ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಅಮೇರಿಕಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ಮಾತುಗಳು

Posted On: 25 SEP 2021 4:36AM by PIB Bengaluru

ಮೊದಲನೆಯದಾಗಿ, ನನಗೆ ಮಾತ್ರವಲ್ಲದೇ ನನ್ನ ನಿಯೋಗಕ್ಕೂ ಸ್ನೇಹಪರ ಆತ್ಮೀಯ ಸ್ವಾಗತ ನೀಡಿದ್ದಕ್ಕಾಗಿ ಮಾನ್ಯ ಅಧ್ಯಕ್ಷರಿಗೆ ನನ್ನ ಕೃತಜ್ಞತೆಗಳು. 
ಮಾನ್ಯ ಅಧ್ಯಕ್ಷರೇ, 2016 ರಲ್ಲಿ ಮತ್ತು ಅದಕ್ಕೂ ಮುನ್ನ 2014 ರಲ್ಲಿ ನಾವು ವಿವರವಾಗಿ ಚರ್ಚೆ ನಡೆಸುವ ಅವಕಾಶ ಪಡೆದಿದ್ದೆವು. ಆ ಸಮಯದಲ್ಲಿ ನೀವು ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧಗಳ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ರೂಪಿಸಿದ್ದಿರಿ. ನೀವು ಅದನ್ನು ಬಹಳ ವಿವರವಾಗಿ ಸ್ಪಷ್ಟಪಡಿಸಿದ್ದಿರಿ ಮತ್ತು ನಿಜವಾಗಿಯೂ ಅದೊಂದು ಸ್ಫೂರ್ತಿದಾಯಕ ದೂರದೃಷ್ಟಿಯಾಗಿತ್ತು.  ಇಂದು ಅಧ್ಯಕ್ಷರಾಗಿ ಆ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು, ನೀವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಮತ್ತು ಆ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಅದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಮಾನ್ಯ ಅಧ್ಯಕ್ಷರೇ, ನೀವು ಭಾರತದಲ್ಲಿ ಬಿಡೆನ್ ಉಪನಾಮದ ಬಗ್ಗೆ ವಿವರವಾಗಿ ಮಾತನಾಡಿದ್ದೀರಿ ಮತ್ತು ವಾಸ್ತವವಾಗಿ ನೀವು ಈ ಹಿಂದೆಯೇ ನನಗೆ ಆ ಬಗ್ಗೆ ತಿಳಿಸಿದ್ದೀರಿ. ನೀವು ನನಗೆ ಆ ಬಗ್ಗೆ ಹೇಳಿದ ನಂತರ ನಾನು ದಾಖಲೆಗಳನ್ನು ಹುಡುಕಾಡಿದೆ ಮತ್ತು ಇಂದು ನಾನು ಕೆಲವು ದಾಖಲೆಗಳನ್ನು ತಂದಿದ್ದೇನೆ. ಬಹುಶಃ ನಾವು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಮತ್ತು ಆ ದಾಖಲೆಗಳು ನಿಮಗೆ ಉಪಯುಕ್ತವಾಗಬಹುದು.
ಮಾನ್ಯ ಅಧ್ಯಕ್ಷರೇ,  ಇಂದಿನ ನಮ್ಮ ಶೃಂಗಸಭೆಯ ಮಾತುಕತೆಗಳು ಮತ್ತು ಶೃಂಗಸಭೆಯ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಇದು 21 ನೇ ಶತಮಾನದ ಮೂರನೇ ದಶಕ ಹಾಗೂ ಮೂರನೇ ದಶಕದ ಮೊದಲ ವರ್ಷ. ಈ ಇಡೀ ದಶಕದಲ್ಲಿ, ನಿಮ್ಮ ನಾಯಕತ್ವದಲ್ಲಿ, ಭಾರತ-ಅಮೇರಿಕಾ ಸಂಬಂಧಗಳು ಮತ್ತು ಪ್ರಪಂಚದ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗಿನ ಸಂಬಂಧಗಳ ವಿಸ್ತರಣೆಗೆ ಬೀಜಗಳನ್ನು ಬಿತ್ತಲಾಗಿದೆ. ಇದೊಂದು ಪರಿವರ್ತನೆಯ ಅವಧಿಯಾಗಲಿದೆ. ನಾನದನ್ನು ನೋಡಬಲ್ಲೆ, ಧನ್ಯವಾದಗಳು!
ಈ ಪರಿವರ್ತನೆಯ ಅವಧಿಯು ಭಾರತ-ಅಮೇರಿಕಾ ಸಂಬಂಧದಲ್ಲಿದೆ. ನಮ್ಮ ಪರಂಪರೆಗಳ ಬಗ್ಗೆ ಮಾತನಾಡುವುದಾದರೆ, ಎರಡೂ ದೇಶಗಳು ಪ್ರಜಾಪ್ರಭುತ್ವ ಪರಂಪರೆ, ಪ್ರಜಾಪ್ರಭುತ್ವ ಮೌಲ್ಯಗಳು, ಸಂಪ್ರದಾಯಗಳಿಗೆ ಬದ್ಧವಾಗಿವೆ. ಈ ಪರಂಪರೆಯ ಸಂಪ್ರದಾಯಗಳ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಾನು ನಂಬಿದ್ದೇನೆ.
ಹಾಗೆಯೇ ಮಾನ್ಯ ಅಧ್ಯಕ್ಷರೇ, ನೀವು ಅಮೆರಿಕದ ಪ್ರಗತಿಯ ಪಯಣದ ಭಾಗವಾಗಿರುವ 4 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ-ಅಮೆರಿಕನ್ನರ ಬಗ್ಗೆ ಪ್ರಸ್ತಾಪ ಮಾಡಿದಿರಿ. ಈ ದಶಕದ ಪ್ರಾಮುಖ್ಯತೆ ಮತ್ತು ಭಾರತೀಯ-ಅಮೆರಿಕನ್ನರ ಈ ಪ್ರತಿಭೆಯ ಸಮೂಹ ನಿರ್ವಹಿಸಲಿರುವ ಪಾತ್ರವನ್ನು ನೋಡಿದಾಗ, ಈ ಜನರಿಂದ ಜನರ ನಡುವಿನ ಪ್ರತಿಭೆಯು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಮತ್ತು ಭಾರತೀಯ ಪ್ರತಿಭೆಗಳು ಇದರಲ್ಲಿ ಸಹ-ಪಾಲುದಾರರಾಗುತ್ತಾರೆ ಮತ್ತು ಇದರಲ್ಲಿ ನಿಮ್ಮ ಕೊಡುಗೆ ಬಹಳ ಮುಖ್ಯವಾಗಿದೆ.  
ಮಾನ್ಯ ಅಧ್ಯಕ್ಷರೇ, ಇದೇ ರೀತಿಯಾಗಿ ಇಂದು ತಂತ್ರಜ್ಞಾನವು ವಿಶ್ವದ ಪ್ರಮುಖ ಚಾಲನಾ ಶಕ್ತಿಯಾಗಿದೆ ಮತ್ತು ತಂತ್ರಜ್ಞಾನವು ಸೇವೆಗಾಗಿ ಮತ್ತು ಮನುಕುಲದ ಬಳಕೆಗಾಗಿ ಇರುತ್ತದೆ ಮತ್ತು ಇದಕ್ಕಾಗಿ ಅಪಾರ ಅವಕಾಶಗಳು ಸಿಗಲಿವೆ ಎಂದು ನಾನು ಭಾವಿಸಿದ್ದೇನೆ. 
ಮಾನ್ಯ ಅಧ್ಯಕ್ಷರೇ, ಭಾರತ ಮತ್ತು ಅಮೆರಿಕದ ನಡುವೆ, ವ್ಯಾಪಾರವು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ ಮತ್ತು ವಾಸ್ತವವಾಗಿ ನಮ್ಮ ಎರಡೂ ದೇಶಗಳ ನಡುವಿನ ವ್ಯಾಪಾರವು ಪರಸ್ಪರ ಪೂರಕವಾಗಿದೆ. ನಿಮ್ಮಲ್ಲಿ ಮತ್ತು ನಮ್ಮಲ್ಲಿ ಅನೇಕ ವಿಷಯಗಳಿವೆ ಮತ್ತು ನಾವು ಪರಸ್ಪರ ಪೂರಕವಾಗಿದ್ದೇವೆ. ಈ ದಶಕದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ, ಅದು ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
ಮಾನ್ಯ ಅಧ್ಯಕ್ಷರೇ, ನಾವು ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ ಜಯಂತಿಯನ್ನು ಆಚರಿಸುವ ಬಗ್ಗೆ ಈಗಷ್ಟೇ ಪ್ರಸ್ತಾಪಿಸಿದಿರಿ. ಮಹಾತ್ಮ ಗಾಂಧಿಯವರು ಯಾವಾಗಲೂ  ಭೂಮಿಯ ಸಂರಕ್ಷಣೆಯ ಹೊಣೆಗಾರಿಕೆ (ಟ್ರಸ್ಟೀಶಿಪ್) ತತ್ವಗಳ ಬಗ್ಗೆ ಮಾತನಾಡುತ್ತಿದ್ದರು, ಆ ದೃಷ್ಟಿಯಿಂದ ಮಾನ್ಯ ಅಧ್ಯಕ್ಷರೇ, ಟ್ರಸ್ಟೀಶಿಪ್ ತತ್ವಕ್ಕೆ ಈ ದಶಕವೂ ಕೂಡ ಮುಖ್ಯವಾಗುತ್ತದೆ. ಇದರರ್ಥ ನಾವು ಹೊಂದಿರುವ ಗ್ರಹವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಮತ್ತು ಈ ಟ್ರಸ್ಟೀಶಿಪ್ ಭಾವನೆಯು ಜಾಗತಿಕವಾಗಷ್ಟೇ ಅಲ್ಲದೇ ಭಾರತ ಮತ್ತು ಅಮೇರಿಕಾ ನಡುವಿನ ಸಂಬಂಧಗಳಲ್ಲಿ ಹೆಚ್ಚು ಪ್ರಾಮುಖ್ಯವನ್ನು ಪಡೆದುಕೊಳ್ಳಲಿದೆ. ಗ್ರಹದ ಟ್ರಸ್ಟೀಶಿಪ್ ಬಗ್ಗೆ ಮಹಾತ್ಮ ಗಾಂಧಿಯವರ ಈ ಆದರ್ಶಗಳನ್ನು ಪ್ರತಿಪಾದಿಸಿದಾಗ ಜಾಗತಿಕ ನಾಗರಿಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಲಿದೆ.
ಮಾನ್ಯ ಅಧ್ಯಕ್ಷರೇ, ನೀವು ಬಹಳ ಮುಖ್ಯವಾದ ವಿಷಯಗಳನ್ನು ಪ್ರಸ್ತಾಪಿಸಿದ್ದೀರಿ. ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ನೀವು ಕೋವಿಡ್ - 19, ಹವಾಮಾನ ಬದಲಾವಣೆ ಅಥವಾ ಕ್ವಾಡ್ ಗೆ ಸಂಬಂಧಿಸಿದಂತೆ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದ್ದೀರಿ. ಈ ಉಪಕ್ರಮಗಳನ್ನು ಮತ್ತು ನಿಮ್ಮ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿದ್ದೀರಿ. ಇಂದು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೆಚ್ಚು ವಿವರವಾಗಿ ಚರ್ಚಿಸಲು ನಮಗೆ ಅವಕಾಶವಿದೆ. ನಮ್ಮ ಚರ್ಚೆಗಳ ನಂತರ, ನಾವು ನಮ್ಮ ದೇಶಗಳಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಮತ್ತು ನಾವು ಹೇಗೆ ಧನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯಲಿದ್ದೇವೆ. ನಿಮ್ಮ ನಾಯಕತ್ವದಲ್ಲಿ ನಾವು ಏನೇ ಮಾಡಿದರೂ ಅದು ಇಡೀ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿರುತ್ತದೆ ಎಂದು ನನಗೆ ಸಂಪೂರ್ಣವಾಗಿ ನಂಬಿಕೆ ಇದೆ. 
ಮಾನ್ಯ ಅಧ್ಯಕ್ಷರೇ, ಈ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಮತ್ತೊಮ್ಮೆ ನನ್ನ ತುಂಬು ಹೃದಯದ ಧನ್ಯವಾದಗಳು.

ಧನ್ಯವಾದ!

****



(Release ID: 1758063) Visitor Counter : 278