ಪ್ರಧಾನ ಮಂತ್ರಿಯವರ ಕಛೇರಿ
ʻಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾʼ ಅಭಿಯಾನದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಪ್ರಧಾನಮಂತ್ರಿ ಸಂವಾದ
"ಪ್ರಕೃತಿ ಸೊಬಗು ಮತ್ತು ಉಲ್ಲಾಸ ಮಾತ್ರವಲ್ಲದೆ, ಅಭಿವೃದ್ಧಿಯ ಹೊಸ ಮಾದರಿಯಿಂದಲೂ ಗೋವಾ ಗಮನ ಸೆಳೆದಿದೆ, ಪಂಚಾಯಿತಿಯಿಂದ ಹಿಡಿದು ರಾಜ್ಯಾಡಳಿತದವರೆಗೆ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಯತ್ನಗಳ ಪ್ರತಿಫಲನ ಮತ್ತು ಏಕತೆಗೆ ಸಾಕ್ಷಿಯಾಗಿದೆ"
"ಬಯಲು ಶೌಚ ಮುಕ್ತ(ಒಡಿಎಫ್), ವಿದ್ಯುತ್, ಕೊಳವೆ ನೀರು, ಬಡವರಿಗೆ ಪಡಿತರದಂತಹ ಎಲ್ಲಾ ಪ್ರಮುಖ ಯೋಜನೆಗಳಲ್ಲಿ ಗೋವಾ ಶೇ.100 ರಷ್ಟು ಸಾಧನೆ ಮಾಡಿದೆ"
"ಸ್ವಯಂಪೂರ್ಣ ಗೋವಾ ಎಂಬುದು ಹೊಸ ʻಟೀಮ್ ಗೋವಾʼದ ತಂಡದ ಸ್ಫೂರ್ತಿಯ ಫಲವಾಗಿದೆ"
"ಗೋವಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಮೂಲಸೌಕರ್ಯಗಳು ರೈತರು, ಜಾನುವಾರು ಸಾಕಣೆಗಾರರು ಮತ್ತು ನಮ್ಮ ಮೀನುಗಾರರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ"
"ಪ್ರವಾಸೋದ್ಯಮ ಪ್ರಧಾನ ರಾಜ್ಯಗಳು ಲಸಿಕೆ ಅಭಿಯಾನದಲ್ಲಿ ವಿಶೇಷ ಗಮನ ಸೆಳೆದವು ಮತ್ತು ಈ ನಿಟ್ಟಿನಲ್ಲಿ ಗೋವಾ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ"
Posted On:
23 OCT 2021 12:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾʼ ಅಭಿಯಾನದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಗೋವಾ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಮತಿ ಇಶಾ ಸಾವಂತ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, 'ಸ್ವಯಂಪೂರ್ಣ ಮಿತ್ರ'ರಾಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಳ್ಳುವಂತೆ ಅವರನ್ನು ಕೇಳಿದರು. ಫಲಾನುಭವಿಗಳು ತಮ್ಮ ಮನೆ ಬಾಗಿಲಲ್ಲೇ ಸೇವೆಗಳು ಮತ್ತು ಪರಿಹಾರಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ʻಏಕ ಗವಾಕ್ಷಿ ಸೇವಾ ಕೇಂದ್ರʼಗಳ ಮೂಲಕ ಇದು ಸುಲಭವಾಗಿದೆ ಎಂದರು. ತಂತ್ರಜ್ಞಾನದ ಬಳಕೆಯ ಬಗ್ಗೆ ಪ್ರಧಾನಿ ಕೇಳಿದಾಗ, “ಸಹಯೋಗದ ಮಾದರಿಯಲ್ಲಿ ದತ್ತಾಂಶವನ್ನು ಸಂಗ್ರಹಿಸಿದ್ದರಿಂದ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಅಗತ್ಯ ಸೌಲಭ್ಯಗಳನ್ನು ಗುರುತಿಸಲು(ಮ್ಯಾಪಿಂಗ್) ಅನುವು ಮಾಡಿಕೊಟ್ಟಿತು ಎಂದು ಅವರು ಮಾಹಿತಿ ನೀಡಿದರು. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ತರಬೇತಿ ಮತ್ತು ಸ್ವ-ಸಹಾಯ ಗುಂಪುಗಳ ಕಾರ್ಯವಿಧಾನದ ಮೂಲಕ ಮಹಿಳೆಯರಿಗೆ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಹಾಗೂ ಬ್ರಾಂಡಿಂಗ್‌ಗೆ ಸಂಬಂಧಿಸಿದಂತೆ ಸಲಕರಣೆಗಳು ಮತ್ತು ಬೆಂಬಲವನ್ನು ನೀಡಲಾಗಿದೆ. ʻಅಟಲ್ ಇನ್‌ಕ್ಯುಬೇಷನ್ ಗುಂಪುಗಳನ್ನು ಸಹ ಬಳಸಲಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿಯವರು ತಾವು ಮುಖ್ಯಮಂತ್ರಿಯಾಗಿದ್ದಾಗಿನ ದಿನಗಳನ್ನು ನೆನಪಿಸಿಕೊಂಡರು. ಆಗ ತರಬೇತಿಯ ಮೂಲಕ ಆಹಾರ, ಅಡುಗೆ ಮುಂತಾದ ಸೇವೆಗಳಿಗಾಗಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ತರಬೇತಿ ನೀಡಿದ ಬಗ್ಗೆ ಹಾಗೂ ಪೂರಕ ವಾತಾವರಣವನ್ನು ಸೃಷ್ಟಿಸಿದ ಬಗ್ಗೆ ಮೆಲುಕು ಹಾಕಿದರು. ಉತ್ಪನ್ನಗಳಷ್ಟೇ ಅಲ್ಲದೆ, ಸೇವೆಗಳಿಗೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ಪ್ರಧಾನಿ ಸಲಹೆಯಿತ್ತರು. ಅಧಿಕಾರಶಾಹಿಯು ಸೂಕ್ಷ್ಮ ಮತ್ತು ಹೊಸತನದಶೋಧ ಮಾಡುವ ಹುರುಪು ಹೊಂದಿರಬೇಕು ಎಂದು ಕರೆ ನೀಡಿದ ಪ್ರಧಾನಿ, ಅಂತಹ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಸರಪಂಚರಾದ ಶ್ರೀ ಕಾನ್ಸ್‌ಟಾನ್ಸಿಯೊ ಮಿರಂಡಾ ಅವರು ಮಾತನಾಡಿ, ʻಸ್ವಯಂಪೂರ್ಣʼ ಅಭಿಯಾನವು ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಚಟುವಟಿಕೆಗಳಿಗೆ ಸಹಾಯ ಮಾಡಿತು ಅಗತ್ಯ ಆಧಾರಿತವಾಗಿ ರಾಜ್ಯ ಮತ್ತು ಕೇಂದ್ರದ ಯೋಜನೆಗಳನ್ನು ಗುರುತಿಸಿ, ಅವುಗಳ ಮೇಲೆ ಸಂಘಟಿತ ರೀತಿಯಲ್ಲಿ ಕೆಲಸ ಮಾಡಿದೆವು ಎಂದು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದರು. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಮಿರಂಡಾ ಅವರನ್ನು ಶ್ಲಾಘಿಸಿದ ಪ್ರಧಾನಿ, ಸ್ವಾತಂತ್ರ್ಯದ ನಂತರ ದೀರ್ಘಕಾಲದಿಂದ ನಿರ್ಲಕ್ಷಿಸಲಾದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ ಕಾರ್ಯೋನ್ಮೋಖವಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿಯವರು ಶ್ರೀ ಕುಂದನ್ ಫಲಾರಿ ಅವರೊಂದಿಗೆ ಮಾತನಾಡಿದರು. ಈ ವೇಳೆ ಕುಂದನ್ ಅವರು, ತಾವು ಮತ್ತು ಸ್ಥಳೀಯ ಆಡಳಿತವು ಸಮುದಾಯದ ಕೊನೆಯ ವ್ಯಕ್ತಿಯನ್ನು ತಲುಪಲು ಸಜ್ಜಾಗಿರುವುದಾಗಿ ಮಾಹಿತಿ ನೀಡಿದರು. ಅವರು ತಮ್ಮ ಪ್ರದೇಶದಲ್ಲಿ ʻಸ್ವಾನಿಧಿʼ ಯೋಜನೆಯನ್ನು ಜನಪ್ರಿಯಗೊಳಿಸಿದ ತಮ್ಮ ಅನುಭವವನ್ನು ವಿವರಿಸಿದರು. ಈ ಬೀದಿ ವ್ಯಾಪಾರಿಗಳು ಡಿಜಿಟಲ್ ವಹಿವಾಟನ್ನು ಬಳಸುತ್ತಿದ್ದಾರೆಯೇ ಎಂದು ಪ್ರಧಾನಮಂತ್ರಿಯವರು ವಿಚಾರಿಸಿದರು, ಏಕೆಂದರೆ ಡಿಜಿಟಲ್ ವಹಿವಾಟಿನ ಬಳಕೆಯು ವಹಿವಾಟಿನ ಇತಿಹಾಸವನ್ನು ದಾಖಲಿಸುತ್ತಿದೆ, ಇದು ಬ್ಯಾಂಕುಗಳಿಗೆ ಮತ್ತಷ್ಟು ಉತ್ತಮ ಹಣಕಾಸು ಸೌಲಭ್ಯವನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದರು. ಗೋವಾ ವಿಮೋಚನೆಯ 60ನೇ ವರ್ಷಾಚರಣೆಯ ಭಾಗವಾಗಿ, ಪ್ರತಿ ಪಂಚಾಯಿತಿಗೆ 50 ಲಕ್ಷ ರೂ. ಮತ್ತು ಪ್ರತಿ ಪುರಸಭೆಗೆ 1 ಕೋಟಿ ರೂ. ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರವು ಗೋವಾಕ್ಕೆ ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಜನರ ಆರ್ಥಿಕ ಸೇರ್ಪಡೆಗಾಗಿ ಸರ್ಕಾರದ ಪ್ರಯತ್ನಗಳ ಬಗ್ಗೆ ಮಾತನಾಡಿದ ಪ್ರಧಾನಿ, ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಮೀನುಗಾರಿಕೆ ಉದ್ಯಮಿಯಾದ ಶ್ರೀ ಲೂಯಿಸ್ ಕಾರ್ಡೋಜೋ ಅವರು ಮಾತನಾಡಿ, ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದ ಬಗ್ಗೆ ಮತ್ತು ಇನ್ಸುಲೇಟೆಡ್ ವಾಹನಗಳನ್ನು ಬಳಸುತ್ತಿರುವ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದರು. ʻಕಿಸಾನ್ ಕ್ರೆಡಿಟ್ ಕಾರ್ಡ್ʼ, ʻನಾವಿಕ್ ಆ್ಯಪ್ʼ, ದೋಣಿಗಳಿಗೆ ಹಣಕಾಸು ನೆರವು, ಮೀನುಗಾರರ ಸಮುದಾಯಕ್ಕೆ ಸಹಾಯ ಮಾಡುತ್ತಿರುವ ಯೋಜನೆಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಮೀನುಗಾರರು ಮತ್ತು ರೈತರಿಗೆ ಹೆಚ್ಚಿನ ಲಾಭ ಸಿಗುವಂತಾಗಲು ಕಚ್ಚಾ ಉತ್ಪನ್ನಗಳ ಬದಲಿಗೆ ಸಂಸ್ಕರಿಸಿದ ಉತ್ಪನ್ನಗಳನ್ನೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ತಾವು ಬಯಸುತ್ತಿರುವುದಾಗಿ ಪ್ರಧಾನಿ ಹೇಳಿದರು.
