ಪ್ರಧಾನ ಮಂತ್ರಿಯವರ ಕಛೇರಿ

ಗೋವಾದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ


ಅರ್ಹ ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡುವಿಕೆಯನ್ನು 100% ಪೂರ್ಣಗೊಳಿಸಿದ ಗೋವಾವನ್ನು ಪ್ರಧಾನಿ ಶ್ಲಾಘಿಸಿದರು

ಈ ಸಂದರ್ಭದಲ್ಲಿ ಶ್ರೀ ಮನೋಹರ್ ಪರಿಕ್ಕರ್ ಅವರ ಸೇವೆಗಳನ್ನು ಪ್ರಧಾನಿ ಸ್ಮರಿಸಿದರು

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮತ್ತು ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌' ಅಭಿಯಾನದಲ್ಲಿ ಗೋವಾ ಅದ್ಭುತ ಫಲಿತಾಂಶಗಳನ್ನು ಪ್ರದರ್ಶಿಸಿದೆ: ಪ್ರಧಾನಿ

ನಾನು ನನ್ನ ಅನೇಕ ಜನ್ಮದಿನಗಳನ್ನು ನೋಡಿದ್ದೇನೆ ಮತ್ತು ಯಾವಾಗಲೂ ಅದರ ಬಗ್ಗೆ ನಿರಾಸಕ್ತಿ ಹೊಂದಿರುತ್ತೇನೆ ಆದರೆ, ನನ್ನ ಎಲ್ಲಾ ವರ್ಷಗಳ ಹುಟ್ಟುಹಬ್ಬಗಳ ಪೈಕಿ ನಿನ್ನೆ ಅತ್ಯಂತ ವಿಶೇಷವಾಗಿತ್ತು, 2.5 ಕೋಟಿ ಜನರು ಲಸಿಕೆ ಪಡೆದ ಆ ದಿನವು ನನ್ನನ್ನು ತೀವ್ರ ಭಾವುಕಗೊಳಿಸಿತು: ಪ್ರಧಾನಿ

ನಿನ್ನೆ ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಡೋಸ್ ಗಳನ್ನು, ಪ್ರತಿ ನಿಮಿಷಕ್ಕೆ 26 ಸಾವಿರಕ್ಕೂ ಹೆಚ್ಚು ಡೋಸ್‌ಗಳನ್ನು ಮತ್ತು ಪ್ರತಿ ಸೆಕೆಂಡಿಗೆ 425 ಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ: ಪ್ರಧಾನಿ

ʻಏಕ್ ಭಾರತ್ -ಶ್ರೇಷ್ಠ್‌ ಭಾರತ್ʼ ಪರಿಕಲ್ಪನೆಯನ್ನು ಬಿಂಬಿಸುವ ಗೋವಾದ ಪ್ರತಿಯೊಂದು ಸಾಧನೆಯೂ ನನಗೆ ಬಹಳ ಸಂತೋಷವನ್ನು ಉಂಟುಮಾಡಿದೆ: ಪ್ರಧಾನಿ

ಗೋವಾ ಕೇವಲ ದೇಶದ ರಾಜ್ಯವಲ್ಲ, ಅದೊಂದು ಬ್ರಾಂಡ್ ಇಂಡಿಯಾದ ಬಲವಾದ ಹೆಗ್ಗುರುತು: ಪ್ರಧಾನಿ

Posted On: 18 SEP 2021 12:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ರಾಜ್ಯದ ಎಲ್ಲಾ ಅರ್ಹ ವಯಸ್ಕ ಜನತೆಗೆ ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಸಂವಾದ ಏರ್ಪಡಿಸಲಾಗಿತ್ತು.

ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಸಂವಾದ

ಸಂವಾದದ ವೇಳೆ ಪ್ರಧಾನಮಂತ್ರಿಯವರು ಗೋವಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ನಿತಿನ್ ಧುಪ್ದೇಲ್‌ ಅವರೊಂದಿಗೆ ಮಾತನಾಡಿ, ಕೋವಿಡ್ ಲಸಿಕೆಗಳನ್ನು ಪಡೆಯುವಂತೆ ಜನರನ್ನು ಮನವೊಲಿಸಿದ ಪರಿಯ ಬಗ್ಗೆ ವಿಚಾರಿಸಿದರು. ಕೋವಿಡ್ ಲಸಿಕೆ ಅಭಿಯಾನ ಮತ್ತು ಹಿಂದಿನ ಅಭಿಯಾನಗಳ ನಡುವಿನ ವ್ಯತ್ಯಾಸದ ಬಗ್ಗೆಯೂ ಅವರು ಚರ್ಚಿಸಿದರು. ಡಾ. ಧುಪ್ದೇಲ್‌ ಅವರು ಈ ನಿರ್ದಿಷ್ಟ ಅಭಿಯಾನದ ಸಮರೋಪಾದಿ ಕಾರ್ಯವಿಧಾನವನ್ನು ಶ್ಲಾಘಿಸಿದರು. ಈ ವೇಳೆ ವಿರೋಧ ಪಕ್ಷವನ್ನು ಟೀಕಿಸಿದ ಪ್ರಧಾನಿಯವರು 2.5 ಕೋಟಿ ಜನರಿಗೆ ಲಸಿಕೆ ನೀಡಿದ ಬಳಿಕ, ಲಸಿಕೆ ಪಡೆದವರ ಬದಲಿಗೆ ವಿರೋಧ ಪಕ್ಷದವರಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡದ್ದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಗೋವಾದಲ್ಲಿ ಅರ್ಹ ವಯಸ್ಕ ಜನರಿಗೆ ಶೇ.100ರಷ್ಟು ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ವೈದ್ಯರು ಮತ್ತು ಇತರ ಕೊರೊನಾ ಯೋಧರನ್ನು ಪ್ರಧಾನಿ ಶ್ಲಾಘಿಸಿದರು. ಇದು ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಕೋವಿಡ್ ಲಸಿಕೆ ಫಲಾನುಭವಿ ಮತ್ತು ಕಾರ್ಯಕರ್ತ ಶ್ರೀ ನಜೀರ್ ಶೇಖ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಲಸಿಕೆಗಳನ್ನು ಪಡೆಯುವಂತೆ ಇತರರನ್ನು ಮನವೊಲಿಸಲು ತಾವು ನಿರ್ಧರಿಸಿದ್ದು ಹೇಗೆ ಎಂದು ವಿಚಾರಿಸಿದರು. ಲಸಿಕೆ ಕೇಂದ್ರಗಳಿಗೆ ಜನರನ್ನು ಕರೆದೊಯ್ಯುವಲ್ಲಿ ಎದುರಾಗಿರುವ ತೊಂದರೆಗಳ ಬಗ್ಗೆ ಅವರು ಶ್ರೀ ನಜೀರ್ ಅವರನ್ನು ಕೇಳಿದರು. ಲಸಿಕೆ ಅಭಿಯಾನದಲ್ಲಿ ಶ್ರೀ ನಜೀರ್ ಅವರ ಅನುಭವದ ಬಗ್ಗೆಯೂ ಪ್ರಧಾನಿ ಕೇಳಿದರು. ಶ್ರೀ ನಜೀರ್ ಶೇಖ್ ಅವರ ಪ್ರಯತ್ನದ ಮಾದರಿಯಲ್ಲೇ 'ಸಬ್ ಕಾ ಪ್ರಯಾಸ್‌' (ಸರ್ವರ ಶ್ರಮ) ಇಂತಹ ಅತ್ಯಂತ ಮಹತ್ವದ ಅಭಿಯಾನ ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು. ದೇಶಾದ್ಯಂತ ಸಾಮಾಜಿಕ ಪ್ರಜ್ಞೆಯುಳ್ಳ ಕಾರ್ಯಕರ್ತರನ್ನು ಪ್ರಧಾನಿ ಶ್ಲಾಘಿಸಿದರು.

 

ಶ್ರೀಮತಿ ಸ್ವೀಮಾ ಫರ್ನಾಂಡಿಸ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಜನರು ಲಸಿಕೆಗಾಗಿ ತಮ್ಮ ಬಳಿ ಬಂದಾಗ ಅವರನ್ನು ಹೇಗೆ ವಿಚಾರಿಸಿದಿರಿ, ಏನೆಲ್ಲಾ ಪ್ರಶ್ನೆಗಳನ್ನು ಹಾಕಿದಿರಿ ಎಂದು ಕೇಳಿದರು. ಇದೇ ವೇಳೆ ಸ್ವೀಮಾ ಅವರು, ಲಸಿಕೆ ಸಂಗ್ರಹಕ್ಕೆ ಶೀತಲ ಸರಪಳಿಯನ್ನು ನಿರ್ವಹಿಸುವ ಹಂತಗಳನ್ನು ವಿವರಿಸಿದರು.  ಲಸಿಕೆಗಳಿಗಾಗಿ ಅವರು ಶೀತಲ ಸರಪಳಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಅವರು ವಿಚಾರಿಸಿದರು. ಒಂದೇ ಒಂದು ಲಸಿಕೆಯೂ ವ್ಯರ್ಥವಾಗದಂತೆ ಖಾತರಿಪಡಿಸಲು ಅವರು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ವಿಚಾರಿಸಿದರು. ಕೌಟುಂಬಿಕ ಹೊಣೆಗಾರಿಕೆಗಳ ಹೊರತಾಗಿಯೂ ಆರೋಗ್ಯ ಕಾರ್ಯಕರ್ತರ ಕರ್ತವ್ಯ ನಿರ್ವಹಣೆ ಪರಿಯ ಬಗ್ಗೆ ಶ್ಲಾಘಿಸಿದ ಪ್ರಧಾನಿ, ಈ ನಿಟ್ಟಿನಲ್ಲಿ ಕೊರೊನಾ ಯೋಧರ ಎಲ್ಲಾ ಕುಟುಂಬಗಳು ಮಾಡಿದ ಪ್ರಯತ್ನಗಳಿಗಾಗಿ ಧನ್ಯವಾದ ಅರ್ಪಿಸಿದರು.

 

ಶ್ರೀ ಶಶಿಕಾಂತ್ ಭಗತ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ನಿನ್ನೆ ತಮ್ಮ ಜನ್ಮದಿನದಂದು ತಮ್ಮ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಹೇಗೆ ಸಂವಾದ ನಡೆಸಿದರು ಎಂಬುದನ್ನು ಸ್ಮರಿಸಿದರು. ಆ ವ್ಯಕ್ತಿಯನ್ನು ಅವರ ವಯಸ್ಸಿನ ಬಗ್ಗೆ ಕೇಳಿದಾಗ, 'ಅಭಿ 30 ಬಾಕಿ ಹೈನ್' (ಇನ್ನೂ 30 ಬಾಕಿ ಇದೆ) ಎಂದು ಅವರು ಹೇಳಿದ್ದಾಗಿ ಪ್ರಧಾನಮಂತ್ರಿಯವರು ವಿವರಿಸಿದರು. 75 ವರ್ಷದ ಶ್ರೀ ಭಗತ್ ಅವರು ಕಳೆದುಹೋದ 75 ವರ್ಷಗಳ ಕಾಲ ಯೋಚಿಸಬಾರದು, ಆದರೆ ಮುಂಬರುವ 25 ವರ್ಷಗಳತ್ತ ಗಮನ ಹರಿಸಬೇಕು ಎಂದು ಶ್ರೀ ಮೋದಿ ಸಲಹೆ ನೀಡಿದರು. ಲಸಿಕೆ  ಪಡೆಯುವ ಸಮಯದಲ್ಲಿ ಅವರು ಏನಾದರೂ ತೊಂದರೆಗಳನ್ನು ಎದುರಿಸಿದರೇ ಎಂದು ವಿಚಾರಿಸಿದರು. ಹಿರಿಯ ನಾಗರಿಕರಿಗೆ ಸರಕಾರ ನೀಡಿದ ಆದ್ಯತೆಯ ಬಗ್ಗೆ ಶ್ರೀ ಭಗತ್ ತೃಪ್ತಿ ವ್ಯಕ್ತಪಡಿಸಿದರು. ಅವರು ಮಧುಮೇಹಿಯಾಗಿದ್ದರೂ ಯಾವುದೇ ಅಡ್ಡ ಪರಿಣಾಮಗಳನ್ನು ಎದುರಿಸದ ಕಾರಣ, ಲಸಿಕೆಗಳ ಅಡ್ಡ ಪರಿಣಾಮಗಳ ಭಯವನ್ನು ಸಹ ಅವರು ತಳ್ಳಿಹಾಕಿದರು. ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಶ್ರೀ ಭಗತ್ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ತೆರಿಗೆ ಕ್ಷೇತ್ರ ಸೇರಿದಂತೆ ಜನರ ಜೀವನ ಸುಗಮತೆಯನ್ನು ಹೆಚ್ಚಿಸಲು ಸರಕಾರ ಬದ್ಧವಾಗಿದೆ ಎಂದರು.

 

ಶ್ರೀಮತಿ ಸ್ವೀಟಿ ಎಸ್.ಎಂ. ವೆಂಗೂರ್ಲೆಕರ್‌ ಅವರೊಂದಿಗೆ ಮಾತನಾಡಿದ ಪ್ರಧಾನಿ ದೂರದ ಪ್ರದೇಶಗಳಲ್ಲಿ ʻಲಸಿಕೆ ಉತ್ಸವʼವನ್ನು ಆಯೋಜಿಸಿದ್ದು ಹೇಗೆಂದು ವಿಚಾರಿಸಿದರು. ಲಸಿಕೆ ಉತ್ಸವ ಆಯೋಜಿಸಲು ಕಾರಣವಾದ ಅಂಶದ ಬಗ್ಗೆ ಅವರು ಕೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ನಾಗರಿಕರಿಗೆ ಸಾಧ್ಯವಾದಷ್ಟು ಲಸಿಕೆ ಲಭ್ಯತೆಯನ್ನು ಸುಲಭಗೊಳಿಸುವತ್ತ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಂತಹ ಬೃಹತ್ ಅಭಿಯಾನದಲ್ಲಿ ಅಗತ್ಯ ದಾಖಲೀಕರಣ ಮತ್ತು ವಸ್ತುಗಳ ಸೂಕ್ತ ಸಾಗಣೆ, ನಿರ್ವಹಣೆಗೆ ಗಮನ ಹರಿಸಲು ಪ್ರಧಾನಿ ಸೂಚಿಸಿದರು.

 

ದೃಷ್ಟಿ ವಿಕಲಚೇತನ ಫಲಾನುಭವಿ ಶ್ರೀಮತಿ ಸುಮೇರಾ ಖಾನ್ ಅವರ ಲಸಿಕೆಯ ಅನುಭವದ ಬಗ್ಗೆ ಪ್ರಧಾನಿ ವಿಚಾರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಖಾನ್ ಅವರ ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನಿ, ಐಎಎಸ್ ಅಧಿಕಾರಿಯಾಗುವ ಅವರ ಆಕಾಂಕ್ಷೆಗೆ ಶುಭ ಹಾರೈಸಿದರು. ದೇಶದ ದಿವ್ಯಾಂಗ ನಾಗರಿಕರು ನಡೆಸುತ್ತಿರುವ ಸ್ಫೂರ್ತಿದಾಯಕ ಜೀವನದ ಬಗ್ಗೆ ಶ್ರೀ ಮೋದಿ ಶ್ಲಾಘಿಸಿದರು.

 

ಪ್ರಧಾನಮಂತ್ರಿಯವರ ಭಾಷಣ

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗಣೇಶ ಹಬ್ಬದ ಶುಭ ಋತುವಿನಲ್ಲಿ ʻಅನಂತ ಸುತ್ರ್ʼ (ರಕ್ಷಣೆ) ಸಾಧಿಸಿದ್ದಕ್ಕಾಗಿ ಗೋವಾದ ಜನರನ್ನು ಶ್ಲಾಘಿಸಿದರು. ಗೋವಾದ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. "ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ʻಎಕ್‌ ಭಾರತ್ -ಶ್ರೇಷ್ಠ್ ಭಾರತ್ʼ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಗೋವಾದ ಪ್ರತಿಯೊಂದು ಸಾಧನೆಯೂ ನನಗೆ ಬಹಳ ಸಂತೋಷವನ್ನು ಉಂಟುಮಾಡುತ್ತದೆ", ಎಂದು ಪ್ರಧಾನಿ ಹೇಳಿದರು.

 

ಈ ಮಹತ್ವದ ಸಾಧನೆಯ ದಿನದಂದು ಶ್ರೀ ಮನೋಹರ್ ಪರಿಕ್ಕರ್ ಅವರ ಸೇವೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

 

ಕಳೆದ ಕೆಲವು ತಿಂಗಳಲ್ಲಿ ಭಾರಿ ಮಳೆ, ಚಂಡಮಾರುತ, ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳೊಂದಿಗೆ ಗೋವಾ ದಿಟ್ಟವಾಗಿ ಹೋರಾಡಿದೆ ಎಂದು ಪ್ರಧಾನಿ ಹೇಳಿದರು. ಈ ನೈಸರ್ಗಿಕ ವಿಪತ್ತುಗಳ ನಡುವೆ ಕೊರೊನಾ ಲಸಿಕೆಯ ವೇಗವನ್ನು ಕಾಯ್ದುಕೊಂಡಿದ್ದಕ್ಕಾಗಿ ಎಲ್ಲಾ ಕೊರೊನಾ ಯೋಧರು, ಆರೋಗ್ಯ ಕಾರ್ಯಕರ್ತರು ಮತ್ತು ಗೋವಾ ತಂಡವನ್ನು ಅವರು ಶ್ಲಾಘಿಸಿದರು.

 

ಸಾಮಾಜಿಕ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸುವಲ್ಲಿ ಗೋವಾ ತೋರಿದ ಸಮನ್ವಯದ ಪರಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಸದೂರ ಪ್ರದೇಶವಾದ ಕ್ಯಾನಕೋನಾ ಉಪ ವಿಭಾಗದಲ್ಲಿ ಕಂಡುಬಂದ ಲಸಿಕೀಕರಣದ ವೇಗವು ರಾಜ್ಯದ ಉಳಿದ ಭಾಗಗಳಿಗೆ ಮಾದರಿಯಾಗಿದೆ. "ಗೋವಾ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ, ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌'ನ ಶ್ರೇಷ್ಠ ಫಲಿತಾಂಶಗಳನ್ನು ಪ್ರದರ್ಶಿಸಿದೆ" ಎಂದು ಅವರು ಹೇಳಿದರು.

 

ಈ ವೇಳೆ ಕೊಂಚ ಭಾವುಕರಾದ ಪ್ರಧಾನಮಂತ್ರಿಯವರು “ನಾನು ಅನೇಕ ಜನ್ಮದಿನಗಳನ್ನು ನೋಡಿದ್ದೇನೆ ಮತ್ತು ಅವುಗಳ ಬಗ್ಗೆ ಸದಾ ನನಗೆ ನಿರಾಸಕ್ತಿ. ಆದರೆ ನನ್ನ ಇದುವರೆಗಿನ ಎಲ್ಲಾ ಜನ್ಮದಿನಗಳ ಪೈಕಿ, ನಿನ್ನೆ ನನ್ನನ್ನು ತೀವ್ರ ಭಾವುಕಗೊಳಿಸಿದ ದಿನವಾಗಿತ್ತು," ಎಂದು ಹೇಳಿದರು.  ದೇಶ ಮತ್ತು ಕೊರೊನಾ ಯೋಧರ ಪ್ರಯತ್ನಗಳು ನಿನ್ನೆಯ ಜನ್ಮದಿನವನ್ನು ಮತ್ತಷ್ಟು ವಿಶೇಷವಾಗಿಸಿದವು ಎಂದರು. 2.5 ಕೋಟಿ ಜನರಿಗೆ ಲಸಿಕೆ ಹಾಕಿದ ತಂಡದ ಸಹಾನುಭೂತಿ, ಸೇವೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಅವರು ಶ್ಲಾಘಿಸಿದರು. "ಪ್ರತಿಯೊಬ್ಬರೂ ಸಂಪೂರ್ಣವಾಗಿ ಸಹಕರಿಸಿದರು, ಇದನ್ನು ತಾವು ಮಾಡುವ ಸೇವೆ ಎಂದು ತಿಳಿದರು. ಅವರ ಸಹಾನುಭೂತಿ ಮತ್ತು ಕರ್ತವ್ಯ ನಿಷ್ಠೆಯೇ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆಯ ಈ ಮಹಾನ್‌ ಸಾಧನೆಯನ್ನು ಸಾಧ್ಯವಾಗಿಸಿತು" ಎಂದು ಭಾವುಕ ದನಿಯಲ್ಲೇ ಪ್ರಧಾನಿ ಹೇಳಿದರು.

 

ವೈದ್ಯಕೀಯ ಕ್ಷೇತ್ರದ ಜನರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಕಳೆದ ಎರಡು ವರ್ಷಗಳಿಂದ ತಮ್ಮ ಜೀವಗಳನ್ನು ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಡಲು ದೇಶವಾಸಿಗಳಿಗೆ ಸಹಾಯ ಮಾಡುತ್ತಿರುವುದಕ್ಕಾಗಿ ಹಾಗೂ ನಿನ್ನೆಯ ದಾಖಲೆಯ ಲಸಿಕೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ಷೇತ್ರದ ಜನರು ಇದನ್ನು ತಮ್ಮ ಸೇವೆ ಎಂದು ಭಾವಿಸಿದರು. ಅವರ ಸಹಾನುಭೂತಿ ಮತ್ತು ಕರ್ತವ್ಯ ನಿಷ್ಠೆಯಿಂದಲೇ ಒಂದೇ ದಿನ 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲು ಸಾಧ್ಯವಾಗಿದೆ ಎಂದರು. ಹಿಮಾಚಲ ಪ್ರದೇಶ, ಗೋವಾ, ಚಂಡೀಗಢ ಮತ್ತು ಲಕ್ಷದ್ವೀಪಗಳು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಪೂರ್ಣಗೊಳಿಸಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸಿಕ್ಕಿಂ, ಅಂಡಮಾನ್ ನಿಕೋಬಾರ್, ಕೇರಳ, ಲಡಾಖ್, ಉತ್ತರಾಖಂಡ್ ಮತ್ತು ದಾದ್ರಾ ನಾಗರ್‌ಹವೇಲಿ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆ ಮಾಡಿವೆ ಎಂದರು.

 

ಭಾರತವು ಮೊದಲೇ ಚರ್ಚಿಸಿ ಪೂರ್ವಯೋಜನೆ ಮಾಡದಿದ್ದರೂ ತನ್ನ ಲಸಿಕೆ ಪ್ರಯತ್ನಗಳಲ್ಲಿ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಏಕೆಂದರೆ ನಮ್ಮ ಪ್ರವಾಸೋದ್ಯಮ ತಾಣಗಳು ತೆರೆಯುವುದು ಮುಖ್ಯವಾಗಿತ್ತು. ವಿದೇಶಿ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಇತ್ತೀಚೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಭೇಟಿ ನೀಡುವ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ವಲಯದಲ್ಲಿನ ವ್ಯಕ್ತಿಗಳಿಗೆ ಸರಕಾರದ ಖಾತರಿಯೊಂದಿಗೆ 10 ಲಕ್ಷದವರೆಗೆ ಸಾಲ ನೀಡಲು ಮತ್ತು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 1 ಲಕ್ಷದವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

 

ಗೋವಾ ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚು ಆಕರ್ಷಕಗೊಳಿಸುವ ಮತ್ತು ರಾಜ್ಯದ ರೈತರು ಮತ್ತು ಮೀನುಗಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಪ್ರಯತ್ನಗಳಿಗೆ 'ಡಬಲ್ ಎಂಜಿನ್ ಸರಕಾರ' ಶಕ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ʻಮೋಪಾ  ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣʼ ಮತ್ತು 12 ಸಾವಿರ ಕೋಟಿ ಹಂಚಿಕೆಯೊಂದಿಗೆ 6 ಲೇನ್ ಹೆದ್ದಾರಿ, ಉತ್ತರ ಮತ್ತು ದಕ್ಷಿಣ ಗೋವಾವನ್ನು ಸಂಪರ್ಕಿಸುವ ಜುವಾರಿ ಸೇತುವೆ ಕೆಲವೇ ತಿಂಗಳುಗಳಲ್ಲಿ ಉದ್ಘಾಟನೆಯಾಗಲಿದೆ, ಇದು ರಾಜ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತಿದೆ ಎಂದರು.

 

ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ʻಆತ್ಮನಿರ್ಭರತೆʼ ಸಾಧಿಸಲು ಗೋವಾ ರಾಜ್ಯವು ʻಸ್ವಯಂ ಪೂರ್ಣ ಗೋವಾʼ ಸಂಕಲ್ಪವನ್ನು ಕೈಗೊಂಡಿದ್ದು, 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲು ಶುರು ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ರಾಜ್ಯಾದ್ಯಂತ ಸರ್ವರಿಗೂ ಶೌಚಾಲಯ,  ನೂರಕ್ಕೆ ನೂರು ಪ್ರತಿಷತ ವಿದ್ಯುದೀಕರಣದ ಸಾಧನೆಯನ್ನು ಮತ್ತು 'ಹರ್ ಘರ್ ಜಲ್' ಅಭಿಯಾನದ ಮಹಾನ್ ಪ್ರಯತ್ನವನ್ನು ಅವರು ಒತ್ತಿ ಹೇಳಿದರು. ದೇಶವು 2 ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕ ನೀಡಿದೆ. ಈ ನಿಟ್ಟಿನಲ್ಲಿ ಗೋವಾದ ಪ್ರಯತ್ನಗಳು ಉತ್ತಮ ಆಡಳಿತ ಮತ್ತು ಸುಗಮ ಜನಜೀವನಕ್ಕೆ ರಾಜ್ಯದ ಆದ್ಯತೆಯನ್ನು ಸ್ಪಷ್ಟಪಡಿಸುತ್ತವೆ ಎಂದರು. ಬಡ ಕುಟುಂಬಗಳಿಗೆ ಪಡಿತರ, ಉಚಿತ ಅನಿಲ ಸಿಲಿಂಡರ್, ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ವಿತರಣೆ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಮರೋಪಾದಿಯಲ್ಲಿ ʻಕಿಸಾನ್ ಕ್ರೆಡಿಟ್ ಕಾರ್ಡ್‌ʼಗಳ ವಿಸ್ತರಣೆ ಮತ್ತು ಬೀದಿ ವ್ಯಾಪಾರಿಗಳಿಗೆ ಸ್ವಾನಿಧಿ ಯೋಜನೆಯ ಪ್ರಯೋಜನಗಳನ್ನು ಒದಗಿಸುವಲ್ಲಿ ಗೋವಾದ ಪ್ರಯತ್ನಗಳನ್ನು ಪ್ರಧಾನಿ ವಿವರಿಸಿದರು. ಗೋವಾವನ್ನು ಅಪರಿಮಿತ ಸಾಧ್ಯತೆಗಳ ರಾಜ್ಯ ಎಂದು ಬಣ್ಣಿಸಿದ ಪ್ರಧಾನಿ, "ಗೋವಾ ಕೇವಲ ದೇಶದ ಒಂದು ರಾಜ್ಯವಲ್ಲ, ಅದೊಂದು ಬ್ರಾಂಡ್ ಇಂಡಿಯಾದ ಬಲವಾದ ಹೆಗ್ಗುರುತಾಗಿದೆ, " ಎಂದರು.

 

****



(Release ID: 1756056) Visitor Counter : 258