ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ʻಡಿಜಿಟಲ್ ಇಂಡಿಯಾʼವು ಜನರ ಜೀವನವನ್ನು ಪರಿವರ್ತಿಸಲು, ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸಲು ಮತ್ತು ದೇಶಕ್ಕೆ ವ್ಯೂಹಾತ್ಮಕ ಅನುಕೂಲವನ್ನು ಒದಗಿಸಲು ಅಪಾರ ಕೊಡುಗೆ ನೀಡಿದೆ: ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್


ಒಂದು ವಾರ ಕಾಲ ನಡೆಯಲಿರುವ ʻಆಜಾ಼ದಿ ಕಾ ಡಿಜಿಟಲ್ ಮಹೋತ್ಸವʼ ಕ್ಕೆ ಚಾಲನೆ ನೀಡಿದ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್

ನೆರವು ಬೆಂಬಲಿತ ಮೋಡ್‌ನಲ್ಲಿ ʻಉಮಾಂಗ್‌ʼ(UMANG) ಸೇವೆಗಳ ವಿತರಣೆಗೆ ನೀತಿ ಪ್ರಕಟ

ಡಿಜಿಟಲ್ ಇಂಡಿಯಾದ 75 ಯಶೋಗಾಥೆಗಳ ಇ-ಪುಸ್ತಕ, ಭಾರತದ ಎಐ ಪ್ರಯಾಣ(75ವರ್ಷಗಳು) ಕುರಿತ ವೀಡಿಯೊ ಬಿಡುಗಡೆ

Posted On: 29 NOV 2021 2:09PM by PIB Bengaluru

ಭಾರತ ಸರಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ನವದೆಹಲಿಯ `ಇಂಡಿಯಾ ಹ್ಯಾಬಿಟಾಟ್ ಸೆಂಟರ್’ನಲ್ಲಿ 2021ರ ನವೆಂಬರ್ 29ರಂದು ಒಂದು ವಾರದ ʻಆಜಾ಼ದಿ ಕಾ ಡಿಜಿಟಲ್ ಮಹೋತ್ಸವʼಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿದ್ದ ಇತರ ಗಣ್ಯರೆಂದರೆ, ಎಲೆಕ್ಟ್ರಾನಿಕ್ಸ್‌ ಮತ್ತು ಐಟ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಜಯ್ ಸಾಹ್ನಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಡಾ. ರಾಜೇಂದ್ರ ಕುಮಾರ್, ನಾಸ್ಕಾಮ್ ಅಧ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್; ʻಮೈಗವ್ʼ (MyGov) ಮತ್ತು ಎನ್ಇಜಿಡಿ ಸಿಇಓ ಶ್ರೀ ಅಭಿಷೇಕ್ ಸಿಂಗ್.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್ ಅವರು, 2021 ಒಂದು ಗಮನಾರ್ಹ ವರ್ಷವಾಗಿದೆ ಎಂದು ಹೇಳಿದರು. ಡಿಜಿಟಲ್ ಭಾರತವು ಡಿಜಿಟಲ್ ಮೂಲಸೌಕರ್ಯ ಮತ್ತು ಸೇವೆಗಳ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ.  ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಭಾರತವು ಹೆಚ್ಚು ಆತ್ಮವಿಶ್ವಾಸ ಮತ್ತು ಹೆಚ್ಚು ಆಶಾವಾದಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಡಿಜಿಟಲ್ ಇಂಡಿಯಾ ಜನರ ಜೀವನವನ್ನು ಪರಿವರ್ತಿಸಲು, ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸಲು ಮತ್ತು ದೇಶಕ್ಕೆ ವ್ಯೂಹಾತ್ಮಕ ಅನುಕೂಲವನ್ನು ಒದಗಿಸಲು ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು. ಹೆಚ್ಚುತ್ತಿರುವ ತಂತ್ರಜ್ಞಾನದ ತೀವ್ರತೆ ಮತ್ತು ಭವಿಷ್ಯದಲ್ಲಿ ನಾಗರಿಕರ ಆಕಾಂಕ್ಷೆಗಳನ್ನು ಗುರುತಿಸಿದ ಅವರು ಕ್ಷಿಪ್ರ ಕ್ರಮ ಅಗತ್ಯವಿರುವ ಆರು ರಂಗಗಳನ್ನು ಹೆಸರಿಸಿದರು. ಅವರೆಂದರೆ-   ಸರ್ವರಿಗೂ ಸಂಪರ್ಕ, ಸರ್ಕಾರಿ ಸೇವೆಗಳು ಮತ್ತು ಉತ್ಪನ್ನಗಳ ಸ್ಮಾರ್ಟ್‌ ತಂತ್ರಜ್ಞಾನ ಆಧರಿತ ಡಿಜಿಟಲೀಕರಣ, ಭಾರತದಲ್ಲಿ ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ, ಜಾಗತಿಕ ಪ್ರಮಾಣಿತ ಕಾನೂನು, ಸುಧಾರಿತ ತಂತ್ರಜ್ಞಾನದಲ್ಲಿ ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಮತ್ತು ʻ5ಜಿʼಯಲ್ಲಿ ನಾಯಕತ್ವದ ಸ್ಥಾನ ಹಾಗೂ ವಿಶಾಲ ತಳಹದಿಯ ಕೌಶಲ್ಯ ಮತ್ತು ಪ್ರತಿಭಾ ಭಂಡಾರ. ʻಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌ʼ ಅನುಷ್ಠಾನಕ್ಕೆ ಕರೆ ನೀಡಿದರು.

ಶ್ರೀ ಅಜಯ್ ಸಾವ್ನಿ ಅವರು ಮಾತನಾಡಿ, ನಾವು ಮಾಡಿದ ಸಾಧನೆಯನ್ನು ಸಂಭ್ರಮಿಸುವ ಕ್ಷಣವಿದು ಎಂದರು. ಜೊತೆಗೆ ನಮ್ಮ ಭವಿಷ್ಯ ಮತ್ತು ನವ ಭಾರತ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸುವ ಸಮಯವೂ ಹೌದು ಎಂದರು. ಅಪಾರವಾದ ಡಿಜಿಟಲ್ ಸೇವೆಗಳು ಈಗ ಲಭ್ಯವಿವೆ. ಉದ್ಯಮದ ಸಹಭಾಗಿತ್ವದಲ್ಲಿ, ರಾಷ್ಟ್ರವ್ಯಾಪಿ ಸಾರ್ವಜನಿಕ ಡಿಜಿಟಲ್ ವೇದಿಕೆಗಳ ಮೂಲಕ ಸಾಮಾಜಿಕ ವಲಯಗಳಲ್ಲಿನ ಸೀಮಿತ ಯೋಜನೆಗಳ ಸಾಮರಸ್ಯವನ್ನು ಸಾಧಿಸಲು ಇದು ಸಕಾಲ ಎಂದು ಅವರು ಅಭಿಪ್ರಾಯಪಟ್ಟರು. ಒಂದೇ ಸೈನ್‌-ಆನ್‌ ಮೂಲಕ ಹತ್ತಾರು ಸೇವೆಗಳನ್ನು ಪಡೆಯುವ ಮತ್ತು ನೆರವು ಬೆಂಬಲಿತ ಸೇವಾ ವಿತರಣೆ ಕೇಂದ್ರಗಳಿಗೆ ಭೇಟಿ ನೀಡಲು ನಾಗರಿಕರಿಗೆ ಆಯ್ಕೆ ನೀಡುವುದನ್ನು ಒತ್ತಿ ಹೇಳಿದರು. ಭಾರತದಲ್ಲಿ ವಿಶೇಷವಾಗಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ಉತ್ಪನ್ನಗಳನ್ನು ತಯಾರಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ʻಮೈಗವ್ʼ ಮತ್ತು ʻಎನ್.ಇ.ಜಿಡಿ ಸಿಇಓ ಶ್ರೀ ಅಭಿಷೇಕ್ ಸಿಂಗ್ ಅವರು, ಡಿಜಿಟಲ್ ಪರಿವರ್ತನಾತ್ಮಕ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಡಿಜಿಟಲ್ ಇಂಡಿಯಾ ಪ್ರವರ್ತನೆಗೆ ಕೊಡುಗೆ ನೀಡುತ್ತಿರುವವರಿಗೆ ಗೌರವ ಸಲ್ಲಿಸಿದರು. ಡಿಜಿಟಲ್ ಇಂಡಿಯಾದ ದೃಷ್ಟಿಕೋನವು ಪ್ರಸ್ತುತ ಮತ್ತು ಭವಿಷ್ಯದ ಡಿಜಿಟಲ್ ಉಪಕ್ರಮಗಳಿಗೆ ಮಾರ್ಗದರ್ಶಿ ಶಕ್ತಿಯಾಗಿದೆ ಮತ್ತು ಅದನ್ನು ಸಾಕಾರಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಡಿಜಿಟಲ್ ಇಂಡಿಯಾ - ಸಾರ್ವಜನಿಕ ವೇದಿಕೆಗಳು ಮತ್ತು ರಾಜ್ಯ ಉಪಕ್ರಮಗಳು, ಎಐ, ಎಲೆಕ್ಟ್ರಾನಿಕ್‌ ಮತ್ತು ʻಐಟಿ ಸಚಿವಾಲಯದ ಸ್ಟಾರ್ಟ್ ಅಪ್‌ಹಬ್ʼ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳು, ಸಿಎಸ್ಸಿಗಳ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತವನ್ನು ಆತ್ಮನಿರ್ಭರ್ ಮಾಡುವುದು, ಸ್ವದೇಶಿ ಮೈಕ್ರೋಪ್ರೊಸೆಸರ್‌ಗಳು ಮತ್ತು ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಮೂಲಕ ನಾಗರಿಕರ ಸಬಲೀಕರಣ, ಮೈಗವ್‌ನೊಂದಿಗೆ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಡಿಜಿಟಲ್ ಪಾವತಿ ಉತ್ಸವ ಎಂಬ ವಿಷಯಗಳನ್ನು ಒಳಗೊಂಡ ಮುಂದಿನ 7 ದಿನಗಳಲ್ಲಿ ಕಾರ್ಯಕ್ರಮದ ವೇಳಾಪಟ್ಟಿಯ ಬಗ್ಗೆ ಅವರು ಸಂಕ್ಷಿಪ್ತವಾಗಿ ಮಾತನಾಡಿದರು. 50 ಮಳಿಗೆಗಳನ್ನು ಹೊಂದಿರುವ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಮತ್ತು ಸರಕಾರಿ ಶಾಲೆಗಳ ಅಗ್ರ 20 ತಂಡಗಳು ಎಐ ಸಕ್ರಿಯ ಪರಿಹಾರಗಳನ್ನು ಪ್ರದರ್ಶಿಸಲಿವೆ ಎಂದು ಅವರು ಮಾಹಿತಿ ನೀಡಿದರು.

