ಯ ವಹಿಸಿದ್ದೇವೆ.  

ಗೌರವಾನ್ವಿತರೇ,

ಭದ್ರತೆಯಿಲ್ಲದೆ ನಮ್ಮ ಪ್ರದೇಶದ ಏಳಿಗೆ ಅಥವಾ ಅಭಿವೃದ್ಧಿಯನ್ನು ಖಚಿತಪಡಿಸುವುದು ಅಸಾಧ್ಯವಾಗಿದೆ. ಕಾಠ್ಮಂಡುವಿನಲ್ಲಿ ನಡೆದ ನಮ್ಮ 4ನೇ ಶೃಂಗಸಭೆಯಲ್ಲಿ, ಭಯೋತ್ಪಾದನೆ, ಅಂತಾರಾಷ್ಟ್ರೀಯ ಅಪರಾಧ ಮತ್ತು ಸಾಂಪ್ರದಾಯಿಕವಲ್ಲದ ಅಪಾಯಗಳ ವಿರುದ್ಧ ಪ್ರಾದೇಶಿಕ ಕಾನೂನು ಚೌಕಟ್ಟನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸಲು ನಾವು ಕರೆ ನೀಡಿದ್ದೇವು. ಕಳೆದ ವರ್ಷದಿಂದ ಭಯೋತ್ಪಾದನೆ ನಿಗ್ರಹಕ್ಕೆ ನಮ್ಮ ಸಮಾವೇಶವು ಸಕ್ರಿಯವಾಗಿರುವುದು ನನಗೆ ಸಂತೋಷ ತಂದಿದೆ. ಇಂದಿನ ಶೃಂಗಸಭೆಯ ವೇಳೆ, ನಾವು ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇವೆ. ನಮ್ಮ ಕಾನೂನು ವ್ಯವಸ್ಥೆಗಳ ನಡುವೆ ಉತ್ತಮ ಸಮನ್ವಯತೆ ಇರುವಂತೆ ನಾವು ಇದೇ ರೀತಿಯ ಸಾಧನಗಳ ಮೇಲೆ ವೇಗವಾಗಿ ಮುನ್ನಡೆಯಬೇಕಾಗಿದೆ. 
ನಮ್ಮ ರಾಜತಾಂತ್ರಿಕ ತರಬೇತಿ ಸಂಸ್ಥೆಗಳ ನಡುವಿನ ಸಹಕಾರಕ್ಕಾಗಿ ಇಂದು ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇವೆ. ನಮ್ಮ ಕಾನೂನು ಜಾರಿ ತರಬೇತಿ ಸಂಸ್ಥೆಗಳ ನಡುವೆ ನಾವು ಅದೇ ಒಪ್ಪಂದವನ್ನು ಮಾಡಿಕೊಳ್ಳಬಹುದು. ಭಾರತದ ವಿಧಿವಿಜ್ಞಾನ ವಿಶ್ವವಿದ್ಯಾಲಯ,ಆ ವಲಯದಲ್ಲಿ ಒಂದು ವಿಶಿಷ್ಟ ಮತ್ತು ವಿಶ್ವದರ್ಜೆಯ ಸಂಸ್ಥೆಯಾಗಿದೆ.  ಬಿಮ್ ಸ್ಟೆಕ್ ದೇಶಗಳ ಪೋಲೀಸ್ ಮತ್ತು ವಿಧಿ ವಿಜ್ಞಾನ ಅಧಿಕಾರಿಗಳ ಸಾಮರ್ಥ್ಯ ನಿರ್ಮಾಣ ಘಟಕವನ್ನು ಸಹ ನಾವು ಸ್ಥಾಪನೆ ಮಾಡಬಹುದಾಗಿದೆ. 
ಗೌರವಾನ್ವಿತರೇ,
ನಮ್ಮ ಪ್ರದೇಶವು ಇಂದು ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿರುವಾಗ, ನಮ್ಮ ನಡುವಿನ ಒಗ್ಗಟ್ಟು ಮತ್ತು ಸಹಕಾರಕ್ಕೆ ಸೂಕ್ತ ಸಮಯವಾಗಿದೆ. ಇಂದು ಬಂಗಾಳಕೊಲ್ಲಿಯನ್ನು ಸಂಪರ್ಕ ಸೇತುವೆಯಾಗಿ, ಸಮೃದ್ಧಿಯ ಸೇತುವೆಯಾಗಿ, ಭದ್ರತೆಯ ಸೇತುವೆಯನ್ನಾಗಿ ಮಾಡುವ ಸಮಯ ಬಂದಿದೆ. 1997ರಲ್ಲಿ ನಾವು ಒಟ್ಟಾಗಿ ನಡೆಯಲು ನಿರ್ಧರಿಸಿದ ಗುರಿಗಳನ್ನು ಸಾಧಿಸಲು ನವ ಚೈತನ್ಯ ಮತ್ತು ಶಕ್ತಿಯೊಂದಿಗೆ ಮತ್ತೊಮ್ಮೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕೆಂದು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ. 
ಥೈಲ್ಯಾಂಡ್ ನ ಪ್ರಧಾನಮಂತ್ರಿ ಪ್ರಯೂತ್ ಚಾನ್-ಒ-ಚಾ ಅವರು ಬಿಮ್ ಸ್ಟೆಕ್ ನ ಮುಂದಿನ ಅಧ್ಯಕ್ಷರಾಗುವುದನ್ನು ನಾವು ಸ್ವಾಗತಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಶಯಗಳು.  

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು!

ಘೋಷಣೆ: ಪ್ರಧಾನಮಂತ್ರಿ ಅವರು ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಅವರ ಭಾಷಣದ ಯಥಾವತ್ ಅನುವಾದವಲ್ಲ. 


***


(Release ID: 1812156) Visitor Counter : 217