ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೊವಿಡ್‌ 19: ಸತ್ಯ ಮತ್ತು ಮಿಥ್ಯೆ


ಮಕ್ಕಳಲ್ಲಿ ಹಲವು ಬಾರಿ ಕೊವಿಡ್‌–19ನ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ: ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್‌

ಆರೋಗ್ಯವಂತ ಮಕ್ಕಳು ಆಸ್ಪತ್ರೆಯ ಅಗತ್ಯ ಇಲ್ಲದೆಯೇ ಅಲ್ಪ ಅನಾರೋಗ್ಯದ ಬಳಿಕ ಗುಣಮುಖರಾಗುತ್ತಾರೆ. ಬೇರೆ, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಅಥವಾ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ: ನವದೆಹಲಿಯ ಎಐಐಎಂಎಸ್‌ (ಏಮ್ಸ್‌) ನಿರ್ದೇಶಕ ಡಾ. ರಣದೀಪ್‌ ಗುಲೆರಿಯಾ


ಕೊವ್ಯಾಕ್ಸಿನ್‌ ಪ್ರಯೋಗವನ್ನು 2ರಿಂದ 18 ವಯೋಮಾನದ ಮಕ್ಕಳ ಮೇಲೆ ಕೈಗೊಳ್ಳುವುದನ್ನು ಆರಂಭಿಸಲಾಗಿದೆ: ಎನ್‌ಟಿಎಜಿಐನ ಕೊವಿಡ್‌–19 ಕಾರ್ಯನಿರ್ವಹಣೆಯ ತಂಡದ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ

ಮಕ್ಕಳಿಗೆ (18 ವರ್ಷದ ಒಳಗಿನವರಿಗೆ) ಕೊವಿಡ್‌–19 ಸೋಂಕು ತಗುಲಿದರೆ ಯಾವ ರೀತಿಯಲ್ಲಿ ನಿರ್ವಹಣೆ ಕೈಗೊಳ್ಳಬೇಕು ಎನ್ನುವ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದೆ

Posted On: 30 JUN 2021 3:32PM by PIB Bengaluru

ಕೊವಿಡ್‌–19 ಸಾಂಕ್ರಾಮಿಕ ಕಾಯಿಲೆ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮುಂಚೂಣಿಯಲ್ಲಿದೆ.

ಸಾಂಕ್ರಾಮಿಕ ಕಾಯಿಲೆ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ರೂಪಿಸಿರುವ ಐದು ಅಂಶಗಳ ಕಾರ್ಯತಂತ್ರದಲ್ಲಿ (ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ ಮತ್ತು ಕೊವಿಡ್‌ ನಿಯಮಾವಳಿಗಳನ್ನು ಪಾಲಿಸುವುದು ಸೇರಿದಂತೆ) ಲಸಿಕೆ ಹಾಕುವುದು ಅವಿಭಾಜ್ಯ ಅಂಗವಾಗಿದೆ

ದೇಶದಲ್ಲಿ ಕೊವಿಡ್‌–19 ಎರಡನೇ ಅಲೆಯ ಸಂದರ್ಭದಲ್ಲಿ ಮೂರನೇ ಅಥವಾ ಮುಂದಿನ ಅಲೆಗಳ ಸಂದರ್ಭದಲ್ಲಿ ಮಕ್ಕಳ ಮೇಲೆ ಅತಿ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳ್ಲಲಿ ಹಲವು ಪ್ರಶ್ನೆಗಳನ್ನು ಪ್ರಸ್ತಾಪಿಸಲಾಯಿತು.

ತಜ್ಞರು ಇಂತಹ ಭಯ ಮತ್ತು ಆತಂಕಗಳನ್ನು ಈಗಾಗಲೇ ಹಲವು ವೇದಿಕೆಗಳ ಮೂಲಕ ದೂರ ಮಾಡಿದ್ದಾರೆ.

ಸೋಂಕಿಗೆ ಒಳಗಾಗುವ ಮಕ್ಕಳಿಗೆ ಪರಿಣಾಮಕಾರಿ ಆರೈಕೆ ಮತ್ತು ಚಿಕಿತ್ಸೆ ನೀಡಲು ಎಲ್ಲ ರೀತಿಯಲ್ಲೂ ಸಮಗ್ರವಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪೌಲ್‌ ಅವರು ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಕ್ಕಳಲ್ಲಿ ಹಲವು ಬಾರಿ ಕೊವಿಡ್‌–19ನ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆದರೆ, ಸೋಂಕಿಗೆ ಒಳಗಾಗುವ ಅತಿ ಕಡಿಮೆ ಶೇಕಡವಾರು ಪ್ರಮಾಣದಲ್ಲಿ ಕೆಲವು ಮಕ್ಕಳಿಗೆ ಮಾತ್ರ ಆಸ್ಪತ್ರೆ ಅಗತ್ಯವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

(https://pib.gov.in/PressReleasePage.aspx?PRID=1723469 )

ಮುಂದಿನ ಅಲೆಗಳ ಸಂದರ್ಭದಲ್ಲಿ ಮಕ್ಕಳು ಗಂಭಿರವಾಗಿ ಸೋಂಕಿಗೆ ಒಳಗಾಗುತ್ತಾರೆ ಎನ್ನುವುದಕ್ಕೆ ಭಾರತ ಅಥವಾ ಜಾಗತಿಕವಾಗಿ ಯಾವುದೇ ರೀತಿಯ ದತ್ತಾಂಶ ಲಭ್ಯವಾಗಿಲ್ಲ ಎಂದು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ನಿರ್ದೇಶಕ ಡಾ. ರಣದೀಪ್‌ ಗುಲೆರಿಯಾ ಅವರು 2021ರ ಜೂನ್‌ 8ರಂದು ಕೊವಿಡ್‌–19 ಕುರಿತ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿರುವ ಅವರು, ಭಾರತದಲ್ಲಿನ ಎರಡನೇ ಅಲೆಯ ಸಂದರ್ಭದಲ್ಲಿ ಅಲ್ಪ ಅನಾರೋಗ್ಯಕ್ಕೀಡಾದ ಆರೋಗ್ಯವಂತ ಮಕ್ಕಳು ಆಸ್ಪತ್ರೆಯ ಅಗತ್ಯ ಇಲ್ಲದೆಯೇ ಗುಣಮುಖರಾಗಿದ್ದಾರೆ. ಕೊವಿಡ್‌ –19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಮಕ್ಕಳು ಬೇರೆ, ಬೇರೆ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದರು ಅಥವಾ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿದ್ದರು ಎಂದು ವಿವರಿಸಿದ್ದಾರೆ.

(https://www.pib.gov.in/PressReleasePage.aspx?PRID=1725366 )

ಕೊವ್ಯಾಕ್ಸಿನ್‌ ಪ್ರಯೋಗವನ್ನು 2ರಿಂದ 18 ವಯೋಮಾನದ ಮಕ್ಕಳ ಮೇಲೆ ಕೈಗೊಳ್ಳುವುದನ್ನು ಆರಂಭಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ಫಲಿತಾಂಶ ದೊರೆಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡದ (ಎನ್‌ಟಿಎಜಿಐ) ಕೊವಿಡ್‌–19 ಕಾರ್ಯನಿರ್ವಹಣೆಯ ತಂಡದ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ತಿಳಿಸಿದ್ದಾರೆ. ಮಕ್ಕಳು ಸೋಂಕಿಗೆ ಒಳಗಾಗಬಹುದು. ಆದರೆ, ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

(https://pib.gov.in/PressReleseDetailm.aspx?PRID=1730219 )

ಸೋಂಕಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲೆ ಮತ್ತೆ ಕೊವಿಡ್‌–19 ಅಲೆಗಳು ಕಾಣಿಸಿಕೊಂಡರೆ ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಂತರನ್ನಾಗಿ ಇರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ (18 ವರ್ಷದ ಒಳಗಿನವರಿಗೆ) ಕೊವಿಡ್‌–19 ಸೋಂಕು ತಗುಲಿದರೆ ಯಾವ ರೀತಿಯಲ್ಲಿ ನಿರ್ವಹಣೆ ಕೈಗೊಳ್ಳಬೇಕು ಎನ್ನುವ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ 2021ರ ಜೂನ್‌ 18ರಂದು ಹೊರಡಿಸಿದೆ. ನಿಯಂತ್ರಣ ಮತ್ತು ತಡೆಯುವುದು ಹಾಗೂ ಮಾಸ್ಕ್‌ ಬಳಕೆಯ ಇತ್ಯಾದಿ ಸಲಹೆ ಸೇರಿದಂತೆ ರೋಗ ಲಕ್ಷಣಗಳು, ವಿವಿಧ ಚಿಕಿತ್ಸೆಗಳು, ನಿಗಾವಹಿಸುವುದು ಮತ್ತು ನಿರ್ವಹಣೆಯ ಬಗ್ಗೆ ಮಾರ್ಗಸೂಚಿಯ ದಾಖಲೆಯಲ್ಲಿ ವಿವರವಾಗಿ ತಿಳಿಸಲಾಗಿದೆ.

(https://www.mohfw.gov.in/pdf/GuidelinesforManagementofCOVID19inCHILDREN18June2021final.pdf )

ವೈರಸ್‌ ಸೋಂಕಿನ ಸರಪಳಿಯ ಕೊಂಡಿಯನ್ನು ಕಳಚುವಂತೆ ಮಾಡಬೇಕಾದರೆ, ಮಕ್ಕಳು ಮತ್ತು ವಯಸ್ಕರು ಕೊವಿಡ್‌–19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಹಲವು ತಜ್ಞರು ನಿರಂತರವಾಗಿ ಸಲಹೆ ನೀಡಿದ್ದಾರೆ.

***

 

 

 


(Release ID: 1731655) Visitor Counter : 282