ಪ್ರಧಾನ ಮಂತ್ರಿಯವರ ಕಛೇರಿ

ಬ್ಯಾಂಕ್ ಠೇವಣಿ ವಿಮಾ ಕಾರ್ಯಕ್ರಮದ ಠೇವಣಿದಾರರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

Posted On: 12 DEC 2021 4:43PM by PIB Bengaluru

ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಹಣಕಾಸು ಸಚಿವರೆ, ಹಣಕಾಸು ಖಾತೆ ಸಹಾಯಕ ಸಚಿವರೆ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರೆ, ನಬಾರ್ಡ್ ಅಧ್ಯಕ್ಷರೆ, ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ ಮತ್ತು ದೇಶದ ಬಹುದೊಡ್ಡ ಬ್ಯಾಂಕಿಂಗ್ ಸಮೂಹದ ಅಧಿಕಾರಿಗಳೇ, ನನ್ನ ಸಂಪುಟ ಸಹೋದ್ಯೋಗಿಗಳೇ, ಸಂಸದರು ಮತ್ತು ಶಾಸಕರೇ, ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಠೇವಣಿದಾರರೇ ಮತ್ತು ನನ್ನ ಸಹೋದರ ಸಹೋದರಿಯರೇ...

ದೇಶದ ಬ್ಯಾಂಕಿಂಗ್ ವಲಯ ಮತ್ತು ಕೋಟ್ಯಂತರ ಬ್ಯಾಂಕ್ ಖಾತೆದಾರರಿಗೆ ಇಂದು ಮಹತ್ವಪೂರ್ಣ ದಿನ. ದಶಕಗಳ ಹಿಂದಿನ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂಬುದಕ್ಕೆ ದಿನ ಸಾಕ್ಷಿಯಾಗಿದೆ. ಠೇವಣಿದಾರರ ಮನೋಭಾವಕ್ಕೆ ಅನುಗುಣವಾಗಿ 'ಠೇವಣಿದಾರರು ಮೊದಲು' ಎಂಬ ಶೀರ್ಷಿಕೆಯಡಿ ಆಯೋಜಿತವಾಗಿರುವ ಕಾರ್ಯಕ್ರಮ ಹೆಚ್ಚು ಸೂಕ್ತವಾಗಿದೆ. ಕಳೆದ ಕೆಲವು ದಿನಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಠೇವಣಿದಾರರು ಒತ್ತಡಕ್ಕೆ ಸಿಲುಕಿರುವ ಬ್ಯಾಂಕ್‌ಗಳಿಂದ ತಮ್ಮ ಠೇವಣಿ ಹಣ ಮರಳಿ ಪಡೆದಿದ್ದಾರೆ. ಇದು 1,300 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ. ಇಂತಹ ಸುಮಾರು 3 ಲಕ್ಷ ಖಾತೆದಾರರು ಕಾರ್ಯಕ್ರಮದ ಸಮಯದಲ್ಲಿ ಮತ್ತು ನಂತರ ಅತಿ ಶೀಘ್ರದಲ್ಲೇ ಬ್ಯಾಂಕ್‌ಗಳಲ್ಲಿ ತಮ್ಮ ಠೇವಣಿ ಹಣ ಮರಳಿ ಪಡೆಯುತ್ತಾರೆ. ಇದು ನಿಜಕ್ಕೂ ಸಣ್ಣ ವಿಷಯವೇನಲ್ಲ. ಇಂದು ನಾನು ವಿಶೇಷವಾಗಿ ನಮ್ಮ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಲು ಬಯಸುತ್ತೇನೆ. ನಾವು ಸ್ವಚ್ಛತಾ ಅಭಿಯಾನ ಆರಂಭಿಸಿದಾಗ ವ್ಯಾಪಕ ಪ್ರಚಾರ ನೀಡುವಂತೆ ನಾನು ನನ್ನ ಮಾಧ್ಯಮ ಸ್ನೇಹಿತರಲ್ಲಿ ಮನವಿ ಮಾಡಿದ್ದೆ. ಅವರು ನಮಗೆ ಸಹಾಯ ಮಾಡುವುದನ್ನು ಮುಂದುವರಿಸಿದರು. ಮತ್ತೊಮ್ಮೆ, ನಾನು ಇಂದು ಅವರಲ್ಲಿ ಮನವಿ ಮಾಡುತ್ತಿದ್ದೇನೆ. ಒಂದು ಬ್ಯಾಂಕ್‌ ಪತನವಾದಾಗ, ಅದರ ಸುದ್ದಿ ಟಿವಿ ಮತ್ತು ಪತ್ರಿಕೆಗಳಲ್ಲಿ ಹಲವಾರು ದಿನಗಳವರೆಗೆ ಬರುತ್ತದೆ. ಇದು ಹೆಡ್ ಲೈನ್ಸ್ ನಲ್ಲಿ ರಾರಾಜಿಸುತ್ತದೆ. ಏಕೆಂದರೆ ಘಟನೆಯ ಸ್ವರೂಪವೇ ಹಾಗೆ ಇರುತ್ತದೆ, ಇದು ಸಹಜ. ನಿಟ್ಟಿನಲ್ಲಿ ನಾವು ಬ್ಯಾಂಕಿಂಗ್ ವಲಯದಲ್ಲಿ ಇಂದು ಬಹುದೊಡ್ಡ ಸುಧಾರಣೆಯನ್ನು ಕೈಗೊಂಡಿದ್ದೇವೆ, ದೇಶದಲ್ಲಿ ಬಲವಾದ ವ್ಯವಸ್ಥೆಯನ್ನು ರೂಪಿಸಿದ್ದೇವೆ, ಅದು ಪ್ರಾರಂಭವಾಗಿದೆ. ಠೇವಣಿದಾರರು ನಿರ್ಭೀತಿಯಿಂದ ತಮ್ಮ ಠೇವಣಿ ಹಣವನ್ನು ಮರಳಿ ಪಡೆಯುತ್ತಿದ್ದಾರೆ. ವಿಷಯವನ್ನು ಸಮಗ್ರವಾಗಿ ವರದಿ ಮಾಡುವಂತೆ, ವಿಸ್ತೃತ ಚರ್ಚೆ, ಸಮಾಲೋಚನೆ ಮತ್ತು ಸಂವಾದ ನಡೆಸುವಂತೆ ನಾನು ಮಾಧ್ಯಮಗಳಿಗೆ ಇಂದು ಮನವಿ ಮಾಡುತ್ತಿದ್ದೇನೆ. ಮೋದಿ ಇದನ್ನು ಮಾಡಿದರು ಎಂಬ ಕಾರಣಕ್ಕಾಗಿ ಅಲ್ಲ, ಠೇವಣಿದಾದರರಲ್ಲಿ ಆತ್ಮವಿಶ್ವಾಸ ಮರಳಿದೆ ಎಂಬ ಕಾರಣಕ್ಕಾಗಿ. ತಪ್ಪು ಕಾರಣಗಳು ಮತ್ತು ತಪ್ಪು ನೀತಿಗಳಿಂದಾಗಿ ಬ್ಯಾಂಕ್ ಗಳು ಮುಚ್ಚಿಹೋಗುತ್ತವೆ. ಆದರೆ ಠೇವಣಿದಾರರ ಹಣಕ್ಕೆ ಗಂಡಾಂತರ ಎದುರಾಗಬಾರದು. ಇನ್ನುಮುಂದೆ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ. ಸಂದೇಶವು ದೇಶದ ಠೇವಣಿದಾರರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ತರುತ್ತದೆ, ಇದು ಬಹಳ ಮುಖ್ಯವೂ ಆಗಿದೆ.

ಸಹೋದರ, ಸಹೋದರಿಯರೇ,

ಯಾವುದೇ ಒಂದು ದೇಶವು ಸಕಾಲಿಕ ಪರಿಹಾರದ ಮೂಲಕ ಮಾತ್ರ ಸಮಸ್ಯೆಗಳನ್ನು ಉಲ್ಬಣವಾಗುವುದನ್ನು ತಡೆಯಬಹುದು. ಆದರೆ ನಾವು ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಅವುಗಳಿಂದ ತಪ್ಪಿಸಿಕೊಳ್ಳಲು ಸಮಸ್ಯೆಗಳನ್ನೇ ಮೂಲೆಗುಂಪು  ಮಾಡುತ್ತಾ ಬಂದೆವು. ಪ್ರವೃತ್ತಿಯನ್ನು ನಾವು ಬಹಳ ಕಾಲದಿಂದ ಮುಂದುವರಿಸಿಕೊಂಡು ಬಂದಿದ್ದೇವೆ ಎಂಬುದು ನಿಮಗೆಲ್ಲರಿಗೂ  ಚೆನ್ನಾಗಿ ತಿಳಿದಿದೆ. ಆದರೆ ಇಂದಿನ ನವ ಭಾರತವು ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಬದಲು, ಅವುಗಳನ್ನು ಪರಿಹರಿಸಲು ಒತ್ತು ನೀಡುತ್ತಿದೆ. ಬ್ಯಾಂಕ್ ಒತ್ತಡಕ್ಕೆ ಒಳಗಾದ ಅಥವಾ ನಷ್ಟ ಎದುರಿಸಿದ ಸಂದರ್ಭದಲ್ಲಿ ಠೇವಣಿದಾರರು ತಮ್ಮ ಸ್ವಂತ ಹಣವನ್ನು ಮರಳಿ ಪಡೆಯುವುದು ಸಾಧ್ಯವೇ ಇಲ್ಲ ಎಂಬ ಕಾಲವೊಂದಿತ್ತು. ಕಠಿಣ ಸಮಯವನ್ನು ನೀವು ನೆನಪಿಸಿಕೊಳ್ಳುತ್ತೀರಿ. ಆಗ ಠೇವಣಿದಾರರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಹಣಕ್ಕಾಗಿ ಗಲಾಟೆಯೇ ನಡೆಯುತ್ತಿತ್ತು. ಒಬ್ಬ ವ್ಯಕ್ತಿಯು ತನ್ನ ಹಣವನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಬ್ಯಾಂಕಿನಲ್ಲಿ ಠೇವಣಿ ಇಡುತ್ತಾನೆ. ಮಧ್ಯಮ ವರ್ಗದ ಕುಟುಂಬಗಳಿಗೆ ಬ್ಯಾಂಕ್ ಗಳೇ ನಂಬಿಕೆ, ಆಶಾವಾದವಾಗಿವೆ, ವಿಶೇಷವಾಗಿ ನಿಶ್ಚಿತ ಆದಾಯ ಗಳಿಸುವ ವರ್ಗಕ್ಕೆ.

ಕೆಲವು ಅಧಿಕಾರಿಗಳ ತಪ್ಪು ನೀತಿ ನಿರ್ಧಾರಗಳಿಂದಾಗಿ ಯಾವುದೇ ಬ್ಯಾಂಕ್ ನಲುಗಿ ಹೋದಾಗ ಕೇವಲ ಠೇವಣಿ ಹಣವಷ್ಟೇ ಅಲ್ಲ, ಕುಟುಂಬಗಳ ಇಡೀ ಜೀವನವೇ ಅತಂತ್ರವಾಗುತ್ತಿತ್ತು, ಬದುಕು ಕಗ್ಗತ್ತಲೆಯಂತೆ ಕಾಣುತ್ತಿತ್ತು. ಅವರು ತಮ್ಮ ಮಕ್ಕಳ ಕಾಲೇಜು ಶುಲ್ಕವನ್ನು ಎಲ್ಲಿಂದ ಪಾವತಿಸುತ್ತಾರೆ? ಅವರ ಮಕ್ಕಳ ಮದುವೆಗೆ ಹಣ ಎಲ್ಲಿಂದ ಬರುತ್ತದೆ? ವೃದ್ಧರ ಚಿಕಿತ್ಸೆಗೆ ಹಣ ಎಲ್ಲಿಂದ ಬರುತ್ತದೆ? ಒಬ್ಬ ಸಹೋದರಿಯು ಕುಟುಂಬದ ಯಾರಿಗಾದರೂ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಸಂದರ್ಭದಲ್ಲಿ ತಾನು ಎದುರಿಸಿದ ಎಲ್ಲಾ ಕಷ್ಟಗಳನ್ನು ವಿವರಿಸುತ್ತಿದ್ದಳು. ಎಲ್ಲಾ ಪ್ರಶ್ನೆಗಳಿಗೆ ಮೊದಲು ಉತ್ತರವೇ ಇರಲಿಲ್ಲ. ಜನರು ತಮ್ಮ ಸ್ವಂತ ಠೇವಣಿ ಹಣವನ್ನು ಬ್ಯಾಂಕಿನಿಂದ ಹಿಂತಿರುಗಿಸಲು ವರ್ಷಗಳೇ ಹಿಡಿಯುತ್ತಿತ್ತು. ನಮ್ಮ ಬಡ ಸಹೋದರ ಸಹೋದರಿಯರು, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ದಶಕಗಳಿಂದ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ವಿಶೇಷವಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಹಲವಾರು ಸಮಸ್ಯೆಗಳು ಉಲ್ಬಣಗೊಂಡಿವೆ. ವಿವಿಧ ನಗರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಠೇವಣಿದಾರರು ನೋವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪರಿಸ್ಥಿತಿಯನ್ನು ಬದಲಾಯಿಸಲು ನಮ್ಮ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಂಡಿತು, ಸುಧಾರಣೆಗಳನ್ನು ಕೈಗೊಂಡಿತು ಮತ್ತು ಇದಕ್ಕೆ ಪೂರಕವಾಗಿ ಕಾನೂನುಗಳಿಗೆ ಬಹುಸೂಕ್ಷ್ಮವಾಗಿ ತಿದ್ದುಪಡಿ ಮಾಡಿದೆ. ನಿರ್ಧಾರಗಳ ಫಲವೇ ಇಂದಿನ ಕಾರ್ಯಕ್ರಮವಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಬ್ಯಾಂಕ್‌ನಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಜನರು ನಮಗೆ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ಇಂತಹ ಸಮಸ್ಯೆಗಳ ಪರಿಹಾರ ನಿರ್ಧಾರವನ್ನು ಭಾರತ ಸರ್ಕಾರ ಅಥವಾ ಸಂಬಂಧಪಟ್ಟ ಬ್ಯಾಂಕುಗಳು ತೆಗೆದುಕೊಳ್ಳಬೇಕಾಗಿದ್ದರೂ, ಮುಖ್ಯಮಂತ್ರಿಗಳನ್ನು ಬಲಿಪಶುಗಳಾಗಿ ಮಾಡಲಾಗುತ್ತಿತ್ತು. ಅವರ ಹಣಕ್ಕಾಗಿ ಏನಾದರೂ ಮಾಡುವಂತೆ ಠೇವಣಿದಾರರು ನಮ್ಮನ್ನು ಬೇಡಿಕೊಳ್ಳುತ್ತಿದ್ದರು. ಇದು ಸಹಜವೂ ಆಗಿತ್ತು. ಸಮಯದಲ್ಲಿ ನಾನು, ಠೇವಣಿದಾರರ ಗರಿಷ್ಠ ಕುಟುಂಬಗಳನ್ನು ತೃಪ್ತಿಪಡಿಸುವ ಸಲುವಾಗಿ ಠೇವಣಿ ವಿಮಾ ರಕ್ಷಣೆ ಪರಿಹಾರವನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವಂತೆ ಭಾರತ ಸರ್ಕಾರವನ್ನು ಪದೇಪದೆ ಮನವಿ ಮಾಡಿದ್ದೆ. ಅವರು ನನ್ನ ಮನವಿಗೆ ಮಣಿಯಲಿಲ್ಲ, ಅವರು ಏನನ್ನೂ ಮಾಡಲಿಲ್ಲ. ಆದರೆ ಜನರು ನನ್ನನ್ನು ಇಲ್ಲಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇದೀಗ ನಾನು ಕೆಲಸವನ್ನು ಮಾಡಿ ಮುಗಿಸಿದ್ದೇನೆ.

ಸ್ನೇಹಿತರೆ,

ನಮ್ಮ ದೇಶದಲ್ಲಿ, ಬ್ಯಾಂಕ್ ಠೇವಣಿದಾರರಿಗೆ ವಿಮಾ ಪರಿಹಾರ ನೀಡಿಕೆಯ ಕಾರ್ಯ ವಿಧಾನವನ್ನು 60 ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು. ಒಂದು ರೀತಿಯಲ್ಲಿ ಸುಮಾರು 60 ವರ್ಷಗಳು ಕಳೆದಿವೆ. ಹಿಂದೆ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಮೊತ್ತದಲ್ಲಿ 50 ಸಾವಿರ ರೂಪಾಯಿವರೆಗಿನ ಮೊತ್ತಕ್ಕೆ ಮಾತ್ರ ಖಾತರಿ ನೀಡಲಾಗುತ್ತಿತ್ತುನಂತರ ಅದನ್ನು 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಅದೇನೆಂದರೆ, ಬ್ಯಾಂಕ್ ಮುಚ್ಚಿ ಹೋದರೆ ಅಥವಾ ದಿವಾಳಿಯಾದರೆ, ಠೇವಣಿದಾರರಿಗೆ ಕೇವಲ 1 ಲಕ್ಷ ರೂಪಾಯಿವರೆಗೆ ಮಾತ್ರ ಪರಿಹಾರ ಸಿಗುತ್ತಿತ್ತು. ಆದರೆ ಅವರು ಹಣವನ್ನು ಯಾವಾಗ ಪಡೆಯುತ್ತಾರೆ ಎಂಬುದು ಖಾತರಿಯಿಲ್ಲ. ಇದು 8-10 ವರ್ಷಗಳವರೆಗೆ ಬಗೆಹರಿಯದೆ ಉಳಿಯಿತು. ಸಮಯದ ಮಿತಿ ಇರಲಿಲ್ಲ. ಬಡವರು ಮತ್ತು ಮಧ್ಯಮ ವರ್ಗದವರ ಕಾಳಜಿಯನ್ನು ಪರಿಗಣಿಸಿ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಅಂದರೆ, ಇಂದು ಯಾವುದೇ ಬ್ಯಾಂಕ್ ಒತ್ತಡಕ್ಕೊಳಗಾದರೆ, ಠೇವಣಿದಾರರಿಗೆ 5 ಲಕ್ಷ ರೂಪಾಯಿವರೆಗೆ ಪರಿಹಾರ ಸಿಗುವುದು ಖಚಿತ. ವ್ಯವಸ್ಥೆಯೊಂದಿಗೆ, ಸುಮಾರು 98 ಪ್ರತಿಶತ ಜನರ ಖಾತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. 2ರಷ್ಟು ಮಾತ್ರ ಈಗ ಉಳಿದಿದೆ. ಅರ್ಥಾತ್ ಶೇ.98ರಷ್ಟು ಜನರ ಹಣಕ್ಕೆ ರಕ್ಷಣೆ ಒದಗಿಸಲಾಗಿದೆ. ಠೇವಣಿದಾರರ ಸಂಖ್ಯೆಯೂ ಅಪಾರವಾಗಿದೆ. ಭಾರತವು ಈಗ ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿದೆ. ನಿರ್ಧಾರದಿಂದ 76 ಲಕ್ಷ ಕೋಟಿ ರೂ.ಗೆ ಸಂಪೂರ್ಣ ವಿಮೆ ರಕ್ಷಣೆ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇಂತಹ ಸಮಗ್ರ ವಿಮಾ ಪರಿಹಾರ ಭದ್ರತೆ ಇಲ್ಲ.

ಸ್ನೇಹಿತರೆ,

ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ನಾವು ಇನ್ನೊಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ. ಹಿಂದೆ, ಮರುಪಾವತಿಗೆ ಸಮಯ ಮಿತಿ ಇರಲಿಲ್ಲ. ಈಗ ನಮ್ಮ ಸರ್ಕಾರವು 90 ದಿನಗಳವರೆಗೆ ಅಂದರೆ 3 ತಿಂಗಳ ಒಳಗೆ ಪರಿಹಾರ ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ದೇಶದ ಜನಸಾಮಾನ್ಯರು, ಮಧ್ಯಮ ವರ್ಗದವರು ಮತ್ತು ಬಡವರ ಬಗ್ಗೆ ನಮಗೆ ಕಾಳಜಿ ಇರುವುದರಿಂದ ನಾವು ನಮ್ಮ ಮೇಲೆ ಹೆಚ್ಚಿನ ಹೊರೆಗಳನ್ನು ಹಾಕಿಕೊಂಡಿದ್ದೇವೆ. ಇದರರ್ಥ ಬ್ಯಾಂಕ್ ದುರ್ಬಲವಾಗಿದ್ದರೆ ಮತ್ತು ದಿವಾಳಿಯಾಗುವ ಸ್ಥಿತಿಗೆ ಬಂದಿದ್ದರೆ, ಠೇವಣಿದಾರರು ತಮ್ಮ ಹಣವನ್ನು 90 ದಿನಗಳಲ್ಲಿ ಪಡೆಯುತ್ತಾರೆ. ಕಾನೂನಿನ ತಿದ್ದುಪಡಿಯಾದ 90 ದಿನಗಳಲ್ಲಿ ಸಾವಿರಾರು ಠೇವಣಿದಾರರ ಕ್ಲೇಮುಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.

ಸ್ನೇಹಿತರೆ,

ವಿದ್ವಾಂಸರು, ಬುದ್ಧಿವಂತರು ಮತ್ತು ಅರ್ಥಶಾಸ್ತ್ರಜ್ಞರು ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ವಿವರಿಸುತ್ತಾರೆ. ಆದರೆ ನಾನು ಅದನ್ನು ನನ್ನ ಸರಳ ಭಾಷೆಯಲ್ಲಿ ವಿವರಿಸುತ್ತೇನೆ. ಪ್ರತಿಯೊಂದು ದೇಶವೂ ಪ್ರಗತಿ ಬಯಸುತ್ತದೆ. ಆದರೆ ದೇಶದ ಏಳಿಗೆಯಲ್ಲಿ ಬ್ಯಾಂಕುಗಳು ದೊಡ್ಡ ಪಾತ್ರ ವಹಿಸುತ್ತವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಬ್ಯಾಂಕ್‌ಗಳ ಏಳಿಗೆಗೆ ಠೇವಣಿದಾರರ ಹಣ ಸುರಕ್ಷಿತವಾಗಿರುವುದು ಅಷ್ಟೇ ಮುಖ್ಯ. ನಾವು ಬ್ಯಾಂಕುಗಳನ್ನು ಉಳಿಸಬೇಕಾದರೆ, ಠೇವಣಿದಾರರನ್ನು ರಕ್ಷಿಸಬೇಕು. ಮೂಲಕ ನಾವು ಬ್ಯಾಂಕ್‌ಗಳು ಮತ್ತು ಠೇವಣಿದಾರರನ್ನು ಉಳಿಸಿದ್ದೇವೆ. ನಮ್ಮ ಬ್ಯಾಂಕುಗಳು ನಮ್ಮ ಠೇವಣಿದಾರರಿಗೆ ಮತ್ತು ನಮ್ಮ ಆರ್ಥಿಕತೆಗೆ ನಂಬಿಕೆಯ ದಾರಿದೀಪವಾಗಿವೆ. ಆದ್ದರಿಂದ, ನಂಬಿಕೆಯನ್ನು ಬಲಪಡಿಸಲು ನಾವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವರ್ಷಗಳಲ್ಲಿ, ಅನೇಕ ಸಣ್ಣ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಾಮರ್ಥ್ಯ ಮತ್ತು ಪಾರದರ್ಶಕತೆಯನ್ನು ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಮೂಲಕ ಬಲಪಡಿಸಲಾಗಿದೆ. ಆರ್‌ಬಿಐ ಸಹಕಾರಿ ಬ್ಯಾಂಕ್‌ಗಳ ಮೇಲೆ ನಿಗಾ ವಹಿಸಿದಾಗ ಠೇವಣಿದಾರರ ವಿಶ್ವಾಸವೂ ಹೆಚ್ಚುತ್ತದೆ. ಹೊಸ ಸಚಿವಾಲಯವನ್ನು ರಚಿಸುವ ಮೂಲಕ ನಾವು ಹೊಸ ಸಹಕಾರ ವ್ಯವಸ್ಥೆಯನ್ನು ಮಾಡಿದ್ದೇವೆ. ಸಹಕಾರಿ ಸಂಸ್ಥೆಗಳನ್ನು ಬಲಿಷ್ಠಗೊಳಿಸುವ ಉದ್ದೇಶವಿದೆ. ಸಹಕಾರ ಸಚಿವಾಲಯ ರಚನೆಯಿಂದ ಸಹಕಾರಿ ಬ್ಯಾಂಕ್‌ಗಳು ಹೆಚ್ಚು ಸಬಲೀಕರಣಗೊಳ್ಳಲಿವೆ.

ಸ್ನೇಹಿತರೆ,

ಬ್ಯಾಂಕುಗಳು ಹೆಚ್ಚು ಹಣ ಹೊಂದಿರುವವರಿಗೆ ಮಾತ್ರ ಎಂಬ ಭಾವನೆ ದಶಕಗಳಿಂದ ದೇಶದಲ್ಲಿತ್ತು. ಇದು ಶ್ರೀಮಂತರ ಮನೆಯಾಗಿತ್ತು. ಹೆಚ್ಚು ಹಣವನ್ನು ಹೊಂದಿರುವವನು ಅದನ್ನು ಠೇವಣಿ ಮಾಡುತ್ತಾನೆ. ದೊಡ್ಡ ವ್ಯಾಪಾರ ಹೊಂದಿರುವವರು ತ್ವರಿತವಾಗಿ ಹೆಚ್ಚಿನ ಸಾಲಗಳನ್ನು ಪಡೆಯುತ್ತಾರೆ. ಪಿಂಚಣಿ, ವಿಮೆಯಂತಹ ಸೌಲಭ್ಯಗಳೂ ಹಣವಿದ್ದವರಿಗೆ ಮಾತ್ರ ಎಂದು ಭಾವಿಸಲಾಗಿತ್ತು. ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ವ್ಯವಸ್ಥೆಯೂ ಸರಿಯಲ್ಲ ಅಥವಾ ಚಿಂತನೆಯೂ ಸರಿಯಲ್ಲ. ಇದನ್ನು ಬದಲಾಯಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇಂದು, ರೈತರು, ಸಣ್ಣ ವರ್ತಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಪಿಂಚಣಿ ಸೌಲಭ್ಯಗಳಿಗೆ ಜೋಡಿಸಲಾಗುತ್ತಿದೆ. ಇಂದು ದೇಶದ ಕೋಟ್ಯಂತರ ಬಡವರಿಗೆ ತಲಾ 2 ಲಕ್ಷ ರೂ. ಅಪಘಾತ ಮತ್ತು ಜೀವ ವಿಮೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿ ಸುಮಾರು 37 ಕೋಟಿ ದೇಶವಾಸಿಗಳು ರಕ್ಷಣೆ ಹೊಂದಿದ್ದಾರೆ. ಒಂದು ರೀತಿಯಲ್ಲಿ, ಈಗ ದೇಶದ ಹಣಕಾಸು ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವೀಕರಣಗೊಂಡಿದೆ.

ಸ್ನೇಹಿತರೆ,

ನಮ್ಮ ದೇಶದ ಸಮಸ್ಯೆ ಕೇವಲ ಬ್ಯಾಂಕ್ ಖಾತೆಗಳನ್ನು ತೆರೆಯುವುದಕ್ಕಷ್ಟೇ ಸೀಮಿತವಾಗಿಲ್ಲ, ದೂರದ ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವುದು ಸಹ ಆಗಿದೆ. ದೇಶದ ಪ್ರತಿಯೊಂದು ಗ್ರಾಮವು 5 ಕಿಮೀ ವ್ಯಾಪ್ತಿಯೊಳಗೆ ಬ್ಯಾಂಕ್ ಶಾಖೆ ಅಥವಾ ಬ್ಯಾಂಕಿಂಗ್ ಪ್ರತಿನಿಧಿ ಇರುವ ಸೌಲಭ್ಯಗಳನ್ನು ಹೊಂದಿದೆ. ಇಂದು ದೇಶಾದ್ಯಂತ ಸುಮಾರು 8.5 ಲಕ್ಷ ಬ್ಯಾಂಕಿಂಗ್ ಟಚ್ ಪಾಯಿಂಟ್‌ಗಳಿವೆ. ಡಿಜಿಟಲ್ ಇಂಡಿಯಾ ಮೂಲಕ ದೇಶದಲ್ಲಿ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇರ್ಪಡೆಗೆ ನಾವು ಹೊಸ ಆಯಾಮ ನೀಡಿದ್ದೇವೆ. ಇಂದು, ಭಾರತದ ಸಾಮಾನ್ಯ ನಾಗರಿಕರು ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಡಿಜಿಟಲ್‌ನಲ್ಲಿ ಸಣ್ಣ ವಹಿವಾಟುಗಳನ್ನು ಮಾಡಲು ಸಮರ್ಥರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅದರ ಬಗ್ಗೆ ಯೋಚಿಸುವುದು ಇರಲಿ, ಭಾರತದ ಸಾಮರ್ಥ್ಯವನ್ನು ಅನುಮಾನಿಸಿದ ಜನರು ಅದನ್ನು ಗೇಲಿ ಮಾಡುತ್ತಿದ್ದರು.

ಸ್ನೇಹಿತರೆ,

ನಮ್ಮ ಬ್ಯಾಂಕ್‌ಗಳ ಸಾಮರ್ಥ್ಯವನ್ನು ದೇಶದ ನಾಗರಿಕರ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗುವಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಅಥವಾ ವರ್ತಕರು ಕೂಡ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಾರೆ ಎಂದು ಯಾರಾದರೂ ಊಹಿಸಿದ್ದೀರಾ? ಅವರೂ ಯೋಚಿಸಿರಲಿಲ್ಲ, ನಾವೂ ಸಹ ಯೋಚಿಸಲಿಲ್ಲ. ಆದರೆ ಇಂದು ಅಂಥವರು ಸ್ವನಿಧಿ ಯೋಜನೆಯಡಿ ಸಾಲ ಪಡೆಯುತ್ತಿದ್ದಾರೆ, ಅವರು ತಮ್ಮ ವ್ಯವಹಾರವನ್ನು ವಿಸ್ತರಿಸುತ್ತಿದ್ದಾರೆ ಎಂದು ನಾನು ತುಂಬಾ ತೃಪ್ತಿಯಿಂದ ಹೇಳಬೇಕಾಗಿದೆ. ಎಂದೂ ಯೋಚಿಸದೇ ಇದ್ದ ಕುಟುಂಬಗಳಿಗೆ ಇಂದು ಮುದ್ರಾ ಯೋಜನೆ ಸ್ವಯಂ ಉದ್ಯೋಗಕ್ಕೆ ನೆರವಾಗುತ್ತಿದೆ. 85ರಷ್ಟು ರೈತರು, ಸಣ್ಣ ರೈತರು ಮತ್ತು ಅತಿ ಸಣ್ಣ ತುಂಡು ಭೂಮಿ ಹೊಂದಿರುವವರು, ಹಲವಾರು ಬ್ಯಾಂಕ್‌ಗಳು ಅಸ್ತಿತ್ವದಲ್ಲಿದ್ದರೂ ಹೊರಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದರು. ನಾವು ಅಂತಹ ಕೋಟಿಗಟ್ಟಲೆ ಸಣ್ಣ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಸೌಲಭ್ಯಗಳೊಂದಿಗೆ ಸಂಪರ್ಕ ಕಲ್ಪಿಸಿದ್ದೇವೆ. ನಾವು ಬ್ಯಾಂಕಿಂಗ್  ವ್ಯಾಪ್ತಿಯನ್ನು ಹೈನುಗಾರರು, ರೈತರು ಮತ್ತು ಮೀನುಗಾರರಿಗೆ ವಿಸ್ತರಿಸಿದ್ದೇವೆ. ಇಂದು ಬ್ಯಾಂಕ್‌ಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಸುಲಭ ಮತ್ತು ಅಗ್ಗದ ಸಾಲಗಳು ಸ್ನೇಹಿತರ ಜೀವನವನ್ನು ಸುಲಭಗೊಳಿಸುತ್ತಿವೆ.

ಸ್ನೇಹಿತರೆ,

ಹೆಚ್ಚು ಹೆಚ್ಚು ದೇಶವಾಸಿಗಳನ್ನು ಬ್ಯಾಂಕ್‌ಗಳೊಂದಿಗೆ ಸಂಪರ್ಕಿಸುವುದು, ಬ್ಯಾಂಕ್ ಸಾಲಗಳನ್ನು ಸುಲಭವಾಗಿ ಸಿಗುವಂತೆ ಮಾಡುವುದು, ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿಗಳನ್ನು ತ್ವರಿತವಾಗಿ ವಿಸ್ತರಿಸುವುದು ಸೇರಿದಂತೆ ಹಲವಾರು ಸುಧಾರಣೆಗಳು ಕೊರೊನಾ ಕಾಲಘಟ್ಟದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಸುಗಮವಾಗಿ ನಡೆಯಲು ಸಹಾಯ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜನರನ್ನು ಅಸಹಾಯಕರನ್ನಾಗಿ ಮಾಡದ ಬ್ಯಾಂಕಿಂಗ್ ಕ್ಷೇತ್ರದ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ನಾಗರಿಕರಿಗೆ ಸಹಾಯ ಮಾಡಲು ಹೆಣಗಾಡುತ್ತಿರುವಾಗ, ಭಾರತವು ದೇಶದ ಪ್ರತಿಯೊಂದು ವಿಭಾಗಕ್ಕೂ ತ್ವರಿತ ಗತಿಯಲ್ಲಿ ನೇರ ಸಹಾಯ ನೀಡಿತು. ನಾವು ಬ್ಯಾಂಕಿಂಗ್ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ಶಕ್ತಿಯಿಂದಾಗಿ ದೇಶವಾಸಿಗಳ ಜೀವಗಳನ್ನು ಉಳಿಸಲು ಸರ್ಕಾರವು ದೊಡ್ಡ ಸುಧಾರಣಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಇಂದು ನಮ್ಮ ಆರ್ಥಿಕತೆಯು ವೇಗವಾಗಿ ಸುಧಾರಿಸಿದೆ, ಆದರೆ ಭವಿಷ್ಯಕ್ಕಾಗಿ ನಾವು ತುಂಬಾ ಸಕಾರಾತ್ಮಕ ಸೂಚನೆಗಳನ್ನು ನೋಡಬಹುದು.

ಸಹೋದರ ಸಹೋದರಿಯರೇ,

ಹಣಕಾಸಿನ ಸೇರ್ಪಡೆ ಮತ್ತು ಸಾಲದ ಸುಲಭ ಲಭ್ಯತೆಯ ದೊಡ್ಡ ಪ್ರಯೋಜನವು ನಮ್ಮ ಸಹೋದರಿಯರು, ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಸಿಗುತ್ತಿದೆಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ನಮ್ಮ ಬಹುತೇಕ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದು ದೇಶದ ದೌರ್ಭಾಗ್ಯವಾಗಿತ್ತು. ನಮ್ಮ ತಾಯಂದಿರು ಮತ್ತು ಸಹೋದರಿಯರು ತಮ್ಮ ಸಣ್ಣ ಉಳಿತಾಯವನ್ನು ಅಡುಗೆ ಮನೆಯಲ್ಲಿ ಪಡಿತರ ಡಬ್ಬಿಗಳಲ್ಲಿ ಕೂಡಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅರ್ಧದಷ್ಟು ಜನಸಂಖ್ಯೆಯು ಸುರಕ್ಷಿತ ಠೇವಣಿಗಳಿಗಾಗಿ ಬ್ಯಾಂಕ್‌ಗಳ ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದು ಕಳವಳಕಾರಿ ಸಂಗತಿಯಾಗಿದೆ. ಜನ್ ಧನ್ ಯೋಜನೆಯು ಕಳವಳಗಳನ್ನು ನಿವಾರಿಸಿದೆ, ಇದುಪ್ರಮುಖ ಪಾತ್ರ ವಹಿಸುತ್ತಿದೆ. ಇಂದು ಅದರ ಯಶಸ್ಸು ಎಲ್ಲರ ಮುಂದಿದೆ. ಜನ್ ಧನ್ ಯೋಜನೆಯಡಿ ತೆರೆಯಲಾದ ಕೋಟಿ ಕೋಟಿ ಬ್ಯಾಂಕ್ ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಖಾತೆಗಳು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸೇರಿವೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಬ್ಯಾಂಕ್ ಖಾತೆಗಳ ಪ್ರಭಾವವನ್ನು ನಾವು ನೋಡಿದ್ದೇವೆ. ಸಮೀಕ್ಷೆ ನಡೆಸಿದಾಗ, ದೇಶದ ಸುಮಾರು 80 ಪ್ರತಿಶತ ಮಹಿಳೆಯರು ತಮ್ಮದೇ ಆದ ಬ್ಯಾಂಕ್ ಖಾತೆ ಹೊಂದಿದ್ದರು. ಪ್ರಮುಖ ವಿಷಯವೆಂದರೆ ಗ್ರಾಮೀಣ ಮಹಿಳೆಯರಿಗಾಗಿ ನಗರ ಪ್ರದೇಶದ ಮಹಿಳೆಯರಿಗಾಗಿ ಬಹುತೇಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸಕಾರಾತ್ಮಕ ಯೋಜನೆಗಳನ್ನು ನೀಡಿದಾಗ, ಸಮಾಜದಲ್ಲಿ ಇರುವ ಅಸಮಾನತೆಗಳನ್ನು ಹೋಗಲಾಡಿಸುವಲ್ಲಿ ಅವು ಬಹಳ ದೂರ ಹೋಗುತ್ತವೆ. ಸ್ವಂತ ಬ್ಯಾಂಕ್ ಖಾತೆ ಹೊಂದಿರುವುದರಿಂದ ಮಹಿಳೆಯರಲ್ಲಿ ಆರ್ಥಿಕ ಅರಿವು ಹೆಚ್ಚುವುದಲ್ಲದೆ, ಕುಟುಂಬದಲ್ಲಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸಿದೆ. ಈಗ ಕುಟುಂಬವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಅದು ತಾಯಿ ಮತ್ತು ಸಹೋದರಿಯರನ್ನು ಒಳಗೊಂಡಿರುತ್ತದೆ ಮತ್ತು ಅವರ ಅಭಿಪ್ರಾಯವನ್ನು ಸ್ವೀಕರಿಸುತ್ತಿದೆ.

ಸ್ನೇಹಿತರೆ,

ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಶೇ.70ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರು ಸಾಲ  ಪಡೆದಾಗ, ಅದನ್ನು ಮರುಪಾವತಿ ಮಾಡುವ ಅವರ ಕ್ರಮ ಶ್ಲಾಘನೀಯವಾಗಿದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಹಣವನ್ನು ಮರುಪಾವತಿಸಲು ಬುಧವಾರ ಕೊನೆಯ ದಿನಾಂಕವಾಗಿದ್ದರೆ, ಅವರು ಅದನ್ನು ಸೋಮವಾರವೇ ಮರುಪಾವತಿ ಮಾಡುತ್ತಾರೆ. ಅದೇ ರೀತಿ ಸ್ವಸಹಾಯ ಸಂಘಗಳ ಕಾರ್ಯಕ್ಷಮತೆಯೂ ಉತ್ತಮವಾಗಿದೆ. ಒಂದು ರೀತಿಯಲ್ಲಿ, ನಮ್ಮ ತಾಯಂದಿರು ಮತ್ತು ಸಹೋದರಿಯರು ಪ್ರತಿ ಪೈಸೆಯನ್ನು ಠೇವಣಿ ಮಾಡುತ್ತಾರೆ. ಪ್ರತಿಯೊಬ್ಬರ ಪ್ರಯತ್ನ ಮತ್ತು ಭಾಗವಹಿಸುವಿಕೆಯೊಂದಿಗೆ, ಆರ್ಥಿಕ ಸಬಲೀಕರಣದ ಅಭಿಯಾನವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ನನಗೆ ಖಾತ್ರಿಯಿದೆ. ನಾವೆಲ್ಲರೂ ಅದನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ.

ಸ್ನೇಹಿತರೆ,

ದೇಶದ ಗುರಿಗಳನ್ನು ಸಾಧಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಮೊದಲಿಗಿಂತ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಪ್ರತಿ ಬ್ಯಾಂಕ್ ಶಾಖೆಯು 75 ವರ್ಷಗಳಲ್ಲಿ ಅವರು ಸಾಧಿಸಿದ್ದನ್ನು ಕನಿಷ್ಠ 2 ಪಟ್ಟು ಹೆಚ್ಚಿಸುವ ಗುರಿ ಹೊಂದಿರಬೇಕು. ಪರಿಸ್ಥಿತಿ ಹೇಗೆ ಬದಲಾಗುತ್ತಿದೆ ಎಂಬುದನ್ನು ನೀವು ಕಾಣಬಹುದು. ಹಿಂದಿನ ಅನುಭವಗಳಿಂದಾಗಿ ಸಾಲ ನೀಡಲು ನಿಮ್ಮ ಹಿಂಜರಿಕೆಯಿಂದ ಹೊರಬರಬೇಕು. ದೇಶದ ದೂರದ ಪ್ರದೇಶಗಳಲ್ಲಿ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕನಸುಗಳನ್ನು ನನಸಾಗಿಸಲು ಬ್ಯಾಂಕ್‌ಗಳೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಾರೆ. ನೀವು ಮುಂದೆ ಹೋಗಿ ಜನರಿಗೆ ಸಹಾಯ ಮಾಡಿದರೆ, ಹೆಚ್ಚಿನ ಜನರ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ, ನಿಮ್ಮ ಸ್ವಂತ ಶಕ್ತಿಯೂ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳು ನಮ್ಮ ಸಣ್ಣ ಉದ್ಯಮಿಗಳು, ಮಧ್ಯಮ ವರ್ಗದ ಯುವಕರು ದೇಶವನ್ನು ಸ್ವಾವಲಂಬಿಯಾಗಿಸುವಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ಬ್ಯಾಂಕುಗಳು ಮತ್ತು ಠೇವಣಿದಾರರ ವಿಶ್ವಾಸವು ಹೊಸ ಎತ್ತರವನ್ನು ತಲುಪುತ್ತದೆ. ಇಂದಿನ ಕಾರ್ಯಕ್ರಮವು ವಿವಿಧ ಠೇವಣಿದಾರರಲ್ಲಿ ಹೊಸ ಆತ್ಮವಿಶ್ವಾಸ ತುಂಬುತ್ತದೆ. ಗಂಡಾಂತರಗಳನ್ನು ಎದುರಿಸುವ ಬ್ಯಾಂಕುಗಳ ಸಾಮರ್ಥ್ಯವು ಬಹುಪಟ್ಟು ಹೆಚ್ಚಾಗಬಹುದು. ಅದು ಈಗ ಬ್ಯಾಂಕ್‌ಗಳಿಗೂ, ಠೇವಣಿದಾರರಿಗೂ ಅವಕಾಶ ಹೆಚ್ಚಿಸಿದೆ. ಶುಭ ಸಂದರ್ಭದಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ, ಧನ್ಯವಾದಗಳು.

ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅನುವಾದ ಇದಾಗಿದೆ. ಅವರು ಹಿಂದಿಯಲ್ಲಿ ಮೂಲ ಭಾಷಣ ಮಾಡಿದ್ದಾರೆ.

***



(Release ID: 1781406) Visitor Counter : 352