ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತಕ್ಕಾಗಿ ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ವಿಶೇಷ ವ್ಯಾಪಾರ ರಾಯಭಾರಿ ಗೌರವಾನ್ವಿತ ಟೋನಿ ಅಬಾಟ್ ನಡುವೆ ಸಭೆ

Posted On: 05 AUG 2021 6:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2021 ಆಗಸ್ಟ್ 2ರಿಂದ 6ರವರೆಗೆ ಭಾರತ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಗೌರವಾನ್ವಿತ ಟೋನಿ ಅಬಾಟ್ ಅವರನ್ನು ಭೇಟಿ ಮಾಡಿದ್ದರು. ಅವರು ಭಾರತಕ್ಕಾಗಿ ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ವಿಶೇಷ ವ್ಯಾಪಾರ ರಾಯಭಾರಿಯಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ-ಆಸ್ಟ್ರೇಲಿಯಾದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಸಂಬಂಧ, ಹೂಡಿಕೆ ಮತ್ತು ಆರ್ಥಿಕ ಸಹಕಾರ ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆರ್ಥಿಕ ಸಹಕಾರ ವೃದ್ಧಿಯಿಂದಾಗಿ ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಉಭಯ ದೇಶಗಳಿಗೂ ಸಹಕಾರಿಯಾಗಲಿದೆ ಹಾಗೂ ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋಪೆಸಿಫಿಕ್ ಪ್ರದೇಶದ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು

ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಅದ್ಭುತ  ಪ್ರಗತಿ ಸಾಧಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತೃಪ್ತಿ ವ್ಯಕ್ತಪಡಿಸಿದರು ಮತ್ತು ಪಯಣದಲ್ಲಿ ಪ್ರಧಾನಮಂತ್ರಿ ಮಾರಿಸನ್ ಮತ್ತು ಮಾಜಿ ಪ್ರಧಾನಿ ಅಬಾಟ್ ಅವರ ಮಹತ್ವದ ಕೊಡುಗೆಗಳನ್ನು ಶ್ಲಾಘಿಸಿದರು.

ಕಳೆದ ವರ್ಷ ಪ್ರಧಾನಮಂತ್ರಿ ಮಾರಿಸನ್ ಅವರೊಂದಿಗೆ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ ಅವರು, ಸದ್ಯ ಪರಿಸ್ಥಿತಿ ಅನುಕೂಲಕರವಾದ ಕೂಡಲೇ ಪ್ರಧಾನಮಂತ್ರಿ ಮಾರಿಸನ್ ಅವರಿಗೆ ಭಾರತದಲ್ಲಿ ಶೀಘ್ರವೇ ಆತಿಥ್ಯ ನೀಡುವ ತಮ್ಮ ಬಯಕೆಯನ್ನು ಪುನರುಚ್ಛರಿಸಿದರು.

2020 ಜೂನ್ 4 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ನಡುವೆ ನಡೆದ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ  ಉಭಯ ದೇಶದ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಏರಿಸಲಾಯಿತು. ಅದರಡಿ ಭಾರತ ಮತ್ತು ಆಸ್ಟ್ರೇಲಿಯಾ ವಿಸ್ತೃತ ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ವಿಸ್ತರಿಸಲು ಉತ್ತೇಜಿಸಲು ಬದ್ಧವಾಗಿದೆ. ಪರಸ್ಪರ ಲಾಭಕ್ಕಾಗಿ ಮತ್ತು  ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ(ಸಿಇಸಿಎ) ಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿವೆ. ಸದ್ಯದ ಗೌರವಾನ್ವಿತ ಟೋನಿ ಅಬಾಟ್ ಅವರ ಭೇಟಿ ಪರಸ್ಪರ ಹಂಚಿಕೆಯ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ.

***



(Release ID: 1743038) Visitor Counter : 180