ಹಣಕಾಸು ಸಚಿವಾಲಯ

ಮೂಲಸೌಕರ್ಯ ಮುಂದಿನ ಮಾರ್ಗಸೂಚಿ ಕುರಿತು ಚರ್ಚಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

ತಮ್ಮ ಬಂಡವಾಳ ವೆಚ್ಚವನ್ನು ಸಂಪೂರ್ಣ ವಿನಿಯೋಗಿಸಲು ಮತ್ತು ತಮ್ಮ ಬಂಡವಾಳ ವೆಚ್ಚದ ಗುರಿ ಮೀರಿ ಸಾಧನೆ ಮಾಡಲು ಸಚಿವಾಲಯಗಳಿಗೆ ತಿಳಿಸಿದ ಹಣಕಾಸು ಸಚಿವರು

ಎಂ.ಎಸ್.ಎಂ.ಇ.ಗಳ ಬಾಕಿಯನ್ನು ಶೀಘ್ರ ವಿಲೇವಾರಿಯ ಖಾತ್ರಿಪಡಿಸಿಕೊಳ್ಳಲು ಸಚಿವಾಲಯಗಳಿಗೆ ಮತ್ತು ಅವುಗಳ ಸಿ.ಪಿ.ಎಸ್.ಇ.ಗಳಿಗೆ ಸೂಚಿಸಿದ ಹಣಕಾಸು ಸಚಿವರು

ಕಾರ್ಯಸಾಧ್ಯವಾದ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ವಿಧಾನವನ್ನು ಪರಿಶೋಧಿಸಲು ಸಚಿವಾಲಯಗಳಿಗೆ ತಿಳಿಸಿದ ಹಣಕಾಸು ಸಚಿವರು

Posted On: 11 JUN 2021 7:17PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ, ಮೂಲಸೌಕರ್ಯದ ಮುಂದಿನ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಿದರು. ಇದು ಹಣಕಾಸು ಸಚಿವರು ಸಚಿವಾಲಯಗಳ ಇಲಾಖೆಗಳೊಂದಿಗೆ ನಡೆಸಿದ ಐದನೇ ಪರಿಶೀಲನಾ ಸಭೆಯಾಗಿತ್ತು. ಸಭೆಯ ವೇಳೆ, ಸಚಿವಾಲಯಗಳು ಮತ್ತು ಅವುಗಳ ಸಿಪಿಎಸ್.ಇ.ಗಳ ಬಂಡವಾಳ ವೆಚ್ಚ (ಸಿ.ಎ.ಪಿ.ಇ.ಎಕ್ಸ್)ದ ಯೋಜನೆಗಳು, ಬಜೆಟ್ ಪ್ರಕಟಣೆಗಳ ಅನುಷ್ಠಾನದ ಸ್ಥಿತಿಗತಿ ಮತ್ತು ಮೂಲಸೌಕರ್ಯ ಹೂಡಿಕೆಯನ್ನು ತ್ವರಿತಗೊಳಿಸುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ, ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳು) ಕಾರ್ಯದರ್ಶಿ, (ಸಾರ್ವಜನಿಕ ಉದ್ದಮೆಗಳು), ಕಾರ್ಯದರ್ಶಿ (ರಸ್ತೆ ಸಾರಿಗೆ ಮತ್ತು ಹೆದ್ದಾರಿ),  ಕಾರ್ಯದರ್ಶಿ (ದೂರ ಸಂಪರ್ಕ) ಮತ್ತು ಕಾರ್ಯದರ್ಶಿ (ಅಣು ಇಂಧನ) ಮತ್ತು ಈ ಮೂರು ಸಚಿವಾಲಯಗಳು/ಇಲಾಖೆಗಳ ಸಿಪಿಎಸ್.ಇ.ಗಳ ಸಿಇಓಗಳು ಮತ್ತು ಸಿಎಂಡಿ/ಸಿಇಓಗಳು  ಪಾಲ್ಗೊಂಡಿದ್ದರು.

ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು ಮೂಲಸೌಕರ್ಯದ ಮುಂದಿನ ಮಾರ್ಗಸೂಚಿಗಳ ಕುರಿತು ಚರ್ಚಿಸಲು ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ (ಬಲಗಡೆ) ಮತ್ತು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ, ಶ್ರೀ ಅಜಯ್ ಸೇಠ್ (ಎಡಗಡೆ) ಹಾಜರಿದ್ದರು.

ಸಚಿವಾಲಯಗಳು ಮತ್ತು ಅವುಗಳ ಸಿಪಿಎಸ್.ಇ.ಗಳ ಬಂಡವಾಳ ವೆಚ್ಚದ ದಕ್ಷತೆಯನ್ನು ಪರಿಶೀಲಿಸಿದ ವೇಳೆ, ಹಣಕಾಸು ಸಚಿವರು ಸಾಂಕ್ರಾಮಿಕ ನಂತರದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ವರ್ಧಿತ ಬಂಡವಾಳ ವೆಚ್ಚ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದರು ಮತ್ತು ಸಚಿವಾಲಯಗಳು ತಮ್ಮ ಬಂಡವಾಳ ವೆಚ್ಚವನ್ನು ಸಂಪೂರ್ಣ ವಿನಿಯೋಗಿಸಲು ಪ್ರೋತ್ಸಾಹಿಸಿದರು. ಸಚಿವಾಲಯಗಳು ಸಹ ತಮ್ಮ ಬಂಡವಾಳ ವೆಚ್ಚದ ಗುರಿಗಳಿಗಿಂತ ಹೆಚ್ಚಿನದನ್ನು ಸಾಧಿಸುವ ಗುರಿಯನ್ನು ಸಹ ಕೋರಿದವು. 2021-22ರ ಹಣಕಾಸು ವರ್ಷದ ಬಜೆಟ್ .5.54 ಲಕ್ಷ ಕೋಟಿ ರೂ ಗಳ ಬಂಡವಾಳ ಹಂಚಿಕೆಯನ್ನು ಒದಗಿಸಿದೆ ಎಂದು ಹಣಕಾಸು ಸಚಿವರು ಹೇಳಿದರು, ಇದು 2020-21ರ ಬಜೆಟ್ ಅಂದಾಜಿಗಿಂತ ಶೇ.34.5ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಬಜೆಟ್ ಕಡೆಯಿಂದ ಬರುವ ಪ್ರಯತ್ನಗಳಿಗೆ ಸಾರ್ವಜನಿಕ ವಲಯದ ಉದ್ಯಮಗಳು ಪೂರಕವಾಗಬೇಕಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ವೆಚ್ಚವು ಕೇವಲ ಮೂಲಸೌಕರ್ಯಕ್ಕಾಗಿ ಕೇಂದ್ರ ಸರ್ಕಾರದ ಬಜೆಟ್ ವೆಚ್ಚವಷ್ಟೇ ಅಲ್ಲ ಅದು, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಬಾಕಿ ಇರುವ ಮೂಲಸೌಕರ್ಯಗಳನ್ನೂ ಒಳಗೊಂಡಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಇದು ಹೆಚ್ಚುವರಿ ಬಜೆಟ್ ಸಂಪನ್ಮೂಲಗಳ ಮೂಲಕ ಸರ್ಕಾರದ ವೆಚ್ಚವನ್ನೂ ಒಳಗೊಂಡಿದೆ ಎಂದರು. ಆದ್ದರಿಂದ, ನಾವೀನ್ಯಪೂರ್ಣ ವಿನ್ಯಾಸ ಮತ್ತು ಹಣಕಾಸಿನ ಮೂಲಕ ಯೋಜನೆಗಳನ್ನು ಪಡೆಯಲು ಸಚಿವಾಲಯಗಳು ಸಕ್ರಿಯವಾಗಿ ಕೆಲಸ ಮಾಡಬೇಕು ಮತ್ತು  ಮೂಲಸೌಕರ್ಯ ವೆಚ್ಚ ಹೆಚ್ಚಳಕ್ಕಾಗಿ ಖಾಸಗಿ ವಲಯಕ್ಕೆ ಎಲ್ಲ ಬೆಂಬಲ ನೀಡಬೇಕು ಎಂದು ಎಂದು ಹಣಕಾಸು ಸಚಿವರು ಹೇಳಿದರು. ಕಾರ್ಯಸಾಧ್ಯವಾದ ಯೋಜನೆಗಳಿಗಾಗಿ ಸಚಿವಾಲಯಗಳು ಪಿಪಿಪಿ ಮಾದರಿಯನ್ನು  ಪರಿಶೋಧಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು. ಎಂ.ಎಸ್‌.ಎಂ.ಇ.ಗಳ ಬಾಕಿ ಮೊತ್ತವನ್ನು ಶೀಘ್ರವಾಗಿ ವಿಲೇವಾರಿಗೊಳಿಸುವುದನ್ನು ಖಾತ್ರಿ ಪಡಿಸುವಂತೆ ಹಣಕಾಸು ಸಚಿವರು ಸಚಿವಾಲಯಗಳು ಮತ್ತು ಅದರ ಸಿ.ಪಿ.ಎಸ್‌.ಇ.ಗಳಿಗೆ ಸೂಚಿಸಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ ದೇಶದ ಎಲ್ಲಾ ಭಾಗಗಳಿಗೆ ಉನ್ನತ ಮಟ್ಟದ ದತ್ತಾಂಶ ಸಂಪರ್ಕದ ಪ್ರಯೋಜನವನ್ನು ತರುವ ಪ್ರಮುಖ ಯೋಜನೆಗಳನ್ನು ತ್ವರಿತಗೊಳಿಸಲು ಹಣಕಾಸು ಸಚಿವರು ದೂರಸಂಪರ್ಕ ಇಲಾಖೆಗೆ ತಿಳಿಸಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೋಧಿಸಲು ಮತ್ತು ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯದ ಅನುಷ್ಠಾನವನ್ನು ತ್ವರಿತಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ತಿಳಿಸಿದರು. ಆತ್ಮನಿರ್ಭರ ಭಾರತ ಪ್ಯಾಕೇಜ್ (ಎ.ಎನ್‌.ಬಿ.ಪಿ) ಅಡಿಯಲ್ಲಿ ಘೋಷಿಸಲಾದ ಉಪಕ್ರಮಗಳ ಕಾಲಮಿತಿಯ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಅಣು ಇಂಧನ ಇಲಾಖೆಗೆ ತಿಳಿಸಿದರು.

ತಮ್ಮ ಭಾಷಣ ಮುಗಿಸುವ ಮುನ್ನ ಹಣಕಾಸು ಸಚಿವರು, ಸಾಧನೆಯು ಕಾಲಮಿತಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಪ್ರಮುಖ ಯೋಜನೆಗಳಿಗೆ ವೆಚ್ಚವನ್ನು ಹೆಚ್ಚಿಸಲು ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು. ವಲಯದ ನಿರ್ದಿಷ್ಟ ಯೋಜನೆಗಳ ನಿಯಮಿತ ಪರಿಶೀಲನೆಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅವರು ಸಚಿವಾಲಯಗಳಿಗೆ ಸೂಚಿಸಿದರು. 

***(Release ID: 1726404) Visitor Counter : 27