ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

2025ರ ವೇಳೆಗೆ ಕ್ಷಯ ಮುಕ್ತ ಭಾರತ ಪ್ರಧಾನ ಮಂತ್ರಿಗಳ ಕನಸು


ಕ್ಷಯರೋಗದ ವಿರುದ್ಧ ಹೋರಾಟದಲ್ಲಿ ಗಳಿಸಿದ ಸಾರ್ವಜನಿಕ ಆರೋಗ್ಯ ಲಾಭಗಳನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳೊಂದಿಗೆ ಉನ್ನತ ಮಟ್ಟದ ಸಭೆಯ ನೇತೃತ್ವ ವಹಿಸಿದ ಶ್ರೀ ಮನ್ಸುಖ್ ಮಾಂಡವಿಯಾ

ಕ್ಷಯ ರೋಗದ ವಿರುದ್ಧದ ಹೋರಾಟವನ್ನು ಜನರ ಉಪಕ್ರಮ ಮತ್ತು ಜನಾಂದೋಲನವನ್ನಾಗಿ ಮಾಡೋಣ: ಶ್ರೀ ಮನ್ಸುಖ್ ಮಾಂಡವೀಯ

"ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಪರಸ್ಪರ ಹಂಚಿಕೊಂಡ ಗುರಿಗಳ ಸಾಧನೆಗೆ ವೇಗವಾಗಿ ಕೊಡುಗೆ ನೀಡುತ್ತವೆ"

Posted On: 02 SEP 2021 2:47PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್‌ ಮಾಂಡವಿಯಾ ಅವರು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ ಪವಾರ್ ಅವರ ಸಮ್ಮುಖದಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು / ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೇಂದ್ರ ಸರಕಾರ ಮತ್ತು ರಾಜ್ಯಗಳ ಕೇಂದ್ರೀಕೃತ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ಕ್ಷಯ ರೋಗದ ವಿರುದ್ಧದ ಹೋರಾಟದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. 
 

 

ಛತ್ತೀಸ್‌ಗಢದ ಆರೋಗ್ಯ ಸಚಿವ ಶ್ರೀ ಟಿ.ಎಸ್. ಸಿಂಗ್ ದಿಯೋ, ಶ್ರೀ ಮಂಗಲ್ ಪಾಂಡೆ, ಆರೋಗ್ಯ ಸಚಿವ (ಬಿಹಾರ), ಶ್ರೀ ಅನಿಲ್ ವಿಜ್, ಆರೋಗ್ಯ ಸಚಿವ (ಹರಿಯಾಣ), ಶ್ರೀ ಸತ್ಯೇಂದ್ರ ಕುಮಾರ್ ಜೈನ್, ಆರೋಗ್ಯ ಸಚಿವ (ದೆಹಲಿ),ಶ್ರೀ ರಾಜೇಶ್ ತೋಪೆ, ಆರೋಗ್ಯ ಸಚಿವ (ಮಹಾರಾಷ್ಟ್ರ), ಶ್ರೀ ನಬಾ ಕಿಶೋರ್ ದಾಸ್, ಆರೋಗ್ಯ ಸಚಿವ (ಒಡಿಶಾ), ಶ್ರೀ ರಾಜೀವ್ ಸೈಜಲ್, ಆರೋಗ್ಯ ಸಚಿವ (ಹಿಮಾಚಲ ಪ್ರದೇಶ),  ಶ್ರೀ ಬನ್ನಾ ಗುಪ್ತಾ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ (ಜಾರ್ಖಂಡ್), ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ (ಕರ್ನಾಟಕ), ಶ್ರೀಮತಿ ವೀಣಾ ಜಾರ್ಜ್, ಆರೋಗ್ಯ ಸಚಿವೆ (ಕೇರಳ), ಶ್ರೀ ರಘು ಶರ್ಮಾ, ಆರೋಗ್ಯ ಸಚಿವ (ರಾಜಸ್ಥಾನ) ಸೇರಿದಂತೆ ಸೇರಿದಂತೆ ರಾಜ್ಯಗಳ ಆರೋಗ್ಯ ಸಚಿವರು  ತಮ್ಮ ರಾಜ್ಯಗಳ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದರು.
  

 ಕ್ಷಯ ರೋಗದ ನಿರ್ಮೂಲನೆಯತ್ತ ಗಮನ ಹರಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಜೊತೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಸಮಾಲೋಚನೆ ಮುಂದುವರಿಸುವುದರಿಂದ ಈ ಸಂಬಂಧ ಉತ್ತಮ ಅಭ್ಯಾಸಗಳು/ಕಾರ್ಯ ವಿಧಾನಗಳ ಬಗ್ಗೆ ಚರ್ಚಿಸಲು ಮತ್ತು ಅವುಗಳ ಅನುಕರಣೆಗಾಗಿ ನೆರವಾಗಲಿದೆ ಎಂದು ಸಲಹೆ ನೀಡಿದರು. ಇದರಿಂದ ಸಾಮಾನ್ಯ ನೀತಿಗಳ ಕೇಂದ್ರೀಕೃತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಈ ಗುರಿಗಳನ್ನು ಸಾಮೂಹಿಕವಾಗಿ ಸಾಧಿಸಲು ಸಾಕಷ್ಟು ನೆರವಾಗಲಿದೆ ಎಂದರು. "ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಪರಸ್ಪರ ಹಂಚಿಕೊಂಡ ಗುರಿಗಳ ಸಾಧನೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ,ʼʼ ಎಂದು ಕೇಂದ್ರ ಆರೋಗ್ಯ ಸಚಿವರು ಅಭಿಪ್ರಾಯಪಟ್ಟರು.
"ಕ್ಷಯ ರೋಗ ನಿರ್ಮೂಲನೆ ಮಾಡುವ ಈ ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸುವಂತೆ ನಾವು ಜನ ಸಾಮಾನ್ಯರನ್ನು ಪ್ರೋತ್ಸಾಹಿಸಬೇಕು. ಇದನ್ನು ಜನರ ಉಪಕ್ರಮವನ್ನಾಗಿ ಮಾಡಬೇಕಾಗಿದೆ,ʼʼ ಎಂದರು. 2025ರ ವೇಳೆಗೆ ಕ್ಷಯ ಮುಕ್ತ ಭಾರತದ ಪ್ರಧಾನ ಮಂತ್ರಿಯವರ ಕನಸಾಗಿದ್ದು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ಷಯರೋಗದ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಎಲ್ಲ ಸಲಹೆಗಳನ್ನು  ಕೇಂದ್ರ ಸರಕಾರ ಮುಕ್ತವಾಗಿ ಸ್ವೀಕರಿಸುತ್ತದೆ ಎಂದು ಶ್ರೀ ಮಾಂಡವೀಯ ಭರವಸೆ ನೀಡಿದರು. ಕೋವಿಡ್‌ನ ಸಾರ್ವಜನಿಕ ಆರೋಗ್ಯ ನಿರ್ವಹಣೆ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳ ಬಗ್ಗೆಯೂ ಸಲಹೆಗಳನ್ನು ನೀಡುವಂತೆ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಿದರು. 
ಕೋವಿಡ್-19 ನಿಂದಾಗಿ ಟಿಬಿ ವಿರುದ್ಧ ಇದುವರೆಗೂ ಕೈಗೊಳ್ಳಲಾಗಿರುವ ಕ್ರಮಗಳಿಗೆ ಅಪಾಯ ಎದುರಾಗುವ ಬಗ್ಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೋವಿಡ್ ಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸಿರುವ ಬಗ್ಗೆ ಮಾಹಿತಿ ನೀಡಿದರು. ಶ್ರೀ ಮಾಂಡವೀಯ ಅವರು ಸೆಪ್ಟೆಂಬರ್ 5ರ ಒಳಗಾಗಿ ಎಲ್ಲಾ ಶಿಕ್ಷಕರಿಗೆ ಲಸಿಕೆ ಹಾಕುವ ಮಹತ್ವವನ್ನು ಒತ್ತಿ ಹೇಳಿದರು. ಇದಕ್ಕಾಗಿ ರಾಜ್ಯಗಳಿಗೆ ಹೆಚ್ಚುವರಿ ಡೋಸ್‌ಗಳನ್ನು ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ,  ನಿರ್ದಿಷ್ಟ ದಿನಗಳಲ್ಲಿ ನಿರ್ದಿಷ್ಟ ಸಮುದಾಯಗಳಿಗೆ ಲಸಿಕೆ ಅಭಿಯಾನಗಳನ್ನು ಪ್ರಾರಂಭಿಸಬೇಕು. ಉದಾಹರಣೇಗೆ ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟಗಾರರು, ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ರಿಕ್ಷಾವಾಲಗಳು ಹೀಗೆ ಜನರೊಂದಿಗೆ ನೇರವಾಗಿ ವ್ಯವಹರಿಸುವ ಸಮುದಾಯಕ್ಕೆ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಿದರು. ಲಸಿಕೆ ಉತ್ಪಾದನೆಯನ್ನು ತಿಂಗಳಿಂದ ತಿಂಗಳಿಗೆ ಹೆಚ್ಚಿಸುತ್ತಿರುವುದರಿಂದ ಯಾವುದೇ ಸಂಭಾವ್ಯ ಅಡಚಣೆಯನ್ನು ಪರಿಹರಿಸಲು ಕೇಂದ್ರವು ಲಸಿಕೆ ತಯಾರಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಎಲ್ಲಾ ರಾಜ್ಯ ಆರೋಗ್ಯ ಸಚಿವರಿಗೆ ಭರವಸೆ ನೀಡಿದರು. ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಕಾಯ್ದುಕೊಳ್ಳುವಂತೆ ಮತ್ತು ದೇಶದಲ್ಲಿ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾವುದೇ ಅಲಕ್ಷ್ಯ ತೋರಿಸದಂತೆ ಅವರು ರಾಜ್ಯಗಳನ್ನು ಕೋರಿದರು.
ಸಹಕಾರಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಡಾ. ಪವಾರ್ ಅವರು, ಮುಂದಿನ ಮೂರು ವರ್ಷಗಳಲ್ಲಿ ಕ್ಷಯ ರೋಗದ ನಿರ್ಮೂಲನೆಗಾಗಿ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಮೂಲಕ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಟಿಬಿ ಮತ್ತು ಕೋವಿಡ್‌ಗಳ ಅವಳಿ ತಪಾಸಣೆ ಮತ್ತು ಟಿಬಿ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವಂತಹ ವಿವಿಧ ಕ್ರಮಗಳನ್ನು ಅವರು ಶ್ಲಾಘಿಸಿದರು. ಸಕ್ರಿಯ ಪ್ರಕರಣ ಪತ್ತೆಯನ್ನು ಕಾರ್ಯವನ್ನು ವ್ಯಾಪಕಗೊಳಿಸುವಂತೆ ಆರೋಗ್ಯ ಆಡಳಿತ ಮಂಡಳಿಗಳ ತಂಡಗಳಿಗೆ ಉತ್ತೇಜಿಸಿದರು. "ಜನ್ ಜಾನ್‌ ಕೋ ಜಾಗ್‌ನಾ ಹೈನ್, ಟಿಬಿ ಕೋ ಭಾಗ್‌ನಾ ಹೈನ್" ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕಳೆದ ಕೆಲವು ವರ್ಷಗಳಲ್ಲಿ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಲ್ಲಿ ತಾವು ಕೈಗೊಂಡ ಕ್ರಮಗಳ ಪರಿಣಾಮವನ್ನು ವಿವರಿಸಿದವು ಮಾಡಿದವು ಮತ್ತು 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಅಭಿಯಾನಕ್ಕೆ ನೆರವು ನೀಡುವ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡವು. 
 
 

 ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀಮತಿ ಆರತಿ ಅಹುಜಾ, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಡಾ. ಮನೋಹರ್ ಅಗ್ನಾನಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.



(Release ID: 1751463) Visitor Counter : 441