ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


15 ರಿಂದ 18 ವರ್ಷದೊಳಗಿನ ಯುವ ಜನಾಂಗಕ್ಕೆ ಲಸಿಕೆ; ಇದು ಶಿಕ್ಷಣಕ್ಕೆ ನೆರವು

ಮುಂಚೂಣಿ ಕಾರ್ಯಕರ್ತರು, ಆರೋಗ್ಯ ರಕ್ಷಣಾ ಕಾರ್ಯಕರ್ತರು ಮತ್ತು  ಅನಾರೋಗ್ಯ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡುವುದಾಗಿ ಪ್ರಧಾನಮಂತ್ರಿ ಪ್ರಕಟ

ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ವಿಶ್ವಾಸ ಬಲವರ್ಧನೆ

ಯಾವುದೇ ಭಯದ ಅಗತ್ಯವಿಲ್ಲದೆ ಒಮಿಕ್ರಾನ್ ಬಗ್ಗೆ ಜಾಗೃತವಾಗಿರಲು ಸಾರ್ವಜನಿಕರಿಗೆ ಎಚ್ಚರಿಕೆ

ರಾಷ್ಟ್ರದ ಆರೋಗ್ಯ ರಕ್ಷಣಾ ಮೂಲಸೌಕರ್ಯದ ಸ್ಥೂಲನೋಟದ ವಿವರ

ಸೋಂಕು ರೂಪಾಂತರಗೊಳ್ಳುವುದರಿಂದ ಅದನ್ನು ಎದುರಿಸಲು ನಾವು ನಮ್ಮ ನವೀನ ಮನೋಭಾವದೊಂದಿಗೆ ನಮ್ಮ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಹಲವುಪಟ್ಟು ವೃದ್ಧಿಸಿಕೊಳ್ಳಬೇಕಾಗಿದೆ

Posted On: 25 DEC 2021 10:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಅವರು 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ 2022ರ ಜನವರಿ 3ರ ಸೋಮವಾರದಿಂದ ಲಸಿಕೆ ನೀಡುವುದಾಗಿ ಪ್ರಧಾನಮಂತ್ರಿ ಘೋಷಿಸಿದರು. ಈ ಕ್ರಮದಿಂದಾಗಿ ಶಾಲೆಗಳಲ್ಲಿ ಶಿಕ್ಷಣ, ಸಾಮಾನ್ಯಸ್ಥಿತಿಗೆ ಮರಳಲು ನೆರವಾಗುವುದಲ್ಲದೆ, ಶಾಲೆಗೆ ಹೋಗುವ ಮಕ್ಕಳ ಕುರಿತು ಪೋಷಕರಲ್ಲಿನ ಆತಂಕವೂ ಕಡಿಮೆಯಾಗುತ್ತದೆ. ಅಲ್ಲದೆ ಪ್ರಧಾನಮಂತ್ರಿ ಅವರು 2022ರ ಜನವರಿ 10 ಸೋಮವಾರದಿಂದ ಎಲ್ಲಾ ಆರೋಗ್ಯ ರಕ್ಷಣಾ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ನೀಡುವುದಾಗಿ ಪ್ರಕಟಿಸಿದರು. ಕೋವಿಡ್-19 ರೋಗಿಗಳ ಸೇವೆಯಲ್ಲಿ ಹೆಚ್ಚಿನ ಸಮಯ ತೊಡಗಿಸಿಕೊಂಡಿರುವ ಆರೋಗ್ಯ ರಕ್ಷಣಾ ಮತ್ತು ಮುಂಚೂಣಿ ಕಾರ್ಯಕರ್ತರ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಮುನ್ನೆಚ್ಚರಿಕೆ ಡೋಸ್ ಎಂದು ಕರೆಯಲಾಗುತ್ತದೆ. ಇದು ಬೂಸ್ಟರ್ ಡೋಸ್ ಅಲ್ಲ. ಈ ಮುನ್ನೆಚ್ಚರಿಕೆ ಡೋಸ್ ನೀಡುವ ನಿರ್ಧಾರ ಆರೋಗ್ಯ ರಕ್ಷಣಾ ಮತ್ತು ಮುಂಚೂಣಿ ಕಾರ್ಯಕರ್ತರ ವಿಶ್ವಾಸವನ್ನು ವೃದ್ಧಿಸಲಿದೆ. 2022ರ ಜನವರಿ 10ರಿಂದ ವೈದ್ಯರ ಸಲಹೆ ಮೇರೆಗೆ ಅನಾರೋಗ್ಯ ಪೀಡಿತ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಈ ಮುನ್ನೆಚ್ಚರಿಕೆ ಡೋಸ್ ಆಯ್ಕೆ ಇರಲಿದೆ ಎಂದು ಪ್ರಧಾನಮಂತ್ರಿ ಪ್ರಕಟಿಸಿದರು.

ಭಾರತದಲ್ಲಿನ ಒಮಿಕ್ರಾನ್ ಸೋಂಕಿನ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿ, ಜನರು ಆತಂಕ ಪಡಬೇಕಾಗಿಲ್ಲ ಎಂದು ಮನವಿ ಮಾಡಿದರು ಮತ್ತು ಮಾಸ್ಕ್ ಧರಿಸುವುದು ಹಾಗೂ ಪದೇ ಪದೇ ಕೈತೊಳೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು. ಸಾಂಕ್ರಾಮಿಕ ವಿರುದ್ಧದ ಹೋರಾಟದ ಜಾಗತಿಕ ಅನುಭವದಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲ ಮಾರ್ಗಸೂಚಿಗಳ ಪಾಲನೆ ದೊಡ್ಡ ಅಸ್ತ್ರ ಎಂಬುದನ್ನು ನಮಗೆ ಕಲಿಸಿಕೊಟ್ಟಿದೆ. ಎರಡನೇ ಅಸ್ತ್ರ ಲಸಿಕೀಕರಣ ಎಂದು ಪ್ರಧಾನಮಂತ್ರಿ ಹೇಳಿದರು.

ಈ ವರ್ಷ ಜನವರಿ 16ರಿಂದ ಆರಂಭವಾದ ಲಸಿಕೀಕರಣ ಅಭಿಯಾನ 141 ಕೋಟಿ ಡೋಸ್ ಗಳನ್ನು ದಾಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕಾರ್ಯಕ್ಕಾಗಿ ಅವರು ಸಾರ್ವಜನಿಕರು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಸಾಮೂಹಿಕ ಪ್ರಯತ್ನವನ್ನು ಶ್ಲಾಘಿಸಿದರು.  ಲಸಿಕೆಯ  ಗಂಭೀರತೆಯನ್ನು ಅತ್ಯಂತ ತುರ್ತಾಗಿ ಗುರುತಿಸಲಾಯಿತು ಮತ್ತು ಲಸಿಕೆ ಸಂಶೋಧನೆ ಕೂಡ ನಡೆಯಿತು. ಜತೆಗೆ ಅನುಮೋದನೆ ಪ್ರಕ್ರಿಯೆಗೆ ಒತ್ತು ನೀಡಲಾಯಿತು. ಪೂರೈಕೆ ಸರಣಿ, ವಿತರಣೆ, ತರಬೇತಿ, ಮಾಹಿತಿ ತಂತ್ರಜ್ಞಾನ ಬೆಂಬಲ ವ್ಯವಸ್ಥೆ ಮತ್ತು ಪ್ರಮಾಣೀಕರಣವೂ ನಡೆಯಿತು ಎಂದರು. ಈ ಎಲ್ಲ ಪ್ರಯತ್ನಗಳಿಂದಾಗಿ ದೇಶದ ವಯಸ್ಕ ಜನಸಂಖ್ಯೆ ಶೇ.61ರಷ್ಟು ಮಂದಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ ಮತ್ತು ಶೇ.90ರಷ್ಟು ವಯಸ್ಕರಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದರು.

ವೈರಾಣು ರೂಪಾಂತರಗೊಳ್ಳುತ್ತದೆ, ಆ ಸವಾಲನ್ನು ಎದುರಿಸಲು ನಾವು ನವೀನ ಮನೋಭಾವದ ಜತೆಗೆ ನಮ್ಮ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಹಲವು ಪಟ್ಟು ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ದೇಶದಲ್ಲಿ ಇಂದು 18 ಲಕ್ಷ ಐಸೋಲೇಷನ್ ಹಾಸಿಗೆಗಳು, 5 ಲಕ್ಷ ಆಕ್ಸಿಜನ್ ಬೆಂಬಲಿತ ಹಾಸಿಗೆಗಳು, ಒಂದು ಲಕ್ಷ 40 ಸಾವಿರ ಐಸಿಯು ಹಾಸಿಗೆಗಳು, 90 ಸಾವಿರ ಐಸಿಯು ಮತ್ತು ನಾನ್ ಐಸಿಯು ಹಾಸಿಗೆಗಳು ವಿಶೇಷವಾಗಿ ಮಕ್ಕಳಿಗೆ ಲಭ್ಯವಿವೆ. 3 ಸಾವಿರಕ್ಕೂ ಅಧಿಕ ಪಿಎಸ್ಎ ಆಮ್ಲಜನಕ ಘಟಕಗಳು, 4 ಲಕ್ಷಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್ ಗಳು ಮತ್ತು ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಹೆಚ್ಚುವರಿ ಡೋಸ್ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ ಎಂದು ದೇಶದ ಆರೋಗ್ಯ ವ್ಯವಸ್ಥೆಯ ಸ್ಥೂಲ ಚಿತ್ರಣವನ್ನು ಪ್ರಧಾನಮಂತ್ರಿ ನೀಡಿದರು.

ಸದ್ಯದಲ್ಲೇ ದೇಶ ಮೂಗಿನಿಂದ ಹಾಕುವಂತಹ ಲಸಿಕೆಯನ್ನು ಅಭಿವೃದ್ಧಿಪಡಿಸಲಿದೆ ಮತ್ತು ಇದು ವಿಶ್ವದ ಮೊದಲ ಡಿಎನ್ಎ ವ್ಯಾಕ್ಸಿನ್ ಆಗಲಿದೆ ಎಂದು ಪ್ರಧಾನಮಂತ್ರಿ ಭರವಸೆ ನೀಡಿದರು. ಕೊರೊನಾ ವಿರುದ್ಧದ ಭಾರತದ ಹೋರಾಟ ಆರಂಭದಿಂದಲೂ ವೈಜ್ಞಾನಿಕ ಸಿದ್ಧಾಂತ, ವೈಜ್ಞಾನಿಕ ಸಮಾಲೋಚನೆ ಮತ್ತು ವೈಜ್ಞಾನಿಕ ವಿಧಾನವನ್ನು ಆಧರಿಸಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. 11 ತಿಂಗಳ ಲಸಿಕಾ ಅಭಿಯಾನ, ದೇಶವಾಸಿಗಳ ದಿನನಿತ್ಯದ ಜೀವನವನ್ನು ಸಹಜಸ್ಥಿತಿಗೆ ತಂದಿದೆ ಮತ್ತು ನೆಮ್ಮದಿಯನ್ನು ಮೂಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಗತ್ತಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಆರ್ಥಿಕ ಚಟುವಟಿಕೆಗಳು ಉತ್ತೇಜನಕಾರಿಯಾಗಿವೆ ಎಂದರು. ಆದರೂ ಕೊರೊನಾ ಇನ್ನೂ ನಮ್ಮಿಂದ ದೂರವಾಗಿಲ್ಲ. ನಾವು ಮುನ್ನೆಚ್ಚರಿಕೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಎಚ್ಚರಿಸಿದರು.

ವದಂತಿಗಳು, ಗೊಂದಲ ಮತ್ತು ಭಯವನ್ನು ಸೃಷ್ಟಿಸುವ ಪ್ರಯತ್ನಗಳ ಕುರಿತು ಜಾಗೃತೆಯಿಂದ ಇರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ವೇಗಗೊಳಿಸಬೇಕು ಎಂದು ಮನವಿ ಮಾಡಿದರು. 

***(Release ID: 1785309) Visitor Counter : 218