ಶ್ರೀ ರುಕಿ ಅಹ್ಮದ್ ರಾಜಾಸಾಬ್ ಅವರು ಮಾತನಾಡಿ, ʻಸ್ವಯಂಪೂರ್ಣʼ ಅಡಿಯಲ್ಲಿ ದಿವ್ಯಾಂಗ ಜನರಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ದಿವ್ಯಾಂಗ ಜನರ ಘನತೆ ಮತ್ತು ಸುಲಭ ಜೀವನಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಇತ್ತೀಚಿನ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೀಟ್‌ಗಳಿಗೆ ಕಲ್ಪಿಸಿದ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಮಾಡಿದ ಪ್ರಯತ್ನಗಳು ಮತ್ತು ಪ್ಯಾರಾ ಅಥ್ಲೀಟ್‌ಗಳ ಯಶಸ್ಸನ್ನು ಪ್ರಧಾನಿ ಮೆಲುಕು ಹಾಕಿದರು.
ಸ್ವಸಹಾಯ ಗುಂಪಿನ ಮುಖ್ಯಸ್ಥೆ ಶ್ರೀ ನಿಶಿತಾ ನಾಮದೇವ್ ಗಾವಾಸ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಸ್ವಸಹಾಯ ಗುಂಪಿನ ಉತ್ಪನ್ನಗಳು ಮತ್ತು ಅವರು ತಮ್ಮ ಉತ್ಪನ್ನಗಳ ಮಾರಾಟವನ್ನು ಮಾಡುವ ವಿಧಾನಗಳ ಬಗ್ಗೆ ಕೇಳಿದರು. ಮಹಿಳೆಯರ ಘನತೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ʻಉಜ್ವಲʼ, ʻಸ್ವಚ್ಛ ಭಾರತʼ, ʻಪ್ರಧಾನಿ ಆವಾಸ್ʼ, ʻಜನ್ ಧನ್ʼನಂತಹ ಯೋಜನೆಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಶಸ್ತ್ರ ಪಡೆಗಳು, ಕ್ರೀಡೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ದುರ್ಗೇಶ್ ಎಂ ಶಿರೋಡ್ಕರ್ ಅವರೊಂದಿಗೆ ಮಾತನಾಡಿದ ಪ್ರಧಾನಿಯವರು, ತಮ್ಮ ಗುಂಪಿನ ಡೈರಿ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ತಮ್ಮ ಗುಂಪು ʻಕಿಸಾನ್ ಕ್ರೆಡಿಟ್ ಕಾರ್ಡ್ʼನ ಲಾಭವನ್ನು ಪಡೆದುಕೊಂಡಿತು ಎಂದು ಅವರು ಮಾಹಿತಿ ನೀಡಿದರು. ಇತರ ರೈತರು ಮತ್ತು ಡೈರಿ ಉದ್ಯಮಿಗಳಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಅರಿವು ಮೂಡಿಸಿದ್ದಾಗಿ ಅವರು ಹೇಳಿದರು. ʻಕಿಸಾನ್ ಕ್ರೆಡಿಟ್ ಕಾರ್ಡ್ʼ ಯೋಜನೆಯನ್ನು