ಪ್ರಧಾನ ಮಂತ್ರಿಯವರ ಕಛೇರಿ
ಐ.ಸಿ.ಆರ್.ಐ.ಎಸ್.ಎ.ಟಿ.ಯ 50ನೇ ವಾರ್ಷಿಕೋತ್ಸವ ಆಚರಣೆಗೆ ಚಾಲನೆ ನೀಡಿ, ಎರಡು ಸಂಶೋಧನಾ ಸೌಲಭ್ಯಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
"ನಿಮ್ಮ ಸಂಶೋಧನೆ ಮತ್ತು ತಂತ್ರಜ್ಞಾನವು ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ನೆರವಾಗಿದೆ"
"ಗ್ರಹದ ಪರವಾದ ಜನಾಂದೋಲನ ಕೇವಲ ಪದಗಳಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಭಾರತ ಸರ್ಕಾರದ ಕ್ರಮಗಳಲ್ಲಿಯೂ ಪ್ರತಿಫಲಿಸುತ್ತದೆ"
"ಹವಾಮಾನದ ಸವಾಲುಗಳಿಂದ ರೈತರನ್ನು ರಕ್ಷಿಸಲು 'ಮೂಲಕ್ಕೆ ಹಿಂತಿರುಗಿ' ಮತ್ತು 'ಭವಿಷ್ಯದತ್ತ ನಡೆ' ಸಮ್ಮಿಳನದ ಮೇಲೆ ಭಾರತದ ಗಮನ ಹರಿಸಿದೆ"
"ಡಿಜಿಟಲ್ ತಂತ್ರಜ್ಞಾನದ ಮೂಲಕ ರೈತರನ್ನು ಸಬಲೀಕರಿಸಲು ಭಾರತದ ಪ್ರಯತ್ನಗಳು ಅವಿರತವಾಗಿ ಹೆಚ್ಚುತ್ತಿವೆ"
"ಅಮೃತ್ ಕಾಲದ ಸಂದರ್ಭದಲ್ಲಿ ಭಾರತವು ಉನ್ನತ ಕೃಷಿ ಬೆಳವಣಿಗೆಯ ಜೊತೆಗೆ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸಿದೆ"
"ನಾವು ಸಣ್ಣ ರೈತರನ್ನು ಸಾವಿರಾರು ಎಫ್.ಪಿ.ಒ.ಗಳಲ್ಲಿ ಸಂಘಟಿಸುವ ಮೂಲಕ ಅವರಿಂದ ಜಾಗೃತ ಮತ್ತು ಪ್ರಬಲ ಮಾರುಕಟ್ಟೆ ಬಲವನ್ನು ರಚಿಸಲು ಬಯಸುತ್ತೇವೆ"
"ನಾವು ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಭದ್ರತೆಯ ಮೇಲೆ ಗಮನ ಹರಿಸುತ್ತಿದ್ದೇವೆ. ಈ ದೃಷ್ಟಿಕೋನದಿಂದ ನಾವು ಕಳೆದ 7 ವರ್ಷಗಳಲ್ಲಿ ಅನೇಕ ಜೈವಿಕ-ಬಲವರ್ಧಿತ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ"
Posted On:
05 FEB 2022 4:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೈದರಾಬಾದ್ ನ ಪಟಾಂಚೇರುವಿನಲ್ಲಿರುವ ಅರೆ ಶುಷ್ಕ ಉಷ್ಣವಲಯದ ಬೆಳೆಗಳ ಸಂಶೋಧನೆಯ ಅಂತಾರಾಷ್ಟ್ರೀಯ ಸಂಸ್ಥೆ (ಐ.ಸಿ.ಆರ್.ಐ.ಎಸ್.ಎ.ಟಿ.) ಕ್ಯಾಂಪಸ್ ಗೆ ಭೇಟಿ ನೀಡಿ ಐಸಿಆರ್.ಐಎಸ್ಎಟಿಯ 50ನೇ ವಾರ್ಷಿಕೋತ್ಸವ ಆಚರಣೆಗೆ ಚಾಲನೆ ನೀಡಿದರು. ಸಸ್ಯ ಸಂರಕ್ಷಣೆ ಕುರಿತ ಐ.ಸಿ.ಆರ್.ಐ.ಎಸ್.ಎ.ಟಿ.ಯ ತ್ವರಿತ ಪೀಳಿಗೆಯ ಪ್ರಗತಿ ಸೌಲಭ್ಯ ಮತ್ತು ಐ.ಸಿ.ಆರ್.ಐ.ಎಸ್.ಎ.ಟಿ. ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಎರಡೂ ಸೌಲಭ್ಯಗಳನ್ನು ಏಷ್ಯಾ ಮತ್ತು ಉಪ-ಸಹರಾ ಆಫ್ರಿಕಾದ ಸಣ್ಣ ಹಿಡುವಳಿದಾರ ರೈತರಿಗೆ ಸಮರ್ಪಿಸಲಾಗಿದೆ. ಪ್ರಧಾನಮಂತ್ರಿಯವರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಐ.ಸಿ.ಆರ್.ಐ.ಎಸ್.ಎ.ಟಿ. ಲಾಂಛನವನ್ನು ಅನಾವರಣಗೊಳಿಸಿದರು ಮತ್ತು ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು. ತೆಲಂಗಾಣ ರಾಜ್ಯಪಾಲರಾದ ಶ್ರೀಮತಿ ತಮಿಳಿಸೈ ಸೌಂದರರಾಜನ್, ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಶ್ರೀ ಜಿ. ಕಿಷನ್ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಸಂತ್ ಪಂಚಮಿಯ ಶುಭ ಸಂದರ್ಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು 50 ವರ್ಷಗಳ ಐ.ಸಿ.ಆರ್.ಐ.ಎಸ್.ಎ.ಟಿ.ಯನ್ನು ಅಭಿನಂದಿಸಿದರು. ದೇಶಕ್ಕೆ ಮತ್ತು ಐ.ಸಿ.ಆರ್.ಐ.ಎಸ್.ಎ.ಟಿ.ಗೆ ಮುಂದಿನ 25 ವರ್ಷಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ಗುರಿಗಳ ಮತ್ತು ಅದಕ್ಕಾಗಿ ಕಾರ್ಯ ನಿರ್ವಹಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಭಾರತ ಸೇರಿದಂತೆ ವಿಶ್ವದ ಹೆಚ್ಚಿನ ಭಾಗದಲ್ಲಿ ಕೃಷಿಗೆ ಸಹಾಯ ಮಾಡಿದ ಐ.ಸಿ.ಆರ್.ಐ.ಎಸ್.ಎ.ಟಿ. ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ನೀರು ಮತ್ತು ಮಣ್ಣಿನ ನಿರ್ವಹಣೆ, ಬೆಳೆ ವೈವಿಧ್ಯದಲ್ಲಿ ಸುಧಾರಣೆ, ಕೃಷಿ ವೈವಿಧ್ಯ ಮತ್ತು ಜಾನುವಾರು ಏಕೀಕರಣದಲ್ಲಿ ಅದರ ಕೊಡುಗೆಯನ್ನು ಅವರು ಶ್ಲಾಘಿಸಿದರು. ರೈತರನ್ನು ಅವರ ಮಾರುಕಟ್ಟೆಗಳೊಂದಿಗೆ ಸಂಯೋಜಿಸುವಲ್ಲಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದ್ವಿದಳ ಧಾನ್ಯಗಳು ಮತ್ತು ಚಿಕ್ ಬಟಾಣಿ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಅವರ ಸಮಗ್ರ ವಿಧಾನವನ್ನು ಅವರು ಶ್ಲಾಘಿಸಿದರು. "ನಿಮ್ಮ ಸಂಶೋಧನೆ ಮತ್ತು ತಂತ್ರಜ್ಞಾನವು ಕೃಷಿಯನ್ನು ಸುಲಭ ಮತ್ತು ಸುಸ್ಥಿರವಾಗಿ ಮಾಡಲು ಸಹಾಯ ಮಾಡಿದೆ", ಎಂದು ಶ್ರೀ ಮೋದಿ ಹೇಳಿದರು.
ಹವಾಮಾನ ಬದಲಾವಣೆಯಿಂದ ಹೆಚ್ಚು ಬಾಧಿತರಾದವರು ಕಡಿಮೆ ಸಂಪನ್ಮೂಲಗಳನ್ನು ಹೊಂದಿ ಅಭಿವೃದ್ಧಿಯ ಕೊನೆಯ ಹಂತದಲ್ಲಿರುವ ಜನರಾಗಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕಾಗಿಯೇ, ಹವಾಮಾನ ಬದಲಾವಣೆಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ವಿಶ್ವಕ್ಕೆ ಭಾರತದ ಮನವಿಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಜೀವನ- ಪರಿಸರಕ್ಕಾಗಿ ಜೀವನಶೈಲಿ, ಪಿ3 – ಪ್ರೋ ಪ್ಲಾನೆಟ್ ಪೀಪಲ್ ಮೂವ್ ಮೆಂಟ್ ( ಗ್ರಹ ಪರವಾದ ಜನಾಂದೋಲನ) ಮತ್ತು 200ರ ಹೊತ್ತಿಗೆ ಭಾರತದ ನಿವ್ವಳ ಶೂನ್ಯ ಗುರಿ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. " ಗ್ರಹ ಪರ ಜನಾಂದೋಲನ ಹವಾಮಾನ ಸವಾಲನ್ನು ನಿಭಾಯಿಸಲು ಹವಾಮಾನ ಜವಾಬ್ದಾರಿಯೊಂದಿಗೆ ಪ್ರತಿಯೊಂದು ಸಮುದಾಯವನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸುವ ಒಂದು ಆಂದೋಲನವಾಗಿದೆ. ಇದು ಕೇವಲ ಪದಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಭಾರತ ಸರ್ಕಾರದ ಕ್ರಮಗಳಲ್ಲಿಯೂ ಪ್ರತಿಫಲಿಸುತ್ತದೆ" ಎಂದು ಅವರು ಹೇಳಿದರು.
ದೇಶದ 15 ಕೃಷಿ ಹವಾಮಾನ ವಲಯಗಳು ಮತ್ತು 6 ಋತುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತೀಯ ಕೃಷಿಯ ಪ್ರಾಚೀನ ಅನುಭವದ ಆಳವನ್ನು ಒತ್ತಿ ಹೇಳಿದರು. ಹವಾಮಾನ ಸವಾಲಿನಿಂದ ತನ್ನ ರೈತರನ್ನು ರಕ್ಷಿಸಲು 'ಮೂಲಕ್ಕೆ ಹಿಂತಿರುಗಿ' ಮತ್ತು 'ಭವಿಷ್ಯದತ್ತ ಸಾಗಿ' ಸಮ್ಮಿಳನದ ಮೇಲೆ ಭಾರತದ ಗಮನ ಹರಿಸಿದೆ ಎಂದು ಅವರು ಉಲ್ಲೇಖಿಸಿದರು. "ನಮ್ಮ ಗಮನವು ಶೇಕಡ 80ಕ್ಕೂ ಹೆಚ್ಚು ರೈತರ ಮೇಲೆ ಕೇಂದ್ರೀಕೃತವಾಗಿದೆ, ಅವರು ಸಣ್ಣ ರೈತರಾಗಿದ್ದು ಅವರಿಗೆ ನಮ್ಮ ಹೆಚ್ಚಿನ ಅಗತ್ಯವಿದೆ", ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತವನ್ನು ಬದಲಾಯಿಸುವ ಮತ್ತೊಂದು ಆಯಾಮವನ್ನು ಅಂದರೆ ಡಿಜಿಟಲ್ ಕೃಷಿಯನ್ನು ಅವರು ಭಾರತದ ಭವಿಷ್ಯ ಎಂದು ಕರೆದರು ಮತ್ತು ಪ್ರತಿಭಾವಂತ ಭಾರತೀಯ ಯುವಕರು ಇದರಲ್ಲಿ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಒತ್ತಿ ಹೇಳಿದರು. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಮತ್ತು ಪೋಷಕಾಂಶಗಳನ್ನು ಡ್ರೋನ್ ಗಳಿಂದ ಸಿಂಪಡಿಸುವುದು ಮುಂತಾದ ಕ್ಷೇತ್ರಗಳನ್ನು ಅವರು ಪಟ್ಟಿ ಮಾಡಿದರು, ಇದು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಹೆಚ್ಚಿನ ಬಳಕೆಗೆ ಸಾಕ್ಷಿಯಾಗಿದೆ. "ಡಿಜಿಟಲ್ ತಂತ್ರಜ್ಞಾನದ ಮೂಲಕ ರೈತರನ್ನು ಸಬಲೀಕರಿಸಲು ಭಾರತದ ಪ್ರಯತ್ನಗಳು ಅವಿಶ್ರಾಂತವಾಗಿ ಹೆಚ್ಚುತ್ತಿವೆ" ಎಂದು ಅವರು ಹೇಳಿದರು.
ಅಮೃತ್ ಕಾಲದಲ್ಲಿ ಭಾರತವು ಹೆಚ್ಚಿನ ಕೃಷಿ ಬೆಳವಣಿಗೆಯ ಜೊತೆಗೆ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೃಷಿ ವಲಯದ ಮಹಿಳೆಯರಿಗೆ ಸ್ವಸಹಾಯ ಗುಂಪುಗಳ ಮೂಲಕ ಬೆಂಬಲ ನೀಡಲಾಗುತ್ತಿದೆ. "ಕೃಷಿಯು ಜನಸಂಖ್ಯೆಯ ದೊಡ್ಡ ಭಾಗವನ್ನು ಬಡತನದಿಂದ ಹೊರತರುವ ಮತ್ತು ಅವರನ್ನು ಉತ್ತಮ ಜೀವನ ಶೈಲಿಯತ್ತ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ಅಮೃತ ಕಾಲ ಭೌಗೋಳಿಕವಾಗಿ ಕಷ್ಟಕರವಾದ ಪ್ರದೇಶಗಳ ರೈತರಿಗೆ ಹೊಸ ಮಾರ್ಗಗಳನ್ನು ಒದಗಿಸುತ್ತದೆ", ಎಂದು ಅವರು ಹೇಳಿದರು.
ಭಾರತವು ದ್ವಿಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಒಂದೆಡೆ ಜಲ ಸಂರಕ್ಷಣೆ ಮತ್ತು ನದಿಗಳ ಸಂಪರ್ಕದ ಮೂಲಕ ಭೂಮಿಯ ಬಹುಭಾಗವನ್ನು ನೀರಾವರಿ ವ್ಯಾಪ್ತಿಗೆ ತರಲಾಗುತ್ತಿದೆ. ಮತ್ತೊಂದೆಡೆ ಸೂಕ್ಷ್ಮ ನೀರಾವರಿ ಮೂಲಕ ನೀರಿನ ಬಳಕೆಯ ದಕ್ಷತೆಯನ್ನು ಸೀಮಿತ ನೀರಾವರಿ ಹೊಂದಿರುವ ಪ್ರದೇಶಗಳಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಗಾಗಿ ರಾಷ್ಟ್ರೀಯ ಅಭಿಯಾನವು ಭಾರತದ ಹೊಸ ದೃಷ್ಟಿಕೋನವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ತಾಳೆ ಎಣ್ಣೆ ಪ್ರದೇಶವನ್ನು 6 ಲಕ್ಷ ಹೆಕ್ಟೇರ್ ಹೆಚ್ಚಿಸುವ ಗುರಿಯನ್ನು ಅಭಿಯಾನ ಹೊಂದಿದೆ. "ಇದು ಪ್ರತಿಯೊಂದು ಹಂತದಲ್ಲೂ ಭಾರತೀಯ ರೈತರಿಗೆ ಸಹಾಯ ಮಾಡುತ್ತದೆ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದ ರೈತರಿಗೆ ಬಹಳ ಪ್ರಯೋಜನಕಾರಿಯಾಗಲಿದೆ" ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. 35 ದಶಲಕ್ಷ ಟನ್ ಶೈತ್ಯಾಗಾರ ಸಂಗ್ರಹ ಸಾಮರ್ಥ್ಯ ಸೃಷ್ಟಿಸುವುದು ಮತ್ತು 1 ಲಕ್ಷ ಕೋಟಿ ರೂಪಾಯಿ ಕೃಷಿ ಮೂಲಸೌಕರ್ಯ ನಿಧಿ ರಚನೆಯಂತಹ ಸುಗ್ಗಿಯ ನಂತರದ ಮೂಲಸೌಕರ್ಯವನ್ನು ಬಲಪಡಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಭಾರತವು ಎಫ್.ಪಿ ಒಗಳು ಮತ್ತು ಕೃಷಿ ಮೌಲ್ಯ ಸರಪಳಿಯನ್ನು ಸ್ಥಾಪಿಸಲು ಗಮನ ಹರಿಸಿದೆ. "ನಾವು ಸಣ್ಣ ರೈತನನ್ನು ಸಾವಿರಾರು ಎಫ್.ಪಿ ಒ ಗಳಲ್ಲಿ ಸಂಘಟಿಸುವ ಮೂಲಕ ಅವರಿಂದ ಜಾಗೃತ ಮತ್ತು ಪ್ರಬಲ ಮಾರುಕಟ್ಟೆ ಬಲವನ್ನು ರಚಿಸಲು ಬಯಸುತ್ತೇವೆ", ಎಂದು ಅವರು ಹೇಳಿದರು.
ಭಾರತದ ಗುರಿ ಕೇವಲ ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸುವುದಷ್ಟೇ ಅಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ವಿಶ್ವದ ದೊಡ್ಡ ಆಹಾರ ಭದ್ರತಾ ಕಾರ್ಯಕ್ರಮದಲ್ಲಿ ಒಂದನ್ನು ನಡೆಸಲು ಭಾರತವು ಸಾಕಷ್ಟು ಹೆಚ್ಚುವರಿ ಆಹಾರ ಧಾನ್ಯವನ್ನು ಹೊಂದಿದೆ. "ನಾವು ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಭದ್ರತೆಯ ಮೇಲೆ ಗಮನ ಹರಿಸುತ್ತಿದ್ದೇವೆ. ಈ ದೃಷ್ಟಿಯಿಂದ ನಾವು ಕಳೆದ 7 ವರ್ಷಗಳಲ್ಲಿ ಅನೇಕ ಜೈವಿಕ-ಬಲವರ್ಧಿತ ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ" ಎಂದರು.
ಐ.ಸಿ.ಆರ್.ಐ.ಎಸ್.ಎ.ಟಿ. ಏಷ್ಯಾ ಮತ್ತು ಉಪ-ಸಹರಾ ಆಫ್ರಿಕಾದಲ್ಲಿ ಅಭಿವೃದ್ಧಿಗಾಗಿ ಕೃಷಿ ಸಂಶೋಧನೆ ನಡೆಸುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಸುಧಾರಿತ ಬೆಳೆ ತಳಿಗಳು ಮತ್ತು ಹೈಬ್ರಿಡ್ ಗಳನ್ನು ಒದಗಿಸುವ ಮೂಲಕ ರೈತರಿಗೆ ಸಹಾಯ ಮಾಡುತ್ತದೆ ಮತ್ತು ಒಣಭೂಮಿಯಲ್ಲಿರುವ ಸಣ್ಣ ಹಿಡುವಳಿದಾರ ರೈತರಿಗೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದೆ.
***
(Release ID: 1795929)
Visitor Counter : 188
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam