ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿಗಳ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ

Posted On: 05 JAN 2022 3:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಬಟಿಂಡಾಗೆ ಬಂದಿಳಿದರು, ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಸ್ಸೈನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಾಗಿತ್ತು. ಆದರೆ ಮಳೆ ಮತ್ತು ಆಗಸದಲ್ಲಿ ಏನೂ ಸ್ಪಷ್ಟವಾಗಿ ಗೋಚರಿಸದ ಕಾರಣಕ್ಕೆ ಪ್ರಧಾನಮಂತ್ರಿ ಅವರು ಹವಾಮಾನ ತಿಳಿಯಾಗಲಿ ಎಂದು ಸುಮಾರು 20 ನಿಮಿಷಗಳ ಕಾಲ ಕಾಯುತ್ತಿದ್ದರು.

ಹವಾಮಾನ ಸ್ಥಿತಿ ಸುಧಾರಿಸದ ಕಾರಣ, ಅವರು ರಸ್ತೆ ಮೂಲಕವೇ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದರು, ಅದಕ್ಕೆ ಸುಮಾರು 2 ಗಂಟೆಗೂ ಅಧಿಕ ಸಮಯ ಹಿಡಿಯುತ್ತಿತ್ತು.ಪಂಜಾಬ್ ಪೊಲೀಸ್ ಡಿಜಿಪಿ  ಅವರಿಂದ ಅಗತ್ಯ ಭದ್ರತಾ ಏರ್ಪಾಡುಗಳನ್ನು ಖಾತ್ರಿಪಡಿಸಿಕೊಂಡ ನಂತರ ಅವರು ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು.

ಆದರೆ ಹುಸ್ಸೈನಿವಾಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಸುಮಾರು 30 ಕಿಲೋಮೀಟರ್ ದೂರ ಇದೆ ಎನ್ನುವಾಗ ಪ್ರಧಾನಮಂತ್ರಿಗಳ ಬೆಂಗಾವಲು ವಾಹನ ಮೇಲುಸೇತುವೆ ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ಅಡ್ಡಗಟ್ಟಿದ್ದು ( ಬ್ಲಾಕ್ ಮಾಡಿದ್ದು)  ಕಂಡು ಬಂದಿತು.

ಪ್ರಧಾನಮಂತ್ರಿ ಸುಮಾರು 15-20 ನಿಮಿಷಗಳ ಕಾಲ ಮೇಲುಸೇತುವೆಯ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ.

ಪ್ರಧಾನಮಂತ್ರಿಯವರ ವೇಳಾಪಟ್ಟಿ ಮತ್ತು ಪ್ರಯಾಣ ಯೋಜನೆಯನ್ನು ಮುಂಚಿತವಾಗಿಯೇ ಪಂಜಾಬ್ ಸರ್ಕಾರಕ್ಕೆ ತಿಳಿಸಲಾಗಿತ್ತು. ನಿಗದಿಯಂತೆ, ಅವರು ಪ್ರಯಾಣಕ್ಕೆ,ಭದ್ರತೆಗೆ ಅಗತ್ಯ ಏರ್ಪಾಡುಗಳನ್ನು ಮಾಡಬೇಕಿತ್ತು ಮತ್ತು ಸಂಕಷ್ಟ ಯೋಜನೆಯನ್ನೂ ಸಹ ಸಿದ್ಧಪಡಿಸಿಕೊಳ್ಳಬೇಕಿತ್ತು. ಸಂಕಷ್ಟ ಯೋಜನೆಯ ದೃಷ್ಟಿಯಿಂದ ಪಂಜಾಬ್ ಸರ್ಕಾರ ರಸ್ತೆ ಮೂಲಕ ಸುರಕ್ಷಿತ ಸಂಚಾರಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಿತ್ತು, ಆದರೆ ಆ ರೀತಿ ನಿಯೋಜನೆ ಮಾಡದಿದ್ದುದು ಸ್ಪಷ್ಟವಾಗಿ ಕಂಡುಬಂದಿತು.  

ಈ ಭದ್ರತಾ ಲೋಪದ ನಂತರ ಬಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿ ಹೋಗಲು ನಿರ್ಧರಿಸಲಾಯಿತು.  

ಈ ಗಂಭೀರ ಭದ್ರತಾ ಲೋಪವನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ ಎ) ಪಂಜಾಬ್ ಸರ್ಕಾರದಿಂದ ವಿಸ್ತೃತ ವರದಿ ಕೇಳಿದೆ. ಅಲ್ಲದೆ, ಈ ಲೋಪಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

***


(Release ID: 1787705) Visitor Counter : 462