ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಮತ್ತು ಲಸಿಕೆಗಳ ಕುರಿತ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ
ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಳದ ಬಗ್ಗೆ ಪ್ರಧಾನಿಯವರಿಗೆ ವಿವರಿಸಲಾಯಿತು
ಪ್ರತಿ ಜಿಲ್ಲೆಯಲ್ಲೂ ಔಷಧಗಳ ಹೆಚ್ಚುವರಿ ದಾಸ್ತಾನು ನಿರ್ವಹಿಸಲು ರಾಜ್ಯಗಳಿಗೆ ಸೂಚಿಸಲಾಯಿತು
ಮುಂದಿನ ಕೆಲವು ತಿಂಗಳುಗಳಲ್ಲಿನ ಲಸಿಕೆಗಳ ಉತ್ಪಾದನೆ, ಪೂರೈಕೆ ಮತ್ತು ಪೂರೈಕೆ ಯೋಜನೆ ಪರಿಶೀಲಿಸಿದ ಪ್ರಧಾನಿ
ಹೊಸ ರೂಪಾಂತರಿ ಉಗಮದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ನಿರಂತರ ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕಾದ ಅಗತ್ಯದ ಬಗ್ಗೆ ಪ್ರಧಾನಿ ಮಾತನಾಡಿದರು
Posted On:
10 SEP 2021 8:38PM by PIB Bengaluru
ಕೋವಿಡ್-19 ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಪ್ರಸ್ತುತ ಇರುವ ಕೋವಿಡ್-19 ಸನ್ನಿವೇಶದ ಪರಾಮರ್ಶೆ, ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ, ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ಕೋವಿಡ್-19 ಲಸಿಕೆಯ ಉತ್ಪಾದನೆ, ಪೂರೈಕೆ ಮತ್ತು ವಿತರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಿಶ್ವಾದ್ಯಂತ, ಅನೇಕ ದೇಶಗಳಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕ ಮಟ್ಟದಲ್ಲಿ ಮುಂದುವರಿದ ಬಗ್ಗೆ ಚರ್ಚಿಸಲಾಯಿತು. ಭಾರತದಲ್ಲೂ ಮಹಾರಾಷ್ಟ್ರ ಮತ್ತು ಕೇರಳದಂತಹ ರಾಜ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದಾಗ್ಯೂ, ಸಾಪ್ತಾಹಿಕ ಪಾಸಿಟಿವಿಟಿ ದರ ಸತತ 10ನೇ ವಾರವೂ 3% ಕ್ಕಿಂತ ಕಡಿಮೆ ಇತ್ತು.
ಕೆಲವು ಭೌಗೋಳಿಕ ಪ್ರದೇಶಗಳು, ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಕೇಂದ್ರೀಕೃತವಾಗಿರುವುದು, ಅಲ್ಲಿನ ಅತ್ಯಧಿಕ ಪಾಸಿಟಿವಿಟಿ ದರ ಮತ್ತು ಸಾಪ್ತಾಪಿಕ ಪಾಸಿಟಿವಿಟಿ ದರದ ಬಗ್ಗೆ ಪ್ರಧಾನಿಯವರಿಗೆ ವಿವರಿಸಲಾಯಿತು.
ಹೊಸ ರೂಪಾಂತರಿಗಳ ಉಗಮವನ್ನು ಮೇಲ್ವಿಚಾರಣೆ ಮಾಡಲು ನಿರಂತರ ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕಾದ ಅಗತ್ಯದ ಬಗ್ಗೆ ಪ್ರಧಾನಿ ಮಾತನಾಡಿದರು. ʻಇನ್ಸಾಕಾಗ್ʼ(INSACOG) ಪ್ರಸ್ತುತ ದೇಶಾದ್ಯಂತ ವ್ಯಾಪಿಸಿರುವ 28 ಪ್ರಯೋಗಾಲಯಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮೋದಿ ಅವರಿಗೆ ಮಾಹಿತಿ ನೀಡಿದರು. ಪ್ರಯೋಗಾಲಯಗಳ ಜಾಲವನ್ನು ಚಿಕಿತ್ಸಾತ್ಮಕ ತಾಳೆಗಾಗಿ ಆಸ್ಪತ್ರೆಯ ಜಾಲವೊಂದರೊಂದಿಗೆ ಸಂಪರ್ಕಿಸಲಾಗಿದೆ. ಜಿನೋಮಿಕ್ ಕಣ್ಗಾವಲಿಗಾಗಿ ಒಳಚರಂಡಿ ಮಾದರಿಯನ್ನು ಸಹ ಸಂಗ್ರಹಿಸಲಾಗುತ್ತಿದೆ. ʻಸಾರ್ಸ್ ಕೋವ್2ʼ ಪಾಸಿಟಿವ್ ಮಾದರಿಗಳನ್ನು ನಿಯಮಿತವಾಗಿ ʻಇನ್ಸಾಕಾಗ್ʼನೊಂದಿಗೆ ಹಂಚಿಕೊಳ್ಳುವಂತೆ ರಾಜ್ಯಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು.
'ಕೋವಿಡ್ ತುರ್ತು ಸ್ಪಂದನಾ ಪ್ಯಾಕೇಜ್-2' ಅಡಿಯಲ್ಲಿ ಬೆಂಬಲಿಸಲಾದ ಆರೋಗ್ಯ ಸೌಲಭ್ಯಗಳ ವರ್ಧನೆ ಮತ್ತು ಮಕ್ಕಳ ಆರೈಕೆಗಾಗಿ ಹಾಸಿಗೆ ಸಾಮರ್ಥ್ಯವರ್ಧನೆಯ ಸ್ಥಿತಿಯನ್ನು ಪ್ರಧಾನಮಂತ್ರಿ ಯವರು ಪರಿಶೀಲಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲು ಈ ಪ್ರದೇಶಗಳಲ್ಲಿ ಪ್ರಾಥಮಿಕ ಆರೈಕೆ ಮತ್ತು ಕ್ಷೇತ್ರ ಮಟ್ಟದ ಆರೋಗ್ಯ ಮೂಲಸೌಕರ್ಯವನ್ನು ಮರುವಿನ್ಯಾಸಗೊಳಿಸಲು ಹಾಗೂ ಮರು ಉದ್ದೇಶಿತಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಜಿಲ್ಲಾ ಮಟ್ಟದಲ್ಲಿ ಕೋವಿಡ್-19, ಮ್ಯೂಕರ್ ಮೈಕೊಸಿಸ್ (ಬ್ಲ್ಯಾಕ್ ಫಂಗಸ್), ʻಎಂಐಎಸ್-ಸಿʼ ನಿರ್ವಹಣೆಯಲ್ಲಿ ಬಳಸುವ ಔಷಧಗಳ ಹೆಚ್ಚುವರಿ ದಾಸ್ತಾನು ನಿರ್ವಹಿಸುವಂತೆ ರಾಜ್ಯಗಳಿಗೆ ಸೂಚಿಸಲಾದ ಬಗ್ಗೆಯೂ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು.
ಪ್ರತ್ಯೇಕ (ಐಸೊಲೇಷನ್) ಹಾಸುಗೆಗಳು, ಆಮ್ಲಜನಕ ಸೌಲಭ್ಯವುಳ್ಳ ಹಾಸುಗೆಗಳು, ಐಸಿಯು ಹಾಸುಗೆಗಳು ಮತ್ತು ಮಕ್ಕಳ ಐಸಿಯುಗಳು ಹಾಗೂ ಮಕ್ಕಳ ವೆಂಟಿಲೇಟರ್‌ಗಳ ಹೆಚ್ಚಳದ ಬಗ್ಗೆ ಪ್ರಧಾನಿಗೆ ವಿವರಿಸಲಾಯಿತು. ಮುಂಬರುವ ತಿಂಗಳುಗಳಲ್ಲಿ ಗಮನಾರ್ಹ ಸಂಖ್ಯೆಯ ಐಸಿಯು ಹಾಸುಗೆಗಳು ಮತ್ತು ಆಕ್ಸಿಜನ್ ಹಾಸುಗೆಗಳನ್ನು ಸೇರಿಸಲಾಗುವುದು ಎಂದು ತಿಳಿಸಲಾಯಿತು.
ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಖಾತರಿಪಡಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಪ್ರಧಾನಿ ಮಾತನಾಡಿದರು. ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ʻಆರ್‌ಟಿ-ಪಿಸಿಆರ್ʼ ಪ್ರಯೋಗಾಲಯ ಸೌಲಭ್ಯವನ್ನು ಸ್ಥಾಪಿಸಲು 433 ಜಿಲ್ಲೆಗಳಿಗೆ ನೀಡಲಾಗುತ್ತಿರುವ ಬೆಂಬಲದ ಬಗ್ಗೆ ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು.
ಆಮ್ಲಜನಕ ಸಾಂದ್ರಕ, ಆಮ್ಲಜನಕ ಸಿಲಿಂಡರ್ ಮತ್ತು ʻಪಿಎಸ್ಎʼ ಘಟಕಗಳು ಸೇರಿದಂತೆ ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸಲು ಇಡೀ ಪರಿಸರ ವ್ಯವಸ್ಥೆಯನ್ನು ತ್ವರಿತವಾಗಿ ವೃದ್ಧಿಸಬೇಕಿದೆ ಎಂದು ಪ್ರಧಾನಿ ಹೇಳಿದರು. ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಘಟಕವನ್ನು ಹೊಂದಿಸುವ ಉದ್ದೇಶದಿಂದ 961 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್‌ಗಳು ಮತ್ತು 1,450 ವೈದ್ಯಕೀಯ ಅನಿಲ ಪೈಪ್ ಲೈನ್ ವ್ಯವಸ್ಥೆಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರತಿ ಬ್ಲಾಕ್‌ಗೆ ಕನಿಷ್ಠ ಒಂದು ಆಂಬ್ಯುಲೆನ್ಸ್ ಅನ್ನು ಖಾತರಿಪಡಿಸಲು ಆಂಬ್ಯುಲೆನ್ಸ್ ಜಾಲವನ್ನು ಸಹ ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ದೇಶಾದ್ಯಂತ ತಲೆ ಎತ್ತುತ್ತಿರುವ ʻಪಿಎಸ್ಎʼ ಆಮ್ಲಜನಕ ಘಟಕಗಳ ಸ್ಥಿತಿಗತಿಯನ್ನು ಪ್ರಧಾನಿ ಪರಿಶೀಲಿಸಿದರು. ರಾಜ್ಯಗಳಿಗೆ ಸುಮಾರು 1 ಲಕ್ಷ ಆಮ್ಲಜನಕ ಸಾಂದ್ರಕ ಮತ್ತು 3 ಲಕ್ಷ ಆಮ್ಲಜನಕ ಸಿಲಿಂಡರ್ ಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು.
ಲಸಿಕೆಗಳ ಕುರಿತಾಗಿಯೂ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು, ಭಾರತದ ವಯಸ್ಕ ಜನಸಂಖ್ಯೆಯ ಸುಮಾರು ಶೇ.58 ಜನರು ಮೊದಲ ಡೋಸ್ ಪಡೆದಿದ್ದಾರೆ ಮತ್ತು ಭಾರತದ ವಯಸ್ಕ ಜನಸಂಖ್ಯೆಯ ಸುಮಾರು ಶೇ.18 ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದು ವಿವರಿಸಲಾಯಿತು. ಲಸಿಕೆ ಉತ್ಪಾದನೆ-ಪೂರೈಕೆ ಯೋಜನೆ ಮತ್ತು ಲಸಿಕೆಗಳ ಪೂರೈಕೆ ಹೆಚ್ಚಳದ ಬಗ್ಗೆ ತಿಳಿಸಲಾಯಿತು.
ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಪ್ರಧಾನ ವೈಜ್ಞಾನಿಕ ಸಲಹೆಗಾರ, ಆರೋಗ್ಯ ಕಾರ್ಯದರ್ಶಿ, ಆರೋಗ್ಯ ನೀತಿ ಆಯೋಗದ ಸದಸ್ಯ ಮತ್ತು ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
***
(Release ID: 1754124)
Visitor Counter : 245
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam