ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

"ಸಂವಿಧಾನ ರೂಪಗೊಂಡ ಬಗೆ" ಇ-ಫೋಟೋ ಪ್ರದರ್ಶನ ಮತ್ತು "ಚಿತ್ರಾಂಜಲಿ@75" ವರ್ಚುಯಲ್‌ ಸಿನಿಮಾ ಪೋಸ್ಟರ್‌ ಪ್ರದರ್ಶನಕ್ಕೆ ಚಾಲನೆ ನೀಡಿದ ಶ್ರೀ ಅನುರಾಗ್‌ ಠಾಕೂರ್‌



'ನಿಮ್ಮ ಸಂವಿಧಾನವನ್ನು ತಿಳಿಯಿರಿ' ಅಭಿಯಾನವನ್ನು ಸರಕಾರ ಆರಂಭಿಸಲಿದೆ: ಶ್ರೀ ಠಾಕೂರ್

ʻಚಿತ್ರಾಂಜಲಿ@75ʼ ಸ್ವಾತಂತ್ರ್ಯ ಹೋರಾಟಗಾರರ ಪವಿತ್ರ ನೆನಪುಗಳನ್ನು ಉದ್ದೀಪನ ಮಾಡಲಿದೆ; ಭವಿಷ್ಯದಲ್ಲಿ ಇಂತಹ ಚಲನಚಿತ್ರಗಳನ್ನು ಜನರ ಬಳಿಗೆ ಸಚಿವಾಲಯ ಕೊಂಡೊಯ್ಯಲಿದೆ: ಶ್ರೀ ಠಾಕೂರ್

ಭಾರತದ ʻಸೌಮ್ಯ ಶಕ್ತಿʼಯನ್ನು ವಿಸ್ತರಿಸಲು ಭಾರತೀಯ ಚಲನಚಿತ್ರಗಳಿಗೆ ಒಂದು ವಿಶಿಷ್ಟ ಅವಕಾಶವಿದೆ: ಶ್ರೀ ಜಿ. ಕಿಶನ್ ರೆಡ್ಡಿ

'ಸಂವಿಧಾನ ರೂಪುಗೊಂಡ ಬಗೆ' ಪ್ರದರ್ಶನವು ನಮ್ಮ ಸ್ವಾತಂತ್ರ್ಯದ ಪ್ರಯಾಣದ ಮೈಲಿಗಲ್ಲುಗಳನ್ನು ಆಚರಿಸುತ್ತದೆ, ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 11 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ

Posted On: 27 AUG 2021 4:05PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹಾಗೂ ಪ್ರವಾಸೋದ್ಯಮ, ಭಾರತದ ಈಶಾನ್ಯ ವಲಯದ ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವ, ಶ್ರೀ ಜಿ. ಕಿಶನ್ ರೆಡ್ಡಿ ಅವರು "ಸಂವಿಧಾನ ರೂಪುಗೊಂಡ ಬಗೆ” ಇ-ಫೋಟೋ ಪ್ರದರ್ಶನ ಮತ್ತು ಚಿತ್ರಾಂಜಲಿ@75" ವರ್ಚುವಲ್ ಫಿಲ್ಮ್ ಪೋಸ್ಟರ್ ಪ್ರದರ್ಶನಕ್ಕೆ ಇಂದು ಚಾಲನೆ ನೀಡಿದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಡಾ. ಎಲ್. ಮುರುಗನ್; ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರೊಂದಿಗೆ ಈ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆಚರಿಸುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಅಂಗವಾಗಿ ಹಮ್ಮಿಕೊಂಡಿರುವ 'ಐಕಾನಿಕ್ ವೀಕ್' ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನವ ಭಾರತದ ಪ್ರಯಾಣವನ್ನು ಪ್ರದರ್ಶಿಸುವ ಮತ್ತು ಸ್ವಾತಂತ್ರ್ಯ ಚಳವಳಿಯ 'ಎಲೆಮರೆ ಕಾಯಿಗಳುʼ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಬೃಹತ್ ಜನಸಂಪರ್ಕ ಚಟುವಟಿಕೆಗಳ ಮೂಲಕ ಆಚರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಇದಕ್ಕಾಗಿ ವಿವಿಧ ಮಾಧ್ಯಮ ಘಟಕಗಳು ಈ ಸಂಭ್ರಮಾಚರಣೆಗೆ ಕೈ ಜೋಡಿಸಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್ ಅವರು, ʻʻ ಸಂವಿಧಾನ ರೂಪುಗೊಂಡ ಬಗೆಯ ಕುರಿತು ಜನರಿಗೆ ತಿಳಿಸುವುದು ಇ-ಫೋಟೋ ಪ್ರದರ್ಶನದ ಉದ್ದೇಶ,ʼʼ ಎಂದು ಹೇಳಿದರು. ʻಜನ-ಭಾಗಿದಾರಿʼ(ಜನರ ಪಾಲ್ಗೊಳ್ಳುವಿಕೆ) ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾದ ಈ ಪ್ರದರ್ಶನವು ಸಂವಿಧಾನದ ಬಗ್ಗೆ ತಿಳಿಯಲು ದೇಶದ ಯುವಕರನ್ನು ಉತ್ತೇಜಿಸುವುದಲ್ಲದೆ, ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುತ್ತದೆ ಮತ್ತು ರಾಷ್ಟ್ರದ ಬಗ್ಗೆಅವರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ ಎಂದರು.

ಭಾರತದ ಸಂವಿಧಾನದ ಮೂಲ ತತ್ವಗಳನ್ನು ಪ್ರಚಾರ ಮಾಡುವ ಪ್ರಯತ್ನದಲ್ಲಿ ಯುವಜನರು ಪಾಲ್ಗೊಳ್ಳುವಂತೆ ಉತ್ತೇಜಿಸಲು ಸರಕಾರ ಶೀಘ್ರದಲ್ಲೇ 'ನಿಮ್ಮ ಸಂವಿಧಾನವನ್ನು ತಿಳಿಯಿರಿ' ಕಾರ್ಯಕ್ರಮವನ್ನು ನಡೆಸಲಿದೆ ಎಂದು ಶ್ರೀ ಠಾಕೂರ್ ಘೋಷಿಸಿದರು.

"ಡಿಜಿಟಲ್ ಕ್ರಾಂತಿ ಪರಿವರ್ತನೆಗೆ ಅನುಗುಣವಾಗಿ ನಾವು ಈ ಸಂಕಲನವನ್ನು ಡಿಜಿಟಲ್ ಸ್ವರೂಪದಲ್ಲಿ ಬಿಡುಗಡೆ ಮಾಡಿದ್ದೇವೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಹನ್ನೊಂದು ಭಾರತೀಯ ಭಾಷೆಗಳಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ. ಈ ವಿಶಿಷ್ಟ ಸಂಗ್ರಹವು ನಮ್ಮ ಸ್ವಾತಂತ್ರ್ಯದ ಪ್ರಯಾಣದ ವಿವಿಧ ಮೈಲಿಗಲ್ಲುಗಳನ್ನು ಆಚರಿಸುತ್ತದೆ,” ಎಂದರು. ವರ್ಚುವಲ್ ಪ್ರದರ್ಶನವು ವಿಡಿಯೋಗಳು, ಭಾಷಣಗಳ ಸಂಗ್ರಹಗಳ ಜೊತೆಗೆ ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮವನ್ನೂ ಹೊಂದಿದೆ. ಇದರಲ್ಲಿ ಭಾಗವಹಿಸಿ ಇ-ಪ್ರಮಾಣಪತ್ರ ಪಡೆಯಲು ಅವಕಾಶವಿದೆ.

"ಚಿತ್ರಾಂಜಲಿ@75” ವರ್ಚುವಲ್ ಪೋಸ್ಟರ್ ಪ್ರದರ್ಶನದ ಬಗ್ಗೆ ಮಾತನಾಡಿದ ಸಚಿವರು “ಇದು 75 ವರ್ಷಗಳ ಭಾರತೀಯ ಸಿನೆಮಾವನ್ನು ಪ್ರತಿನಿಧಿಸುತ್ತದೆ. ಜೊತೆಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ನಮ್ಮ ಸಮಾಜ ಸುಧಾರಕರು ಮತ್ತು ನಮ್ಮ ಸೈನಿಕರ ಶೌರ್ಯದ ಪವಿತ್ರ ನೆನಪುಗಳ ಮೆಲುಕು ಮೂಡಿಸುತ್ತದೆ ಎಂಬ ಖಾತರಿ ನನಗಿದೆ. ಅಂತಹ 75 ಅಪ್ರತಿಮ ಚಲನಚಿತ್ರಗಳನ್ನು ನಮ್ಮ ಪೋಸ್ಟರ್ ಪ್ರದರ್ಶನದಲ್ಲಿ ಸೇರಿಸಲು ನಾವು ಪ್ರಯತ್ನಿಸಿದ್ದೇವೆ,ʼʼ ಎಂದರು. ಭವಿಷ್ಯದಲ್ಲಿ, ಸಚಿವಾಲಯವು ಕೇವಲ ಪೋಸ್ಟರ್‌ಗಳನ್ನು ಮಾತ್ರವಲ್ಲ, ಈ ಚಲನಚಿತ್ರಗಳನ್ನು ದೇಶದ ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತದೆ ಎಂದು ಸಚಿವರು ಹೇಳಿದರು.

ʻಸ್ವಾತಾಂತ್ರ್ಯದ ಅಮೃತ್ ಮಹೋತ್ಸವʼವನ್ನು ಆಚರಿಸಲು ಇಂತಹ ವಿಸ್ತೃತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು. "ಅಮೃತ ಮಹೋತ್ಸವವು ಸರಕಾರದ ಕಾರ್ಯಕ್ರಮವಾಗಿರಬಾರದು. ಬದಲಿಗೆ ಅದು ಜನರ ಕಾರ್ಯಕ್ರಮವಾಗಿರಬೇಕು ಎಂಬುದು ನಮ್ಮ ಪ್ರಧಾನ ಮಂತ್ರಿಯವರ ಆಶಯವಾಗಿದೆ. ಅದರ ಪ್ರಮುಖ ಸ್ಫೂರ್ತಿಯೇ ʻಜನ-ಭಾಗಿದಾರಿʼ ಆಂದೋಲನ,” ಎಂದು ಅವರು ಹೇಳಿದರು. ಈ ಕಾರ್ಯಕ್ರಮಗಳ ಮೂಲಕ ನಾವು 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಬಲಿಷ್ಠ, ಶಕ್ತಿಶಾಲಿ ಮತ್ತು ಸ್ವಾವಲಂಬಿ ಭಾರತವನ್ನು ಕಲ್ಪಿಸಿಕೊಳ್ಳಲು ಯುವಕರಿಗೆ ಸ್ಫೂರ್ತಿ ತುಂಬಲು ಪ್ರಧಾನಿ ಬಯಸುತ್ತಾರೆ ಎಂದು ಸಚಿವರು ಒತ್ತಿ ಹೇಳಿದರು.

"ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ʻಚಿತ್ರಾಂಜಲಿ@75ʼ ಜನರಿಗೆ ನೆನಪು ಮಾಡುತ್ತದೆ," ಎಂದು ಶ್ರೀ ರೆಡ್ಡಿ ಹೇಳಿದರು. “ನಮ್ಮ ಚಲನಚಿತ್ರಗಳನ್ನು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ನೋಡಲು ಇದು ಒಂದು ಸದವಕಾಶವಾಗಿದೆ.. ಭಾರತದ ಸೌಮ್ಯ ಶಕ್ತಿಯನ್ನು ಮತ್ತಷ್ಟು ವಿಸ್ತರಿಸಲು ಭಾರತೀಯ ಚಲನಚಿತ್ರಗಳಿಗೆ ಒಂದು ವಿಶಿಷ್ಟ ಅವಕಾಶವಿದೆ. ಫೋಟೋ ಮತ್ತು ಪೋಸ್ಟರ್ ಪ್ರದರ್ಶನವು ದೇಶದ ಯುವಕರಿಗೆ ಸ್ಫೂರ್ತಿ ಮತ್ತು ಶಕ್ತಿ ತುಂಬುತ್ತದೆ ಎಂಬ ವಿಶ್ವಾಸ ನನಗಿದೆ,ʼʼ ಎಂದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಮಾತನಾಡಿ, “ಈ ಕಾರ್ಯಕ್ರಮವು ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೇಶದ ಯುವಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನವಾಗಿದೆ,ʼʼ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಠಾಕೂರ್ ಅವರು ಶ್ರೀ ರೆಡ್ಡಿ, ಡಾ. ಎಲ್. ಮುರುಗನ್, ಶ್ರೀ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಅವರೊಂದಿಗೆ ಪ್ರದರ್ಶನಕ್ಕೆ ಇರಿಸಲಾದ ಚಿತ್ರಗಳ ಕೊಲಾಜ್ ಅನ್ನು ಅನಾವರಣಗೊಳಿಸಿದರು.

***

ಚಿತ್ರಾಂಜಲಿ@75 ಬಗ್ಗೆ:

ಇದು ಸ್ವಾತಂತ್ರ್ಯ ಹೋರಾಟದ ದೃಶ್ಯ ದಾಖಲೆಗಳನ್ನು ಅನಾವಣಗೊಳಿಸುವ ಚಿತ್ರಾವಳಿಯ ಸರಣಿ. ಈ ವರ್ಚುವಲ್ ಪ್ರದರ್ಶನವು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ವೈಭವೀಕರಿಸುವ ಭಾರತೀಯ ಚಿತ್ರಗಳನ್ನು ಅನಾವರಣಗೊಳಿಸುತ್ತದೆ. ಆಗ ಸಮಾಜದಲ್ಲಿ ಗುಪ್ತಗಾಮಿಯಾಗಿದ್ದ ಹೋರಾಟದ ಕಿಚ್ಚನ್ನು ಪ್ರತಿಬಿಂಬಿಸುವ ಮತ್ತು ವಿವಿಧ ಸುಧಾರಣೆಗಳಿಗೆ ಕಾರಣವಾದ ಚಲನಚಿತ್ರಗಳು ಹಾಗೂ ಸಮವಸ್ತ್ರಧಾರಿ ಹೀರೋಗಳಾದ ನಮ್ಮ ಯೋಧರನ್ನು ಅಮರಗೊಳಿಸಿದ ಚಲನಚಿತ್ರಗಳ ಪೋಸ್ಟರ್‌ಗಳನ್ನು ಇದರಲ್ಲಿ ಪ್ರದರ್ಶಿಸಲಾಗುವುದು.

ವಿವಿಧ ಭಾಷೆ ಸಿನೆಮಾಗಳ 75 ಚಲನಚಿತ್ರ ಪೋಸ್ಟರ್‌ಗಳು ಮತ್ತು ಛಾಯಾಚಿತ್ರಗಳ ಮೂಲಕ ದೇಶಭಕ್ತಿಯ ವಿಭಿನ್ನ ಮನಸ್ಥಿತಿಗಳನ್ನು 'ಚಿತ್ರಾಂಜಲಿ @ 75' ಪ್ರಸ್ತುತಪಡಿಸುತ್ತದೆ. ಪ್ರದರ್ಶನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ: 'ಸಮಾಜ ಸುಧಾರಣೆಯ ಸಿನೆಮಾ', 'ಸಿನೆಮಾದ ಕಣ್ಣಿನ ಮೂಲಕ ಸ್ವಾತಂತ್ರ್ಯ ಹೋರಾಟ', ಮತ್ತು 'ವೀರ ಸೈನಿಕರಿಗೆ ವಂದನೆʼ.

ʻಭಕ್ತ್ ವಿದುರ್‌ʼ(1921) ಎಂಬ ಮೂಕ ಚಿತ್ರದಿಂದ ಪ್ರಾರಂಭಿಸಿ, ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ, ಸೈ ರಾ ನರಸಿಂಹ ರೆಡ್ಡಿ (2019) ಅವರ ಜೀವನದಿಂದ ಪ್ರೇರಿತವಾದ ಇತ್ತೀಚಿನ ತೆಲುಗು ಚಿತ್ರದವರೆಗೆ ಈ 75 ಚಿತ್ರಗಳು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಗಳನ್ನು ಒಳಗೊಂಡಿವೆ. ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು ಚಿತ್ರಿಸುವ ವಿವಿಧ ಭಾಷೆಗಳ ಚಲನಚಿತ್ರಗಳು, ಸಾಮಾಜಿಕ ಪಿಡುಗುಗಳ ವಿರುದ್ಧ ವಿಜಯವನ್ನು ಸಾರಿದ ಮತ್ತು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ವೀರರ ಶೌರ್ಯವನ್ನು ಅನಾವರಣಗೊಳಿಸುವ ಚಿತ್ರಗಳನ್ನೂ ಇದು ಒಳಗೊಂಡಿದೆ.

ಪ್ರದರ್ಶನವನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಡೌನ್‌ಲೋಡ್ ಮಾಡುವ ಆಯ್ಕೆಗಳೊಂದಿಗೆ ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗಿದೆ.

ಪ್ರದರ್ಶನವು https://www.nfai.gov.in/virtual-poster-exhibition.php ನಲ್ಲಿ ಲಭ್ಯವಿದೆ.

ʻಚಿತ್ರಾಂಜಲಿ @75ʼ ಬಗ್ಗೆ ಹೆಚ್ಚಿನ ವಿವರಗಳನ್ನು ಓದಿ ಇಲ್ಲಿ ಕ್ಲಿಕ್ ಮಾಡಿ: https://pib.gov.in/PressReleseDetail.aspx?PRID=1749515)

ʻಸಂವಿಧಾನ ರೂಪುಗೊಂಡ ಬಗೆʼಯ ಕುರಿತು:

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ಸಂಭ್ರಮಾಚರಣೆ ಹಿನ್ನೆಕೆ ಆಚರಿಸಲಾಗುತ್ತಿರುವ 'ಸ್ವಾತಂತ್ರ್ಯದ ಅಮೃತಮಹೋತ್ಸವ'ದ ಭಾಗವಾಗಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸ್ವಾತಂತ್ರ್ಯ ಹೋರಾಟದ ವಿವಿಧ ಆಯಾಮಗಳ ಬಗ್ಗೆ ಇಡೀ ವರ್ಷ ಇ-ಪುಸ್ತಕಗಳ ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ಸರಣಿಯಲ್ಲಿ ಮೊದಲನೆಯದು 'ಸಂವಿಧಾನ ರೂಪುಗೊಂಡ ಬಗೆʼ. ಇದರ ನಂತರ ʻರಾಷ್ಟ್ರೀಯ ಏಕೀಕರಣʼ, ʻಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರುʼ, ʻಬುಡಕಟ್ಟು ಚಳವಳಿಗಳುʼ, ʻಕ್ರಾಂತಿಕಾರಿ/ಗಾಂಧಿ ಚಳವಳಿʼ ಇತ್ಯಾದಿ ವಿಷಯಗಳು ಪ್ರಕಟಗೊಳ್ಳಲಿವೆ.

ಸಂವಿಧಾನದ ರಚನೆಯನ್ನು ಚಿತ್ರಿಸುವ 'ಸಂವಿಧಾನದ ರೂಪುಗೊಂಡ ಬಗೆʼ ಇ-ಪುಸ್ತಕವು ಸುಮಾರು 25 ಅಪರೂಪದ ಚಿತ್ರಗಳ ಹೂರಣವನ್ನು ಹೊಂದಿದೆ. ಆಕಾಶವಾಣಿಯಿಂದ (ಎಐಆರ್‌) ಪಡೆಯಲಾದ ಮತ್ತು ಸಿನಿಮಾ ವಿಭಾಗದಿಂದ ಪಡೆಯಲಾದ ವೀಡಿಯೊಗಳು ಮತ್ತು ಭಾಷಣಗಳಿಗೆ ಲಿಂಕ್‌ಗಳನ್ನು ಸಹ ಇದು ಒಳಗೊಂಡಿದೆ.

ಇ-ಪುಸ್ತಕವು ಓದುಗರ ಜತೆ ಒಡನಾಟವನ್ನು ಹೆಚ್ಚಿಸಲು ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲು 10 ಪ್ರಶ್ನೆಗಳನ್ನು ಒಳಗೊಂಡ ರಸಪ್ರಶ್ನೆಯನ್ನು ಸಹ ಹೊಂದಿದೆ.

ಈ ಇ-ಪುಸ್ತಕವು ಹಿಂದಿ ಮತ್ತು ಇಂಗ್ಲಿಷ್ ಮತ್ತು ಇತರ 11 ಭಾಷೆಗಳಲ್ಲಿ (ಒಡಿಯಾ, ಗುಜರಾತಿ, ಮರಾಠಿ, ಅಸ್ಸಾಮಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಬಂಗಾಳಿ, ಉರ್ದು) ಲಭ್ಯವಿರುತ್ತದೆ. ಇದರ ಲಿಂಕ್‌ಗಳು ಸ್ಥಳೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು, ಪ್ರಾದೇಶಿಕ ಪಿಐಬಿ/ಆರ್‌ಒಬಿ ಕಚೇರಿಗಳಿಗೆ ಲಭ್ಯವಿರುತ್ತವೆ. ಜೊತೆಗೆ ಅವುಗಳ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಪ್ರಚಾರ ಅಭಿಯಾನ ಕೈಗೊಳ್ಳಲಾಗುವುದು.

ಇ-ಸಂಗ್ರಹವು ಇಲ್ಲಿ ಲಭ್ಯವಿದೆ: https://constitution-of-india.in/

***

 

 


(Release ID: 1749722) Visitor Counter : 364