ಪ್ರಧಾನ ಮಂತ್ರಿಯವರ ಕಛೇರಿ
28ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಎಚ್.ಆರ್.ಸಿ)ದ ಸಂಸ್ಥಾಪನಾ ದಿನ: ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಮಂತ್ರಿ
ಭಾರತದ ಸ್ವಾತಂತ್ರ್ಯ ಆಂದೋಲನ ಮತ್ತು ಅದರ ಇತಿಹಾಸ ಮಾನವ ಹಕ್ಕುಗಳಿಗೆ ಮಹತ್ವದ ಮೂಲ: ಪ್ರಧಾನಮಂತ್ರಿ
ಇಡೀ ಜಗತ್ತು ನಮ್ಮ ಬಾಪು ಅವರ ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಹೆಗ್ಗುರುತನ್ನು ನೋಡಿದೆ: ಪ್ರಧಾನಮಂತ್ರಿ
ಬಡವರ ಘನತೆಯೊಂದಿಗೆ ಮಾನವ ಹಕ್ಕುಗಳ ಪರಿಕಲ್ಪನೆ ನಿಕಟ ಬಾಂಧವ್ಯ ಹೊಂದಿದೆ: ಪ್ರಧಾನಮಂತ್ರಿ
ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದು ಮುಸ್ಲಿಂ ಮಹಿಳೆಯರಿಗೆ ನಾವು ಹೊಸ ಹಕ್ಕುಗಳನ್ನು ನೀಡಿದ್ದೇವೆ: ಪ್ರಧಾನಮಂತ್ರಿ
ಗರ್ಭಿಣಿಯರಿಗೆ ಭಾರತ 26 ವಾರ ವೇತನ ಸಹಿತ ರಜೆ ನೀಡುತ್ತಿದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಇದನ್ನು ಸಾಧಿಸಲು ಸಾಧ್ಯವಾಗಿಲ್ಲ: ಪ್ರಧಾನಮಂತ್ರಿ
ಮಾನವ ಹಕ್ಕುಗಳ ಆಯ್ದ ವ್ಯಾಖ್ಯಾನದ ವಿರುದ್ಧ ಎಚ್ಚರಿಕೆ ಅಗತ್ಯ
ಮಾನವ ಹಕ್ಕುಗಳ ಅತಿದೊಡ್ಡ ಉಲ್ಲಂಘನೆಯು ರಾಜಕೀಯ ಮತ್ತು ರಾಜಕೀಯ ಲಾಭ ಹಾಗೂ ನಷ್ಟದ ಹಿನ್ನೆಲೆಯಲ್ಲಿ ನೋಡಿದಾಗ ತಿಳಿಯುತ್ತದೆ: ಪ್ರಧಾನಮಂತ್ರಿ
ಮಾನವಾಭಿವೃದ್ಧಿಯ ಯಾನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳು ಎರಡು ಪಥಗಳು ಹಾಗೂ ಇದರಲ್ಲಿ ಮಾನವ ಘನತೆಗೆ ಸ್ಥಾನವಿದೆ: ಪ್ರಧಾನಮಂತ್ರಿ
Posted On:
12 OCT 2021 12:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 28 ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಸ್ಥಾಪನಾ ದಿನ (ಎನ್.ಎಚ್.ಆರ್.ಸಿ)ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡರು. ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಸ್ವಾತಂತ್ರ್ಯ ಆಂದೋಲನ ಮತ್ತು ಅದರ ಇತಿಹಾಸ ಮಾನವ ಹಕ್ಕುಗಳಿಗೆ ಪ್ರಮುಖ ಸ್ಫೂರ್ತಿಯಾಗಿದೆ. ಅನ್ಯಾಯ, ದೌರ್ಜನ್ಯದ ವಿರುದ್ಧ ಒಂದು ರಾಷ್ಟ್ರ ಸಂಪೂರ್ಣ ಸಮಾಜವಾಗಿ ಎದುರಿಸಿದ್ದು, ಇದು ಭಾರತದಲ್ಲಿ ಮಾನವ ಹಕ್ಕುಗಳ ಮೌಲ್ಯವಾಗಿದೆ. ಶತಮಾನಗಳಿಂದಲೂ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಹಿಂಸಾಚಾರ ಆವರಿಸಿರುವಾಗ ಭಾರತ ಇಡೀ ಜಗತ್ತಿಗೆ ಹಕ್ಕುಗಳು ಮತ್ತು ಅಹಿಂಸೆ ಪಥವನ್ನು ಅನುಸರಿಸುವಂತೆ ಸಲಹೆ ಮಾಡಿತು ಎಂದರು.
ಭಾರತವಷ್ಟೇ ಅಲ್ಲದೇ ಜಗತ್ತು ಬಾಪು ಅವರ ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳನ್ನು ನೋಡಿದೆ. ಈಗಲೂ ಮಹಾತ್ಮಾ ಗಾಂಧಿ ಅವರನ್ನು ಹಲವಾರು ಸಂದರ್ಭಗಳಲ್ಲಿ ಸ್ಮರಿಸುತ್ತೇವೆ. ಜಗತ್ತು ಭ್ರಮನಿರಸನಗೊಂಡಿದೆ ಮತ್ತು ಗೊಂದಲದಲ್ಲಿದೆ. ಆದರೆ ಭಾರತ ದೃಢವಾಗಿದೆ ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ಸೂಕ್ಷ್ಮತೆಯಿಂದಿದೆ ಎಂದು ಹೇಳಿದರು.
ಬಡವರ ಘನತೆಯೊಂದಿಗೆ ಮಾನವ ಹಕ್ಕುಗಳ ಪರಿಕಲ್ಪನೆ ನಿಕಟ ಬಾಂಧವ್ಯ ಹೊಂದಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಬಡವರಲ್ಲಿ ಬಡವರು ಸಮಾನಪಾಲು ಪಡೆಯದಿದ್ದರೆ ಆಗ ಮಾನವ ಹಕ್ಕುಗಳ ಪ್ರಶ್ನೆ ಉದ್ಭವಿಸುತ್ತದೆ. ಬಡವರ ಘನತೆ ವಿಚಾರದಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಪಟ್ಟಿ ಮಾಡಿದರು. ಬಡವರು ಶೌಚಾಲಯ ಹೊಂದಿದರೆ ಬಯಲು ಬಹಿರ್ದೆಸೆಯಿಂದ ಮುಕ್ತರಾಗಬಹುದಾಗಿದ್ದು ಇದರಿಂದ ಅವರು ಘನತೆ ಪಡೆಯಲಿದ್ದಾರೆ. ಇದೇ ರೀತಿ ಬಡವರು ಬ್ಯಾಂಕ್ ಪ್ರವೇಶಿಸಲು, ಜನ್ ಧನ್ ಖಾತೆ ತೆರೆಯಲು ಹಿಂಜರಿದರೆ ಅದು ಘನತೆಯನ್ನು ತಂದುಕೊಡುವುದಿಲ್ಲ. ರುಪೇ ಕಾರ್ಡ್, ಉಜ್ವಲ ಅನಿಲ ಸಂಪರ್ಕ ಮತ್ತು ಮಹಿಳೆಯರಿಗೆ ಪಕ್ಕಾ ಮನೆಗಳಿಗೆ ಆಸ್ತಿ ಹಕ್ಕುಗಳನ್ನು ನೀಡಿರುವುದು ಈ ಘನತೆ ವಿಚಾರದಲ್ಲಿ ಪ್ರಮುಖ ಹೆಜ್ಜೆಗಳು ಎಂದು ಹೇಳಿದರು.
ಸರ್ಕಾರದ ಕ್ರಮಗಳ ಪಟ್ಟಿಯನ್ನು ಮುಂದುವರೆಸಿದ ಪ್ರಧಾನಮಂತ್ರಿ ಅವರು, ಕಳೆದ ಕೆಲವು ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ, ವಿವಿಧ ಹಂತಗಳಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ತೊಡೆದುಹಾಕಲು ದೇಶ ಪ್ರಯತ್ನಿಸಿದೆ. “ದಶಕಗಳಿಂದ ಮುಸ್ಲೀಂ ಮಹಿಳೆಯರು ತ್ರಿವಳಿ ತಲಾಖ್ ವಿರುದ್ಧ ಕಾನೂನಿಗಾಗಿ ಒತ್ತಾಯಿಸುತ್ತಿದ್ದರು. ನಾವು ತ್ರಿವಳಿ ತಲಾಖ್ ವಿರುದ್ಧ ಮುಸ್ಲೀಂ ಮಹಿಳೆಯರಿಗೆ ಹೊಸ ಹಕ್ಕುಗಳನ್ನು ನೀಡಿದ್ದೇವೆ,” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಮಹಿಳೆಯರಿಗಾಗಿ ಹಲವಾರು ವಲಯಗಳನ್ನು ತೆರೆದಿದ್ದೇವೆ ಮತ್ತು ಅವರು ದಿನಪೂರ್ತಿ ಸೂಕ್ತ ಭದ್ರತೆಯೊಂದಿಗೆ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಗರ್ಭೀಣಿಯರಿಗೆ 26 ವಾರ ವೇತನ ಸಹಿತ ರಜೆ ನೀಡಲಾಗಿದ್ದು, ಈ ಸಾಧನೆಯನ್ನು ಸಾಧಿಸಲು ಅಭಿವೃದ್ಧಿ ಹೊಂದಿದ ದೇಶಗಳಿಂದಲೂ ಸಾಧ್ಯವಾಗಿಲ್ಲ ಎಂದರು.
ಅಂತೆಯೇ ಪ್ರಧಾನಮಂತ್ರಿ ಅವರು ಲಿಂಗತ್ವ ಅಲ್ಪಸಂಖ್ಯಾತರು, ಮಕ್ಕಳು ಮತ್ತು ಅಲೆಮಾರಿ, ಅರೆ ಅಲಮಾರಿ ಸಮುದಾಯಗಳಿಗಾಗಿ ಇರುವ ಸರ್ಕಾರದ ಕಾರ್ಯಕ್ರಮಗಳ ಪಟ್ಟಿ ಮಾಡಿದರು. ಇತ್ತೀಚಿನ ಪ್ಯಾರ-ಅಥ್ಲೀಟ್ ಗಳ ಪ್ರದರ್ಶನ ಸ್ಪೂರ್ತಿದಾಯಕವಾಗಿದೆ ಎಂದು ಸ್ಪರಿಸಿಕೊಂಡ ಪ್ರಧಾನಮಂತ್ರಿ ಅವರು, ಕೆಲ ವರ್ಷಗಳಲ್ಲಿ ದಿವ್ಯಾಂಗ ಜನರಿಗಾಗಿ ಕಾನೂನು ತರಲಾಗಿದೆ. ಇವರು ಹೊಸ ಸೌಲಭ್ಯಗಳೊಂದಿಗೆ ಸಂಪರ್ಕಿತರಾಗಿದ್ದಾರೆ. ದಿವ್ಯಾಂಗ ಸ್ನೇಹಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ ಮತ್ತು ದಿವ್ಯಾಂಗರ ಭಾಷೆಗೆ ಗುಣಮಟ್ಟ ತಂದುಕೊಟ್ಟಿದ್ದೇವೆ ಎಂದರು.
ಸಾಂಕ್ರಾಮಿಕ ಸಂದರ್ಭದಲ್ಲಿ ಬಡವರು, ಅಸಹಾಯಕರು ಮತ್ತು ಹಿರಿಯ ನಾಗರಿಕರಿಗೆ ಅವರ ಖಾತೆಗಳಿಗೆ ನೇರವಾಗಿ ಹಣಕಾಸು ಬೆಂಬಲ ಕಲ್ಪಿಸಲಾಗಿದೆ. ಒಂದು ರಾಷ್ಟ್ರ – ಒಂದು ಪಡಿತರ ಚೀಟಿಯಿಂದಾಗಿ ವಲಸೆ ಕಾರ್ಮಿಕರು ಹೆಚ್ಚಿನ ತೊಂದರೆಯಿಂದ ಪಾರಾಗಿದ್ದಾರೆ.
