ಪ್ರಧಾನ ಮಂತ್ರಿಯವರ ಕಛೇರಿ

ತ್ರಿಪುರಾದ ಪಿ.ಎಂ.ಎ.ವೈ-ಜಿ. ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 14 NOV 2021 5:00PM by PIB Bengaluru

ನಮಸ್ಕಾರ್! ಖುಲುಮಖಾ! ಜೈ ಮಾ ತ್ರಿಪುರ ಸುಂದರಿ!

ಕಾರ್ಯಕ್ರಮದಲ್ಲಿ ಜೊತೆಗೂಡಿರುವ ತ್ರಿಪುರಾ ಮುಖ್ಯಮಂತ್ರಿ ಶ್ರೀ ಬಿಪ್ಲಾಬ್ ದೇವ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಗಿರಿರಾಜ್ ಸಿಂಗ್ ಜೀ ಮತ್ತು ಶ್ರೀಮತಿ ಪ್ರತಿಮಾ ಭೌಮಿಕ್ ಜೀ, ತ್ರಿಪುರಾ ಉಪ ಮುಖ್ಯಮಂತ್ರಿ ಶ್ರೀ ಜಿಸ್ನು ದೇವ್ ವರ್ಮಾ ಜೀ, ಎಲ್ಲಾ ಸಂಸತ್ ಸದಸ್ಯರೇ, ಶಾಸಕರೇ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರೇ, ಪಂಚಾಯತ್ ಗಳ ಸದಸ್ಯರೇ, ಕಠಿಣ ಪರಿಶ್ರಮಿಯಾಗಿರುವಂತಹ ಉತ್ಸಾಹಭರಿತರಾಗಿರುವ ನನ್ನ ಸಹೋದರರೇ ಮತ್ತು ಸಹೋದರಿಯರೇ ಹಾಗು ನನ್ನ ಯುವ ಮಿತ್ರರೇ.

ತ್ರಿಪುರಾದ ನನ್ನ ಸ್ನೇಹಿತರ ಜೊತೆ ಮಾತನಾಡುವಾಗ  ನನ್ನ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಯಾರೊಂದಿಗೆಲ್ಲ ನಾನು ಮಾತನಾಡಿದ್ದೇನೋ , ಆಗೆಲ್ಲ ನನಗೆ ಒಳ್ಳೆಯ ಭಾವನೆ ಮೂಡಿದೆ. ಅಭಿವೃದ್ಧಿಯ ಹೊಳಪು, ಸ್ವಂತ ಮನೆಯ ಆತ್ಮವಿಶ್ವಾಸ ಮತ್ತು ಘನತೆಯುಕ್ತ ಜೀವನ ತ್ರಿಪುರಾವನ್ನು ಮತ್ತು ಇಡೀ ಈಶಾನ್ಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಬರಲಿರುವ ದಿನಗಳಲ್ಲಿ ನಾವು ತ್ರಿಪುರಾದ ಅಭಿವೃದ್ಧಿಯನ್ನು ಹೊಸ ಧೋರಣೆಯೊಂದಿಗೆ ಕಲ್ಪಿಸಿಕೊಳ್ಳಬಹುದು.

ಸ್ನೇಹಿತರೇ

ನಮ್ಮ ಜೀವನದಲ್ಲಿ ಬಹಳ ದೊಡ್ದ ಬದಲಾವಣೆ ಆದಾಗ ಅಥವಾ ನಾವು ದೊಡ್ಡ ಯಶಸ್ಸನ್ನು ಪಡೆದಾಗ ಅದು ಸಹಜವಾಗಿ ನಮಗೆ ಉತ್ಸಾಹ ಮತ್ತು ಶಕ್ತಿಯನ್ನು ನೀಡುತ್ತದೆ. ಆದರೆ ಬಹಳ ದೀರ್ಘ ಕಾಲದ ಕಾಯುವಿಕೆಯ ಬಳಿಕ ಮತ್ತು ವರ್ಷಗಳ ಕತ್ತಲೆಯ ಬಳಿಕ ಯಶಸ್ಸು ಅಥವಾ ಭರವಸೆಯ ಹೊಸ ಬೆಳಕು ಗೋಚರಿಸಿದಾಗ ಕಿರಣಗಳ ಬೆಳಕು ಹಲವು ಪಟ್ಟು ಹೆಚ್ಚಾಗಿ ಕಾಣಿಸುತ್ತದೆ. ನಮಗೆ ಬಿಪ್ಲಾಬ್ ದೇಬ್ ಜೀ ಅವರ ಜೊತೆ ಒಗ್ಗೂಡಿ ಕೆಲಸ ಮಾಡುವ ಅವಕಾಶ ಸಿಕ್ಕಿದಾಗ ಬೆಳಕು ನಿರಂತರವಾಗಿ ಹೆಚ್ಚಾಗುತ್ತಿದೆ. ಇಂದು ನಮ್ಮ ತ್ರಿಪುರಾ ಮತ್ತು ಇಡೀ ಈಶಾನ್ಯ ಇಂತಹ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.

ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನಾದ ಮೊದಲ ಕಂತಿನ ಹಣ ತ್ರಿಪುರಾದ ಕನಸುಗಳಿಗೆ ಹೊಸ ವೇಗವನ್ನು ಕೊಟ್ಟಿದೆ. ನಾನು ಮೊದಲ ಕಂತಿನ ಹಣ ಪಡೆದುಕೊಂಡ 1.5ಲಕ್ಷ ಕುಟುಂಬಗಳ ಸಹಿತ ತ್ರಿಪುರಾದ ಜನತೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಆಡಳಿತದ ಸಂಸ್ಕೃತಿ ಮತ್ತು ಹಳೆಯ ಮನಸ್ಥಿತಿ, ಧೋರಣೆಯನ್ನು ಬದಲಾಯಿಸಿದುದಕ್ಕಾಗಿ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಜೀ ಮತ್ತು ಅವರ ಸರಕಾರಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಿಪ್ಲಾಬ್ ದೇವ್ ಜೀ ಅವರು ಕಾರ್ಯಾಚರಿಸುತ್ತಿರುವಂತಹದೇ ರೀತಿಯ ಯುವ ಉತ್ಸಾಹ ಮತ್ತು ಶಕ್ತಿ ಇಡೀ ತ್ರಿಪುರಾದಲ್ಲಿ ಕಾಣಸಿಗುತ್ತಿದೆ.

ಸ್ನೇಹಿತರೇ,

ತ್ರಿಪುರಾದಲ್ಲಿ ನಾಲ್ಕೈದು ವರ್ಷಗಳ ಹಿಂದೆ ದಶಕಗಳಿಂದ ವ್ಯವಸ್ಥೆಯಲ್ಲಿ ಅತಿರೇಕ ಇದೆ ಎಂದು ಜನರು ಹೇಳುತ್ತಿದ್ದುದನ್ನು ಮತ್ತು ಅದರ ಪರಿವರ್ತನೆ ಸಾಧ್ಯ ಇಲ್ಲ ಎಂದು ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಆದರೆ ತ್ರಿಪುರಾ ಬದಲಾವಣೆಯನ್ನು ಮೈಗೂಡಿಸಿಕೊಳ್ಳಲು ನಿರ್ಧರಿಸಿದಾಗ ಅದು ಅಭಿವೃದ್ಧಿಗೆ ಅಡ್ಡಿಯಾಗಿದ್ದ ಹಳೆಯ ಧೋರಣೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿತು. ಈಗ ತ್ರಿಪುರಾವನ್ನು ಬಡತನದಲ್ಲಿಡುವ ಮತ್ತು ತ್ರಿಪುರಾದ ಜನರಿಗೆ ಸೌಲಭ್ಯಗಳನ್ನು ನಿರಾಕರಿಸುವ ಧೋರಣೆಗೆ ಸ್ಥಳವಿಲ್ಲ.

ಈಗ ಡಬ್ಬಲ್ ಇಂಜಿನ್ ಗಳ ಸರಕಾರ ರಾಜ್ಯದ ಅಭಿವೃದ್ಧಿಯಲ್ಲಿ ಪೂರ್ಣ ಬಲ ಮತ್ತು ವಿಶ್ವಾಸದಿಂದ ತೊಡಗಿಸಿಕೊಂಡಿದೆ. ಈಗ ಅಗರ್ತಾಲಾ ಮತ್ತು ದಿಲ್ಲಿಗಳು ಒಗ್ಗೂಡಿ ನೀತಿಗಳನ್ನು ರೂಪಿಸುತ್ತಿವೆ ಮತ್ತು ತ್ರಿಪುರಾ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮವನ್ನು ಹಾಕುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ತ್ರಿಪುರಾದ ಗ್ರಾಮಗಳಲ್ಲಿರುವ ಸುಮಾರು 50,000 ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಪಕ್ಕಾ ಮನೆಗಳನ್ನು ಕೊಡಲಾಗಿದೆ. ಸುಮಾರು 1.60 ಲಕ್ಷ ಹೊಸ ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಅನುಮೋದನೆ ನೀಡಲಾಗಿರುವ ಮನೆಗಳ ಪೈಕಿ 1.5 ಲಕ್ಷ ಕುಟುಂಬಗಳಿಗೆ ಇಂದು ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಮತ್ತು ಅದೂ ಏಕಕಾಲಕ್ಕೆ, ಒಂದು ಗುಂಡಿಯನ್ನು ಒತ್ತುವುದರ ಮೂಲಕ!

ತ್ರಿಪುರಾದ ಉತ್ಸಾಹ ಮತ್ತು ವೇಗ ಕೊರೊನಾ ವಿರುದ್ಧದ ಹೋರಾಟದಲ್ಲಿಯೂ ಕಂಡುಬಂದಿದೆ. 45 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯ ಜನರಿಗೆ 100% ಲಸಿಕಾಕರಣ ಗುರಿಯನ್ನು ಮೊದಲು ಸಾಧಿಸಿದ ದಾಖಲೆ ತ್ರಿಪುರಾದ್ದು. ಮತ್ತು ಈಗ ತ್ರಿಪುರಾವು 18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಲಸಿಕಾಕರಣ ಮಾಡುವ ಗುರಿ ಸಾಧನೆಯ ಹತ್ತಿರದಲ್ಲಿದೆ.

ಸ್ನೇಹಿತರೇ,

ಮೊದಲು ದೇಶದ ಪಶ್ಚಿಮ ಮತ್ತು ಉತ್ತರ ಭಾಗದ ನಮ್ಮ ನದಿಗಳು ಪೂರ್ವಕ್ಕೆ ಬರುತ್ತಿದ್ದವು. ಆದರೆ ಅಭಿವೃದ್ಧಿಯು ಅವುಗಳು ಇಲ್ಲಿಗೆ ತಲುಪುವುದನ್ನು ತಡೆಯುತ್ತವೆ. ದೇಶದ ಒಟ್ಟು ಅಭಿವೃದ್ಧಿ ಎಂಬುದು ಒಂದೊತ್ತಿನ ಊಟದಂತಾಗಿತ್ತು, ಮತ್ತು ಅದನ್ನು ರಾಜಕೀಯ ಕನ್ನಡಕದಿಂದ ನೋಡಲಾಗುತ್ತಿತ್ತು. ಅದರಿಂದಾಗಿ ನಮ್ಮ ಈಶಾನ್ಯ ನಿರ್ಲಕ್ಷಿತವಾಗುಳಿದಿತ್ತು. ಆದರೆ ಇಂದು ದೇಶದ ಅಭಿವೃದ್ಧಿಯನ್ನುಏಕ ಭಾರತ್, ಶ್ರೇಷ್ಟ ಭಾರತ್ಎಂಬ ಸ್ಪೂರ್ತಿಯಿಂದ ನೋಡಲಾಗುತ್ತದೆ. ಅಭಿವೃದ್ಧಿಯನ್ನೀಗ ದೇಶದ ಸಮಗ್ರತೆ ಮತ್ತು ಏಕತೆಯ ಜೊತೆ ಸಮೀಕರಿಸಿ ನೋಡಲಾಗುತ್ತದೆ.

ಮೊದಲು ನೀತಿಗಳು ದಿಲ್ಲಿಯ ಮುಚ್ಚಿದ ಕೋಣೆಗಳಲ್ಲಿ ರೂಪಿಸಲ್ಪಡುತ್ತಿದ್ದವು. ಮತ್ತು ಅವುಗಳಲ್ಲಿ ಈಶಾನ್ಯವನ್ನು ಅಡಕಗೊಳಿಸಲಾಗುತ್ತಿರಲಿಲ್ಲ. ಇದರಿಂದಾಗಿ ಪ್ರತ್ಯೇಕತೆಯ ಭಾವನೆ ಮೊಳೆಯಿತು. ಆದುದರಿಂದ  ದೇಶವು ಹೊಸ ಚಿಂತನೆಯನ್ನು ಮತ್ತು ಧೋರಣೆಯನ್ನು ಕಳೆದ ಏಳು ವರ್ಷಗಳಲ್ಲಿ ರೂಢಿಸಿಕೊಂಡಿತು. ಈಗ ನೀತಿಗಳನ್ನು ದಿಲ್ಲಿಯ ಚಿಂತನೆಯ ಅನ್ವಯ ರೂಪಿಸದೆ, ರಾಜ್ಯಗಳ ಅವಶ್ಯಕತೆಯ ಅನ್ವಯ ರೂಪಿಸಲಾಗುತ್ತಿದೆ.

ಉದಾಹರಣೆಗೆ  ಪ್ರಧಾನ ಮಂತ್ರಿ ಅವರ ಆವಾಸ್ ಯೋಜನಾವನ್ನು ತೆಗೆದುಕೊಳ್ಳಿ. ಪಕ್ಕಾ ಮನೆಗಳಿಗೆ ಸಂಬಂಧಿಸಿ ಕೆಲವು ನಿರ್ದಿಷ್ಟ ನಿಯಮಗಳು ತ್ರಿಪುರಾದ ಲಕ್ಷಾಂತರ ಕುಟುಂಬಗಳಿಗೆ ತೊಂದರೆ ನೀಡುತ್ತಿದ್ದವು. ಸರಕಾರವು ತ್ರಿಪುರಾದ ಭೌಗೋಳಿಕ ಪರಿಸ್ಥಿತಿಗಳನ್ನು ಮನಗಂಡು ಅದಕ್ಕನುಗುಣವಾಗಿ ನಿಯಮಗಳನ್ನು ಬದಲಾಯಿಸಿತು ಮತ್ತು ಅವಶ್ಯ ನೀತಿಗಳನ್ನು ರೂಪಿಸಿತು. ಇದರ ಪರಿಣಾಮವಾಗಿ ಸಾವಿರಾರು ಹೊಸ ಕುಟುಂಬಗಳು ಯೋಜನೆಯ ಪ್ರಯೋಜನವನ್ನು ಪಡೆಯುತ್ತಿವೆ. ಅಭಿವೃದ್ಧಿಗೆ ಸೂಕ್ಷ್ಮತ್ವ ಬಹಳ ಮುಖ್ಯ. ನಾವು ಪರಿಸರದತ್ತಲೂ ಗಮನ ನೀಡಿದ್ದೇವೆ ಮತ್ತು ಹೊಸ ಮನೆಗಳಿಗೆ ಸಂಬಂಧಿಸಿ ಬದುಕುವ ಸ್ಥಿತಿಯ ಬಗ್ಗೆಯೂ ಗಮನ ನೀಡಿದ್ದೇವೆ. ನಾವು ಮನೆಗಳ ಗಾತ್ರವನ್ನು ಹೆಚ್ಚಿಸಿದ್ದೇವೆ ಮತ್ತು ಅವುಗಳಿಗೆ ಹೊಸ ಸವಲತ್ತುಗಳನ್ನು ಸೇರಿಸಿದ್ದೇವೆ.

ಸ್ನೇಹಿತರೇ,

ನಾನು ದೇಶಕ್ಕೆ ಆಗಾಗ ಪಿ.ಎಂ. ಆವಾಸ್ ಯೋಜನಾದ ಶಕ್ತಿಯನ್ನು ಹೇಳುತ್ತಿರುತ್ತೇನೆ. ಮತ್ತು ನಾನಿದನ್ನು ತ್ರಿಪುರ ಸುಂದರಿಯ ಆಶೀರ್ವಾದ ಇರುವ ಸ್ಥಳದಲ್ಲಿ ನಾನಿದನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಶತಮಾನಗಳಿಂದ ಹಳೆಯ ಚಿಂತನೆಗಳಿಂದಾಗಿ ಮಹಿಳೆಯರ ಹೆಸರಿನಲ್ಲಿ ಆಸ್ತಿಗಳು ಅಥವಾ ಮನೆಗಳು ಇರುತ್ತಿರಲಿಲ್ಲ. ಪಿ.ಎಂ.ಆವಾಸ್ ಯೋಜನಾ ಚಿಂತನೆಯನ್ನು ಬದಲಾಯಿಸಲು ಸಹಕಾರಿಯಾಯಿತು. ನಮ್ಮ ಸಹೋದರಿಯರು, ಹೆಣ್ಣು ಮಕ್ಕಳು, ಮತ್ತು ತಾಯಂದಿರು ಈಗ ಯೋಜನೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳ ಮಾಲಕತ್ವ ಹಕ್ಕನ್ನು ಪಡೆಯುತ್ತಿದ್ದಾರೆ. ಅವರು ಕಾನೂನು ಬದ್ಧ ಪತ್ರಗಳ ಮಾಲಕರೂ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಿ.ಎಂ.ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣವಾದ ಮನೆಗಳಿಗೆ ಅಡುಗೆ ಅನಿಲ, ವಿದ್ಯುತ್ ಮತ್ತು ನೀರಿನ ಸಂಪರ್ಕಗಳ ಸವಲತ್ತುಗಳನ್ನು ಒದಗಿಸುತ್ತಿರುವುದರಿಂದ  ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಬಹಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ,

ಭಾರತದ ಆತ್ಮವಿಶ್ವಾಸಯುಕ್ತ ಮಹಿಳಾ ಶಕ್ತಿಯು ಭಾರತದ ಅಭಿವೃದ್ಧಿಯಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಿದೆ. ಮಹಿಳಾ ಶಕ್ತಿಯ ಬಹಳ ದೊಡ್ಡ ಸಂಕೇತವೆಂದರೆ ಮಹಿಳಾ ಸ್ವಸಹಾಯ ಗುಂಪುಗಳು. ನಾವು ಸ್ವ ಸಹಾಯ ಗುಂಪುಗಳ ಸಹೋದರಿಯರನ್ನು ಜನ ಧನ್ ಖಾತೆಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಿದ್ದೇವೆ. ಅವರಿಗೆ ಭದ್ರತೆ ರಹಿತ ಸಾಲದ  ಪ್ರಮಾಣವನ್ನೂ ಗಮನೀಯವಾಗಿ ಹೆಚ್ಚಿಸಲಾಗಿದೆ. ಮೊದಲು ಪ್ರತೀ ಸ್ವ ಸಹಾಯ ಗುಂಪು ಭದ್ರತೆ ರಹಿತವಾಗಿ 10 ಲಕ್ಷ ರೂ ಗಳವರೆಗೆ ಸಾಲ ಪಡೆಯಬಹುದಾಗಿತ್ತು. ಈಗ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ ಅಂದರೆ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಮಹಿಳೆಯರ ಸಶಕ್ತೀಕರಣಕ್ಕಾಗಿ ತ್ರಿಪುರಾ ಸರಕಾರ ಪೂರ್ಣ ಶಕ್ತಿಯೊಂದಿಗೆ ದುಡಿಯುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಮೊದಲು ಇಲ್ಲಿದ್ದ ಸರಕಾರದ ಐದು ವರ್ಷಗಳ ಅವಧಿಯಲ್ಲಿ..ನಾನು ಬಿಪ್ಲಾಬ್ ದೇಬ್ ಜೀ ಬರುವುದಕ್ಕೆ ಮೊದಲು ಇದ್ದ ಸರಕಾರದ ಬಗ್ಗೆ ಮಾತನಾಡುತ್ತಿದ್ದೇನೆ...ತ್ರಿಪುರಾದಲ್ಲಿ ಬರೇ 4,000 ಮಹಿಳಾ ಸ್ವಸಹಾಯ ಗುಂಪುಗಳಿದ್ದವು. 2018 ರಲ್ಲಿ ಎರಡು ಇಂಜಿನ್ ಗಳ ಸರಕಾರ ಸ್ಥಾಪನೆಯಾದ ಬಳಿಕ  26,000ಕ್ಕೂ ಅಧಿಕ  ಹೊಸ ಮಹಿಳಾ ಸ್ವ ಸಹಾಯ ಗುಂಪುಗಳು ರಚನೆಯಾದವು. ಸ್ವ ಸಹಾಯ ಗುಂಪುಗಳ ಜೊತೆ ಇರುವ ಮಹಿಳೆಯರು ಕೃಷಿ, ಬಿದಿರು ಮತ್ತು ಕೈಮಗ್ಗದ ಉತ್ಪಾದನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತ್ರಿಪುರಾ ಸರಕಾರ ಅವರಿಗೆ ಹಣಕಾಸು ನೆರವು ನೀಡುತ್ತಿದೆ ಮತ್ತು ಸತತವಾಗಿ ಅವರನ್ನು ಸಶಕ್ತೀಕರಣಗೊಳಿಸುತ್ತಿದೆ.

