ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕಳೆದ 24 ಗಂಟೆಗಳಲ್ಲಿ 88.13 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆಯ ಹೊಸ ಉತ್ತುಂಗವನ್ನು ಭಾರತ ಮುಟ್ಟಿದೆ


ಭಾರತದ ಎಲ್ಲಾ ವಯಸ್ಕರ ಪೈಕಿ 46% ಜನರು ಮೊದಲ ಡೋಸ್ ಪಡೆದಿದ್ದಾರೆ ಮತ್ತು ಎಲ್ಲಾ ವಯಸ್ಕ ಭಾರತೀಯರಲ್ಲಿ 13% ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ

Posted On: 17 AUG 2021 1:18PM by PIB Bengaluru

ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದ ಅಡಿಯಲ್ಲಿ 2021 ಆಗಸ್ಟ್ 16ರಂದು ಸುಮಾರು 88 ಲಕ್ಷ (88,13,919) ಡೋಸ್‌ಗಳನ್ನು ನೀಡುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ.

2021 ಜೂನ್ 7ರಂದು ಕೋವಿಡ್‌-19 ಲಸಿಕೆಯ ನೂತನ ಹಂತವನ್ನು ಘೋಷಿಸಿದ ಗೌರವಾನ್ವಿತ ಪ್ರಧಾನಮಂತ್ರಿಯವರು, ಜನರಿಗೆ ತಾವು ಲಸಿಕೆ ಪಡೆಯುವಂತೆ ಹಾಗೂ ಮೂಲಕ ಲಸಿಕೆ ಪಡೆಯಲು ಇತರ ಅರ್ಹರನ್ನು ಉತ್ತೇಜಿಸುವಂತೆ ಕರೆ ನೀಡಿದ್ದರು. ಇಂದಿನ ಸಾಧನೆಯು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಜನರು ಸರಕಾರದ ಮೇಲೆ ಇರಿಸಿರುವ ವಿಶ್ವಾಸವನ್ನು ಪ್ರದರ್ಶಿಸುತ್ತದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡವಾಗಿಯೇ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ಇತ್ಯಾದಿ ಕ್ರಮಗಳ ಮೂಲಕ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. ಇದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತಮ ಯೋಜನೆಯನ್ನು ರೂಪಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸಲು ಅನುವಾಗಿದೆ.

88.13 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡುವುದರೊಂದಿಗೆ, ಒಟ್ಟು ಲಸಿಕೆ ವ್ಯಾಪ್ತಿ 55.47 ಕೋಟಿಗೆ (55,47,30,609) ತಲುಪಿದೆ. ಅಂದರೆ, ಎಲ್ಲಾ ವಯಸ್ಕ ಭಾರತೀಯರಲ್ಲಿ 46% ಮೊದಲ ಡೋಸ್ ಪಡೆದಿದ್ದಾರೆ. ಎಲ್ಲಾ ವಯಸ್ಕ ಭಾರತೀಯರಲ್ಲಿ 13%ರಷ್ಟು ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ ಮತ್ತು ಮೂಲಕ ಕೋವಿಡ್-19 ವಿರುದ್ಧ ರಕ್ಷಣೆ ಪಡೆದಿದ್ದಾರೆ.

***


(Release ID: 1746671) Visitor Counter : 248