ಪ್ರಧಾನ ಮಂತ್ರಿಯವರ ಕಛೇರಿ

ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು (ಸಿಐಪಿಇಟಿ) ಸೆಪ್ಟೆಂಬರ್ 30ರಂದು ಉದ್ಘಾಟನೆ ಮಾಡಲಿರುವ ಪ್ರಧಾನಿ


ರಾಜಸ್ಥಾನದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

Posted On: 29 SEP 2021 12:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು (ಸಿಐಪಿಇಟಿ) ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ರಾಜಸ್ಥಾನದ ಬನ್ಸ್‌ವಾರಾ, ಸಿರೋಹಿ, ಹನುಮಾನ್‌ಗಢ ಮತ್ತು ಡೌಸಾ ಜಿಲ್ಲೆಗಳಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಿಗೆ 2021 ಸೆಪ್ಟೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

"ಜಿಲ್ಲಾ/ ರೆಫರಲ್ ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ"ಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಸೌಲಭ್ಯವಂಚಿತ, ಹಿಂದುಳಿದ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗಾಗಿ ಆದ್ಯತೆ ನೀಡಲಾಗಿದೆ. ಯೋಜನೆಯ ಮೂರು ಹಂತಗಳಲ್ಲಿ ದೇಶಾದ್ಯಂತ 157 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ.

ಸಿಐಪಿಇಟಿ ಬಗ್ಗೆ

ರಾಜಸ್ಥಾನ ಸರಕಾರ ಮತ್ತು ಭಾರತ ಸರಕಾರ ಜಂಟಿಯಾಗಿ ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು (ಸಿಪಿಇಟಿ) ಸ್ಥಾಪಿಸಿವೆ. ಇದು ಸ್ವಾವಲಂಬಿ ಸಂಸ್ಥೆಯಾಗಿದ್ದು ಪೆಟ್ರೋಕೆಮಿಕಲ್ ಮತ್ತು ಸಂಬಂಧಿತ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುತ್ತದೆ. ಇದು ನುರಿತ ತಾಂತ್ರಿಕ ವೃತ್ತಿಪರರಾಗಲು ಯುವಜನತೆಗೆ ಶಿಕ್ಷಣವನ್ನು ಒದಗಿಸುತ್ತದೆ.

ಕೇಂದ್ರ ಸಚಿವ ಶ್ರೀ ಮನ್‌ಸುಖ್ ಮಾಂಡವಿಯಾ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

***



(Release ID: 1759279) Visitor Counter : 287