ಸ್ನೇಹಿತರೇ,

ಬಹಳ ಕಡಿಮೆ ಅವಧಿಯಲ್ಲಿ ಭಾರೀ ಪರಿವರ್ತನೆಗಳನ್ನು ಜಾರಿಗೆ ತಂದಿರುವುದಕ್ಕೆ ಮತ್ತು ಹೊಸ ವ್ಯವಸ್ಥೆಗಳನ್ನು ರೂಪಿಸುತ್ತಿರುವುದಕ್ಕೆ ನಾನು ತ್ರಿಪುರಾವನ್ನು ಅಭಿನಂದಿಸುತ್ತೇನೆ. ಮೊದಲು ಕಮಿಷನ್ ಇಲ್ಲದೆ, ಭ್ರಷ್ಟಾಚಾರ ಇಲ್ಲದೆ  ಯಾವುದೂ ಸಾಗುತ್ತಿರಲಿಲ್ಲ. ಆದರೆ ಇಂದು ಸರಕಾರಿ ಯೋಜನೆಗಳ ಪ್ರಯೋಜನಗಳು ಡಿ.ಬಿ.ಟಿ. ಮೂಲಕ ನೇರ ನಿಮ್ಮ ಖಾತೆಗಳಿಗೆ ತಲುಪುತ್ತಿವೆ. ಮೊದಲು ಸಾಮಾನ್ಯ ಜನರು ಪ್ರತೀ ಕೆಲಸಕ್ಕೂ ಸರಕಾರಿ ಕಚೇರಿಗಳಿಗೆ ಸುತ್ತು ಬರಬೇಕಾಗುತ್ತಿತ್ತು. ಆದರೆ ಈಗ ಸರಕಾರವೇ ಸೇವೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಲು ನಿಮ್ಮಲ್ಲಿಗೆ ಬರುತ್ತದೆ.

ಮೊದಲು, ಸರಕಾರಿ ಸಿಬ್ಬಂದಿಗಳು ಸಕಾಲದಲ್ಲಿ ವೇತನ ಸಿಗುವ ಬಗ್ಗೆ ಚಿಂತೆಯಲ್ಲಿರುತ್ತಿದ್ದರು. ಅವರೀಗ 7 ನೇ ವೇತನ ಆಯೋಗದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಮೊದಲು ರೈತರು ಅವರ ಉತ್ಪಾದನೆಗಳನ್ನು ಮಾರಾಟ ಮಾಡುವ ಬಗ್ಗೆ ಚಿಂತಿಸುತ್ತಿದ್ದರು. ಆದರೆ ಈಗ ಇದೇ ಮೊದಲ ಬಾರಿಗೆ ರೈತರಿಂದ ಬೆಳೆಯನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಲಾಗುತ್ತಿದೆ. ಅದೇ ತ್ರಿಪುರಾ, ಅದೇ ಜನರು, ಅದೇ ಸಾಮರ್ಥ್ಯ, ಆದರೆ ಮೊದಲು ಉದ್ಯಮಗಳು ಇಲ್ಲಿಗೆ ಬರಲು ಇಲ್ಲಿಯ ಮುಷ್ಕರ ಸಂಸ್ಕೃತಿಯಿಂದಾಗಿ ಹಿಂದೇಟು ಹಾಕುತ್ತಿದ್ದವು. ಆದರೆ ಈಗ ತ್ರಿಪುರಾದ ರಫ್ತು ಸುಮಾರು ಐದು ಪಟ್ಟು ಹೆಚ್ಚಾಗಿದೆ.

ಸ್ನೇಹಿತರೇ,

ತ್ರಿಪುರಾದಲ್ಲಿಯ ಎರಡು ಇಂಜಿನ್ ಗಳ ಸರಕಾರದಿಂದ ಬಹಳ ಪ್ರಯೋಜನ ಪಡೆದವರಲ್ಲಿ  ಬಡವರು, ತಳವರ್ಗದವರು, ಹಿಂದುಳಿದವರು ಮತ್ತು ವಿಶೇಷವಾಗಿ ನಮ್ಮ ಬುಡಕಟ್ಟು ಸಮಾಜದ ಸಹೋದರರು ಹಾಗು ಸಹೋದರಿಯರು ಸೇರಿದ್ದಾರೆ. ನಮ್ಮ ಈಶಾನ್ಯವು ದೇಶದ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಬುಡಕಟ್ಟು ಸಂಸ್ಕೃತಿಯ ಕೇಂದ್ರವಾಗಿದೆ. ಸ್ವಾತಂತ್ರ್ಯದ ಚರಿತ್ರೆಯಲ್ಲಿ ನಮ್ಮ ಈಶಾನ್ಯದ ಬುಡಕಟ್ಟು ಹೋರಾಟಗಾರರು ಮತ್ತು ದೇಶದ ನಮ್ಮ ಬುಡಕಟ್ಟು ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಸಂಪ್ರದಾಯವನ್ನು ಗೌರವಿಸಲು ಸರಕಾರವು ನಿರಂತರವಾಗಿ ಕಾರ್ಯನಿರತವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ದೇಶವು ಇನ್ನೊಂದು ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಈಗ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ನವೆಂಬರ್ 15 ರಂದು ಜನಜಾತೀಯ ಗೌರವ ದಿನವಾಗಿ ಆಚರಿಸಲಾಗುವುದು. ಅಂದರೆ ನಾಳೆ ದೇಶಾದ್ಯಂತ ಜನಜಾತೀಯ ಗೌರವ ದಿವಸವನ್ನು ಆಚರಿಸಲಾಗುತ್ತದೆ. ಮತ್ತು ಅದು ನಿರಂತರವಾಗಿ ಆಚರಣೆಯಾಗುತ್ತದೆ. ನಮ್ಮ ಬುಡಕಟ್ಟು ಪರಂಪರೆಗೆ ಗೌರವ ಸಲ್ಲಿಸಲು ಅದು ಒಂದು ದಿನ ಮಾತ್ರವಲ್ಲ ಅದು ಸೌಹಾರ್ದಯುತ ಸಮಾಜದ  ನಿರ್ಮಾಣಕ್ಕೂ ಸಹಕಾರಿಯಾಗಲಿದೆ. ಇದು ದೇಶದ ದೃಢ ನಿರ್ಧಾರದ ಸಂಕೇತ ಕೂಡಾ. ನಮ್ಮ ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಆಗಸ್ಟ್ 15 ಕ್ಕೆ ವಿಶೇಷ ಮಹತ್ವ ಇರುವಂತೆ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಜನವರಿ 26 ಕ್ಕೆ ವಿಶೇಷ ಮಹತ್ವ ಇರುವಂತೆ, ನಮ್ಮ ಸಾಂಸ್ಕೃತಿಕ ಸಂಪ್ರದಾಯದಲ್ಲಿ ರಾಮ ನವಮಿಗೆ ಮಹತ್ವ ಇರುವಂತೆ ಮತ್ತು ಕೃಷ್ಣ ಅಷ್ಟಮಿಗೆ ನಮ್ಮ ಜೀವನದಲ್ಲಿ ಮಹತ್ವ ಇರುವಂತೆ; ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧಿಯವರ ಜನ್ಮ ದಿನವನ್ನು ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವಂತೆ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನವನ್ನು ಅಕ್ಟೋಬರ್ 31 ರಂದು ದೇಶದ ಏಕತಾ ದಿನವನ್ನಾಗಿ ಆಚರಿಸುವಂತೆಅದೇ   ರೀತಿ ನವೆಂಬರ್ 15 ನ್ನು ದೇಶದ ಸಮೃದ್ಧಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ ಮತ್ತು ಕೊಡುಗೆ ನೀಡಲಿರುವ ಬುಡಕಟ್ಟು ಜನತೆಯ ಉತ್ಸಾಹವನ್ನು ಸಂಭ್ರಮಿಸಲು ಜನಜಾತೀಯ ಗೌರವ ದಿವಸವನ್ನಾಗಿ ಆಚರಿಸಲಾಗುವುದು.

ಸ್ನೇಹಿತರೇ,

ಸ್ವಾತಂತ್ರ್ಯದ ಅಮೃತ ಮಹೋತ್ಸವವು ಈಶಾನ್ಯದ ಬಣ್ಣಗಳು ಮತ್ತು ಸಂಸ್ಕೃತಿ ಇಲ್ಲದೆ ಪೂರ್ಣವಾಗದು. ಆದುದರಿಂದ ದೇಶವು 2047 ರಲ್ಲಿ ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರ್ಣಗೊಳಿಸುವಾಗ, ಈಶಾನ್ಯವು ದೇಶದ ನಾಯಕತ್ವಕ್ಕೆ ಮತ್ತು ಅಭಿವೃದ್ಧಿಗೆ ಬಹಳ ದೊಡ್ಡ ಕಾಣಿಕೆ ಕೊಡುವಂತಾಗಬೇಕು.

ಇಂದು ಈಶಾನ್ಯದಲ್ಲಿ ಪ್ರತೀ ದಿಕ್ಕಿನಲ್ಲಿಯೂ ಮತ್ತು ಪ್ರತೀ ಆಯಾಮದಲ್ಲಿಯೂ ಅಭಿವೃದ್ಧಿ ತ್ವರಿತಗತಿಯಿಂದ ಆಗುತ್ತಿದೆ. ಪ್ರಕೃತಿ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಅಲ್ಲಿ ಹಲವಾರು ಸಾಧ್ಯತೆಗಳಿವೆ, ಭಾರತವನ್ನು ದಕ್ಷಿಣ ಏಶ್ಯಾದ ಜೊತೆ ಬೆಸೆಯಲು ಹಾದಿಗಳಿವೆ.ಅಲ್ಲಿ ಬಹಳ ವ್ಯಾಪಾರೋದ್ಯಮದ ಅವಕಾಶಗಳಿವೆ. ಆದರೆ ಇವುಗಳೆಲ್ಲ ಸಾಕಾರಗೊಳ್ಳಬೇಕಾದರೆ ಅಲ್ಲಿ ಆಧುನಿಕ ಮೂಲಸೌಕರ್ಯಗಳು ಬೇಕು ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಬೇಕು.

ಕಳೆದ ಕೆಲವು ದಶಕಗಳಲ್ಲಿ ನಿಟ್ಟಿನಲ್ಲಿ ಯಾವುದೆಲ್ಲ ಲಭ್ಯ ಇಲ್ಲವೋ ಅದನ್ನು ಇಂದು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಇಂದು ಈಶಾನ್ಯದಲ್ಲಿ ರೈಲು ಸಂಪರ್ಕ ಮತ್ತು ಹೊಸ ರೈಲು ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಹಿಂದೆ ಸಂಪರ್ಕ ಅಸಾಧ್ಯವಾಗಿದ್ದ ಸ್ಥಳಗಳಲ್ಲಿ ಹೊಸ ಹೆದ್ದಾರಿಗಳು, ಅಗಲವಾದ ರಸ್ತೆಗಳು ಮತ್ತು ಸೇತುವೆಗಳು ನಿರ್ಮಾಣವಾಗುತ್ತಿವೆ. ಇಲ್ಲಿ ತ್ರಿಪುರಾದಲ್ಲಿ ಕೂಡಾ ಹೊಸ ರೈಲ್ವೇ ಮಾರ್ಗಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿ ಬಹಳಷ್ಟು ಕೆಲಸಗಳನ್ನು ಮಾಡಲಾಗಿದೆ. ಆಧುನಿಕ ಮೂಲಸೌಕರ್ಯವು ಭವಿಷ್ಯದಲ್ಲಿ  ಈಶಾನ್ಯದ ಗುರುತಿಸುವಿಕೆ ಮತ್ತು ಪ್ರಗತಿಯನ್ನು ಮರುರೂಪಿಸಲಿದೆ.

ಮತ್ತು ನನಗೆ ಖಚಿತವಿದೆ ಈಶಾನ್ಯದ ನಿರ್ಧಾರಗಳು ಮತ್ತು ಬದಲಾವಣೆಗಳು ದೇಶವನ್ನು ಸದ್ಯೋಭವಿಷ್ಯದಲ್ಲಿ ಹೊಸ ಎತ್ತರಕ್ಕೆ ಏರಿಸಲಿವೆ.

ಸಣ್ಣ ರಾಜ್ಯವೊಂದು ಇಂತಹ ದಾಪುಗಾಲು ಹಾಕುವಂತಹ ಪ್ರಗತಿಯನ್ನು ಸಾಧಿಸುವಾಗ ಬಹಳ ಹೆಮ್ಮೆ ಮತ್ತು ಸಂತೋಷವುಂಟಾಗುತ್ತದೆ. ಎಲ್ಲಾ ಫಲಾನುಭವಿಗಳಿಗೆ, ತ್ರಿಪುರಾದ ನಾಗರಿಕರಿಗೆ, ಈಶಾನ್ಯದ ನನ್ನ ಎಲ್ಲಾ ಪ್ರೀತಿಯ ಸಹೋದರರಿಗೆ ಮತ್ತು ಸಹೋದರಿಯರಿಗೆ ನಾನು ಶುಭಾಶಯಗಳನ್ನು ಹೇಳುತ್ತೇನೆ. ನಿಮ್ಮೆಲ್ಲರಿಗೂ ಹೃದಯಸ್ಪರ್ಶೀ ಅಭಿನಂದನೆಗಳು.

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1772293) Visitor Counter : 160