ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಆರ್ಥಿಕ ವೇದಿಕೆ ದಾವೋಸ್ ಕಾರ್ಯಸೂಚಿಯಲ್ಲಿ 'ವಿಶ್ವದ ಸ್ಥಿತಿಗತಿ' ಕುರಿತು ವಿಶೇಷ ಭಾಷಣ ಮಾಡಿದ ಪ್ರಧಾನಮಂತ್ರಿ

"ಕರೋನಾ ಸಮಯದಲ್ಲಿ, ಭಾರತವು 'ಒಂದು ಭೂಮಿ, ಒಂದು ಆರೋಗ್ಯ' ಎಂಬ ತನ್ನ ದೃಷ್ಟಿಕೋನವನ್ನು ಪರಿಪಾಲಿಸಿ, ಅಗತ್ಯ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸುವ ಮೂಲಕ ಅನೇಕ ಜೀವಗಳನ್ನು ಉಳಿಸಿದೆ"

"ಜಾಗತಿಕ ಪೂರೈಕೆ-ಸರಪಳಿಯಲ್ಲಿ ಭಾರತ ವಿಶ್ವದ ವಿಶ್ವಾಸಾರ್ಹ ಪಾಲುದಾರರಾಗಲು  ಬದ್ಧವಾಗಿದೆ"

"ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ"

"ಭಾರತವು ಸ್ವಾವಲಂಬನೆಯ ತನ್ನ ಅನ್ವೇಷಣೆಯಲ್ಲಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವತ್ತ ಗಮನಹರಿಸುತ್ತಿರುವುದಷ್ಟೇ ಅಲ್ಲ, ಇದು ಹೂಡಿಕೆ ಮತ್ತು ಉತ್ಪಾದನೆಯನ್ನೂ ಉತ್ತೇಜಿಸುತ್ತದೆ"

“ಭಾರತವು ಮುಂದಿನ 25 ವರ್ಷಗಳ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸುತ್ತಿದೆ. ಈ ಕಾಲಘಟ್ಟದಲ್ಲಿ, ದೇಶವು ಹೆಚ್ಚಿನ ವೃದ್ಧಿ ಮತ್ತು ಕಲ್ಯಾಣ ಮತ್ತು ಕ್ಷೇಮದ ಉತ್ಕೃಷ್ಟ ಗುರಿಗಳನ್ನು ಇಟ್ಟುಕೊಂಡಿದೆ. ಬೆಳವಣಿಗೆಯ ಈ ಅವಧಿಯು ಹಸಿರು, ಸ್ವಚ್ಛ, ಸಮರ್ಥನೀಯ ಮತ್ತು ವಿಶ್ವಾಸಾರ್ಹವಾಗಿರುತ್ತದೆ"

“‘ಕಿತ್ತೊಗೆಯುವ’ ಸಂಸ್ಕೃತಿ ಮತ್ತು ಬಳಕೆಯವಾದ ಹವಾಮಾನದ ಸವಾಲನ್ನು ಉಲ್ಬಣವಾಗಿಸಿದೆ. ಇಂದಿನ 'ಪಡೆದುಕೊಳ್ಳಿ-ಬಳಸಿ-ವಿಲೇವಾರಿ ಮಾಡಿ' ಆರ್ಥಿಕತೆಯಿಂದ ವರ್ತುಲಾಕಾರದ ಆರ್ಥಿಕತೆಯತ್ತ ವೇಗವಾಗಿ ಸಾಗುವುದು ಅತ್ಯಗತ್ಯವಾಗಿದೆ”

“ಜೀವನವನ್ನು (ಎಲ್.ಐ.ಎಫ್.ಇ.) ಜನಾಂದೋಲನಕ್ಕೆ ಪರಿವರ್ತಿಸುವುದು ಪಿ-3 ಅಂದರೆ 'ಪ್ರೊ ಪ

Posted On: 17 JAN 2022 10:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಕಾರ್ಯಸೂಚಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ವಿಶ್ವದ ಸ್ಥಿತಿಗತಿ’ ಕುರಿತು ವಿಶೇಷ ಭಾಷಣ ಮಾಡಿದರು.

ಭಾರತವು ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯನ್ನು ಎಚ್ಚರಿಕೆ ಮತ್ತು ಆತ್ಮವಿಶ್ವಾಸದಿಂದ ಎದುರಿಸುತ್ತಿದೆ ಮತ್ತು ಅನೇಕ ಆಶಾದಾಯಕ ಫಲಿತಾಂಶಗಳೊಂದಿಗೆ ಆರ್ಥಿಕ ರಂಗದಲ್ಲಿ ಮುಂದೆ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಗಣತಂತ್ರದ ಮೇಲಿನ ಭಾರತೀಯರ ಅಚಲ ನಂಬಿಕೆ, 21ನೇ ಶತಮಾನವನ್ನು ಸಶಕ್ತಗೊಳಿಸುವ ತಂತ್ರಜ್ಞಾನ ಮತ್ತು ಭಾರತೀಯರ ಪ್ರತಿಭೆ ಮತ್ತು ಮನೋಧರ್ಮವನ್ನು ಒಳಗೊಂಡಿರುವ ಭರವಸೆಯ ಗುಚ್ಛವನ್ನು ಮಾನವಕುಲಕ್ಕೆ ನೀಡಿದೆ ಎಂದು ಅವರು ಹೇಳಿದರು. ಕರೋನಾ ಸಮಯದಲ್ಲಿ ಭಾರತವು ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ತನ್ನ ದೃಷ್ಟಿಕೋನವನ್ನು ಪರಿಪಾಲಿಸಿ ಅಗತ್ಯ ಔಷಧಗಳು ಮತ್ತು ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಔಷಧ ಉತ್ಪಾದಕ ರಾಷ್ಟ್ರವಾಗಿದೆ ಮತ್ತು ಇದನ್ನು 'ವಿಶ್ವ ಔಷಧಾಲಯ' ಎಂದೂ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಇಂದು ಭಾರತವು ದಾಖಲೆ ಸಂಖ್ಯೆಯ ಸಾಫ್ಟ್‌ ವೇರ್ ಇಂಜಿನಿಯರ್‌ ಗಳನ್ನು ಒದಗಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ 50 ಲಕ್ಷಕ್ಕೂ ಹೆಚ್ಚು ಸಾಫ್ಟ್‌ ವೇರ್ ಡೆವಲಪರ್‌ ಗಳು ಕೆಲಸ ಮಾಡುತ್ತಿದ್ದಾರೆ. ಭಾರತವು ಇಂದು ಮೂರನೇ ಅತಿದೊಡ್ಡ ಯುನಿಕಾರ್ನ್‌ ಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಆರು ತಿಂಗಳ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ನೋಂದಣಿಯಾಗಿವೆ ಎಂದರು. ಭಾರತದ ಬೃಹತ್, ಸುರಕ್ಷಿತ ಮತ್ತು ಯಶಸ್ವಿ ಡಿಜಿಟಲ್ ಪಾವತಿ ವೇದಿಕೆಯ ಬಗ್ಗೆ ಮಾತನಾಡಿದ ಅವರು, ಕಳೆದ ತಿಂಗಳಲ್ಲಿ 4.4 ಶತಕೋಟಿಗೂ ಹೆಚ್ಚು ವಹಿವಾಟುಗಳು ಏಕೀಕೃತ ಪಾವತಿಗಳ ಇಂಟರ್ಫೇಸ್ ಮೂಲಕ ನಡೆದಿವೆ ಎಂದು ತಿಳಿಸಿದರು. ಸುಗಮ ವ್ಯಾಪಾರವನ್ನು ಹೆಚ್ಚಿಸುವ ಕ್ರಮಗಳು ಮತ್ತು ಸರ್ಕಾರದ ಹಸ್ತಕ್ಷೇಪವನ್ನು ತಗ್ಗಿಸುವ ಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸಾಂಸ್ಥಿಕ ತೆರಿಗೆ ದರಗಳ ಸರಳೀಕರಣ ಮತ್ತು ಅವುಗಳನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕವಾಗಿಸುವ ಕುರಿತಂತೆಯೂ ಅವರು ಪ್ರಸ್ತಾಪಿಸಿದರು. ಭಾರತವು ಡ್ರೋನ್‌ ಗಳು, ಬಾಹ್ಯಾಕಾಶ, ಭೌಗೋಳಿಕ ಪ್ರದೇಶ (ಜಿಯೋ-ಸ್ಪೇಷಿಯಲ್) ಮ್ಯಾಪಿಂಗ್‌ ನಂತಹ ಕ್ಷೇತ್ರಗಳನ್ನು ಮುಕ್ತಗೊಳಿಸಿದೆ ಮತ್ತು ಐಟಿ ಮತ್ತು ಬಿಪಿಓ ವಲಯಗಳಿಗೆ ಸಂಬಂಧಿಸಿದ ಹಳೆಯ ದೂರಸಂಪರ್ಕ ನಿಯಂತ್ರಣದಲ್ಲಿ ಸುಧಾರಣೆಗಳನ್ನು ತಂದಿದೆ. "ನಾವು ಕಳೆದ ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಿದ್ದೇವೆ" ಎಂದು ಅವರು ಹೇಳಿದರು. ಸಹಯೋಗಿಯಾಗಿ ಭಾರತದ ಬಗ್ಗೆ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತವು ಜಾಗತಿಕ ಪೂರೈಕೆ-ಸರಪಳಿಗಳಲ್ಲಿ ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಲು ಬದ್ಧವಾಗಿದೆ ಮತ್ತು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದರು. ನಾವೀನ್ಯತೆ, ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮಶೀಲತೆಯ ಮನೋಭಾವದಲ್ಲಿ ಭಾರತದ ಸಾಮರ್ಥ್ಯಗಳು ಭಾರತವನ್ನು ಆದರ್ಶ ಜಾಗತಿಕ ಪಾಲುದಾರನನ್ನಾಗಿ ಮಾಡುತ್ತಿದೆ. "ಇದಕ್ಕಾಗಿಯೇ, ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ" ಎಂದು ಅವರು ಹೇಳಿದರು. ಭಾರತೀಯ ಯುವಕರು ಉದ್ಯಮಶೀಲತೆಯ ಹೊಸ ಔನ್ನತ್ಯವನ್ನು ಸಾಧಿಸುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. 2014 ರಲ್ಲಿದ್ದ ಕೇವಲ 100 ನವೋದ್ಯಮಗಳಿಗೆ ಹೋಲಿಸಿದರೆ, ಭಾರತದಲ್ಲಿ ಇಂದು 60 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿವೆ ಎಂದು ಅವರು ಹೇಳಿದರು. ಅದರಲ್ಲಿ 80 ಯುನಿಕಾರ್ನ್‌ ಗಳು ಮತ್ತು 40 ಕ್ಕೂ ಹೆಚ್ಚು ಯುನಿಕಾರ್ನ್‌ ಗಳು 2021 ರಲ್ಲಿ ಹೊರಹೊಮ್ಮಿವೆ ಎಂದರು. ಭಾರತದ ಆತ್ಮವಿಶ್ವಾಸದ ನಿಲುವನ್ನು ಒತ್ತಿಹೇಳಿದ ಅವರು, ಕರೋನಾ ಅವಧಿಯಲ್ಲಿ ಪರಿಮಾಣಾತ್ಮಕ ಸುಗಮಗೊಳಿಸುವಂತಹ ಮಧ್ಯಸ್ಥಿಕೆಗಳ ಮೇಲೆ ಜಗತ್ತು ಗಮನಹರಿಸುತ್ತಿದ್ದಾಗ, ಭಾರತವು ಸುಧಾರಣೆಗಳನ್ನು ಬಲಪಡಿಸುತ್ತಿತ್ತು ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. 6 ಲಕ್ಷ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಕೆ, ಸಂಪರ್ಕ ಸಂಬಂಧಿತ ಮೂಲಸೌಕರ್ಯದಲ್ಲಿ 1.3 ಟ್ರಿಲಿಯನ್ ಡಾಲರ್ ಹೂಡಿಕೆ, ಆಸ್ತಿ ನಗದೀಕರಣದ ಮೂಲಕ 80 ಶತಕೋಟಿ ಡಾಲರ್‌ ಗಳ ಉತ್ಪಾದನೆಯ ಗುರಿ ಮತ್ತು ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರಲು ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ನಂತಹ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿನ ದಾಪುಗಾಲುಗಳನ್ನು ಅವರು ಪಟ್ಟಿ ಮಾಡಿದರು.

ಸರಕುಗಳು, ಜನರು ಮತ್ತು ಸೇವೆಗಳ ತಡೆರಹಿತ ಸಂಪರ್ಕಕ್ಕೆ ಹೊಸ ಚೈತನ್ಯವನ್ನು ತುಂಬುತ್ತದೆ. ಭಾರತವು ಸ್ವಾವಲಂಬನೆಗಾಗಿ ತನ್ನ ಅನ್ವೇಷಣೆಯಲ್ಲಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವತ್ತ ಮಾತ್ರ ಗಮನಹರಿಸುತ್ತಿಲ್ಲ, ಜೊತೆಗೆ ಅದು ಹೂಡಿಕೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ಶ್ರೀ ಮೋದಿ ವೇದಿಕೆಗೆ ತಿಳಿಸಿದರು. 14 ವಲಯಗಳಲ್ಲಿ 26 ಶತಕೋಟಿ ಡಾಲರ್ ಮೌಲ್ಯದ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಗಳು ಅದರ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿದರು. ಭಾರತವು ಮುಂದಿನ 25 ವರ್ಷಗಳ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಅವಧಿಯಲ್ಲಿ, ದೇಶವು ಹೆಚ್ಚಿನ ವೃದ್ಧಿ ಮತ್ತು ಕಲ್ಯಾಣ ಮತ್ತು ಕ್ಷೇಮದ ಉತ್ಕೃಷ್ಟ ಗುರಿಗಳನ್ನು ಇಟ್ಟುಕೊಂಡಿದೆ. ಈ ಬೆಳವಣಿಗೆಯ ಕಾಲಘಟ್ಟವು ಹಸಿರು, ಸ್ವಚ್ಛ, ಸುಸ್ಥಿರ ಹಾಗೂ ವಿಶ್ವಾಸಾರ್ಹವಾಗಿರುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಇಂದಿನ ಜೀವನ ಶೈಲಿ ಮತ್ತು ನೀತಿಗಳ ಪರಿಸರ ವೆಚ್ಚದ ಮೇಲೆ ಪ್ರಧಾನಮಂತ್ರಿ ಬೆಳಕುಚೆಲ್ಲಿದರು. ಹವಾಮಾನಕ್ಕೆ ನಮ್ಮ ಜೀವನಶೈಲಿಯು ಉಂಟುಮಾಡುವ ಸವಾಲುಗಳ ಕಡೆಗೆ ಅವರು ಗಮನಹರಿಸಿದರು. “‘ಕಿತ್ತೊಗೆಯಿರಿ’ ಸಂಸ್ಕೃತಿ ಮತ್ತು ಬಳಕೆವಾದವು ಹವಾಮಾನದ ಸವಾಲನ್ನು ಉಲ್ಬಣಗೊಳಿಸಿದೆ. ಇಂದಿನ 'ಪಡೆದುಕೊಳ್ಳಿ-ಬಳಸಿ-ವಿಲೇವಾರಿ ಮಾಡಿ' ಆರ್ಥಿಕತೆಯಿಂದ ವರ್ತುಲಾಕಾರದ ಆರ್ಥಿಕತೆಯತ್ತ ವೇಗವಾಗಿ ಸಾಗುವುದು ಅತ್ಯಗತ್ಯವಾಗಿದೆ" ಎಂದು ಅವರು ಪ್ರತಿಪಾದಿಸಿದರು. ಅವರು ಕಾಪ್ 26 ಸಮ್ಮೇಳನದಲ್ಲಿ ನೀಡಿದ ಲೈಫ್ ಅಭಿಯಾನವನ್ನು ಉಲ್ಲೇಖಿಸಿ, ಪಿ-3 ಅಂದರೆ 'ಪ್ರೊ ಪ್ಲಾನೆಟ್ ಪೀಪಲ್' (ಭೂಗ್ರಹ ಪರವಾದ ಜನರು)ಗೆ ಲೈಫ್ ಅನ್ನು ಜನಾಂದೋಲನವನ್ನಾಗಿ ಮಾಡುವುದು ಬಲವಾದ ಅಡಿಪಾಯ ಹಾಕುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಎಲ್.ಐ.ಎಫ್.ಇ. (ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಅಂದರೆ 'ಪರಿಸರಕ್ಕಾಗಿ ಜೀವನಶೈಲಿ', ಇದು ಹವಾಮಾನ ಬಿಕ್ಕಟ್ಟು ಮತ್ತು ಭವಿಷ್ಯದ ಇತರ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸೂಕ್ತವಾಗಿ ಬರುವಂತಹ ತಾಳಿಕೊಳ್ಳುವ ಮತ್ತು ಸುಸ್ಥಿರ ಜೀವನಶೈಲಿಯ ದೃಷ್ಟಿಕೋನವಾಗಿದೆ ಎಂದರು. ನಿಗದಿತ ಗಡುವಿಗಿಂತ ಮುಂಚಿತವಾಗಿಯೇ ಹವಾಮಾನ ಗುರಿಯನ್ನು ಸಾಧಿಸುವಲ್ಲಿ ಭಾರತದ ಪ್ರಭಾವಶಾಲಿ ದಾಖಲೆಯ ಕ್ರಮದ ಬಗ್ಗೆ ಶ್ರೀ ಮೋದಿ ಅವರು ವೇದಿಕೆಗೆ ತಿಳಿಸಿದರು.

ವಿಶ್ವ ಕ್ರಮದಲ್ಲಿ ಬದಲಾಗುತ್ತಿರುವ ವಾಸ್ತವಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ ಜಾಗತಿಕ ಕುಟುಂಬವು ಹೊಸ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು ಮತ್ತು ಪ್ರತಿ ದೇಶ ಮತ್ತು ಜಾಗತಿಕ ಸಂಸ್ಥೆಯಿಂದ ಸಾಮೂಹಿಕ ಮತ್ತು ಏಕಕಾಲಿಕಗೊಳಿಸುವ ಕ್ರಮಕ್ಕೆ ಕರೆ ನೀಡಿದರು. ಪೂರೈಕೆ ಸರಪಳಿಯ ಅಡಚಣೆಗಳು, ಹಣದುಬ್ಬರ ಮತ್ತು ಹವಾಮಾನ ಬದಲಾವಣೆಯನ್ನು ಅವರು ಪ್ರಮುಖ ಉದಾಹರಣೆಗಳಾಗಿ ಉಲ್ಲೇಖಿಸಿದರು.  ಕ್ರಿಪ್ಟೋ ಕರೆನ್ಸಿಯ ಉದಾಹರಣೆ ನೀಡಿದ ಅವರು, ಅಲ್ಲಿ ಸಂಬಂಧಿತ ತಂತ್ರಜ್ಞಾನಗಳು ಮತ್ತು ಅವುಗಳ ಸವಾಲುಗಳು ಯಾವುದೇ ಒಂದು ದೇಶದ ನಿರ್ಧಾರಗಳಿಗೆ ಸೀಮಿತವಾಗಿರುವುದಿಲ್ಲ ಎಂದರು. ಈ ಕುರಿತು ಐಕಮತ್ಯಕ್ಕೆ ಕರೆ ನೀಡಿದರು. ಬಹುಪಕ್ಷೀಯ ಸಂಸ್ಥೆಗಳು ಬದಲಾದ ಸನ್ನಿವೇಶದಲ್ಲಿ ವಿಶ್ವ ಕ್ರಮದ ಸವಾಲುಗಳನ್ನು ನಿಭಾಯಿಸುವ ಸ್ಥಿತಿಯಲ್ಲಿವೆಯೇ ಎಂದು ಅವರು ಪ್ರಶ್ನಿಸಿದ ಅವರು, ಈ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ಸಮಯದಿಂದ ಜಗತ್ತು ಬದಲಾಗಿದೆ ಎಂದರು. "ಅದಕ್ಕಾಗಿಯೇ ಪ್ರತಿಯೊಂದು ಪ್ರಜಾಪ್ರಭುತ್ವ ರಾಷ್ಟ್ರವು ಈ ಸಂಸ್ಥೆಗಳ ಸುಧಾರಣೆಗಳಿಗೆ ಒತ್ತಾಯಿಸುವುದು ಕಡ್ಡಾಯವಾಗಿದೆ, ಇದರಿಂದಾಗಿ ಅವು ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಕಾರ್ಯಕ್ಕೆ ಸಜ್ಜಾಗಬಹುದು" ಎಂದು ಅವರು ತಮ್ಮ ಭಾಷಣ ಪರಿಸಮಾಪ್ತಿಗೊಳಿಸಿದರು.

***(Release ID: 1790681) Visitor Counter : 69