ಪ್ರಧಾನ ಮಂತ್ರಿಯವರ ಕಛೇರಿ
ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ
ಆಪರೇಷನ್ ವಿಜಯ್ ನ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಯೋಧರಿಗೆ ಪ್ರಧಾನ ಮಂತ್ರಿ ಸನ್ಮಾನ
“ಗೋವಾದ ಜನರು ವಿಮೋಚನೆ ಮತ್ತು ಸ್ವರಾಜ್ಯ ಚಳುವಳಿಗಳನ್ನು ಸಡಿಲಗೊಳಿಸಲು ಬಿಡಲಿಲ್ಲ. ಅವರು ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ನು ಹೆಚ್ಚು ಕಾಲ ಉರಿಯುವಂತೆ ಮಾಡಿದರು’’
“ಭಾರತವು ಒಂದು ಚೈತನ್ಯವಿದ್ದಂತೆ. ವ್ಯಕ್ತಿಗಿಂತ ದೇಶವೇ ಶ್ರೇಷ್ಠ ಮತ್ತು ಅತ್ಯುನ್ನತ. ಅಲ್ಲಿ ಒಂದೇ ಮಂತ್ರವಿದೆ - ರಾಷ್ಟ್ರ ಮೊದಲು. ಅಲ್ಲಿ ಒಂದೇ ಒಂದು ಸಂಕಲ್ಪವಿದೆ - ಏಕ ಭಾರತ, ಶ್ರೇಷ್ಠ ಭಾರತ”
"ಸರ್ದಾರ್ ಪಟೇಲ್ ಇನ್ನೂ ಕೆಲವು ವರ್ಷಗಳ ಕಾಲ ಬದುಕಿದ್ದರೆ, ಗೋವಾ ವಿಮೋಚನೆಗಾಗಿ ಇಷ್ಟು ದಿನ ಕಾಯಬೇಕಾಗಿರಲಿಲ್ಲ”
“ಆಡಳಿತದ ಪ್ರತಿಯೊಂದು ಕಾರ್ಯದಲ್ಲಿ ರಾಜ್ಯದ ಹೊಸ ಗುರುತು ಅಗ್ರಗಣ್ಯವಾಗಿದೆ. ದೇಶದಲ್ಲಿ ಯಾವುದೇ ಕೆಲಸ ಪ್ರಾರಂಭವಾದರೆ ಅಥವಾ ಕೆಲಸವು ನಡೆಯುತ್ತಿದ್ದರೆ ಗೋವಾ ಅದನ್ನು ಎಲ್ಲರಿಗಿಂತ ಮೊದಲೇ ಪೂರ್ಣಗೊಳಿಸುತ್ತದೆ”
"ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಭೇಟಿ, ಭಾರತದ ವೈವಿಧ್ಯತೆ ಮತ್ತು ರೋಮಾಂಚನಕಾರಿ ಪ್ರಜಾಪ್ರಭುತ್ವದ ಬಗ್ಗೆ ಅವರು ಹೊಂದಿರುವ ಪ್ರೀತಿಯನ್ನು ಸ್ಮರಿಸಿದ ಪ್ರಧಾನಿ"
"ಗೋವಾ ಜನರ ಪ್ರಾಮಾಣಿಕತೆ, ಪ್ರತಿಭೆ ಮತ್ತು ಶ್ರದ್ಧೆಯ ಗುಣಗಳ ಪ್ರತಿಬಿಂಬವನ್ನು ರಾಷ್ಟ್ರವು ಮನೋಹರ್ ಪರಿಕ್ಕರ್ ಅವರಲ್ಲಿ ನೋಡಿದೆ”
Posted On:
19 DEC 2021 5:18PM by PIB Bengaluru
ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ಯೋಧರನ್ನು ಪ್ರಧಾನಿ ಸನ್ಮಾನಿಸಿದರು. ನವೀಕರಿಸಿದ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್, ನ್ಯೂ ಸೌತ್ ಗೋವಾ ಜಿಲ್ಲಾ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ವೈಮಾನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ದಾಬೋಲಿಮ್-ನವೇಲಿಮ್, ಮಾರ್ಗೋವಾದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅವರು ಉದ್ಘಾಟಿಸಿದರು. ಅವರು ಗೋವಾದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಮತ್ತು ರಿಸರ್ಚ್ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಗೋವಾದ ಭೂಮಿ, ಗೋವಾದ ಗಾಳಿ, ಗೋವಾದ ಸಾಗರ ಕಿನಾರವು ಪ್ರಕೃತಿಯ ಅದ್ಭುತ ಕೊಡುಗೆಯಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಬಣ್ಣಿಸಿದರು. ಇಂದು ಗೋವಾ ಜನರ ಈ ಉತ್ಸಾಹವು ಗೋವಾದ ವಿಮೋಚನೆಯ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಆಜಾದ್ ಮೈದಾನದಲ್ಲಿರುವ ಶಹೀದ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸೌಭಾಗ್ಯ ನನ್ನದಾಗಿದೆ ಎಂದರು. ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮಿರಾಮಾರ್‌ನಲ್ಲಿ ನಡೆದ ಯೋಧರ ಪಥಸಂಚಲನ ಫ್ಲೈ ಪಾಸ್ಟ್ ಗೌರವ ವಂದನೆ ಸ್ವೀಕರಿಸಿದರು. ಸಾಕ್ಷಿಯಾದರು. ‘ಆಪರೇಷನ್ ವಿಜಯ್’ನ ವೀರ ಯೋಧರು ಹಾಗೂ ರಕ್ಷಣಾ ಸಿಬ್ಬಂದಿಯನ್ನು ದೇಶದ ಪರವಾಗಿ ಸನ್ಮಾನಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಗೋವಾ ಇಂದು ಒಗ್ಗೂಡಿಸಿರುವ ಹಲವು ಅವಕಾಶಗಳು, ಹಲವು ಅದ್ಭುತ ಅನುಭವಗಳನ್ನು ಒದಗಿಸಿದ ರೋಮಾಂಚಕ ಗೋವಾ ಸ್ಫೂರ್ತಿಗೆ ಪ್ರಧಾನಮಂತ್ರಿ ಧನ್ಯವಾದ ಹೇಳಿದರು.
ಭಾರತದ ಬಹುತೇಕ ಭಾಗಗಳು ಮೊಘಲರ ಆಳ್ವಿಕೆಯಲ್ಲಿದ್ದ ಸಮಯದಲ್ಲಿ ಗೋವಾ ಪೋರ್ಚುಗೀಸ್ ಪ್ರಾಬಲ್ಯಕ್ಕೆ ಒಳಪಟ್ಟಿತ್ತು. ಆನಂತರ ಭಾರತ ಅನೇಕ ಕ್ರಾಂತಿಗಳಿಗೆ ಸಾಕ್ಷಿಯಾಯಿತು. ಶತಮಾನಗಳ ನಂತರ ಮತ್ತು ಅಧಿಕಾರದ ಏರಿಳಿತದ ನಂತರವೂ ಗೋವಾ ತನ್ನ ಭಾರತೀಯತೆಯನ್ನು ಮರೆತಿಲ್ಲ ಹಾಗೂ ಭಾರತದ ಉಳಿದ ಭಾಗಗಳು ಸಹ ಗೋವಾವನ್ನು ಮರೆತಿಲ್ಲ ಎಂದು ಮೋದಿ ತಿಳಿಸಿದರು. ಇದು ಕಾಲಾನಂತರದಲ್ಲಿ ಬಲಗೊಳ್ಳುವ ಸಂಬಂಧವಾಗಿದೆ. ಗೋವಾದ ವಿಮೋಚನೆ ಮತ್ತು ಸ್ವರಾಜ್ಯ ಚಳುವಳಿಗಳು ಸಡಿಲಗೊಳ್ಳಲು ಗೋವಾದ ಜನರು ಅವಕಾಶ ನೀಡಲಿಲ್ಲ. ಅವರು ಭಾರತದ ಇತಿಹಾಸದಲ್ಲಿ ಸುದೀರ್ಘ ಕಾಲ ಸ್ವಾತಂತ್ರ್ಯದ ಜ್ವಾಲೆಯನ್ನು ಹೆಚ್ಚಾಗಿ ಉರಿಯುವಂತೆ ಮಾಡಿದರು. ಏಕೆಂದರೆ ಭಾರತ ಕೇವಲ ರಾಜಕೀಯ ಶಕ್ತಿಯಲ್ಲ. ಭಾರತವು ಮಾನವೀಯತೆಯ ಹಿತಾಸಕ್ತಿಗಳನ್ನು ರಕ್ಷಿಸುವ ಕಲ್ಪನೆ ಮತ್ತು ಕುಟುಂಬವಾಗಿದೆ. ಭಾರತವು ಒಂದು ಆತ್ಮವಾಗಿದ್ದು, ಅಲ್ಲಿ ರಾಷ್ಟ್ರವು 'ವ್ಯಕ್ತಿಗಿಂತ ಮೇಲಿದೆ ಮತ್ತು ಸರ್ವಶ್ರೇಷ್ಠವಾಗಿದೆ. ಅಲ್ಲಿ ಒಂದೇ ಮಂತ್ರವಿದೆ – ಅದೆಂದರೆ, ರಾಷ್ಟ್ರವೇ ಮೊದಲು. ಅಲ್ಲಿ ಒಂದೇ ಒಂದು ಸಂಕಲ್ಪವಿದೆ, ಅದೆಂದರೆ ಏಕ ಭಾರತ, ಶ್ರೇಷ್ಠ ಭಾರತವಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
ದೇಶದ ಒಂದು ಭಾಗವು ಇನ್ನೂ ಮುಕ್ತವಾಗಿಲ್ಲ ಮತ್ತು ಕೆಲವು ದೇಶವಾಸಿಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲದ ಕಾರಣ ಭಾರತದಾದ್ಯಂತ ಜನರ ಹೃದಯದಲ್ಲಿ ಆ ನೋವು ಮತ್ತು ಬೇಸರ ಇದೆ. ಸರ್ದಾರ್ ವಲ್ಲಭಬಾಯ್ ಪಟೇಲರು ಇನ್ನೂ ಕೆಲವು ವರ್ಷ ಬದುಕಿದ್ದರೆ ಗೋವಾ ವಿಮೋಚನೆಗಾಗಿ ಇಷ್ಟು ದಿನ ಕಾಯಬೇಕಾಗಿರಲಿಲ್ಲ. ಗೋವಾ ವಿಮೋಚನೆಗಾಗಿ ಹೋರಾಡಿದ ವೀರ ಯೋಧರಿಗೆ ನಾನಿಂದು ತಲೆಬಾಗಿ ನಮಿಸುತ್ತೇನೆ. ಗೋವಾ ಮುಕ್ತಿ ವಿಮೋಚನಾ ಸಮಿತಿಯ ಸತ್ಯಾಗ್ರಹದಲ್ಲಿ 31 ಸತ್ಯಾಗ್ರಹಿಗಳು ಪ್ರಾಣ ಕಳೆದುಕೊಂಡರು. ಈ ತ್ಯಾಗಗಳ ಬಗ್ಗೆ ಮತ್ತು ಪಂಜಾಬ್‌ನ ವೀರ್ ಕರ್ನೈಲ್ ಸಿಂಗ್ ಬೇನಿಪಾಲ್ ಅವರಂತಹ ವೀರ ಸೇನಾನಿಗಳ ತ್ಯಾಗ, ಬಲಿದಾನವನ್ನ ನಾವೆಲ್ಲರೂ ಸ್ಮರಿಸಬೇಕು. "ಗೋವಾ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಕೇವಲ ಭಾರತದ ಸಂಕಲ್ಪದ ಸಂಕೇತವಲ್ಲ, ಆದರೆ ಅದು ಭಾರತದ ಏಕತೆ ಮತ್ತು ಸಮಗ್ರತೆಯ ಜೀವಂತ ದಾಖಲೆಯಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದರು.
ಸ್ವಲ್ಪ ಸಮಯದ ಹಿಂದೆ ಇಟಲಿ ಮತ್ತು ವ್ಯಾಟಿಕನ್ ನಗರಕ್ಕೆ ಹೋದಾಗ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವ ಸದವಕಾಶ ಸಿಕ್ಕಿತು. ಭಾರತದ ಬಗ್ಗೆ ಪೋಪ್ ಫ್ರಾನ್ಸಿಸ್ ಹೊಂದಿರುವ ಪ್ರೀತಿ ಮತ್ತು ಗೌರವ ಅಗಾಧವಾಗಿತ್ತು. ಪೋಪ್ ಫ್ರಾನ್ಸಿಸ್ ಅವರಿಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದೆ. ಆಗ ಅವರು ನೀಡಿದ ಪ್ರತಿಕ್ರಿಯೆ ಅದ್ಭುತವಾಗಿತ್ತು. "ಇದು ನೀವು ನನಗೆ ನೀಡಿದ ಶ್ರೇಷ್ಠ ಉಡುಗೊರೆ" ಎಂದು ಪೋಪ್ ಹೇಳಿದರು. ಭಾರತದ ವೈವಿಧ್ಯತೆ, ನಮ್ಮ ಉಜ್ವಲ ಪ್ರಜಾಪ್ರಭುತ್ವದ ಬಗ್ಗೆ ಪೋಪ್ ಅವರು ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದಾರೆ ಎಂದರು. ಸಂತ ರಾಣಿ ಕೇತೆವನ್ ಅವರ ಪವಿತ್ರ ಅವಶೇಷಗಳನ್ನು ಜಾರ್ಜಿಯಾ ಸರ್ಕಾರಕ್ಕೆ ಹಸ್ತಾಂತರಿಸಿದ್ದನ್ನು ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು.
ಗೋವಾ ರಾಜ್ಯ ಸರ್ಕಾರವು ಆಡಳಿತದಲ್ಲಿ ಹೊಸ ದಾಪುಗಾಲು ಹಾಕುತ್ತಿದೆ. ಗೋವಾದ ಪ್ರಾಕೃತಿಕ ಸೌಂದರ್ಯ ಇಲ್ಲಿನ ವಿಶಿಷ್ಟ ಲಕ್ಷಣವಾಗಿದೆ. ಇಲ್ಲಿನ ಸರ್ಕಾರವು ಗೋವಾದ ಮತ್ತೊಂದು ಗುರುತನ್ನು ಭದ್ರಪಡಿಸುತ್ತಿದೆ. ರಾಜ್ಯದ ಈ ಹೊಸ ಗುರುತು ಆಡಳಿತದ ಪ್ರತಿ ಕಾರ್ಯದಲ್ಲೂ ಅಗ್ರಗಣ್ಯವಾಗಿದೆ. ದೇಶದ ಯಾವುದೇ ಭಾಗದಲ್ಲಿ ಅಥವಾ ರಾಜ್ಯದಲ್ಲಿ ಕೇಂದ್ರ ಸರಕಾರದ ಕಾರ್ಯಕ್ರಮದಳು ಅಥವಾ ಯೋಜನೆಗಳ ಕಾಮಗಾರಿ ಆರಂಭವಾದಾಗ ಅಥವಾ ಕಾಮಗಾರಿ ಪ್ರಗತಿಯಲ್ಲಿದ್ದಾಗ ಗೋವಾ ರಾಜ್ಯ ಎಲ್ಲರಿಗಿಂತ ಮೊದಲೇ ಆ ಕೆಲಸವನ್ನ ಮುಗಿಸುತ್ತದೆ. ಅದು ಈ ಸರ್ಕಾರದ ದಿಟ್ಟ ಆಡಳಿತ ವೈಖರಿಯಾಗಿದೆ. ಗೋವಾ ರಾಜ್ಯವು ಬಯಲು ಶೌಚ ಮುಕ್ತ, ಪ್ರತಿರಕ್ಷಣೆ, ‘ಹರ್ ಘರ್ ಜಲ್’, ಜನನ ಮತ್ತು ಮರಣಗಳ ನೋಂದಣಿ ಮತ್ತು ಜನರ ಜೀವನ ಸೌಕರ್ಯ ಒದಗಿಸುವ ಯೋಜನೆ ಸೇರಿದಂತೆ ಯಾವುದೇ ಯೋಜನೆ ಇರಲಿ, ಅನುಷ್ಠಾನದಲ್ಲಿ ಗೋವಾ ರಾಜ್ಯ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ಪ್ರಧಾನಿ ಉದಾಹರಣೆ ನೀಡಿದರು. ಸ್ವಯಂಪೂರ್ಣ ಗೋವಾ ಅಭಿಯಾನದ ಸಾಧನೆ ಶ್ಲಾಘನೀಯ. ರಾಜ್ಯದ ಆಡಳಿತದಲ್ಲಿನ ಸಾಧನೆಗಾಗಿ ಮುಖ್ಯಮಂತ್ರಿ ಮತ್ತು ಅವರ ತಂಡ ಮೆಚ್ಚುಗೆ ಮತ್ತು ಶ್ಲಾಘನಗೆ ಪಾತ್ರವಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು ಉತ್ತಮವಾಗಿವೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಬೇಕು ಎಂದು ಪ್ರಧಾನ ಮಂತ್ರಿ ತಿಳಿಸಿದರು.
ಪ್ರಧಾನಮಂತ್ರಿಯವರು ದಿವಂಗತ ಶ್ರೀ ಮನೋಹರ್ ಪರಿಕ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. “ನಾನು ಗೋವಾದ ಈ ಸಾಧನೆಗಳನ್ನು ನೋಡಿದಾಗ, ಈ ಹೊಸ ಗುರುತು ಬಲಗೊಳ್ಳುತ್ತಿರುವಾಗ, ನನಗೆ ನನ್ನ ಆತ್ಮೀಯ ಸ್ನೇಹಿತ ಮನೋಹರ್ ಪರಿಕ್ಕರ್ ಅವರು ನೆನಪಾಗುತ್ತಾರೆ. ಅವರು ಗೋವಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಲ್ಲದೆ, ಗೋವಾದ ಸಾಮರ್ಥ್ಯವನ್ನು ವಿಸ್ತರಿಸಿದ್ದರು. ಒಬ್ಬ ನಾಯಕ ತನ್ನ ರಾಜ್ಯಕ್ಕೆ, ತನ್ನ ಜನರಿಗೆ ತನ್ನ ಕೊನೆಯ ಉಸಿರು ಇರುವ ತನಕ ಹೇಗೆ ಶ್ರದ್ಧೆಯಿಂದ ಕೆಲಸ ಮಾಡಲು ಸಾಧ್ಯ ಎಂಬುದನ್ನು ಪರಿಕ್ಕರ್ ಜೀವನದಲ್ಲಿ ನೋಡಿದ್ದೇವೆ. ಗೋವಾದ ಜನರ ಪ್ರಾಮಾಣಿಕತೆ, ಪ್ರತಿಭೆ ಮತ್ತು ಶ್ರದ್ಧೆಯ ಪ್ರತಿಬಿಂಬವನ್ನು ರಾಷ್ಟ್ರವು ಮನೋಹರ್ ಪರಿಕ್ಕರ್ ಅವರಲ್ಲಿ ನೋಡಿದೆ ಎಂದು ಅವರು ತೀರ್ಮಾನಿಸಿದರು.
***
(Release ID: 1783365)
Visitor Counter : 229
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam