ಹಣಕಾಸು ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ದೇಶದ ಆರ್ಥಿಕತೆಗೆ ನೆರವು
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ 6,28,993 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಣೆ
• ಕೋವಿಡ್ ನಿಂದ ಸಂತ್ರಸ್ತವಾದ ಕ್ಷೇತ್ರಗಳಿಗೆ 1.1 ಲಕ್ಷ ಕೋಟಿ ರೂ.ಗಳ ಸಾಲ ಖಾತ್ರಿ ಯೋಜನೆ
• ತುರ್ತು ಸಾಲ ಖಾತ್ರಿ ಯೋಜನೆಗೆ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ
• ಸಣ್ಣ ಹಣಕಾಸು ಸಂಸ್ಥೆ (ಎಂಎಫ್ಐ) ಗಳ ಮೂಲಕ 25 ಲಕ್ಷ ಜನರಿಗೆ ಸಾಲ ಖಾತ್ರಿ ಯೋಜನೆಯಲ್ಲಿ ಸಾಲ
• 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿಗರು / ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಪಾಲುದಾರರಿಗೆ ಹಣಕಾಸಿನ ನೆರವು
• ಮೊದಲ 5 ಲಕ್ಷ ಪ್ರವಾಸಿಗರಿಗೆ ಒಂದು ತಿಂಗಳ ಪ್ರವಾಸಿ ವೀಸಾ ಉಚಿತ
• ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆ 2022 ರ ಮಾರ್ಚ್ 31 ರವರೆಗೆ ವಿಸ್ತರಣೆ
• ಡಿಎಪಿ ಮತ
Posted On:
28 JUN 2021 6:53PM by PIB Bengaluru
ಕೋವಿಡ್-19 ಸಾಂಕ್ರಾಮಿಕ ರೋಗದ 2 ನೇ ಅಲೆಯಿಂದ ಸಂತ್ರಸ್ತವಾದ ವಿವಿಧ ಕ್ಷೇತ್ರಗಳಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದರು. ಘೋಷಿಸಲಾದ ಕ್ರಮಗಳು ಆರೋಗ್ಯ ವ್ಯವಸ್ಥೆಗಳನ್ನು ತುರ್ತು ಪ್ರತಿಕ್ರಿಯೆಗಾಗಿ ಸಿದ್ಧಪಡಿಸುವುದು ಮತ್ತು ಪ್ರಗತಿ ಮತ್ತು ಉದ್ಯೋಗಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿವೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಡಾ.ಟಿ.ವಿ.ಸೋಮನಾಥನ್; ಡಿಎಫ್ಎಸ್ ಕಾರ್ಯದರ್ಶಿ ಶ್ರೀ ದೇಬಾಶಿಶ್ ಪಾಂಡ ಮತ್ತು ಕಂದಾಯ ಕಾರ್ಯದರ್ಶಿ ಶ್ರೀ ತರುಣ್ ಬಜಾಜ್ ಪರಿಹಾರ ಪ್ಯಾಕೇಜ್ ಘೋಷಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ನವದೆಹಲಿಯಲ್ಲಿ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದರು.
6,28,993 ಕೋಟಿ ರೂ. ಮೊತ್ತದ ಈ ಪ್ಯಾಕೇಜ್ ನಲ್ಲಿ ಒಟ್ಟು 17 ಕ್ರಮಗಳನ್ನು ಘೋಷಿಸಲಾಗಿದೆ. ಇವುಗಳಲ್ಲಿ ಮೊದಲೇ ಘೋಷಿಸಲಾದ ಡಿಎಪಿ ಮತ್ತು ಪಿ & ಕೆ ರಸಗೊಬ್ಬರಗಳಿಗೆ ಹೆಚ್ಚುವರಿ ಸಬ್ಸಿಡಿ, ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಯನ್ನು ಮೇ ನಿಂದ ನವೆಂಬರ್ 2021 ರವರೆಗೆ ವಿಸ್ತರಿಸಲಾಗಿರುವ ಎರಡು ಯೋಜನೆಗಳೂ ಸೇರಿವೆ.
ಇಂದು ಘೋಷಿಸಲಾದ ಕ್ರಮಗಳನ್ನು 3 ವರ್ಗಗಳಾಗಿ ವಿಂಗಡಿಸಬಹುದು:
1. ಸಾಂಕ್ರಾಮಿಕದಿಂದ ಸಂತ್ರಸ್ತರಾದವರಿಗೆ ಆರ್ಥಿಕ ಪರಿಹಾರ
2. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು
3. ಬೆಳವಣಿಗೆ ಮತ್ತು ಉದ್ಯೋಗಕ್ಕೆ ಉತ್ತೇಜನ
I. ಸಾಂಕ್ರಾಮಿಕದಿಂದ ಸಂತ್ರಸ್ತರಾದವರಿಗೆ ಆರ್ಥಿಕ ಪರಿಹಾರ
ಇಂದು ಇಲ್ಲಿ ಘೋಷಿಸಲಾದ 17 ಯೋಜನೆಗಳಲ್ಲಿ ಎಂಟು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂತ್ರಸ್ತರಾದ ಜನರು ಮತ್ತು ವ್ಯವಹಾರಗಳಿಗೆ ಆರ್ಥಿಕ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿವೆ. ಆರೋಗ್ಯ ಮತ್ತು ಪ್ರವಾಸ, ಪ್ರವಾಸೋದ್ಯಮ ಕ್ಷೇತ್ರಗಳ ಪುನಶ್ಚೇತನಕ್ಕೆ ವಿಶೇಷ ಗಮನ ಹರಿಸಲಾಗಿದೆ.
i. ಕೋವಿಡ್ ಸಂತ್ರಸ್ತ ಕ್ಷೇತ್ರಗಳಿಗೆ 1.10 ಲಕ್ಷ ಕೋಟಿ ಸಾಲ ಖಾತರಿ ಯೋಜನೆ
ಈ ಹೊಸ ಯೋಜನೆಯಡಿ 1.1 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲವು ವ್ಯವಹಾರಗಳಿಗೆ ದೊರಕಲಿದೆ. ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಮತ್ತು ಪ್ರವಾಸೋದ್ಯಮ ಸೇರಿದಂತೆ ಇತರ ಕ್ಷೇತ್ರಗಳಿಗೆ 60,000 ಕೋಟಿ ರೂ. ಇದರಲ್ಲಿ ಸೇರಿವೆ.
ಆರೋಗ್ಯ ಕ್ಷೇತ್ರದ ಘಟಕವು ಹಿಂದುಳಿದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 8 ಮಹಾನಗರಗಳನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಆರೋಗ್ಯ / ವೈದ್ಯಕೀಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಸ್ತರಣೆ ಮತ್ತು ಹೊಸ ಯೋಜನೆಗಳಿಗೆ ಖಾತ್ರಿಯ ರಕ್ಷಣೆ (ಗ್ಯಾರಂಟಿ ಕವರ್) ಲಭ್ಯವಿರುತ್ತದೆ. ಗ್ಯಾರಂಟಿ ಕವರ್ ವಿಸ್ತರಣೆಗೆ ಶೇ.50 ಮತ್ತು ಹೊಸ ಯೋಜನೆಗಳಿಗೆ ಶೇ.75 ಆಗಿರುತ್ತದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಈ ಗ್ಯಾರಂಟಿ ಕವರ್ ವಿಸ್ತರಣೆ ಮತ್ತು ಹೊಸ ಯೋಜನೆಗಳೆರಡಕ್ಕೂ ಶೇ.75 ಆಗಿರುತ್ತದೆ. ಯೋಜನೆಯಡಿ ಲಭ್ಯವಾಗುವ ಗರಿಷ್ಠ ಸಾಲ ರೂ. 100 ಕೋಟಿ ಮತ್ತು ಗ್ಯಾರಂಟಿ ಅವಧಿ 3 ವರ್ಷಗಳವರೆಗೆ ಇರುತ್ತದೆ. ಈ ಸಾಲಗಳಿಗೆ ಬ್ಯಾಂಕುಗಳು ಗರಿಷ್ಠ ಶೇ.7.95 ಬಡ್ಡಿ ವಿಧಿಸಬಹುದು. ಇತರ ವಲಯಗಳಿಗೆ ಸಾಲಗಳು ವಾರ್ಷಿಕ ಶೇ.8.25 ರ ಬಡ್ಡಿಯಲ್ಲಿ ಲಭ್ಯವಿರುತ್ತವೆ. ಆದ್ದರಿಂದ ಖಾತರಿಯಿಲ್ಲದ ಸಾಲಗಳಿಗೆ ಇರುವ ಶೇ.10-11 ರಷ್ಟು ಸಾಮಾನ್ಯ ಬಡ್ಡಿದರಗಳಿಗೆ ಹೋಲಿಸಿದರೆ ಯೋಜನೆಯಡಿಯಲ್ಲಿ ಲಭ್ಯವಿರುವ ಸಾಲಗಳು ಅಗ್ಗವಾಗಿರುತ್ತವೆ.
ii. ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್ಜಿಎಸ್)
ಆತ್ಮನಿರ್ಭರ ಭಾರತ್ ಪ್ಯಾಕೇಜ್ನ ಅಂಗವಾಗಿ 2020 ರ ಮೇ ತಿಂಗಳಲ್ಲಿ ಪ್ರಾರಂಭಿಸಲಾದ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್ಜಿಎಸ್) ಯನ್ನು 1.5 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇಸಿಎಲ್ಜಿಎಸ್ಗೆ 2.73 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಈ ಯೋಜನೆಯಡಿ ಈಗಾಗಲೇ 2.10 ಲಕ್ಷ ಕೋಟಿ ರೂ. ಗಳನ್ನು ವಿತರಿಸಲಾಗಿದೆ. ವಿಸ್ತರಿತ ಯೋಜನೆಯಡಿಯಲ್ಲಿ, ಪ್ರತಿ ಸಾಲದ ಬಾಕಿ ಇರುವ ಶೇ.20 ರಷ್ಟು ಅಸ್ತಿತ್ವದಲ್ಲಿರುವ ಮಟ್ಟಕ್ಕಿಂತ ಸ್ವೀಕಾರಾರ್ಹ ಖಾತ್ರಿ ಮತ್ತು ಸಾಲದ ಮೊತ್ತವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅಗತ್ಯಗಳಿಗೆ ಅನುಗುಣವಾಗಿ ವಲಯವಾರು ವಿವರಗಳನ್ನು ಅಂತಿಮಗೊಳಿಸಲಾಗುತ್ತದೆ. ಸ್ವೀಕಾರಾರ್ಹ ಖಾತರಿಯ ಒಟ್ಟಾರೆ ಮಿತಿಯನ್ನು ರೂ. 3 ಲಕ್ಷ ಕೋಟಿಯಿಂದ ರೂ. 4.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
iii. ಸಣ್ಣ ಹಣಕಾಸು ಸಂಸ್ಥೆಗಳಿಗೆ ಸಾಲ ಖಾತರಿ ಯೋಜನೆ
ಇಂದು ಘೋಷಿಸಲಾದ ಯೋಜನೆಗಳಲ್ಲಿ ಇದು ಸಂಪೂರ್ಣವಾಗಿ ಹೊಸದಾಗಿದೆ. ಇದು ಸಣ್ಣ ಹಣಕಾಸು ಸಂಸ್ಥೆಗಳ ಜಾಲದ ಸಣ್ಣ ಸಾಲಗಾರರಿಗೆ ಲಾಭದಾಯಕವಾಗಿದೆ. ಹೊಸ ಅಥವಾ ಅಸ್ತಿತ್ವದಲ್ಲಿರುವ ಎನ್ಬಿಎಫ್ಸಿ-ಎಂಎಫ್ಐ ಅಥವಾ ಎಂಎಫ್ಐಗಳಿಗೆ ಸುಮಾರು 25 ಲಕ್ಷ ಸಣ್ಣ ಸಾಲಗಾರರಿಗೆ 1.25 ಲಕ್ಷ ರೂ. ವರೆಗೆ ಸಾಲ ನೀಡಲು ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ಖಾತರಿ ನೀಡಲಾಗುವುದು. ಬ್ಯಾಂಕುಗಳಿಂದ ಸಾಲವನ್ನು ಎಂಸಿಎಲ್ಆರ್ ಜೊತೆಗೆ ಶೇ.2 ರಷ್ಟು ಮಿತಿ ಇರುತ್ತದೆ. ಗರಿಷ್ಠ ಸಾಲದ ಅವಧಿ 3 ವರ್ಷಗಳು ಮತ್ತು ಶೇ.80 ರಷ್ಟು ಸಹಾಯವನ್ನು ಹೆಚ್ಚುತ್ತಿರುವ ಸಾಲಕ್ಕಾಗಿ ಎಂಎಫ್ಐ ಬಳಸುತ್ತದೆ. ಬಡ್ಡಿದರಗಳು ಆರ್ಬಿಐ ನಿಗದಿಪಡಿಸಿದ ಗರಿಷ್ಠ ದರಕ್ಕಿಂತ ಕನಿಷ್ಠ ಶೇ.2 ರಷ್ಟು ಕಡಿಮೆ ಇರುತ್ತದೆ. ಈ ಯೋಜನೆಯು ಹೊಸ ಸಾಲಗಳ ಮೇಲೆ ಕೇಂದ್ರೀಕರಿಸುತ್ತದೆ, ಹಳೆಯ ಸಾಲಗಳ ಮರುಪಾವತಿಯ ಮೇಲೆ ಅಲ್ಲ. ಕುಟುಂಬ ಆದಾಯ ಮತ್ತು ಸಾಲದ ಮಿತಿ ಮುಂತಾದ ಅಸ್ತಿತ್ವದಲ್ಲಿರುವ ಆರ್ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾಲಗಾರರಿಗೆ ಎಂಎಫ್ಐ ಸಾಲ ನೀಡಲಿದೆ. ಯೋಜನೆಯ ಮತ್ತೊಂದು ವೈಶಿಷ್ಟ್ಯವೆಂದರೆ ಎಲ್ಲಾ ಸಾಲಗಾರರು (89 ದಿನಗಳವರೆಗೆ ಡೀಫಾಲ್ಟರ್ಗಳನ್ನು ಒಳಗೊಂಡಂತೆ) ಇದಕ್ಕೆ ಅರ್ಹರಾಗಿರುತ್ತಾರೆ. ಎಂಎಫ್ಐಗಳು / ಎನ್ಬಿಎಫ್ಸಿ-ಎಮ್ಎಫ್ಐಗಳಿಗೆ ಎಂಎಲ್ಐಗಳು ಒದಗಿಸುವ ನಿಧಿಗೆ ಮಾರ್ಚ್ 31, 2022 ರವರೆಗೆ ಅಥವಾ. 7,500 ಕೋಟಿ ರೂ. ಗ್ಯಾರಂಟಿ ನೀಡುವವರೆಗೆ ಗ್ಯಾರಂಟಿ ಕವರ್ ಲಭ್ಯವಿರುತ್ತದೆ. ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ (ಎನ್ಸಿಜಿಟಿಸಿ) ಮೂಲಕ 3 ವರ್ಷಗಳವರೆಗೆ ಡೀಫಾಲ್ಟ್ ಮೊತ್ತದ ಶೇ.75 ರವರೆಗೆ ಖಾತರಿ ನೀಡಲಾಗುವುದು.
ಯೋಜನೆಯಡಿ ಎನ್ಸಿಜಿಟಿಸಿಯಿಂದ ಯಾವುದೇ ಖಾತ್ರಿ ಶುಲ್ಕ ವಿಧಿಸಲಾಗುವುದಿಲ್ಲ.
iv. ಪ್ರವಾಸಿಗರ ಮಾರ್ಗದರ್ಶಿಗಳು / ಪಾಲುದಾರರಿಗಾಗಿ ಯೋಜನೆ
ಇಂದು ಘೋಷಿಸಲಾದ ಮತ್ತೊಂದು ಹೊಸ ಯೋಜನೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಪರಿಹಾರ ನೀಡುವ ಗುರಿಯನ್ನು ಹೊಂದಿದೆ. ಕೋವಿಡ್ ಸಂತ್ರಸ್ತ ವಲಯಗಳಿಗೆ ಹೊಸ ಸಾಲ ಖಾತರಿ ಯೋಜನೆಯಡಿ, ಪ್ರವಾಸೋದ್ಯಮ ಕ್ಷೇತ್ರದ ಜನರಿಗೆ ಹೊಣೆಗಾರಿಕೆಗಳನ್ನು ತೀರಿಸಲು ಮತ್ತು ಸಾಂಕ್ರಾಮಿಕ ರೋಗದಿಂದ ಸಂತ್ರಸ್ತವಾದ ವ್ಯವಹಾರಗಳನ್ನು ಪುನರಾರಂಭಿಸಲು ಮೂಲ ಬಂಡವಾಳ / ವೈಯಕ್ತಿಕ ಸಾಲಗಳನ್ನು ಒದಗಿಸಲಾಗುವುದು. ಈ ಯೋಜನೆಯು ಪ್ರವಾಸೋದ್ಯಮ ಸಚಿವಾಲಯದಿಂದ ಗುರುತಿಸಲ್ಪಟ್ಟ 10,700 ಪ್ರಾದೇಶಿಕ ಮಟ್ಟದ ಪ್ರವಾಸಿ ಮಾರ್ಗದರ್ಶಿಗಳು ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಪ್ರವಾಸಿ ಮಾರ್ಗದರ್ಶಿಗಳು ಮತ್ತು ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಸುಮಾರು 1,000 ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರನ್ನು (ಟಿಟಿಎಸ್) ಒಳಗೊಂಡಿರುತ್ತದೆ ಟಿಟಿಎಸ್ ಗಳು ತಲಾ 10 ಲಕ್ಷ ರೂ. ಪ್ರವಾಸಿ ಮಾರ್ಗದರ್ಶಿಗಳು ತಲಾ 1 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಯಾವುದೇ ಪ್ರಕ್ರಿಯೆ ಶುಲ್ಕಗಳು ಇರುವುದಿಲ್ಲ, ಮುಂಗಡವಾಗಿ ತೀರಿಸುವಿಕೆ / ಪೂರ್ವಪಾವತಿ ಶುಲ್ಕಗಳಿಗೆ ವಿನಾಯ್ತಿ ಮತ್ತು ಹೆಚ್ಚುವರಿ ಮೇಲಾಧಾರದ ಅಗತ್ಯವಿಲ್ಲ. ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯವು ಎನ್ಸಿಜಿಟಿಸಿ ಮೂಲಕ ನಿರ್ವಹಿಸುತ್ತದೆ.
v. 5 ಲಕ್ಷ ಪ್ರವಾಸಿಗರಿಗೆ ಒಂದು ತಿಂಗಳ ಉಚಿತ ಪ್ರವಾಸಿ ವೀಸಾ
ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ, ಮೊದಲ 5 ಲಕ್ಷ ಪ್ರವಾಸಿಗರಿಗೆ ಭಾರತಕ್ಕೆ ಭೇಟಿ ನೀಡಲು ವೀಸಾವನ್ನು ಉಚಿತವಾಗಿ ನೀಡಲಾಗುವುದು. ಆದಾಗ್ಯೂ, ಪ್ರತಿ ಪ್ರವಾಸಿಗರಿಗೆ ಒಮ್ಮೆ ಮಾತ್ರ ಇದರ ಪ್ರಯೋಜನ ಲಭ್ಯವಿರುತ್ತದೆ. ಈ ಸೌಲಭ್ಯವು 2022 ರ ಮಾರ್ಚ್ 31 ರವರೆಗೆ ಅಥವಾ 5 ಲಕ್ಷ ವೀಸಾಗಳನ್ನು ನೀಡುವವರೆಗೆ ಅನ್ವಯಿಸುತ್ತದೆ. ಸರ್ಕಾರಕ್ಕೆ ಈ ಯೋಜನೆಯ ಒಟ್ಟು ಆರ್ಥಿಕ ವೆಚ್ಚ 100 ಕೋಟಿ ರೂ.ಆಗಿರುತ್ತದೆ.
vi. ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ ವಿಸ್ತರಣೆ
ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ 2020 ರ ಅಕ್ಟೋಬರ್ 1 ರಂದು ಪ್ರಾರಂಭವಾಯಿತು. ಇದು ಹೊಸ ಉದ್ಯೋಗ ಸೃಷ್ಟಿಗೆ ಉದ್ಯೋಗದಾತರನ್ನು ಉತ್ತೇಜಿಸುತ್ತದೆ, ಇಪಿಎಫ್ಒ ಮೂಲಕ ಉದ್ಯೋಗ ನಷ್ಟವನ್ನು ಮರುಸ್ಥಾಪಿಸುತ್ತದೆ. ಯೋಜನೆಯಡಿಯಲ್ಲಿ, 1,000 ಉದ್ಯೋಗಿಗಳವರೆಗಿನ ಸಂಸ್ಥೆಗಳ ಹೊಸ ಉದ್ಯೋಗಿಗಳಿಗೆ ನೋಂದಣಿಯಿಂದ ಎರಡು ವರ್ಷಗಳವರೆಗೆ 15,000 ರೂ.ಗಳಿಗಿಂತ ಕಡಿಮೆ ವೇತನವನ್ನು ಪಡೆಯುವ ಉದ್ಯೋಗದಾತ ಮತ್ತು ಉದ್ಯೋಗಿಗಳ ಕೊಡುಗೆಗೆ (ಒಟ್ಟು ವೇತನದ ಶೇ.24) ಸಹಾಯಧನವನ್ನು ನೀಡಲಾಗುತ್ತದೆ; ಮತ್ತು 1,000 ಕ್ಕಿಂತ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವಿರುವ ಸಂಸ್ಥೆಗಳ ನೌಕರರ ಪಾಲು (ವೇತನದ ಶೇ.12) ಮಾತ್ರ. ಈ ಯೋಜನೆಯಡಿ 79,577 ಸಂಸ್ಥೆಗಳ 21.42 ಲಕ್ಷ ಫಲಾನುಭವಿಗಳಿಗೆ 18.06.2021 ರವರೆಗೆ 902 ಕೋಟಿ ರೂ. ಲಾಭವನ್ನು ನೀಡಲಾಗಿದೆ. ಯೋಜನೆಯಡಿ ನೋಂದಣಿಯ ದಿನಾಂಕವನ್ನು 30.6.2021 ರಿಂದ 31.03.2022 ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.
vii. ಡಿಎಪಿ ಮತ್ತು ಪಿ & ಕೆ ರಸಗೊಬ್ಬರಗಳಿಗೆ ಹೆಚ್ಚುವರಿ ಸಹಾಯಧನ
ಡಿಎಪಿ ಮತ್ತು ಪಿ & ಕೆ ರಸಗೊಬ್ಬರಗಳಿಗೆ ರೈತರಿಗೆ ಹೆಚ್ಚುವರಿ ಸಹಾಯಧನವನ್ನು ಇತ್ತೀಚೆಗೆ ಘೋಷಿಸಲಾಯಿತು. ಅದರ ವಿವರಗಳನ್ನು ನೀಡಲಾಯಿತು. ಅಸ್ತಿತ್ವದಲ್ಲಿರುವ ಎನ್ಬಿಎಸ್ ಸಬ್ಸಿಡಿ 2020-21ನೇ ಸಾಲಿನಲ್ಲಿ 27,500 ಕೋಟಿ ರೂ.ಆಗಿದ್ದು, ಇದನ್ನು 2021-22ರ ಹಣಕಾಸು ವರ್ಷದಲ್ಲಿ 42,275 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ರೈತರು ಹೆಚ್ಚುವರಿಯಾಗಿ 14,775 ಕೋಟಿ ರೂ. ಪ್ರಯೋಜನ ಪಡೆಯಲಿದ್ದಾರೆ. ಇದರಲ್ಲಿ ಡಿಎಪಿಗೆ 9,125 ಕೋಟಿ ರೂ ಹೆಚ್ಚುವರಿ ಸಬ್ಸಿಡಿ ಮತ್ತು ಎನ್ಪಿಕೆ ಆಧಾರಿತ ಕಾಂಪ್ಲೆಕ್ಸ್ ರಸಗೊಬ್ಬರಕ್ಕೆ 5,650 ಕೋಟಿ ರೂ. ಹೆಚ್ಚುವರಿ ಸಹಾಯಧನ ಸೇರಿದೆ.
viii. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ 2021 ರ ಮೇ ನಿಂದ ನವೆಂಬರ್ ವರೆಗೆ ಉಚಿತ ಆಹಾರ ಧಾನ್ಯ ವಿತರಣೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಡವರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ 133,972 ಕೋಟಿ ರೂ.ಗಳನ್ನು ಪಿಎಂಜಿಕೆವೈ ಅಡಿಯಲ್ಲಿ ಖರ್ಚು ಮಾಡಿದೆ. ಈ ಯೋಜನೆಯನ್ನು ಆರಂಭದಲ್ಲಿ 2020 ರ ಏಪ್ರಿಲ್ನಿಂದ ಜೂನ್ ವರೆಗೆ ಪ್ರಾರಂಭಿಸಲಾಯಿತು. ಆದಾಗ್ಯೂ, ಬಡವರಿಗೆ ಮತ್ತು ನಿರ್ಗತಿಕರಿಗೆ ನಿರಂತರ ಬೆಂಬಲ ನೀಡುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ನವೆಂಬರ್ 2020 ರವರೆಗೆ ವಿಸ್ತರಿಸಲಾಯಿತು. ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಬಡ / ದುರ್ಬಲರ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಮೇ 2021 ರಲ್ಲಿ ಮರುಪ್ರಾರಂಭಿಸಲಾಯಿತು. 2021 ರ ಮೇ ನಿಂದ ನವೆಂಬರ್ ವರೆಗೆ ಐದು ಕೆಜಿ ಆಹಾರ ಧಾನ್ಯಗಳನ್ನು ಎನ್ಎಫ್ಎಸ್ಎ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುವುದು. ಯೋಜನೆಯ ಅಂದಾಜು ಆರ್ಥಿಕ ವೆಚ್ಚ 93,869 ಕೋಟಿ ರೂ. ಆಗಿದ್ದು, ಪಿಎಂಜಿಕೆವೈ ನ ಒಟ್ಟು ವೆಚ್ಚವನ್ನು 2,27,841 ಕೋಟಿ ರೂ.ಗಳಿಗೆ ಹೆಚ್ಚಿಸುತ್ತದೆ.
II. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು
ಮಕ್ಕಳು ಮತ್ತು ಮಕ್ಕಳ ಆರೈಕೆ / ಮಕ್ಕಳ ಹಾಸಿಗೆಗಳಿಗೆ ಒತ್ತು ನೀಡಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು 23,220 ಕೋಟಿ ರೂ.
ಸಾಲ ಖಾತ್ರಿ ಯೋಜನೆಯ ಮೂಲಕ ಆರೋಗ್ಯ ಕ್ಷೇತ್ರವನ್ನು ಬೆಂಬಲಿಸುವುದರ ಜೊತೆಗೆ, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು 23,220 ಕೋಟಿ ರೂ. ವಿನಿಯೋಗದೊಂದಿಗೆ ಬಲಪಡಿಸುವ ಹೊಸ ಯೋಜನೆಯನ್ನು