ಪ್ರಧಾನ ಮಂತ್ರಿಯವರ ಕಛೇರಿ
ಟಾಯ್ಕಥಾನ್-2021ರ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
‘ಟಾಯೊಕೋನಮಿ’ಯಲ್ಲಿ ಉತ್ತಮ ಸ್ಥಾನಕ್ಕೆ ಕರೆ
ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಅಗತ್ಯ ಇರುವ ವಿಭಾಗಗಳಿಗೆ ತೆಗೆದುಕೊಂಡು ಹೋಗುವಲ್ಲಿ ಆಟಿಕೆ ಕ್ಷೇತ್ರದ ಮಹತ್ವದ ಪ್ರತಿಪಾದನೆ
ನಾವು ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಬೇಕು: ಪ್ರಧಾನಮಂತ್ರಿ
ವಿಶ್ವ ಭಾರತದ ಸಾಮರ್ಥ್ಯ, ಕಲೆ, ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ತಿಳಿಯಲು ಬಯಸುತ್ತದೆ ಇದರಲ್ಲಿ ಆಟಿಕೆಗಳು ದೊಡ್ಡ ಪಾತ್ರ ನಿರ್ವಹಿಸುತ್ತವೆ: ಪ್ರಧಾನಮಂತ್ರಿ
ಭಾರತವು ಡಿಜಿಟಲ್ ಗೇಮಿಂಗ್ ನಲ್ಲಿ ವಿಪುಲ ವಸ್ತುವಿಷಯ ಮತ್ತು ಸಾಮರ್ಥ್ಯವನ್ನು ಹೊಂದಿದೆ: ಪ್ರಧಾನಮಂತ್ರಿ
ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವು ಆಟಿಕೆ ಉದ್ಯಮದ ನಾವಿನ್ಯದಾರರು ಮತ್ತು ಸೃಷ್ಟಿಕರ್ತರಿಗೆ ಬೃಹತ್ ಅವಕಾಶವಾಗಿದೆ: ಪ್ರಧಾನಮಂತ್ರಿ
Posted On:
24 JUN 2021 1:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟಾಯ್ಕಥಾನ್ -2021ರ ಸ್ಪರ್ಧಿಗಳೊಂದಿಗೆ ಇಂದು ವಿಡಿಯೋ ಸಂವಾದದ ಮೂಲಕ ಸಂವಾದ ನಡೆಸಿದರು. ಕೇಂದ್ರ ಸಚಿವ ಶ್ರೀ ಪೀಯೂಷ್ ಗೋಯೆಲ್ ಮತ್ತು ಶ್ರೀ ಸಂಜಯ್ ಧೋತ್ರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 5-6 ವರ್ಷಗಳಲ್ಲಿ, ದೇಶದ ಯುವಜನರು ಹ್ಯಾಕಥಾನ್ ನಂತಹ ವೇದಿಕೆಗಳ ಮೂಲಕ ದೇಶದ ಪ್ರಮುಖ ಸವಾಲುಗಳೊಂದಿಗೆ ಸಂಪರ್ಕಿತರಾಗಿದ್ದಾರೆ. ಇದರ ಹಿಂದಿನ ಉದ್ದೇಶ ದೇಶದ ಸಾಮರ್ಥ್ಯಗಳನ್ನು ಸಂಯೋಜಿಸುವುದು ಮತ್ತು ಅವರಿಗೆ ಒಂದು ಮಾಧ್ಯಮ ನೀಡುವುದಾಗಿದೆ ಎಂದರು.
ಮಕ್ಕಳಿಗೆ ಪ್ರಥಮ ಗೆಳೆಯನಾದ ಆಟಿಕೆಗಳ ಮಹತ್ವದ ಹೊರತಾಗಿ, ಆಟಿಕೆಗಳು ಮತ್ತು ಗೇಮಿಂಗ್ ನ ಆರ್ಥಿಕ ಅಂಶಗಳನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು, ಅವರು ಇದನ್ನು ‘ಟಾಯೊಕೋನಮಿ’ ಎಂದು ಉಲ್ಲೇಖಿಸಿದರು. ಜಾಗತಿಕ ಆಟಿಕೆ ಮಾರುಕಟ್ಟೆ ಸುಮಾರು 100 ಶತಕೋಟಿ ಡಾಲರ್ ನದಾಗಿದ್ದು, ಭಾರತವು ಈ ಮಾರುಕಟ್ಟೆಯ ಪಾಲು ಶೇಕಡಾ 1.5 ರಷ್ಟು ಮಾತ್ರ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ತನ್ನ ಆಟಿಕೆಗಳಲ್ಲಿ ಸುಮಾರು ಶೇ.80ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅಂದರೆ, ಕೋಟ್ಯಂತರ ರೂಪಾಯಿ ದೇಶದಿಂದ ಹೊರ ಹೋಗುತ್ತಿದೆ. ಇದು ಬದಲಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಸಂಖ್ಯೆಗಳನ್ನು ಮೀರಿ, ಈ ವಲಯವು ಸಮಾಜದ ಅಗತ್ಯವಿರುವ ಭಾಗಗಳಿಗೆ ಪ್ರಗತಿ ಮತ್ತು ಬೆಳವಣಿಗೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.. ಆಟಿಕೆ ಉದ್ಯಮವು ತನ್ನದೇ ಆದ ಸಣ್ಣ-ಪ್ರಮಾಣದ ಉದ್ಯಮವನ್ನು ಹೊಂದಿದ್ದು ಇದರಲ್ಲಿನ ಕುಶಲಕರ್ಮಿಗಳು, ಗ್ರಾಮೀಣ ಜನರು, ದಲಿತರು, ಬಡ ಜನರು ಮತ್ತು ಬುಡಕಟ್ಟು ಜನರಾಗಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಗುರುತಿಸಿದರು. ಈ ವಿಭಾಗಗಳಿಗೆ ಪ್ರಯೋಜನಗಳನ್ನು ತೆಗೆದುಕೊಂದು ಹೋಗಲು, ನಾವು ಸ್ಥಳೀಯ ಆಟಿಕೆಗಳಿಗೆ ಧ್ವನಿ ನೀಡಬೇಕಾಗಿದೆ. ಭಾರತೀಯ ಆಟಿಕೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸಲು ಹೊಸ ಮಾದರಿ ಆವಿಷ್ಕಾರಗಳು ಮತ್ತು ಹಣ ಹೂಡಿಕೆಗೆ ಪ್ರಧಾನಮಂತ್ರಿ ಕರೆ ನೀಡಿದರು. ಹೊಸ ಆಲೋಚನೆಗಳಿಗೆ ಇಂಬು ನೀಡುವ ಅವಶ್ಯಕತೆಯಿದೆ, ಹೊಸ ನವೋದ್ಯಮಗಳನ್ನು ಉತ್ತೇಜಿಸುವುದು, ಸಾಂಪ್ರದಾಯಿಕ ಆಟಿಕೆ ತಯಾರಕರಿಗೆ ಹೊಸ ತಂತ್ರಜ್ಞಾನವನ್ನು ಒದಗಿಸುವುದು ಮತ್ತು ಹೊಸ ಮಾರುಕಟ್ಟೆ ಬೇಡಿಕೆಯನ್ನು ಸೃಷ್ಟಿಸುವುದು. ಟಾಯ್ಕಾಥಾನ್ ನಂತಹ ಕಾರ್ಯಕ್ರಮದ ಹಿಂದಿನ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಅಗ್ಗ ದರದ ಇಂಟರ್ನೆಟ್ ಡೇಟಾ ಮತ್ತು ಅಂತರ್ಜಾಲದ ವೃದ್ಧಿ ಗ್ರಾಮೀಣ ಸಂಪರ್ಕಕ್ಕೆ ಕಾರಣವಾಗಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ವರ್ಚುವಲ್, ಡಿಜಿಟಲ್ ಮತ್ತು ನ್ ಲೈನ್ ಗೇಮಿಂಗ್ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಕರೆ ನೀಡಿದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಆನ್ ಲೈನ್ ಮತ್ತು ಡಿಜಿಟಲ್ ಗೇಮ್ ಗಳು ಭಾರತೀಯ ಪರಿಕಲ್ಪನೆಗಳನ್ನು ಆಧರಿಸಿಲ್ಲ ಮತ್ತು ಅಂತಹ ಅನೇಕ ಆಟಗಳು ಹಿಂಸಾತ್ಮಕತೆಯನ್ನು ಉತ್ತೇಜಿಸುತ್ತವೆ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ ಎಂಬುದನ್ನು ಪ್ರಧಾನಮಂತ್ರಿಯವರು ಖಂಡಿಸಿದರು. ಭಾರತದ ಸಾಮರ್ಥ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ಜಗತ್ತು ತಿಳಿಯಲು ಬಯಸುತ್ತದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಆಟಿಕೆ ಅದರಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಡಿಜಿಟಲ್ ಗೇಮಿಂಗ್ ಗಾಗಿ ಭಾರತವು ಸಾಕಷ್ಟು ವಿಷಯ ಮತ್ತು ಸಾಮರ್ಥ್ಯವನ್ನು ಹೊಂದಿದೆ. ಭಾರತದ ಸಾಮರ್ಥ್ಯ ಮತ್ತು ಕಲ್ಪನೆಗಳ ನೈಜ ಚಿತ್ರಣವನ್ನು ಜಗತ್ತಿಗೆ ತೋರಿಸುವ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಯುವ ನಾವಿನ್ಯದಾರರು ಮತ್ತು ನವೋದ್ಯಮಗಳಿಗೆ ಶ್ರೀ ಮೋದಿ ಕರೆ ನೀಡಿದರು.
ಆಟಿಕೆ ಕೈಗಾರಿಕೆಗಳ ಸೃಷ್ಟಿಕರ್ತರಿಗೆ ಮತ್ತು ನಾವಿನ್ಯದಾರರಿಗೆ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಒಂದು ದೊಡ್ಡ ಅವಕಾಶವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಅವರ ಶೌರ್ಯ ಹಾಗೂ ನಾಯಕತ್ವದ ಹಲವು ಘಟನಾವಳಿಗಳನ್ನು ಗೇಮಿಂಗ್ ನ ವಸ್ತು ವಿಷಯ ಮಾಡಿಕೊಳ್ಳಬಹುದು ಎಂದು ಹೇಳಿದರು. ಈ ನಾವೀನ್ಯದಾರರಿಗೆ ‘ಜಾನಪದವನ್ನು ಭವಿಷ್ಯದೊಂದಿಗೆ’ ಜೋಡಿಸುವಲ್ಲಿ ದೊಡ್ಡ ಪಾತ್ರವಿದೆ. ಆಸಕ್ತಿದಾಯಕ ಮತ್ತು ಸಂವಾದಾತ್ಮಕ ಆಟಗಳನ್ನು ರಚಿಸುವ ಅವಶ್ಯಕತೆಯಿದೆ, ಅದು ‘ತೊಡಗಿಸಿಕೊಂಡು, ಮನರಂಜನೆ ಮತ್ತು ಶಿಕ್ಷಣವನ್ನು ನೀಡುತ್ತದೆ’ ಎಂದು ಪ್ರಧಾನಮಂತ್ರಿ ಹೇಳಿದರು.
***
(Release ID: 1730104)
Visitor Counter : 277
Read this release in:
Telugu
,
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Malayalam