ಭಾರತವು ವಿಶ್ವದ ಡಿಜಿಟಲ್ ತಾಣಕ್ಕೆ ಬಂದಿದೆ ಮತ್ತು ಈಗ, ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಡಾ. ರಾಜೇಂದ್ರ ಕುಮಾರ್ ಹೇಳಿದರು. ತಂತ್ರಾಂಶಗಳಿಂದ ವೇದಿಕೆಗಳಿಗೆ ತೆರಳಲು, ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲು, ಉದಯೋನ್ಮುಕ ಟೆಕ್ - ಎಐ ಮತ್ತು 5ಜಿಯಲ್ಲಿ ನೆಲೆಕಂಡುಕೊಳ್ಳಲು, ಸೈಬರ್ ಭದ್ರತೆಯಲ್ಲಿ ಪ್ರಗತಿ ಸಾಧಿಸಲು ಮತ್ತು ಡಿಜಿಟಲ್ ರಂಗದಲ್ಲಿ ವಿಶೇಷವಾಗಿ ಡೇಟಾ ರಕ್ಷಣೆಯಲ್ಲಿ ಉತ್ತಮ ಕಾನೂನು ಚೌಕಟ್ಟನ್ನು ರೂಪಿಸಲು ನಿರಂತರ ಪ್ರಯತ್ನಗ ಬಗ್ಗೆ ಅವರು ಒತ್ತು ಹೇಳಿದರು.

ಶ್ರೀಮತಿ ದೇಬ್ಜಾನಿ ಘೋಷ್ ಅವರು ಮಾತನಾಡಿ, ಸಮಗ್ರ ಅಭಿವೃದ್ಧಿಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಶ್ಲಾಘಿಸಿದರು. ಭಾರತವು ವಿಶ್ವಕ್ಕೆ ತಂತ್ರಜ್ಞಾನದ ನಿಜವಾದ ಅರ್ಥವನ್ನು ತೋರಿಸಿದೆ, ಅಂದರೆ ಸಮಗ್ರ ಅಭಿವೃದ್ಧಿ, ಸಾರ್ವಜನಿಕ ಒಳಿತಿಗಾಗಿ ಮತ್ತು ತಳಮಟ್ಟದವರನ್ನು ತಲುಪಲು ತಂತ್ರಜ್ಞಾನ ನೆರವಾಗುತ್ತಿದೆ ಎಂದರು. ಐಟಿ ಸಚಿವಾಲಯವು ಠಂಕಿಸಿರುವ ʻಟೀಮ್ ಇಂಡಿಯಾʼದ ಭಾಗವಾಗಿ ಸರಕಾರ ಮತ್ತು ಕೈಗಾರಿಕೆಗಳ  ಪಾಲುದಾರಿಕೆ ಬಗ್ಗೆಯೂ ಅವರು ಉಲ್ಲೇಖಿಸಿದರು.

ಉದ್ಘಾಟನಾ ಸಮಾರಂಭವು ʻಡಿಜಿಟಲ್ ಇಂಡಿಯಾ ಅಡಿಯಲ್ಲಿ 75 ಯಶೋಗಾಥೆಗಳುʼ, ʻಡಿಜಿಟಲ್ ಇಂಡಿಯಾ ಸಾಧನೆಗಳುʼ ಮತ್ತು ʻ75@75 ಭಾರತದ ಎಐ ಪ್ರಯಾಣʼ ಚಲನಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ನೆರವು ಬೆಂಬಲಿತ ಮೋಡ್‌ನಲ್ಲಿ ʼಉಮಾಂಗ್‌ʼ ಸೇವೆಗಳ ವಿತರಣೆಯ ನೀತಿಯನ್ನು ಸಹ ಘೋಷಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಸರಕಾರ ಮತ್ತು ನವೋದ್ಯಮಗಳ ಸುಮಾರು 50 ಮಳಿಗೆಗಳನ್ನು ಒಳಗೊಂಡ ಪ್ರದರ್ಶನ ಸಭಾಂಗಣಗಳ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದ ವಿವರವಾದ ಕಾರ್ಯಸೂಚಿಗೆ ಇಲ್ಲಿ ಕ್ಲಿಕ್ಕಿಸಿ: https://amritmahotsav.negd.in/  

ಕಾರ್ಯಕ್ರಮವನ್ನು ಡಿಜಿಟಲ್ ಇಂಡಿಯಾದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು: https://www.youtube.com/DigitalIndiaofficial/

***



(Release ID: 1776174) Visitor Counter : 853