ಮಾನವ ಹಕ್ಕುಗಳ ಆಯ್ದ ಅರ್ಥ ವಿವರಣೆಯ ವಿರುದ್ಧ ಪ್ರಧಾನಮಂತ್ರಿ ಅವರು ಎಚ್ಚರಿಕೆ ನೀಡಿದರು ಮತ್ತು ದೇಶದ ವರ್ಚಸ್ಸನ್ನು ಕಡಿಮೆ ಮಾಡಲು ಇಂತಹವರು ಮಾನವ ಹಕ್ಕುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಜನ ತಮ್ಮ ಸ್ವಹಿತಾಸಕ್ತಿಗಾಗಿ ಮಾನವ ಹಕ್ಕುಗಳನ್ನು ತಮಗೆ ಬೇಕಾದಂತೆ ತಮ್ಮದೇ ಆದ ಕೋನಗಳಿಂದ ಅರ್ಥೈಸುತ್ತಿದ್ದಾರೆ. ಹಕ್ಕುಗಳ ಉಲ್ಲಂಘನೆಯನ್ನು ನೋಡುವ ಪ್ರವೃತ್ತಿ ಮತ್ತು ಇದೇ ರೀತಿಯ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳನ್ನು ಬಹಳವಾಗಿ ಹಾನಿಗೊಳಿಸಿದೆ ಎಂದು ಹೇಳಿದರು. ಮಾನವ ಹಕ್ಕುಗಳ ಅತಿದೊಡ್ಡ ಉಲ್ಲಂಘನೆಯು ರಾಜಕೀಯ, ರಾಜಕೀಯ ಲಾಭ ಮತ್ತು ನಷ್ಟದ ದೃಷ್ಟಿಯಿಂದ ನೋಡಿದಾಗ ತಿಳಿಯುತ್ತದೆ. ಆಯ್ದ ನಡಾವಳಿಕೆ ಪ್ರಜಾಪ್ರಭುತ್ವಕ್ಕೂ ಅಷ್ಟೇ ಹಾನಿಕಾರಕ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಮಾನವ ಹಕ್ಕುಗಳು ಕೇವಲ ಹಕ್ಕುಗಳೊಂದಿಗೆ ಮಾತ್ರ ಸಂಬಂಧಹೊಂದಿಲ್ಲ. ಇದು ನಮ್ಮ ಕರ್ತವ್ಯಗಳ ವಿಷಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. “ಹಕ್ಕುಗಳು ಮತ್ತು ಕರ್ತವ್ಯಗಳು ಮಾನವಾಭಿವೃದ್ಧಿಯಲ್ಲಿ ಎರಡು ಪಥಗಳು. ಇಲ್ಲಿ ಮಾನವನ ಘನತೆ ಅಡಗಿರುತ್ತದೆ. ಹಕ್ಕುಗಳಂತೆ ಕರ್ತವ್ಯಗಳು ಕೂಡ ಅಷ್ಟೇ ಪ್ರಮುಖವಾದದ್ದು. ಇವು ಪರಸ್ಪರ ಪೂರಕವಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿ ಚರ್ಚಿಸಬಾರದು ಎಂದು ಹೇಳಿದರು.
ಅಂತಾರಾಷ್ಟ್ರೀಯ ಸೌರ ಒಕ್ಕೂಟ, ನವೀಕರಿಸಬಹುದಾದ ಇಂಧನ ಗುರಿಗಳು ಮತ್ತು ಹೈಡ್ರೋಜನ್ ಮಿಷನ್ ನಂತಹ ಕ್ರಮಳೊಂದಿಗೆ ಭಾರತ ಸುಸ್ಥಿರ ಜೀವನ ಮತ್ತು ಪರಿಸರ ಸ್ನೇಹಿ ಬೆಳವಣಿಗೆಯ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದೆ ಎಂದು ಅವರು ಹೇಳಿದರು. ಭವಿಷ್ಯದ ಪೀಳಿಗೆಯ ಮಾನವ ಹಕ್ಕುಗಳನ್ನು ಉಲ್ಲೇಖಿಸುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಬಾಷಣವನ್ನು ಮುಕ್ತಾಯಗೊಳಿಸಿದರು.
***
(Release ID: 1763246)
Visitor Counter : 1134
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam