ಪ್ರಧಾನ ಮಂತ್ರಿಯವರ ಕಛೇರಿ

ಕೋಲ್ಕೋತ್ತಾದ ವಿಕ್ಟೋರಿಯಾ ಸ್ಮಾರಕ ಸಭಾಂಗಣದಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ.

Posted On: 23 MAR 2022 9:14PM by PIB Bengaluru

ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಜಗದೀಪ ಧನ್ಕಾರ್ ಜೀ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ, ವಿಕ್ಟೋರಿಯಾ ಸ್ಮಾರಕ ಸಭಾಂಗಣಕ್ಕೆ ಸಂಬಂಧಿಸಿದ ಎಲ್ಲಾ ಗಣ್ಯರೇ, ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೇ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದಿಗ್ಗಜಗಳೇ, ಮಹಿಳೆಯರೇ ಮತ್ತು ಮಹನೀಯರೇ!.

ಎಲ್ಲಕ್ಕಿಂತ ಮೊದಲು ಪಶ್ಚಿಮ ಬಂಗಾಳದ ಬೀರಭೂಮದ ಹಿಂಸಾಚಾರಕ್ಕೆ ಸಂಬಂಧಿಸಿ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಬಂಗಾಳದ ಶ್ರೇಷ್ಠ ಭೂಮಿಯಲ್ಲಿ ಇಂತಹ ಹೀನ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವಂತೆ ರಾಜ್ಯ ಸರಕಾರ ಖಾತ್ರಿಪಡಿಸುತ್ತದೆ ಎಂಬ ಭರವಸೆ ನನಗಿದೆ. ಇಂತಹ ಕೃತ್ಯ ಎಸಗಿದ ಅಪರಾಧಿಗಳನ್ನು ಮತ್ತು ಇಂತಹ ಕ್ರಿಮಿನಲ್ ಗಳನ್ನು ಪ್ರೋತ್ಸಾಹಿಸುತ್ತಿರುವವರನ್ನು  ಬಂಗಾಳದ ಜನತೆ ಎಂದೂ ಕ್ಷಮಿಸಬಾರದು ಎಂದು ನಾನು ಮನವಿ ಮಾಡುತ್ತೇನೆ. ಕೇಂದ್ರ ಸರಕಾರದ ಪರವಾಗಿ, ನಾನು ರಾಜ್ಯ ಸರಕಾರಕ್ಕೆ ಕ್ರಿಮಿನಲ್ ಗಳನ್ನು ಶೀಘ್ರವಾಗಿ ಶಿಕ್ಷಿಸಲು ಅವಶ್ಯವಾದ ಏನೆಲ್ಲ ನೆರವು ಕೇಂದ್ರ ಸರಕಾರದಿಂದ ಒದಗಿಸಬೇಕೋ ಅದನ್ನೆಲ್ಲ ಒದಗಿಸಲಾಗುವುದು ಎಂದು ಭರವಸೆ ನೀಡುತ್ತೇನೆ.

ಸ್ನೇಹಿತರೇ,

ನಾನು, ಭಾರತದ ಜನತೆಯ ಪರವಾಗಿ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಶ್ರೇಷ್ಠ ಕ್ರಾಂತಿಕಾರಿಗಳಿಗೆ ಮತ್ತು ಅವರು ಈ ಭೂಮಿಗೆ ಮಾಡಿದ  ತ್ಯಾಗವನ್ನು ಸ್ಮರಿಸಿ ನಮಿಸುತ್ತೇನೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರರಿಗೆ ನಾನು ಕೃತಜ್ಞ ದೇಶದ ಪರವಾಗಿ ಹುತಾತ್ಮ ದಿನದಂದು ನನ್ನ ಗೌರವಗಳನ್ನು ಸಲ್ಲಿಸುತ್ತೇನೆ. ಶ್ರೀಮದ್ ಭಗವದ್ಗೀತಾದಲ್ಲಿ ಬರೆದಿದೆ- नैनं छिन्दन्ति शस्त्राणि, नैनं दहति पावकः ಅಂದರೆ ಯಾವ ಶಸ್ತ್ರವೂ ಆತನನ್ನು ತುಂಡು ತುಂಡಾಗಿ ಕತ್ತರಿಸಲಾರದು, ಬೆಂಕಿಯಿಂದ ಸುಡಲಾರದು. ಇಂತಹ ಜನರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರು ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಅವರು ಪ್ರೇರಣಾದಾಯಕ ಹೂವಿನಂತೆ ತಲೆಮಾರುಗಳಿಂದ ತಲೆಮಾರುಗಳಿಗೆ ಪರಿಮಳವನ್ನು ಬೀರುತ್ತಾ ಬಂದಿದ್ದಾರೆ. ಅದರಿಂದಾಗಿ ಅಮರ್ ಸಾಹೀಬ್ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರ ತ್ಯಾಗದ ಕಥೆ ಹಲವಾರು ವರ್ಷಗಳ ಬಳಿಕವೂ ಪ್ರತಿಯೊಂದು ಮಗುವಿನ ತುಟಿಯಲ್ಲಿದೆ. ಈ ಹೀರೋಗಳ ಕಥೆಗಳು ದೇಶಕ್ಕಾಗಿ ನಮ್ಮೆಲ್ಲರನ್ನೂ ನಿರಂತರವಾಗಿ  ಪ್ರೇರೇಪಿಸುತ್ತಿವೆ. ಹುತಾತ್ಮ ದಿನಾಚರಣೆ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ ವೀರರಿಗೆ ಇಂದು ದೇಶವು ಗೌರವವನ್ನು ಸಲ್ಲಿಸುತ್ತಿದೆ. ಮತ್ತು ಅವರ ಕೊಡುಗೆಯನ್ನು ಪುನರಪಿ ಸ್ಮರಿಸುತ್ತಿದೆ. ಭಗ ಜತಿನ್ ಅವರ ಸ್ಪಷ್ಟ ಮತ್ತು ಗಟ್ಟಿ ಧ್ವನಿಯ ಕರೆಯಾದ-“ಅಮ್ರಾ ಮೊರ್ಬೋ, ಜಾಟ್ ಜೋಗ್ಬೇ” (ನಾವು ದೇಶವನ್ನು ಜಾಗೃತಗೊಳಿಸುವುದಕ್ಕಾಗಿ ಪ್ರಾಣಾರ್ಪಣೆ ಮಾಡಬೇಕು) ಅಥವಾ ಖುದಿರಾಂ ಬೋಸ್ ಅವರ ಕರೆಯಾದ –“ಏಕ್ ಬಾರ್ ಬಿದಾಯಿ ದೇ ಮಾ, ಘುರ್ಯೇ ಆಶಿ (ಮಾತೆಯೇ ನನಗೊಮ್ಮೆ ವಿದಾಯ ಹೇಳಿ ಬಿಡು, ನಾನು ಮತ್ತೆ ಮರಳಿ ಬರುತ್ತೇನೆ) ಎಂಬುದನ್ನು ಇಡೀ ದೇಶ ಮತ್ತೆ ಸ್ಮರಿಸುತ್ತಿದೆ. ಬಂಕಿಂ ಬಾಬು ಅವರ ವಂದೇ ಮಾತರಂ ಇಂದು ಭಾರತೀಯರ ಜೀವನ ಮಂತ್ರವಾಗಿದೆ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಝಲ್ಕರಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ, ಮಾತಂಗಿನಿ ಹಾಜ್ರಾ, ಬಿನಾ ದಾಸ್, ಕಮಲಾ ದಾಸ್ ಗುಪ್ತಾ, ಕನಕಲತಾ ಬರೂವಾ ಇತ್ಯಾದಿ ವೀರ ಮಹಿಳೆಯರು ಮಹಿಳಾ ಶಕ್ತಿಯೊಂದಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಉದ್ದೀಪಿಸಿದರು. ಇಂತಹ ಎಲ್ಲಾ ವೀರರ ಸ್ಮರಣೆಯಲ್ಲಿ “ಪ್ರಭಾರ ಫೇರಿ”ಗಳನ್ನು ( ಕಿರು ಮೆರವಣಿಗೆ) ಇಂದು ಬೆಳಗ್ಗೆಯಿಂದ ಹಲವಾರು ಸ್ಥಳಗಳಲ್ಲಿ ನಡೆಸಲಾಗಿದೆ. ನಮ್ಮ ಯುವ ಸ್ನೇಹಿತರು ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ  ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅಮೃತ ಮಹೋತ್ಸವದ ಈ ಚಾರಿತ್ರಿಕ ಸಂದರ್ಭದಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ವಿಕ್ಟೋರಿಯಾ ಸ್ಮಾರಕದಲ್ಲಿ ಹುತಾತ್ಮ ದಿನದಂದು ಉದ್ಘಾಟಿಸಲಾಗಿದೆ. ಇಂದು ಈ ಸ್ಥಳ ನೇತಾಜಿ ಸುಭಾಷ್ ಚಂದ್ರ ಬೋಸ್, ಅರಬಿಂದೋ ಘೋಷ್, ರಾಸ್ ಬಿಹಾರಿ ಬೋಸ್, ಖುದಿ ರಾಂ ಬೋಸ್, ಭಗಾ ಜತಿನ್, ಬಿನೋಯ್, ಬಾದಲ್, ದಿನೇಶ್, ಮುಂತಾದ ಶ್ರೇಷ್ಠ ಹೋರಾಟಗಾರರ ನೆನಪುಗಳಿಂದ ಪವಿತ್ರವಾಗಿದೆ.  ನಿರ್ಭಿಕ್ ಸುಭಾಷ್ ಗ್ಯಾಲರಿಯ ಬಳಿಕ ಪಶ್ಚಿಮ ಬಂಗಾಳದ ಕೋಲ್ಕೊತ್ತೆಯ ಪರಂಪರೆಗೆ ಬಿಪ್ಲೋಬಿ ಭಾರತ್ ಗ್ಯಾಲರಿಯ ರೂಪದಲ್ಲಿ ಸುಂದರ ಮುತ್ತುರತ್ನವನ್ನು ಸೇರಿಸಲಾಗಿದೆ.

ಸ್ನೇಹಿತರೇ,

ಬಿಪ್ಲೋಬಿ ಭಾರತ್ ಗ್ಯಾಲರಿಯು ಪಶ್ಚಿಮ ಬಂಗಾಳದ ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಪಾಲಿಸಿಕೊಂಡು ಅದನ್ನು  ಹಲವಾರು ವರ್ಷಗಳಿಂದ ಕಾಪಿಡುವ ನಮ್ಮ ಬದ್ಧತೆಗೆ ಒಂದು ನಿದರ್ಶನ ಕೂಡಾ. ಇಂತಹ ಸಾಂಪ್ರದಾಯಿಕ ಗ್ಯಾಲರಿಗಳನ್ನು ಬಹಳ ವೈಭವಯುಕ್ತವಾಗಿ ಮತ್ತು ಸುಂದರವಾಗಿ ನಿರ್ಮಾಣ ಮಾಡುವ ಕೆಲಸ, ಅದು ಹಳೆಯ ಕರೆನ್ಸಿ ಕಟ್ಟಡ ಆಗಿರಬಹುದು, ಎತ್ತರದ ಬುರುಜಿನ ಬೆಲ್ವೆಡೆರಿ ಹೌಸ್  ಇರಬಹುದು, ವಿಕ್ಟೋರಿಯಾ ಸ್ಮಾರಕ ಇರಬಹುದು ಅಥವಾ ಮೆಟ್ಕಾಫ್ ಹೌಸ್ ಇರಬಹುದು ಬಹುತೇಕ ಪೂರ್ಣಗೊಂಡಿದೆ. ನಮ್ಮ ಸರಕಾರ ಜಗತ್ತಿನ ಅತ್ಯಂತ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ಕೋಲ್ಕೊತ್ತಾದಲ್ಲಿಯ ಭಾರತೀಯ ಮ್ಯೂಸಿಯಂನ್ನು ಹೊಸ ರೀತಿಯಲ್ಲಿ ಜಗತ್ತಿನೆದುರು ಇಡುವ ಪ್ರಯತ್ನವನ್ನು ಮಾಡಿದೆ.

ಸ್ನೇಹಿತರೇ,

ನಮ್ಮ ಹಿಂದಿನ ಆಳ್ವಿಕೆಗಳು, ಆಡಳಿತಗಳು ನಮ್ಮ ವರ್ತಮಾನವನ್ನು ನಿರ್ದೇಶಿಸುತ್ತವೆ. ಮತ್ತು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲು ನಮಗೆ ಪ್ರೇರಣೆ ನೀಡುತ್ತವೆ. ಆದುದರಿಂದ ದೇಶವು ತನ್ನ ಚರಿತ್ರೆಯನ್ನು ಅನುಭವಿಸುತ್ತಿರುತ್ತದೆ, ಅದರ ಭೂತಕಾಲವನ್ನು, ಶಕ್ತಿಯ ಜಾಗೃತ ಮೂಲವಾಗಿ ಪರಿಗಣಿಸುತ್ತದೆ. ಪ್ರಾಚೀನ ದೇವಾಲಯಗಳಿಂದ ಆಗಾಗ ವಿಗ್ರಹಗಳು ಕಳವಾದ ಸುದ್ದಿಗಳು ಬರುತ್ತಿದ್ದುದು ನಿಮಗೆ ಗೊತ್ತಿರಬಹುದು. ನಮ್ಮ ಕಲಾ ಕೃತಿಗಳನ್ನು ಭಯಭೀತಿ ಇಲ್ಲದೆ ಅವುಗಳು ಮೌಲ್ಯರಹಿತವಾದಂತಹವು ಎನ್ನುವ ರೀತಿಯಲ್ಲಿ ವಿದೇಶಗಳಿಗೆ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು.  ಈಗ ಭಾರತದ ಪರಂಪರೆಯ ಸಂಗ್ರಹಗಳನ್ನು ಹಿಂದಕ್ಕೆ ತರಲಾಗುತ್ತಿದೆ. ಕಿಷನ್ ರೆಡ್ಡಿ ಜೀ ಇದನ್ನು ವಿವರವಾಗಿ ತಿಳಿಸಿದ್ದಾರೆ. ಬರೇ ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾವು ಇಂತಹ ಡಜನ್ನುಗಳಷ್ಟು ವಿಗ್ರಹಗಳನ್ನು, ಪೈಂಟಿಂಗ್ ಗಳನ್ನು, ಮತ್ತು ಇತರ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಇವುಗಳಲ್ಲಿ ಹೆಚ್ಚಿನವು ಪಶ್ಚಿಮ ಬಂಗಾಳಕ್ಕೆ ಸೇರಿದವು. ಕಳೆದ ವರ್ಷ ಅಮೆರಿಕಾ ಕೂಡಾ ಸುಮಾರು 150 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದೆ. ದೇಶದ ಪ್ರಭಾವ ಹೆಚ್ಚಿದಂತೆ ಮತ್ತು ಎರಡು ದೇಶಗಳ ನಡುವೆ ವಿಶ್ವಾಸ ಹೆಚ್ಚಿದಂತೆ ಇಂತಹ ಉದಾಹರಣೆಗಳು ಮುನ್ನೆಲೆಗೆ ಬರುತ್ತವೆ. 2014ಕ್ಕೆ ಮೊದಲಿನ ದಶಕಗಳಲ್ಲಿ ಬರೇ ಡಜನ್ನಿನಷ್ಟು ವಿಗ್ರಹಗಳನ್ನು ಭಾರತಕ್ಕೆ ತಂದುದು ನಿಮ್ಮ ಲೆಕ್ಕದಲ್ಲಿರಬಹುದು. ಆದರೆ ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ 225ನ್ನೂ ದಾಟಿದೆ. ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಗೆ ಸೇರಿದ ಇಂತಹ ಹಲವು ಕಲಾಕೃತಿಗಳು ಭಾರತದ ವರ್ತಮಾನದ ಮತ್ತು ಭವಿಷ್ಯದ ತಲೆಮಾರುಗಳನ್ನು ನಿರಂತರವಾಗಿ ಪ್ರಭಾವಿಸುವಂತಹವು!. ಈ ನಿಟ್ಟಿನಲ್ಲಿ ಇದು ಒಂದು ದೊಡ್ಡ ಪ್ರಯತ್ನ.

