ಹಣಕಾಸು ಸಚಿವಾಲಯ

2021-22ರ ಅವಧಿಯಲ್ಲಿ ಗೋಧಿ ಮತ್ತು ಭತ್ತದ ಖರೀದಿಗಾಗಿ 163 ಲಕ್ಷ ರೈತರಿಗೆ 2.37 ಲಕ್ಷ ಕೋಟಿ ಬೆಂಬಲ ಬೆಲೆ (ಎಂಎಸ್ ಪಿ) ಮೌಲ್ಯದ ನೇರ ಪಾವತಿ


ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳ ವಿತರಣೆಗಾಗಿ ಯೋಜನೆಯನ್ನು ಪಿಪಿಪಿ  ಮೋಡ್‌ನಲ್ಲಿ ಪ್ರಾರಂಭಿಸಲಾಗುವುದು

ಕೃಷಿ ಮತ್ತು ಗ್ರಾಮೀಣ ಉದ್ಯಮಕ್ಕಾಗಿ ಫಂಡ್ ಟು ಫೈನಾನ್ಸ್ ನವೋದ್ಯಮದ ಪ್ರಾರಂಭ

ಕೆನ್-ಬೆಟ್ವಾ ಲಿಂಕ್ ಯೋಜನೆಯು 9.08 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಲಾಭದಾಯಕವಾಗಲಿದೆ

 ʼಕಿಸಾನ್ ಡ್ರೋನ್‌ ಗಳʼ ಬಳಕೆಯನ್ನು ಉತ್ತೇಜಿಸಲಾಗುವುದು

ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ದೇಶದಾದ್ಯಂತ ಉತ್ತೇಜಿಸಲಾಗುವುದು

ರಾಗಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ಮೇಲೆ ಹೆಚ್ಚಿನ ಗಮನ

ಎಣ್ಣೆಬೀಜಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಸಮಗ್ರ ಯೋಜನೆ ಜಾರಿಗೊಳಿಸಲಾಗುವುದು

Posted On: 01 FEB 2022 1:04PM by PIB Bengaluru

ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2022-23 ಅನ್ನು ಮಂಡಿಸುವಾಗ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು 2021-22 ರಬಿಹಿಂಗಾರಿನಲ್ಲಿ ಗೋಧಿ ಸಂಗ್ರಹಣೆ ಮತ್ತು 2021-22 ರ ಮುಂಗಾರುವಿನಲ್ಲಿ ಭತ್ತದ ಅಂದಾಜಿನ ಸಂಗ್ರಹಣೆಯು 163 ಲಕ್ಷ ರೈತರಿಂದ 1208 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು ಭತ್ತವನ್ನು ಒಳಗೊಂಡಿರುತ್ತದೆ ಮತ್ತು `2.37 ಲಕ್ಷ ಕೋಟಿ  ಬೆಂಬಲ ಬೆಲೆ (ಎಂಎಸ್‌ಪಿ) ಮೌಲ್ಯವನ್ನು ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಿದೆ ಎಂದು ಹೇಳಿದರು.

Agriculture and food processing.jpg

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಘೋಷಣೆಗಳು ಇಲ್ಲಿವೆ:

ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳು

ಪಿಪಿಪಿ ಮೋಡ್‌ನಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದಕ್ಕಾಗಿ, ಸಾರ್ವಜನಿಕ ವಲಯದ ಸಂಶೋಧನೆ ಮತ್ತು ವಿಸ್ತರಣಾ ಸಂಸ್ಥೆಗಳು ಹಾಗೂ ಖಾಸಗಿ ಕೃಷಿ ತಂತ್ರಜ್ಞಾನ ಕಂಪನಿಗಳು ಮತ್ತು ಕೃಷಿ ಮೌಲ್ಯ ಸರಪಳಿಯಲ್ಲಿ ಪಾಲುದಾರರು ತೊಡಗಿಸಿಕೊಳ್ಳುತ್ತಾರೆ.

ಕೃಷಿ ಮತ್ತು ಗ್ರಾಮೀಣ ಉದ್ಯಮಕ್ಕಾಗಿ ನವೋದ್ಯಮದ ನಿಧಿ

ಕೃಷಿಯಲ್ಲಿ ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಗೆ ಒತ್ತು ನೀಡುತ್ತಿರುವಾಗ, ಸಹ-ಹೂಡಿಕೆ ಮಾದರಿಯಲ್ಲಿ ಸಂಗ್ರಹಿಸಿದ ಸಂಯೋಜಿತ ಬಂಡವಾಳದೊಂದಿಗೆ ನಿಧಿಯನ್ನು ನಬಾರ್ಡ್ ಮೂಲಕ ಸುಗಮಗೊಳಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ನಿಧಿಯ ಗುರಿಯು "ಕೃಷಿ ಉತ್ಪನ್ನಗಳ ಮೌಲ್ಯ ಸರಪಳಿಗೆ ಸಂಬಂಧಿಸಿದ ಕೃಷಿ ಮತ್ತು ಗ್ರಾಮೀಣ ಉದ್ಯಮಕ್ಕಾಗಿ ಸ್ಟಾರ್ಟ್‌ ಅಪ್‌ಗಳಿಗೆ ಹಣಕಾಸು ಒದಗಿಸುವುದು". ಈ ಸ್ಟಾರ್ಟ್‌ಅಪ್‌ಗಳ ಚಟುವಟಿಕೆಗಳು, ಕೃಷಿ ಮಟ್ಟದಲ್ಲಿ ರೈತರಿಗೆ ಬಾಡಿಗೆ ಆಧಾರದ ಮೇಲೆ ಯಂತ್ರೋಪಕರಣಗಳು ಮತ್ತು ರೈತ-ಉತ್ಪಾದಕರ ಸಂಸ್ಥೆಗಳಿಗೆ (ಎಫ್‌ಪಿಒ) ಮಾಹಿತಿ ತಂತ್ರಜ್ಞಾನ  ಆಧಾರಿತ ಬೆಂಬಲ ಸೇರಿದ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ.

ಕೆನ್-ಬೆಟ್ವಾ ಲಿಂಕ್ ಯೋಜನೆ

44,605 ​​ಕೋಟಿ ಅಂದಾಜು ವೆಚ್ಚದಲ್ಲಿ ಕೆನ್-ಬೆಟ್ವಾ ಲಿಂಕ್ ಯೋಜನೆಯ ಅನುಷ್ಠಾನವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ ಪ್ರಯೋಜನಗಳನ್ನು ಒದಗಿಸುವುದು ಇದರ ಗುರಿಯಾಗಿದೆ. ಇದು 103 ಮೆಗಾವ್ಯಾಟ್ ಹೈಡ್ರೋ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯ ಜೊತೆಗೆ 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯನ್ನು ಸಹ ಒದಗಿಸುತ್ತದೆ. ಈ ಯೋಜನೆಗೆ 2021-22 ರಲ್ಲಿ ` 4,300 ಕೋಟಿ ಮತ್ತು 2022-23 ರಲ್ಲಿ ` 1,400 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ದಮಗಂಗಾ-ಪಿಂಜಾಲ್, ಪರ್-ತಾಪಿ-ನರ್ಮದಾ, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್ ಮತ್ತು ಪೆನ್ನಾರ್-ಕಾವೇರಿ ಎಂಬ ಐದು ನದಿ ಕೊಂಡಿಗಳ ಕರಡು ಡಿಪಿಆರ್‌ಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಪುನರುಚ್ಚರಿಸಿದರು. ಫಲಾನುಭವಿ ರಾಜ್ಯಗಳ ನಡುವೆ ಒಮ್ಮತದ ನಂತರ ಅನುಷ್ಠಾನಕ್ಕೆ ಕೇಂದ್ರವು ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು.

ಕಿಸಾನ್ ಡ್ರೋನ್ಸ್

ಹೊಸ ತಂತ್ರಜ್ಞಾನದ ಬಳಕೆಯನ್ನು ಎತ್ತಿ ಹಿಡಿದ ಹಣಕಾಸು ಸಚಿವರು, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳ ಸಿಂಪರಣೆ ಮತ್ತು ಪೋಷಕಾಂಶಗಳಿಗೆ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು.

ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ

ಯಾವುದೇ ರಾಸಾಯನಿಕ ಬಳಕೆಯಿಲ್ಲದ ನೈಸರ್ಗಿಕ ಕೃಷಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ಗಂಗಾ ನದಿಯ ಉದ್ದಕ್ಕೂ 5 ಕಿಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಜಮೀನುಗಳನ್ನು ಕೇಂದ್ರೀಕರಿಸಿ, ದೇಶದಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಆಹಾರ ಧಾನ್ಯ ಉತ್ಪನ್ನಗಳಿಗೆ ಬೆಂಬಲ

ಸುಗ್ಗಿಯ ನಂತರದ ಮೌಲ್ಯವರ್ಧನೆ, ದೇಶೀಯ ಬಳಕೆಯನ್ನು ಹೆಚ್ಚಿಸುವುದು ಮತ್ತು ಆಹಾರ ಧಾನ್ಯ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ಬ್ರ್ಯಾಂಡಿಂಗ್ ಮಾಡಲು ಬಜೆಟ್ ಒದಗಿಸಲಾಗಿದೆ.

ಎಣ್ಣೆಬೀಜ ಉತ್ಪಾದನೆಗೆ ಯೋಜನೆ

ದೇಶೀಯ ಎಣ್ಣೆಬೀಜಗಳ ಉತ್ಪಾದನೆಯನ್ನು ಉತ್ತೇಜಿಸಲು ಸಮಗ್ರ ಯೋಜನೆಯನ್ನು ಜಾರಿಗೊಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. "ಎಣ್ಣೆಕಾಳುಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಎಣ್ಣೆಕಾಳುಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ತರ್ಕಬದ್ಧ ಮತ್ತು ಸಮಗ್ರ ಯೋಜನೆಯನ್ನು ಜಾರಿಗೊಳಿಸಲಾಗುವುದು" ಎಂದು ಅವರು ಹೇಳಿದರು.

ಆಹಾರ ಸಂಸ್ಕರಣೆ

ರೈತರು "ಸೂಕ್ತವಾದ ಹಣ್ಣುಗಳು ಮತ್ತು ತರಕಾರಿಗಳನ್ನು" ಅಳವಡಿಸಿಕೊಳ್ಳಲು ಮತ್ತು "ಸೂಕ್ತವಾದ ಉತ್ಪಾದನೆ ಮತ್ತು ಕೊಯ್ಲು ತಂತ್ರಗಳನ್ನು" ಬಳಸಿಕೊಳ್ಳಲು ರಾಜ್ಯ ಸರ್ಕಾರಗಳ ಸಹಭಾಗಿತ್ವದೊಂದಿಗೆ ಸರ್ಕಾರವು ಸಮಗ್ರ ಪ್ಯಾಕೇಜ್ ಅನ್ನು ಒದಗಿಸುತ್ತದೆ ಎಂದು ಹಣಕಾಸು ಸಚಿವರು ಘೋಷಿಸಿದರು.

ನೈಸರ್ಗಿಕ, ಶೂನ್ಯ-ಬಜೆಟ್ ಮತ್ತು ಸಾವಯವ ಕೃಷಿ, ಆಧುನಿಕ ಕೃಷಿ, ಮೌಲ್ಯವರ್ಧನೆ ಮತ್ತು ನಿರ್ವಹಣೆಯ ಅಗತ್ಯಗಳನ್ನು ಪೂರೈಸಲು ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು.

***



(Release ID: 1794703) Visitor Counter : 316