ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19: ಮಿಥ್ಯೆ ಮತ್ತು ಸತ್ಯ


ಅಧಿಕೃತವಾಗಿ ದಾಖಲಾಗಿರುವ ಕೋವಿಡ್-19 ಸಾವುಗಳಿಗಿಂತ ಹೆಚ್ಚಿನ ಮರಣಗಳು ಸಂಭವಿಸಿವೆ ಎಂಬ ಮಾಧ್ಯಮ ವರದಿಗಳು ಆಧಾರರಹಿತ ಮತ್ತು ಕಾಲ್ಪನಿಕವಾದವು

ಭಾರತವು ಶಾಸನಬದ್ಧ ಚೌಕಟ್ಟಿನ ಆಧಾರದ ಮೇಲೆ ಕೋವಿಡ್-19 ಸಾವುಗಳನ್ನು ದಾಖಲಿಸುವ ದೃಢವಾದ ವ್ಯವಸ್ಥೆಯನ್ನು ಹೊಂದಿದೆ

ಕೋವಿಡ್-19 ಸಾವುಗಳ ನಿಯಮಿತ ಅಪ್ ಡೇಟ್ ಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ

Posted On: 17 FEB 2022 3:02PM by PIB Bengaluru

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಸಂಭವಿಸಿದ ಸಾವುಗಳು ಅಧಿಕೃತ ದಾಖಲಾತಿಗಿಂತ ಹೆಚ್ಚಿನದಾಗಿವೆ ಮತ್ತು ನಿಜವಾದ ಸಂಖ್ಯೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಕಟವಾಗಿರುವ ಸಂಶೋಧನಾ ಲೇಖನವನ್ನು ಆಧರಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ದೇಶದಲ್ಲಿ ನವೆಂಬರ್ 2021 ರವರೆಗಿನ ಅಧಿಕೃತ ಅಂಕಿಅಂಶವಾದ 0.46 ಮಿಲಿಯನ್ (4.6 ಲಕ್ಷ) ಗೆ ಹೋಲಿಸಿದರೆ, ನವೆಂಬರ್ 2021 ರ ಆರಂಭದವರೆಗೆ ಕೋವಿಡ್-19 ರಿಂದ 3.2 ಮಿಲಿಯನ್ ನಿಂದ 3.7 ಮಿಲಿಯನ್ ವರೆಗೆ ಜನರು ಸಾವನ್ನಪ್ಪಿದ್ದಾರೆ ಎಂದು ಈ ಅಧ್ಯಯನವು ಅಂದಾಜು ಮಾಡಿದೆ.

ಇದೇ ರೀತಿಯ ಮಾಧ್ಯಮ ವರದಿಗಳಿಗೆ ಈ ಮೊದಲು ತಿಳಿಸಿರುವಂತೆ, ಈ ವರದಿಗಳು ಸುಳ್ಳು ಮತ್ತು ಸಂಪೂರ್ಣವಾಗಿ ತಪ್ಪಾಗಿವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ವರದಿಗಳು ವಾಸ್ತವಾಂಶಗಳನ್ನು ಆಧರಿಸಿಲ್ಲ ಮತ್ತು ಕಾಲ್ಪನಿಕವಾಗಿವೆ.

ಭಾರತವು ಕೋವಿಡ್-19 ಸಾವುಗಳು ಒಳಗೊಂಡಂತೆ ಮರಣಗಳನ್ನು ವರದಿ ಮಾಡುವ ದೃಢವಾದ ವ್ಯವಸ್ಥೆಯನ್ನು ಹೊಂದಿದೆ, ಇದನ್ನು ಗ್ರಾಮ ಪಂಚಾಯತ್ ಮಟ್ಟದಿಂದ ಪ್ರಾರಂಭಿಸಿ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದವರೆಗೆ ಆಡಳಿತದ ವಿವಿಧ ಹಂತಗಳಲ್ಲಿ ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ. ಸಾವಿನ ದಾಖಲಾತಿಯನ್ನು ನಿಯಮಿತವಾಗಿ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ. ಎಲ್ಲಾ ಸಾವುಗಳನ್ನು ರಾಜ್ಯಗಳು ಸ್ವತಂತ್ರವಾಗಿ ವರದಿ ಮಾಡಿದ ನಂತರ ಕೇಂದ್ರವು ಸಂಕಲಿಸುತ್ತದೆ. ಜಾಗತಿಕವಾಗಿ ಸ್ವೀಕಾರಾರ್ಹ ವರ್ಗೀಕರಣದ ಆಧಾರದ ಮೇಲೆ, ಭಾರತ ಸರ್ಕಾರವು ಕೋವಿಡ್ ಸಾವುಗಳನ್ನು ವರ್ಗೀಕರಿಸಲು ಸಮಗ್ರ ವ್ಯಾಖ್ಯಾನವನ್ನು ಹೊಂದಿದೆ, ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ರಾಜ್ಯಗಳು ಅದನ್ನು ಅನುಸರಿಸುತ್ತಿವೆ. ಇದಲ್ಲದೆ, ಕ್ಷೇತ್ರ ಮಟ್ಟದಲ್ಲಿ ಕೆಲವು ಸಾವುಗಳು ಸಕಾಲದಲ್ಲಿ ವರದಿಯಾಗದಿದ್ದಲ್ಲಿ ಅವುಗಳ ಮರಣ ಸಂಖ್ಯೆಯನ್ನು ನವೀಕರಿಸಲು ಭಾರತ ಸರ್ಕಾರವು ರಾಜ್ಯಗಳನ್ನು ಒತ್ತಾಯಿಸುತ್ತಿದೆ ಮತ್ತು ಆದ್ದರಿಂದ ಸಾಂಕ್ರಾಮಿಕ ಸಂಬಂಧಿತ ಸಾವುಗಳ ಸರಿಯಾದ ಚಿತ್ರಣವನ್ನು ಪಡೆಯುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹಲವಾರು ಔಪಚಾರಿಕ ಸಂವಹನಗಳು, ವಿಡಿಯೋ ಕಾನ್ಫರೆನ್ಸ್‌ಗಳು ಮತ್ತು ನಿಗದಿತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾವಿನ ಸೂಕ್ತ ದಾಖಲಾತಿಗಾಗಿ ಅನೇಕ ಕೇಂದ್ರ ತಂಡಗಳ ನಿಯೋಜನೆಯ ಮೂಲಕ ಒತ್ತಾಯಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿದಿನವೂ ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳನ್ನು ಮೇಲ್ವಿಚಾರಣೆ ಮಾಡಲು ದೃಢವಾದ ಕಾರ್ಯವಿಧಾನದ ಅಗತ್ಯವನ್ನು ನಿಯಮಿತವಾಗಿ ಒತ್ತಿಹೇಳಿದೆ. ಆದ್ದರಿಂದ, ಕೋವಿಡ್ ಸಾವುಗಳು ಕಡಿಮೆ ವರದಿಯಾಗಿವೆ ಎಂದು ಹೇಳುವುದು ಆಧಾರರಹಿತವಾದುದು ಮತ್ತು ಇದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ.

ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾದ ಅಧ್ಯಯನವು ನಾಲ್ಕು ವಿಭಿನ್ನ ಉಪ-ಜನಸಂಖ್ಯೆಗಳನ್ನು ತೆಗೆದುಕೊಂಡಿದೆ - ಕೇರಳದ ಜನಸಂಖ್ಯೆ, ಭಾರತೀಯ ರೈಲ್ವೇ ನೌಕರರು, ಶಾಸಕರು ಮತ್ತು ಸಂಸದರು ಮತ್ತು ಕರ್ನಾಟಕದ ಶಾಲಾ ಶಿಕ್ಷಕರು. ರಾಷ್ಟ್ರವ್ಯಾಪಿ ಸಾವುಗಳನ್ನು ಅಂದಾಜು ಮಾಡಲು ಇದು ತ್ರಿಕೋನ ಪ್ರಕ್ರಿಯೆಯನ್ನು ಬಳಸಿದೆ. ಸೀಮಿತ ಅಂಕಿಅಂಶಗಳು ಮತ್ತು ಕೆಲವು ನಿರ್ದಿಷ್ಟ ಊಹೆಗಳನ್ನು ಆಧರಿಸಿದ ಇಂತಹ ಯಾವುದೇ ಅಂದಾಜುಗಳನ್ನು ಭಾರತದಂತಹ ಬೃಹತ್ ದೇಶದ ಎಲ್ಲಾ ರಾಜ್ಯಗಳು ಮತ್ತು ದೇಶಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡುವ ಮೂಲಕ ಸಂಖ್ಯೆಗಳನ್ನು ಹೊರತೆಗೆಯುವ ಮೊದಲು ತೀವ್ರ ಎಚ್ಚರಿಕೆ ವಹಿಸಬೇಕು. ಈ ಕ್ರಮವು ತಿರುಚಿದ ಡೇಟಾವನ್ನು ಮ್ಯಾಪಿಂಗ್ ಮಾಡುವ ಅಪಾಯವನ್ನು ಎದುರಿಸುತ್ತದೆ ಮತ್ತು ತಪ್ಪಾದ ಅಂದಾಜುಗಳನ್ನು ನೀಡುತ್ತದೆ. ಇದರಿಂದಾಗಿ ತಪ್ಪಾದ ತೀರ್ಮಾನಗಳಿಗೆ ಕಾರಣವಾಗುತ್ತದೆ. ಅದರ ಸಂಶೋಧನೆಗಳು/ಅಂದಾಜುಗಳು ಮತ್ತೊಂದು ಅಧ್ಯಯನವನ್ನು ಆಧರಿಸಿರುವುದರಿಂದ ಅಧ್ಯಯನವು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಅತಾರ್ತಿಕವಾಗುತ್ತದೆ ಮತ್ತು ಲೇಖನವು ಪಕ್ಷಪಾತದಿಂದ ಕೂಡಿರುವುದನ್ನು ಎತ್ತಿ ತೋರಿಸುತ್ತದೆ.

ಮಾಧ್ಯಮ ವರದಿಗಳು “ಭಾರತದ ನಾಗರಿಕ ನೋಂದಣಿ ವ್ಯವಸ್ಥೆಯು ವ್ಯತ್ಯಾಸಗಳಿಗೆ ಕಾರಣವಾಗುಷ್ಟು ದುರ್ಬಲವಾಗಿದೆ ಎಂದು ತಜ್ಞರು ನಂಬುತ್ತಾರೆ. ಪ್ರಸ್ತುತ ನಾಗರಿಕ ನೋಂದಣಿ ವ್ಯವಸ್ಥೆಯು ಆರೋಗ್ಯ ಮಾಹಿತಿ ವ್ಯವಸ್ಥೆಗಳೊಂದಿಗೆ ಕಡಿಮೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೊಂದಿದೆ, ಸಾವುಗಳನ್ನು ದಾಖಲಿಸುವಲ್ಲಿ ವ್ಯತ್ಯಾಸಗಳ ಸಾಧ್ಯತೆಯಿದೆ” ಎಂದೂ ಸಹ ಹೇಳಿವೆ. ಕೇಂದ್ರ ಸರ್ಕಾರವು ಕೋವಿಡ್ ಡೇಟಾ ನಿರ್ವಹಣೆಗೆ ಸಂಬಂಧಿಸಿದಂತೆ ಪಾರದರ್ಶಕ ವಿಧಾನವನ್ನು ಅನುಸರಿಸಿದೆ ಮತ್ತು ಎಲ್ಲಾ ಕೋವಿಡ್-19 ಸಂಬಂಧಿತ ಸಾವುಗಳನ್ನು ದಾಖಲಿಸುವ ದೃಢವಾದ ವ್ಯವಸ್ಥೆಯು ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಪುನರುಚ್ಚರಿಸಲಾಗಿದೆ. ವರದಿಯಾಗುತ್ತಿರುವ ಸಾವಿನ ಸಂಖ್ಯೆಯಲ್ಲಿನ ಅಸಮಂಜಸತೆಯನ್ನು ತಪ್ಪಿಸಲು, ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದ ಐಸಿಡಿ-10 ಕೋಡ್‌ಗಳ ಪ್ರಕಾರ ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳ ಸೂಕ್ತ ದಾಖಲಾತಿಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗದರ್ಶನವನ್ನು ನೀಡಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಕೋವಿಡ್ – 19 ಪ್ರಕರಣಗಳು ಮತ್ತು ಸಾವುಗಳ ದಿನಾಂಕವನ್ನು ಪ್ರತಿದಿನ ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಲಾಗುತ್ತಿದೆ ಮತ್ತು ಅದೇ ರೀತಿ ಜಿಲ್ಲೆಗಳು ಸೇರಿದಂತೆ ಎಲ್ಲಾ ರಾಜ್ಯಗಳು ಪ್ರತಿದಿನವೂ ಎಲ್ಲಾ ವಿವರಗಳೊಂದಿಗೆ ನಿಯಮಿತ ಬುಲೆಟಿನ್‌ಗಳನ್ನು ಬಿಡುಗಡೆ ಮಾಡುತ್ತಿವೆ, ಅದೂ ಸಹ ಸಾರ್ವಜನಿಕ ಡೊಮೇನ್‌ನಲ್ಲಿ ಇದೆ.

ಕೋವಿಡ್-19 ಸಾಂಕ್ರಾಮಿಕದಂತಹ ದೀರ್ಘಕಾಲದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ದಾಖಲಾದ ಮರಣದಲ್ಲಿ ವ್ಯತ್ಯಾಸಗಳು ಯಾವಾಗಲೂ ಇರುತ್ತವೆ ಎಂಬುದು ಸ್ಥಾಪಿತವಾದ ಸತ್ಯವಾಗಿದೆ ಮತ್ತು ಸಾಮಾನ್ಯವಾಗಿ ಇಂತಹ ಬಿಕ್ಕಟ್ಟುಗಳ ನಂತರ ಮರಣದ ಮಾಹಿತಿಯು ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾದಾಗ ಮರಣದ ಬಗ್ಗೆ ಸಂಶೋಧನಾ ಅಧ್ಯಯನಗಳನ್ನು ನಡೆಸಲಾಗುತ್ತದೆ. ಅಂತಹ ಅಧ್ಯಯನಗಳ ವಿಧಾನಗಳು ಉತ್ತಮವಾಗಿ ಸ್ಥಾಪಿತವಾಗಿವೆ, ಇವುಗಳಲ್ಲಿ ದತ್ತಾಂಶ ಮೂಲಗಳನ್ನು ಮರಣ ಪ್ರಮಾಣವನ್ನು ಕಂಪ್ಯೂಟಿಂಗ್ ಮಾಡಲು ಮಾನ್ಯವಾದ ಊಹೆಗಳನ್ನು ವ್ಯಾಖ್ಯಾನಿಸಲಾಗಿದೆ.

ಭಾರತದಲ್ಲಿ ಕೋವಿಡ್-19 ಮರಣದ ವಿಶ್ಲೇಷಣೆಯ ಸಂದರ್ಭದಲ್ಲಿ, ಕೋವಿಡ್ ನಿಂದಾಗಿ ಮರಣ ಹೊಂದಿದ ಪ್ರತಿ ವ್ಯಕ್ತಿಯ ಹತ್ತಿರದ ಸಂಬಂಧಿಕರಿಗೆ ಆರ್ಥಿಕ ಪರಿಹಾರದ ಅರ್ಹತೆಯ ಕಾರಣದಿಂದಾಗಿ ಎಲ್ಲಾ ಕೋವಿಡ್-19 ಸಾವುಗಳನ್ನು ದಾಖಲಿಸಲು ಮತ್ತು ವರದಿ ಮಾಡಲು ಭಾರತದಲ್ಲಿ ಹೆಚ್ಚಿನ ಒತ್ತಡವಿದೆ ಎಂಬುದನ್ನು ಗಮನಿಸಬೇಕು. ಈ ಸಂಪೂರ್ಣ ಪ್ರಕ್ರಿಯೆಯನ್ನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಆದ್ದರಿಂದ, ದೇಶದಲ್ಲಿ ಕೋವಿಡ್ ಸಾವುಗಳನ್ನು ಕಡಿಮೆ ವರದಿ ಮಾಡುವ ಸಾಧ್ಯತೆ ಇರುವುದಿಲ್ಲ. ಆದ್ದರಿಂದ, ಕುಟುಂಬಗಳು ಮತ್ತು ಸ್ಥಳೀಯ ಅಧಿಕಾರಿಗಳ ಇಷ್ಟವಿಲ್ಲದಿರುವಿಕೆ ಅಥವಾ ಅಸಮರ್ಥತೆಯಿಂದಾಗಿ "ಸಾವಿನ ಕಡಿಮೆ ವರದಿಗಳು” ಆಗಿವೆ ಎಂಬುದು ದಾರಿ ತಪ್ಪಿಸುವ ಮತ್ತು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

***



(Release ID: 1799094) Visitor Counter : 266