ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಫ್ಘಾನಿಸ್ತಾನ ಸಿಖ್-ಹಿಂದೂ ನಿಯೋಗವನ್ನು ಭೇಟಿ ಮಾಡಿದ ಪ್ರಧಾನಿ



ಸಂಕಷ್ಟದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಆಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಿದ್ದಕ್ಕಾಗಿ ಪ್ರತಿನಿಧಿಗಳು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ

ನೀವು ಅತಿಥಿಗಳಲ್ಲ, ನಿಮ್ಮ ಸ್ವಂತ ಮನೆಯಲ್ಲಿದ್ದೀರಿ, ಭಾರತ ನಿಮ್ಮ ಮನೆ: ಪ್ರಧಾನಿ

ʻಸಿಎಎʼಗಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಪ್ರತಿನಿಧಿಗಳು ಅವರನ್ನು ವಿಶ್ವದ ಪ್ರಧಾನಿ ಎಂದು ಬಣ್ಣಿಸಿದ್ದಾರೆ

ಗುರು ಗ್ರಂಥ ಸಾಹಿಬ್‌ನ ಸ್ವರೂಪ್ ಅನ್ನು ಆಫ್ಘಾನಿಸ್ತಾನದಿಂದ ಸೂಕ್ತ ಗೌರವದೊಂದಿಗೆ ಭಾರತಕ್ಕೆ ತರಲು ವಿಶೇಷ ವ್ಯವಸ್ಥೆಗಳ ಬಗ್ಗೆ ಅವರು ಮಾತನಾಡುವುದನ್ನು ಕೇಳಿದಾಗ ತಮ್ಮ ಕಣ್ಣುಗಳು ತುಂಬಿ ಬಂದಿತು ಎಂದು ಪ್ರತಿನಿಧಿಗಳು ಹೇಳಿದ್ದಾರೆ

ಎಲ್ಲ ಸಮಸ್ಯೆಗಳು ಮತ್ತು ತೊಂದರೆಗಳನ್ನು ಪರಿಹರಿಸಲು ಭವಿಷ್ಯದಲ್ಲಿ ಸಮುದಾಯಕ್ಕೆ ನಿರಂತರ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಪ್ರಧಾನಿ

Posted On: 19 FEB 2022 2:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 7, ಲೋಕ ಕಲ್ಯಾಣ ಮಾರ್ಗದಲ್ಲಿ ಆಫ್ಘಾನಿಸ್ತಾನದ ಸಿಖ್-ಹಿಂದೂ ನಿಯೋಗದ ಸದಸ್ಯರನ್ನು ಭೇಟಿ ಮಾಡಿದರು. ನಿಯೋಗದ ಸದಸ್ಯರು ಪ್ರಧಾನಿಯನ್ನು ಗೌರವಿಸಿದರು ಮತ್ತು ಆಫ್ಘಾನಿಸ್ತಾನದಿಂದ ಸಿಖ್ಖರು ಮತ್ತು ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.

ನಿಯೋಗವನ್ನು ಸ್ವಾಗತಿಸಿದ ಪ್ರಧಾನಿಯವರು, ಅವರನ್ನು ಭಾರತದ ಅತಿಥಿಗಳಲ್ಲ, ತಮ್ಮದೇ ಮನೆಯಲ್ಲಿರುವವರು ಎಂದು ಹೇಳಿದರು. ಭಾರತವು ಅವರ ಮನೆಯಾಗಿದೆ ಎಂದು ಹೇಳಿದರು. ಆಫ್ಘಾನಿಸ್ತಾನದಲ್ಲಿ ಅವರು ಎದುರಿಸಿದ ಅಪಾರ ತೊಂದರೆಗಳು ಮತ್ತು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರಕಾರ ಒದಗಿಸಿದ ಸಹಾಯದ ಬಗ್ಗೆ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಮಹತ್ವ ಮತ್ತು ಸಮುದಾಯಕ್ಕೆ ಅದರ ಪ್ರಯೋಜನಗಳ ಬಗ್ಗೆಯೂ ಅವರು ಮಾತನಾಡಿದರು. ಅವರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಮತ್ತು ತೊಂದರೆಗಳನ್ನು ಪರಿಹರಿಸಲು ಭವಿಷ್ಯದಲ್ಲಿ ನಿರಂತರ ಬೆಂಬಲ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದರು.

ಗುರು ಗ್ರಂಥ ಸಾಹಿಬ್ ಅವರನ್ನು ಗೌರವಿಸುವ ಸಂಪ್ರದಾಯದ ಮಹತ್ವದ ಬಗ್ಗೆಯೂ ಮಾತನಾಡಿದ ಪ್ರಧಾನಮಂತ್ರಿಯವರು, ಈ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ ಸ್ವರೂಪ್ ಅನ್ನು ಮರಳಿ ತರಲು ವಿಶೇಷ ವ್ಯವಸ್ಥೆಗಳನ್ನು ಮಾಡಿದ ಬಗ್ಗೆ ಹಾಗೂ ಹಲವು ವರ್ಷಗಳಿಂದ ಆಫ್ಘನ್ನರಿಂದ ಪಡೆದ ಅಪಾರ ಪ್ರೀತಿಯ ಬಗ್ಗೆ ಮಾತನಾಡಿದರು. ಜೊತೆಗೆ ಕಾಬೂಲ್ ಗೆ ತಮ್ಮ ಭೇಟಿಯನ್ನು ಪ್ರೀತಿಯಿಂದ ಸ್ಮರಿಸಿದರು.

ಸಮುದಾಯವನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಕರೆತರಲು ಭಾರತದಿಂದ ಸಹಾಯವನ್ನು ಕಳುಹಿಸಿದ್ದಕ್ಕಾಗಿ ಶ್ರೀ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ, ಅವರ ನೆರವಿಗೆ ಯಾರೂ ನಿಲ್ಲದಿದ್ದಾಗ, ಪ್ರಧಾನಮಂತ್ರಿಯವರು ನಿರಂತರ ಬೆಂಬಲ ಮತ್ತು ಸಮಯೋಚಿತ ಸಹಾಯವನ್ನು ಖಾತರಿಪಡಿಸಿದರು ಎಂದು ಸ್ಮರಿಸಿದರು. ಸಂಕಷ್ಟದ ಸಮಯದಲ್ಲಿ ತಮ್ಮ ಪರವಾಗಿ ನಿಂತಿದ್ದಕ್ಕಾಗಿ ನಿಯೋಗದ ಇತರ ಸದಸ್ಯರೂ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಆಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ನ ಸ್ವರೂಪ್ ಅನ್ನು ಸೂಕ್ತ ಪೂಜ್ಯ ಭಾವನೆಯಿಂದ ಭಾರತಕ್ಕೆ ಕರೆತರಲು ವಿಶೇಷ ವ್ಯವಸ್ಥೆಗಳ ಬಗ್ಗೆ ಅವರು ಮಾತನಾಡುವುದನ್ನು ಕೇಳಿದಾಗ ತಮ್ಮ ಕಣ್ಣುಗಳಲ್ಲಿ ನೀರು ತುಂಬಿ ಬಂದಿತು ಎಂದು ಅವರು ಹೇಳಿದರು. ʻಸಿಎಎʼ ಜಾರಿಗಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು, ಇದು ಅವರ ಸಮುದಾಯದ ಸದಸ್ಯರಿಗೆ ಅಪಾರ ಸಹಾಯ ಮಾಡುತ್ತದೆ. ಅವರು ಕೇವಲ ಭಾರತದ ಪ್ರಧಾನಿಮಾತ್ರವಲ್ಲ, ವಿಶ್ವದ ಪ್ರಧಾನಿಯಾಗಿದ್ದಾರೆ, ಏಕೆಂದರೆ ಅವರು ವಿಶೇಷವಾಗಿ ವಿಶ್ವದಾದ್ಯಂತ ಹಿಂದೂಗಳು ಮತ್ತು ಸಿಖ್ಖರು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅಂತಹ ಎಲ್ಲಾ ಪ್ರಕರಣಗಳಲ್ಲಿ ತಕ್ಷಣದ ಸಹಾಯವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ನಿಯೋಗದ ಸದಸ್ಯರು ಹೇಳಿದರು. ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಸಹಾಯಕ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಈ ಸಂದರ್ಭದಲ್ಲಿ ಹಾಜರಿದ್ದರು.

***

 

 


(Release ID: 1799629) Visitor Counter : 204