ಜನಪ್ರಿಯಗೊಳಿಸಲು ಶ್ರೀ ಶಿರೋಡ್ಕರ್ ಅವರ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಆದಾಯ ಹೆಚ್ಚಳಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಬೀಜದಿಂದ ಹಿಡಿದು ಮಾರುಕಟ್ಟೆವರೆಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ʻಕಿಸಾನ್ ಕ್ರೆಡಿಟ್ ಕಾರ್ಡ್ʼ, ʻಮಣ್ಣಿನ ಆರೋಗ್ಯ ಕಾರ್ಡ್ʼ, ಯೂರಿಯಾಕ್ಕೆ ಬೇವಿನ ಲೇಪನ, ʻಇ-ನಾಮ್ʼ, ಅಧಿಕೃತ ಬೀಜಗಳು, ಕನಿಷ್ಠ ಬೆಂಬಲ ಬೆಲೆ, ಹೊಸ ಕೃಷಿ ಕಾಯಿದೆಗಳು ಈ ನಿಟ್ಟಿನಲ್ಲಿ ಸರಕಾರದ ಪ್ರಯತ್ನದ ಭಾಗವಾಗಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಗೋವಾ ಸಂತೋಷವನ್ನು ಸೂಚಿಸುತ್ತದೆ, ಗೋವಾ ಪ್ರಕೃತಿಯನ್ನು ಸೂಚಿಸುತ್ತದೆ, ಗೋವಾ ಪ್ರವಾಸೋದ್ಯಮವನ್ನು ಸೂಚಿಸುತ್ತದೆ ಎಂದು ಹೇಳಿದರು. ಆದರೆ ಇಂದು ಗೋವಾ ಅಭಿವೃದ್ಧಿಯ ಹೊಸ ಮಾದರಿಗೆ ಸಾಕ್ಷಿಯಾಗಿದೆ. ಪಂಚಾಯತ್‌ನಿಂದ ಹಿಡಿದು ರಾಜ್ಯ ಆಡಳಿತದವರೆಗೆ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಯತ್ನಗಳು ಏಕತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಗೋವಾದ ಅದ್ಭುತ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಭಾರತವು ಬಯಲು ಮಲವಿಸರ್ಜನೆಯಿಂದ ಸಂಪೂರ್ಣ ಮುಕ್ತವಾಗುವ ಗುರಿಯನ್ನು ಹೊಂದಿದೆ. ಗೋವಾ ಈ ಗುರಿಯನ್ನು 100% ಸಾಧಿಸಿದೆ. ದೇಶವು ಪ್ರತಿ ಮನೆಗೂ ವಿದ್ಯುತ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಗೋವಾ ಇದರಲ್ಲೂ ಶೇ.100ರಷ್ಟು ಗುರಿ ಸಾಧನೆ ಮಾಡಿದೆ. ʻಹರ್ ಘರ್ ಜಲʼ ಅಭಿಯಾನದಲ್ಲಿ 100% ಅನುಷ್ಠಾನವನ್ನು ಸಾಧಿಸಿದ ಮೊದಲ ರಾಜ್ಯವಾಗಿ ಗೋವಾ ಹೊರಹೊಮ್ಮಿದೆ. ಬಡವರಿಗೆ ಉಚಿತ ಪಡಿತರ ನೀಡುವ ವಿಷಯದಲ್ಲಿ ಗೋವಾ 100% ಸಾಧನೆ ಮಾಡಿದೆ ಎಂದು ಪ್ರಧಾನಿ ಶ್ಲಾಘಿಸಿದರು.
ಮಹಿಳೆಯರ ಅನುಕೂಲತೆ ಮತ್ತು ಘನತೆ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಗೋವಾ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಮತ್ತು ಅವುಗಳನ್ನು ವಿಸ್ತರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಮಹಿಳೆಯರಿಗಾಗಿ ಶೌಚಾಲಯಗಳು, ʻಉಜ್ವಲʼ ಅನಿಲ ಸಂಪರ್ಕಗಳು ಅಥವಾ ʻಜನ್ ಧನ್ʼ ಬ್ಯಾಂಕ್ ಖಾತೆಗಳಂತಹ ಸೌಲಭ್ಯಗಳನ್ನು ಒದಗಿಸುವಲ್ಲಿ ಗೋವಾ ಸರ್ಕಾರ ಉತ್ತಮ ಸಾಧನೆ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋವಾವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದ ದಿವಂಗತ ಶ್ರೀ ಮನೋಹರ್ ಪರಿಕ್ಕರ್ ಅವರನ್ನು ಪ್ರಧಾನಿ ಸ್ಮರಿಸಿದರು. ಗೋವಾದ ಪ್ರಗತಿ ಯೋಜನೆಯನ್ನು ಪ್ರಾಮಾಣಿಕವಾಗಿ ಮುಂದೆ ಕೊಂಡೊಯ್ದು ಗೋವಾಕ್ಕೆ ಹೊಸ ಎತ್ತರವನ್ನು ನೀಡಿದ ಪ್ರಸ್ತುತ ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಮೋದಿ ಶ್ಲಾಘಿಸಿದರು. ಇಂದು ಗೋವಾ ಹೊಸ ಆತ್ಮವಿಶ್ವಾಸದೊಂದಿಗೆ ಮುಂದುವರಿಯುತ್ತಿದೆ. ʻಡಬಲ್ ಎಂಜಿನ್ʼ ಸರ್ಕಾರವು ರಾಜ್ಯದ ಬೆಳವಣಿಗೆಗಾಗಿ ಸಶಕ್ತವಾಗಿ ಮತ್ತು ದೃಢನಿಶ್ಚಯದಿಂದ ಕೆಲಸ ಮಾಡುತ್ತಿದೆ. ʻಟೀಮ್ ಗೋವಾʼದ ಈ ಹೊಸ ತಂಡದ ಸ್ಫೂರ್ತಿಯ ಫಲದಿಂದಲೇ ʻಸ್ವಯಪೂರ್ಣ ಗೋವಾʼದ ಸಂಕಲ್ಪ ಸಿದ್ಧಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಗೋವಾದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಮೂಲಸೌಕರ್ಯಗಳು ರೈತರು, ಜಾನುವಾರು ಸಾಕಣೆದಾರರು ಮತ್ತು ನಮ್ಮ ಮೀನುಗಾರರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು. ಗ್ರಾಮೀಣ ಮೂಲಸೌಕರ್ಯಗಳ ಆಧುನೀಕರಣಕ್ಕಾಗಿ ಗೋವಾದ ನಿಧಿಯನ್ನು ಮೊದಲಿಗೆ ಹೋಲಿಸಿದರೆ ಈ ವರ್ಷ 5 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೀನುಗಾರರ ದೋಣಿಗಳ ಆಧುನೀಕರಣಕ್ಕಾಗಿ ವಿವಿಧ ಸಚಿವಾಲಯಗಳಿಂದ ಪ್ರತಿ ಹಂತದಲ್ಲೂ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ʻಪ್ರಧಾನಮಂತ್ರಿ ಮತ್ಸ್ಯ ಸಂಪದʼ ಯೋಜನೆಅಡಿಯಲ್ಲಿ ಗೋವಾದ ಮೀನುಗಾರರಿಗೆ ಸಾಕಷ್ಟು ಸಹಾಯ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿದ ಪ್ರಧಾನಿ, ಗೋವಾ ಸೇರಿದಂತೆ ದೇಶದ ಪ್ರವಾಸೋದ್ಯಮ ಆಧಾರಿತ ರಾಜ್ಯಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಗೋವಾಕ್ಕೂ ಸಾಕಷ್ಟು ಲಾಭವಾಗಿದೆ ಎಂದರು. ಎಲ್ಲಾ ಅರ್ಹ ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡುವಲ್ಲಿ ಹಗಲಿರುಳು ಶ್ರಮಿಸಿದ ಗೋವಾ ಸರ್ಕಾರವನ್ನು ಅವರು ಶ್ಲಾಘಿಸಿದರು.
***
(Release ID: 1766201)
Visitor Counter : 289
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam