ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಲಸಿಕಾ ಅಭಿಯಾನ 1 ವರ್ಷ ಪೂರೈಸಿದ ಹಿನ್ನೆಲೆ; ದೇಶದ ಮಹಾಜನತೆಗೆ ವಂದಿಸಿದ ಪ್ರಧಾನ ಮಂತ್ರಿ


ಲಸಿಕಾ ಆಂದೋಲನದ ಯಶಸ್ಸಿಗೆ ಶ್ರಮಿಸುತ್ತಿರುವ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಂರಕ್ಷಣಾ ಕಾರ್ಯಕರ್ತರ ಗುರುತರ ಪಾತ್ರ ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ

Posted On: 16 JAN 2022 12:31PM by PIB Bengaluru

ದೇಶದಲ್ಲಿ ಕೋವಿಡ್-19 ಲಸಿಕಾ ಅಭಿಯಾನ ಯಶಸ್ವಿಯಾಗಿ 1 ವರ್ಷ ಪೂರೈಸಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರಿಗೂ ಗೌರವ ವಂದನೆ ಸಲ್ಲಿಸಿದ್ದಾರೆ. ಲಸಿಕೆ ಅಭಿಯಾನ ಯಶಸ್ವಿಯಾಗಲು ವೈದ್ಯರು, ದಾದಿಯರು ಮತ್ತು ಆರೋಗ್ಯ ಸಂರಕ್ಷಣಾ ಕಾರ್ಯಕರ್ತರ ಶ್ರಮ ಹಾಗೂ ನಿರ್ವಹಿಸಿದ ಪಾತ್ರವನ್ನು ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ಭಾರತದ ಲಸಿಕಾ ಆಂದೋಲನವು ಮತ್ತಷ್ಟು ಬಲ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮೈಗೌಇಂಡಿಯಾ (MyGovIndia) ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನ ಮಂತ್ರಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

“ನಾವಿಂದು ಲಸಿಕಾ ಅಭಿಯಾನದಲ್ಲಿ 1 ವರ್ಷ ಪೂರೈಸಿದ್ದೇವೆ.

ಲಸಿಕಾ ಆಂದೋಲನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ  ನಾನು ವಂದಿಸುತ್ತೇನೆ.

ಕೋವಿಡ್-19 ವಿರುದ್ಧ ಹೋರಾಡಲು ನಮ್ಮ ಲಸಿಕಾ ಕಾರ್ಯಕ್ರಮವು ಮತ್ತಷ್ಟು ಬಲ ನೀಡಿದೆ. ಇದು ಜೀವಗಳನ್ನು ಉಳಿಸಲು ಮತ್ತು ಜೀವನೋಪಾಯವನ್ನು ರಕ್ಷಿಸಲು ಕಾರಣವಾಗಿದೆ.

ಅದೇ ವೇಳೆ, ನಮ್ಮ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಂರಕ್ಷಣಾ ಕಾರ್ಯಕರ್ತರ ಪಾತ್ರ ಅಸಾಧಾರಣ ಮತ್ತು ಅನನ್ಯವಾದುದು. ದೂರದ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಜನರು ಅಥವಾ ನಮ್ಮ ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು ಅಲ್ಲಿಗೇ ಲಸಿಕೆ ಕೊಂಡೊಯ್ಯುವುದನ್ನು ನಾವು ಕಣ್ತುಂಬಿಕೊಂಡಾಗ, ನಮ್ಮ ಹೃದಯ ಮತ್ತು ಮನಸ್ಸು ಹೆಮ್ಮೆಯಿಂದ ಬೀಗುತ್ತದೆ.

ಕೊರೊನಾ ಸೋಂಕಿನ ವಿರುದ್ಧದ ಭಾರತದ ಹೋರಾಟವು ಸದಾ ಸಂಪೂರ್ಣ ವೈಜ್ಞಾನಿಕ ತಳಹದಿಯಿಂದ ಕೂಡಿರಲಿದೆ. ನಮ್ಮ ದೇಶದ ನಾಗರಿಕರು ಸಮರ್ಪಕ ಆರೋಗ್ಯ ರಕ್ಷಣೆ ಮತ್ತು ಕಾಳಜಿಯನ್ನು ಪಡೆಯುವುದನ್ನು ಖಚಿತಪಡಿಸಲು ನಾವು ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದೇವೆ.

ನಾವೆಲ್ಲಾ ಒಟ್ಟಾಗಿ ಕೋವಿಡ್-19 ಸಂಬಂಧಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ, ಸಾಂಕ್ರಾಮಿಕ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕೋಣ.”

***



(Release ID: 1790435) Visitor Counter : 234