ಸಹೋದರರೇ ಮತ್ತು ಸಹೋದರಿಯರೇ,

ಇದಕ್ಕೆ ಇನ್ನೊಂದು ಮುಖ ಇದೆ, ದೇಶವು ಅದರ ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಸ ಆತ್ಮ ವಿಶ್ವಾಸದಿಂದ ಅಭಿವೃದ್ಧಿ ಮಾಡುತ್ತಿದೆ. ಈ ಸಂಗತಿ “ಪರಂಪರೆ ಪ್ರವಾಸೋದ್ಯಮ”ಕ್ಕೆ ಸಂಬಂಧಿಸಿದ್ದು. ಆರ್ಥಿಕವಾಗಿ ನೋಡಿದರೂ ’ಪರಂಪರೆ ಪ್ರವಾಸೋದ್ಯಮ” ದಲ್ಲಿ ಭಾರೀ ಅವಕಾಶಗಳು, ಸಾಮರ್ಥ್ಯಗಳು ಇವೆ. ಇದೂ ಅಭಿವೃದ್ಧಿಯ ಹೊಸ ಕ್ಷೇತ್ರಗಳನ್ನು ತೆರೆಯುತ್ತದೆ. “ಪರಂಪರಾ ಪ್ರವಾಸೋದ್ಯಮ”ವನ್ನು ಉತ್ತೇಜಿಸಲು ರಾಷ್ಟ್ರವ್ಯಾಪೀ ಪ್ರಚಾರಾಂದೋಲನ ನಡೆಯುತ್ತಿದೆ. ಅದು ದಾಂಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಸಂಬಂಧಿಸಿದ ಸ್ಮಾರಕವಿರಲಿ, ಅಥವಾ ಜಲಿಯನ್ ವಾಲಾ ಬಾಗ್ ಸ್ಮಾರಕದ ಮರುನಿರ್ಮಾಣ ಇರಲಿ, ಕೇವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಾಗಿರಲಿ, ಅಥವಾ ವಾರಾಣಸಿಯಲ್ಲಿರುವ ಪಂಡಿತ ದೀನದಯಾಳ ಉಪಾಧ್ಯಾಯ ಜೀ ಅವರ ಸ್ಮಾರಕವಾಗಿರಲಿ, ದಿಲ್ಲಿಯಲ್ಲಿರುವ ಬಾಬಾ ಸಾಹೇಬ್ ಸ್ಮಾರಕವಾಗಿರಲಿ, ಅಥವಾ ರಾಂಚಿಯಲ್ಲಿರುವ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಮ್ಯೂಸಿಯಂ ಆಗಿರಲಿ, ಬನಾರಾಸ್ ಅಥವಾ ಅಯೋಧ್ಯಾದಲ್ಲಿರುವ ಘಾಟ್ ಗಳ ಸೌಂದರ್ಯೀಕರಣವಾಗಿರಲಿ, ದೇಶಾದ್ಯಂತ ನಂಬಿಕೆಯ ತಾಣಗಳ ಮತ್ತು ಚಾರಿತ್ರಿಕ ದೇವಾಲಯಗಳ ಪುನರುತ್ಥಾನವಾಗಿರಲಿ ಪರಂಪರಾ ಪ್ರವಾಸೋದ್ಯಮವನ್ನು ರಾಷ್ಟ್ರವ್ಯಾಪ್ತಿಯಲ್ಲಿ ಪ್ರಚುರಪಡಿಸಲಾಗುತ್ತಿದೆ. ಸ್ವದೇಶ್ ದರ್ಶನದಂತಹ ಹಲವಾರು ಯೋಜನೆಗಳ ಮೂಲಕ ಪರಂಪರಾ ಪ್ರವಾಸೋದ್ಯಮಕ್ಕೆ ವೇಗವನ್ನು ನೀಡಲಾಗುತ್ತಿದೆ. ಜನರ ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವಲ್ಲಿ ಪರಂಪರಾ ಪ್ರವಾಸೋದ್ಯಮ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ ಎಂಬುದು ಜಗತ್ತಿನಾದ್ಯಂತ ಕಂಡುಕೊಂಡ ಅನುಭವ. 21 ನೇ ಶತಮಾನದ ಭಾರತ ಈ ಸಾಮರ್ಥ್ಯವನ್ನು ಕಂಡುಕೊಂಡು ಮುನ್ನಡೆಯುತ್ತಿದೆ.

ಸ್ನೇಹಿತರೇ,

ನೂರಾರು ವರ್ಷಗಳ ಗುಲಾಮಗಿರಿಯಿಂದ ಮೂರು ಧಾರೆಗಳ ದೆಸೆಯಿಂದ  ಭಾರತ ಸ್ವಾತಂತ್ರ್ಯವನ್ನು ಪಡೆಯಿತು. ಇದರಲ್ಲಿ ಒಂದು ಧಾರೆ ಕ್ರಾಂತಿಯದ್ದು, ಎರಡನೆಯದ್ದು ಸತ್ಯಾಗ್ರಹ ಮತ್ತು ಮೂರನೆಯದ್ದು ಸಾರ್ವಜನಿಕ ಜಾಗೃತಿ ಹಾಗು ರಚನಾತ್ಮಕ ಕಾರ್ಯಗಳದ್ದು. ಈ ಎಲ್ಲಾ ಮೂರೂ ಧಾರೆಗಳು ತ್ರಿವರ್ಣದ ಮೂರು ಬಣ್ಣಗಳ ರೂಪದಲ್ಲಿ ನನ್ನ ಮನಸ್ಸಿಗೆ ಕಾಣಿಸುತ್ತಿವೆ. ನಮ್ಮ ತ್ರಿವರ್ಣದ ಕೇಸರಿ ವರ್ಣ ಕ್ರಾಂತಿಯನ್ನು ಸಂಕೇತಿಸುತ್ತದೆ. ಬಿಳಿ ವರ್ಣ ಸತ್ಯಾಗ್ರಹ ಮತ್ತು ಅಹಿಂಸೆಯನ್ನು ಸಂಕೇತಿಸುತ್ತದೆ. ಹಸಿರು ವರ್ಣವು ರಚನಾತ್ಮಕತೆಯನ್ನು, ಭಾರತೀಯ ಮೌಲ್ಯಗಳನ್ನು ಆಧರಿಸಿದ ಶಿಕ್ಷಣವನ್ನು, ದೇಶಭಕ್ತಿಗೆ ಸಂಬಂಧಿಸಿದ ಸಾಹಿತ್ಯ ಕೃತಿಗಳು ಹಾಗು ಭಕ್ತಿ ಚಳವಳಿಯನ್ನು ಸಂಕೇತಿಸುವ ಧಾರೆಯಾಗಿದೆ. ತ್ರಿವರ್ಣದ ನಡುವಿನ ನೀಲಿ ಚಕ್ರವು ಭಾರತದ ಸಾಂಸ್ಕೃತಿಕ ಅಸ್ಮಿತೆಯ ದ್ಯೋತಕವಾಗಿ ನನಗೆ ಕಾಣುತ್ತದೆ. ವೇದಗಳಿಂದ ಹಿಡಿದು ವಿವೇಕಾನಂದರವರೆಗೆ,ಬುದ್ಧನಿಂದ ಗಾಂಧಿಯವರೆಗೆ ಈ ಚಕ್ರ ಮುಂದುವರಿಯುತ್ತದೆ.  ಮಥುರಾದ ವೃಂದಾವನವಿರಲಿ, ಕುರುಕ್ಷೇತ್ರದ ಮೋಹನ, ಆತನ ಸುದರ್ಶನ ಚಕ್ರ ಮತ್ತು ಪೋರಬಂದರಿನ ಚರಕಗಳಿರಲಿ ಈ ಚಕ್ರ ಎಂದೂ ಸ್ಥಗಿತಗೊಂಡುದಿಲ್ಲ.

ಮತ್ತು ಸ್ನೇಹಿತರೇ,

ಇಂದು ನಾನು ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ಉದ್ಘಾಟಿಸುವಾಗ ತ್ರಿವರ್ಣದಲ್ಲಿ ನವ ಭಾರತದ ಭವಿಷ್ಯವನ್ನೂ ಕಾಣುವಂತಾಗುತ್ತಿದೆ. ಕೇಸರಿ ಬಣ್ಣ ಈಗ ನಮ್ಮನ್ನು ಕಠಿಣ ದುಡಿಮೆಗೆ, ಕರ್ತವ್ಯಕ್ಕೆ ಮತ್ತು ರಾಷ್ಟ್ರೀಯ ಭದ್ರತೆಗೆ  ಪ್ರೇರಣೆ. ಬಿಳಿ ಬಣ್ಣವು ಈಗ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್”ಗೆ ಅನ್ವರ್ಥವಾಗಿದೆ. ಹಸಿರು ವರ್ಣ ಇಂದು ಪರಿಸರವನ್ನು ಸಂರಕ್ಷಿಸುವಲ್ಲಿ ಮರುನವೀಕೃತ ಇಂಧನದ ಬಹಳ ದೊಡ್ಡ ಗುರಿಗಳನ್ನು ಸಂಕೇತಿಸುತ್ತದೆ. ಹಸಿರು ಇಂಧನದಿಂದ ಹಸಿರು ಹೈಡ್ರೋಜನ್ ವರೆಗೆ, ಜೈವಿಕ ಅನಿಲದಿಂದ ಹಿಡಿದು ಎಥೆನಾಲ್ ಮಿಶ್ರಣದವರೆಗೆ, ಸಹಜ ಕೃಷಿಯಿಂದ ಹಿಡಿದು ಗೋಬರ್ ಧನ್ ಯೋಜನಾವರೆಗೆ ಎಲ್ಲವೂ ಇದರಲ್ಲಿ  ಪ್ರತಿಬಿಂಬಿತವಾಗಿದೆ. ತ್ರಿವರ್ಣ ಧ್ವಜದಲ್ಲಿಯ ನೀಲಿ ವೃತ್ತ ಇಂದು ನೀಲಿ ಆರ್ಥಿಕತೆಗೆ ಸಂವಾದಿಯಾಗಿದೆ. ಭಾರತದಲ್ಲಿಯ ಸಾಗರ ಸಂಪನ್ಮೂಲಗಳು, ವಿಸ್ತಾರವಾದ ಕರಾವಳಿ ಭಾಗ, ನಮ್ಮ ಜಲ ಶಕ್ತಿ, ನಿರಂತರವಾಗಿ ಭಾರತದ ಅಭಿವೃದ್ಧಿಗೆ ವೇಗವನ್ನು ನೀಡುತ್ತಿವೆ

ಮತ್ತು ಸ್ನೇಹಿತರೇ,

ದೇಶದ ಯುವಜನರು ತ್ರಿವರ್ಣದ ಈ ಹೆಮ್ಮೆ ಮತ್ತು ವೈಭವವನ್ನು ಬಲಪಡಿಸುವ ಕೆಲಸವನ್ನು ಕೈಗೆತ್ತಿಕೊಂಡಿರುವುದು ನನಗೆ ಸಂತೋಷದ ಕೆಲಸವಾಗಿದೆ. ಎಲ್ಲಾ ಕಾಲಘಟ್ಟಗಳಲ್ಲಿಯೂ ಭಾರತದ ಸ್ವಾತಂತ್ರ್ಯ ಹೋರಾಟದ ದೊಂದಿಯನ್ನು ಹಿಡಿದು ಮುನ್ನಡೆದವರು ದೇಶದ ಯುವಜನರು. ಭಗತ್ ಸಿಂಗ್, ಸುಖ್ ದೇವ್, ರಾಜಗುರು ಈ ದಿನದಂದು ಗಲ್ಲಿಗೇರಿಸಲ್ಪಟ್ಟರು. ಅವರು ಬರೇ 23-24 ವರ್ಷ ವಯಸ್ಸಿನವರು. ಖುದಿರಾಂ ಬೋಸ್ ಗಲ್ಲಿಗೇರಿಸಲ್ಪಡುವಾಗ ಅವರಿಗಿಂತಲೂ ಕಿರಿಯರು. ಭಗವಾನ್ ಬಿರ್ಸಾ ಮುಂಡಾ 25-26 ವರ್ಷದವರು, ಚಂದ್ರಶೇಖರ ಆಜಾದ್ 24-25 ವರ್ಷದವರು. ಮತ್ತು ಅವರು ಬ್ರಿಟಿಷರ ಆಡಳಿತವನ್ನು ನಡುಗಿಸಿದವರು. ಭಾರತದ ಯುವಜನರ ಸಾಮರ್ಥ್ಯ ಆ ಕಾಲದಲ್ಲಾಗಿರಲಿ, ಇಂದಾಗಲೀ ಕಡಿಮೆಯಾಗಿಲ್ಲ. ನಾನು ದೇಶದ ಯುವಜನತೆಗೆ ಹೇಳಲು ಇಚ್ಚಿಸುತ್ತೇನೆ, ನೀವು ನಿಮ್ಮ ಶಕ್ತಿ-ಸಾಮರ್ಥ್ಯವನ್ನು ಮತ್ತು ಕನಸುಗಳನ್ನು ಕೀಳಂದಾಜು ಮಾಡಬೇಡಿ. ಭಾರತದ ಯುವಜನರು ಮಾಡಲಸಾಧ್ಯವಾದಂತಹ ಯಾವ ಕೆಲಸವೂ ಇಲ್ಲ. ಭಾರತದ ಯುವಜನತೆ ಸಾಧಿಸಲಾರದಂತಹ ಯಾವ ಗುರಿಯೂ ಇಲ್ಲ. 2047 ರಲ್ಲಿ ಸ್ವಾತಂತ್ರ್ಯದ 100 ವರ್ಷಗಳನ್ನು ತಲುಪುವಾಗ ಭಾರತ ಯಾವ ಎತ್ತರವನ್ನು ತಲುಪುತ್ತದೋ ಅದು ಪೂರ್ಣವಾಗಿ ಇಂದಿನ ಯುವಜನತೆಯ ಶಕ್ತಿಯಿಂದ ಸಾಧ್ಯವಾದುದಾಗಿರುತ್ತದೆ. ಆದುದರಿಂದ ಇಂದಿನ ಯುವಜನತೆಯ ಅತಿ ದೊಡ್ಡ ಗುರಿ ನವಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವುದಾಗಿರಬೇಕು. ಮುಂದಿನ 25 ವರ್ಷಗಳಲ್ಲಿ ಯುವಜನತೆಯ ಕಠಿಣ ಪರಿಶ್ರಮ ಭಾರತದ ಅದೃಷ್ಟವನ್ನು, ಮುಂದಿನ ಹಾದಿಯನ್ನು ರೂಪಿಸಲಿದೆ ಮತ್ತು ಭಾರತದ ಭವಿಷ್ಯವನ್ನು ರೂಪಿಸಲಿದೆ.

ಸ್ನೇಹಿತರೇ

ಭಾರತದ ಸ್ವಾತಂತ್ರ್ಯ ಹೋರಾಟ ಸದಾ ನಮ್ಮನ್ನು “ಏಕ ಭಾರತ್-ಶ್ರೇಷ್ಟ ಭಾರತ್” ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕೆ ಪ್ರೇರಣೆ ಒದಗಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ವಿವಿಧ ವಲಯಗಳಿಗೆ ಸೇರಿದವರು, ಅವರು ವಿವಿಧ ಭಾಷೆಗಳನ್ನಾಡುತ್ತಿದ್ದವರು, ಮತ್ತು ಅವರ ಸಂಪನ್ಮೂಲಗಳಲ್ಲೂ ಭಿನ್ನತೆ ಇತ್ತು. ಆದರೆ ಅವರ ದೇಶಾಭಿಮಾನ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಸ್ಪೂರ್ತಿ ಮಾತ್ರ ಏಕ ರೀತಿಯದಾಗಿತ್ತು. ಅವರು “ಭಾರತ್ ಭಕ್ತಿ” ಯ ಸೂತ್ರಕ್ಕೆ ಜೋಡಣೆಯಾಗಿದ್ದರು ಮತ್ತು ದೃಢ ನಿರ್ಧಾರವನ್ನು ಕಾರ್ಯಗತಗೊಳಿಸುವುದಕ್ಕೆ ಗಟ್ಟಿಯಾಗಿ ನಿಂತು ಹೋರಾಟ ಮಾಡಿದರು. “ಭಾರತ ಭಕ್ತಿಯ” ಚಿರಂತನವಾದ ಭಾವನೆ ಮತ್ತು ಏಕತೆ ಹಾಗು ಭಾರತದ ಸಮಗ್ರತೆ ಇಂದು ಕೂಡಾ ನಮ್ಮ ಗರಿಷ್ಟ ಆದ್ಯತೆಯಾಗಿರಬೇಕು. ನಿಮ್ಮ ರಾಜಕೀಯ ಚಿಂತನೆ ಏನೇ ಇರಲಿ, ಮತ್ತು ನೀವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಲಿ, ಭಾರತದ ಏಕತೆ ಮತ್ತು ಸಮಗ್ರತೆಯ ವಿಷಯದಲ್ಲಿ ಆಟ ಆಡುವುದು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ  ಬಹಳ ದೊಡ್ಡ ವಂಚನೆಯಾಗುತ್ತದೆ. ಏಕತೆ ಇಲ್ಲದಿದ್ದರೆ ನಮಗೆ ನಮ್ಮ “ಏಕ ಭಾರತ್ ಶ್ರೇಷ್ಟ ಭಾರತ್” ಸ್ಪೂರ್ತಿಯನ್ನು ಬಲಪಡಿಸಲು ಸಾಧ್ಯವಾಗುವುದಿಲ್ಲ. ದೇಶದ ನಮ್ಮ ಸಾಂವಿಧಾನಿಕ ಸಂಸ್ಥೆಗಳಿಗೆ ಗೌರವ, ಸಾಂವಿಧಾನಿಕ ಹುದ್ದೆಗಳಿಗೆ ಗೌರವ, ಎಲ್ಲಾ ನಾಗರಿಕರ ಕುರಿತ ಸಮಭಾವ ಮತ್ತು ಅವರ ಬಗ್ಗೆ ಸಹಾನುಭೂತಿ ದೇಶದ ಏಕತೆಯನ್ನು ಒತ್ತಿ ಹೇಳುತ್ತದೆ. ಇಂದಿನ ಕಾಲಮಾನದಲ್ಲಿ ನಾವು ದೇಶದ ಏಕತೆ ವಿರುದ್ಧ ಕೆಲಸ ಮಾಡುವ ಪ್ರತೀ ವಿಷಯದ ಬಗ್ಗೆಯೂ ಕಣ್ಣಿಡಬೇಕಾಗುತ್ತದೆ. ಮತ್ತು ಅದರ ವಿರುದ್ಧ ದೃಢವಾಗಿ ಹೋರಾಡಬೇಕಾಗುತ್ತದೆ. ಇಂದು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಏಕತೆಯ ಈ ಜೇನನ್ನು, ಮಕರಂದವನ್ನು, ಅಮೃತವನ್ನು  ರಕ್ಷಿಸುವುದು ಕೂಡಾ ನಮ್ಮೆಲ್ಲರ ಹೊಣೆಗಾರಿಕೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ನವಭಾರತದಲ್ಲಿ ಹೊಸ ಚಿಂತನೆಯೊಂದಿಗೆ ಮುಂದೆ ಸಾಗಬೇಕಾಗಿದೆ. ಇದು ಭಾರತದ ಆತ್ಮ ವಿಶ್ವಾಸದ, ಸ್ವಾವಲಂಬನೆಯ, ಪ್ರಾಚೀನ ಗುರುತಿಸುವಿಕೆಯ ಮತ್ತು ಭವಿಷ್ಯದ ಪ್ರಗತಿಯ ಹೊಸ ಚಿಂತನೆ. ಮತ್ತು ಕರ್ತವ್ಯದ ಭಾವನೆಗೆ ಇಲ್ಲಿ ಅತ್ಯುನ್ನತ ಸ್ಥಾನವಿರುತ್ತದೆ. ನಾವು ಹೆಚ್ಚು ನಿಷ್ಟೆಯಿಂದ ನಮ್ಮ ಕರ್ತವ್ಯಗಳನ್ನು ಮಾಡಿದರೆ ನಮ್ಮ ಪ್ರಯತ್ನಗಳು ಹೆಚ್ಚು ದೃಢವಾಗಿರುತ್ತವೆ, ದೇಶದ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಬೀರುವಂತಹವಾಗಿರುತ್ತವೆ. ಆದುದರಿಂದ “ಕರ್ತವ್ಯಕ್ಕೆ ಅರ್ಪಣಾಭಾವ” ಎಂಬುದು ನಮ್ಮ ರಾಷ್ಟ್ರೀಯ ಸ್ಪೂರ್ತಿಯಾಗಬೇಕು. “ಕರ್ತವ್ಯದತ್ತ ಗೌರವ” ನಮ್ಮ ರಾಷ್ಟ್ರೀಯ ಪ್ರೇರಣೆಯಾಗಿರಬೇಕು. ಕರ್ತವ್ಯ ಎಂಬುದು ಭಾರತದ ಗುಣನಡತೆಯಾಗಬೇಕು. ಮತ್ತು ಈ ಕರ್ತವ್ಯ ಎಂದರೆ ಏನು?. ನಾವು ನಮ್ಮ ಸುತ್ತಲಿನ ಕರ್ತವ್ಯಗಳ ಬಗ್ಗೆ ಬಹಳ ಸುಲಭವಾಗಿ ನಿರ್ಧಾರಕ್ಕೆ ಬರಬಹುದು. ಪ್ರಯತ್ನಗಳನ್ನು ಮಾಡಬಹುದು ಮತ್ತು ಫಲಿತಾಂಶಗಳನ್ನೂ ತರಬಹುದು. ನಾವು ಕಸ ಚೆಲ್ಲದಿದ್ದರೆ ನಾವು ನಮ್ಮ ಕರ್ತವ್ಯ ನಿರ್ವಹಿಸಿದಂತೆ, ರಸ್ತೆಗಳಲ್ಲಿ, ರೈಲುಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ ಮತ್ತು ಬೀದಿಗಳಲ್ಲಿ ಹಾಗು ಮಾರುಕಟ್ಟೆಗಳಲ್ಲಿ  ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದರೆ ನಾವು ನಮ್ಮ ಕರ್ತವ್ಯ ಮಾಡಿದಂತೆ. ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದು, ಜಲ ಸಂರಕ್ಷಣೆಗೆ ಕೊಡುಗೆ ನೀಡುವುದು ಮತ್ತು ಪರಿಸರ ರಕ್ಷಣೆಗೆ ಸಹಾಯ ಮಾಡುವುದು ಕೂಡಾ ಕರ್ತವ್ಯಕ್ಕೆ ಉದಾಹರಣೆಗಳು. ನಾವು ಡಿಜಿಟಲ್ ಪಾವತಿಗಳನ್ನು ಮಾಡಿದಾಗ, ಇತರರಲ್ಲಿ ಅದರ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಮತ್ತು ಅವರನ್ನು ಅದಕ್ಕೆ ತರಬೇತು ಮಾಡಿದಾಗಲೂ ನಾವು ನಮ್ಮ ಕರ್ತವ್ಯವನ್ನು ಮಾಡಿದಂತಾಗುತ್ತದೆ. ನಾವು ಸ್ಥಳೀಯ ಉತ್ಪನ್ನವನ್ನು ಖರೀದಿ ಮಾಡಿದಾಗ, ಮತ್ತು ವೋಕಲ್ ಫಾರ್ ಲೋಕಲ್ ಆದಾಗಲೂ ಕರ್ತವ್ಯವನ್ನು ಮಾಡಿದಂತಾಗುತ್ತದೆ. ಆತ್ಮ ನಿರ್ಭರ ಭಾರತ ಆಂದೋಲನಕ್ಕೆ ವೇಗವನ್ನು ನೀಡುವುದೂ ನಮ್ಮ ಕರ್ತವ್ಯ. ಇಂದು ಭಾರತವು ಡಾಲರ್ 400 ಬಿಲಿಯನ್ ಅಂದರೆ 30 ಲಕ್ಷ ಕೋ.ರೂ.ಗಳ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಹೆಚ್ಚುತ್ತಿರುವ ಭಾರತದ ರಫ್ತು ನಮ್ಮ ಕೈಗಾರಿಕೋದ್ಯಮದ ,ಎಂ.ಎಸ್.ಎಂ.ಇ. ಗಳ, ಶಕ್ತಿ, ಉತ್ಪಾದನಾ ಸಾಮರ್ಥ್ಯ ಮತ್ತು ಕೃಷಿ ವಲಯದ ಸಾಮರ್ಥ್ಯಕ್ಕೆ ಸಂಕೇತಗಳು.

ಸ್ನೇಹಿತರೇ,

ಪ್ರತಿಯೊಬ್ಬ ಭಾರತೀಯರೂ ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿದಾಗ, ಪೂರ್ಣ ಅರ್ಪಣಾಭಾವದಿಂದ ಅವುಗಳನ್ನು ಅನುಸರಿಸಲು ಆರಂಭಿಸಿದಾಗ ಭಾರತಕ್ಕೆ ಮುನ್ನಡೆ ಸಾಧಿಸುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಅದು ಮುನ್ನಡೆ ಸಾಧಿಸುವುದನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಾಗದು. ನಾವು ನಮ್ಮ ಸುತ್ತ ಮುತ್ತ ನೋಡಿದರೆ, ಲಕ್ಷಾಂತರ ಯುವಜನರು, ಮಹಿಳೆಯರು, ನಮ್ಮ ಮಕ್ಕಳು ಮತ್ತು ನಮ್ಮ ಕುಟುಂಬದವರು ಕರ್ತವ್ಯದ ಈ ಭಾವನೆಯನ್ನು ಅನುಸರಿಸುತ್ತಿದ್ದಾರೆ. ಈ ಉತ್ಸಾಹ ಅಥವಾ ಸ್ಪೂರ್ತಿ ಪ್ರತಿಯೊಬ್ಬ ಭಾರತೀಯರ ಗುಣನಡತೆಯಾದಾಗ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಕವಿ ಮುಕುಂದ ದಾಸ್ ಜೀ ಅವರನ್ನು ನಾನು ಉಲ್ಲೇಖಿಸುವುದಾದರೆ: ''की आनंदोध्वनि उठलो बौन्गो-भूमे बौन्गो-भूमे, बौन्गो-भूमे, बौन्गो-भूमे, भारौतभूमे जेगेच्छे आज भारौतबाशी आर कि माना शोने, लेगेच्छे आपोन काजे, जार जा नीछे मोने''. ಭಾರತೀಯ ನಾಗರಿಕರ ಈ ಸ್ಪೂರ್ತಿ, ಉತ್ಸಾಹ ಬಲಿಷ್ಟವಾಗಿರಲಿ, ನಾವೆಲ್ಲರೂ ಕ್ರಾಂತಿಕಾರಿಗಳ ಸ್ಪೂರ್ತಿಯಿಂದ ಪ್ರೇರಣೆ ಪಡೆಯುವಂತಿರಲಿ!.ಈ ಆಶಯದೊಂದಿಗೆ, ನಾನು ಮತ್ತೊಮ್ಮೆ ಬಿಪ್ಲೋಬಿ ಭಾರತ್ ಗ್ಯಾಲರಿಗಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ವಂದೇ ಮಾತರಂ! ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1809511) Visitor Counter : 204