ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಪರಿಸ್ಥಿತಿಯ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ


ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ಕಾರ್ಯತಂತ್ರ ರೂಪಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ ಪ್ರಧಾನಿ

Posted On: 20 MAY 2021 1:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ಪರಿಸ್ಥಿತಿಯ ಕುರಿತು ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಸಂವಾದದ ವೇಳೆ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವಹಿಸಿದ ನಾಯಕತ್ವಕ್ಕಾಗಿ ಪ್ರಧಾನಿಗೆ ಅಧಿಕಾರಿಗಳು ಧನ್ಯವಾದ ಅರ್ಪಿಸಿದರು. ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಿದರು. ನೈಜ ಸಮಯದ ಮೇಲ್ವಿಚಾರಣೆ ಮತ್ತು ಸಾಮರ್ಥ್ಯ ವರ್ಧನೆಗಾಗಿ ತಂತ್ರಜ್ಞಾನದ ಬಳಕೆಯಲ್ಲಿ ತಮ್ಮ ಅನುಭವವನ್ನು ಅವರು ಪ್ರಧಾನಿ ಜೊತೆಗೆ ಹಂಚಿಕೊಂಡರು. ತಮ್ಮ ಜಿಲ್ಲೆಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಅವರು  ವಿವರಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಸಂಪೂರ್ಣ ಬದ್ಧತೆ ತೋರುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದರು. ಕೊರೊನಾ ವೈರಾಣುವಿನಿಂದಾಗಿ ತುರ್ತು ಕೆಲಸದ ಅಗತ್ಯ ಮತ್ತು ಸವಾಲು ಹೆಚ್ಚಾಗಿದೆ. ಹೊಸ ಸವಾಲುಗಳ ನಡುವೆ, ಹೊಸ ಕಾರ್ಯತಂತ್ರಗಳು ಮತ್ತು ಪರಿಹಾರಗಳ ಅಗತ್ಯವಿದೆ ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಕ್ರಿಯ ಪ್ರಕರಣಗಳ ಇಳಿಕೆ ಆರಂಭವಾಗಿದೆ. ಆದರೆ ಹಳ್ಳಿಗಳಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಸರಿ ಸೋಂಕು ಇರುವವರೆಗೂ ಸವಾಲು ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳ ಅತ್ಯುತ್ತಮ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದರು. ಕ್ಷೇತ್ರದಲ್ಲಿನ ಅವರ ಕೆಲಸದ ಅನುಭವಗಳು ಮತ್ತು ಪ್ರತಿಕ್ರಿಯೆಗಳು ಪ್ರಾಯೋಗಿಕ ಮತ್ತು ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಹಾಯ ಮಾಡಿದವು ಎಂದು ಹೇಳಿದರು. ಎಲ್ಲಾ ಹಂತಗಳಲ್ಲಿ ರಾಜ್ಯಗಳು ಹಾಗೂ ವಿವಿಧ ಪರಿಣತರು ನೀಡುವ  ಸಲಹೆಗಳನ್ನು ಸೇರಿಸಿಕೊಂಡು ಲಸಿಕೆ ತಂತ್ರವನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸ್ಥಳೀಯ ಅನುಭವಗಳನ್ನು ಬಳಸುವ ಅಗತ್ಯ ಮತ್ತು ಒಂದು ದೇಶವಾಗಿ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯನ್ನು ಪ್ರಧಾನಿ ಒತ್ತಿ ಹೇಳಿದರು. ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಗ್ರಾಮಗಳನ್ನು ಕೊರೊನಾ ಮುಕ್ತವಾಗಿಡಬೇಕು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನಿರ್ದಿಷ್ಟ ರೀತಿಯಲ್ಲಿ ಕಾರ್ಯತಂತ್ರವನ್ನು ರೂಪಿಸಲು ಮತ್ತು ಗ್ರಾಮೀಣ ಭಾರತವನ್ನು ಕೋವಿಡ್ಮುಕ್ತವಾಗುವಂತೆ  ನೋಡಿಕೊಳ್ಳಲು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಪ್ರತಿಯೊಂದು ಸಾಂಕ್ರಾಮಿಕ ರೋಗವೂ ನಿರಂತರ ಹೊಸಶೋಧ ಹಾಗು ಪ್ರಾಧಾನ್ಯ ಮತ್ತು ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ನಮ್ಮ ಕಾರ್ಯವಿಧಾನಗಳಲ್ಲಿ ಬದಲಾವಣೆಯ ಮಹತ್ವವನ್ನು ನಮಗೆ ಕಲಿಸಿದೆ ಎಂದು ಪ್ರಧಾನಿ ಹೇಳಿದರು. ವೈರಸ್ ರೂಪಾಂತರಗೊಂಡು ತನ್ನ ಸ್ವರೂಪವನ್ನು ಬದಲಾಯಿಸುವುದರಿಂದ  ಸಾಂಕ್ರಾಮಿಕರೋಗವನ್ನು ನಿಭಾಯಿಸುವ ನಮ್ಮ ವಿಧಾನಗಳು ಮತ್ತು ತಂತ್ರಗಳು ಕೂಡ ಕ್ರಿಯಾತ್ಮಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ವೈರಸ್ ರೂಪಾಂತರವು ಯುವಕರು ಮತ್ತು ಮಕ್ಕಳ ಪಾಲಿಗೆ ಕಳವಳಕಾರಿಯಾಗಿದೆ ಎಂದ ಅವರು ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಲಸಿಕೆ ವ್ಯರ್ಥದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಒಂದೇ ಒಂದು ಲಸಿಕೆಯನ್ನು ವ್ಯರ್ಥ ಮಾಡಿದರೂ ಒಬ್ಬ ವ್ಯಕ್ತಿಗೆ ಅಗತ್ಯವಾದ ಸುರಕ್ಷತೆಯನ್ನು ಒದಗಿಸಲು ವಿಫಲವಾದಂತೆ ಎಂದು ಹೇಳಿದರು. ಆದ್ದರಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಯುವಂತೆ ಅವರು ಒತ್ತಾಯಿಸಿದರು.

ಜನರ ಜೀವಗಳನ್ನು ಉಳಿಸುವುದರ ಜೊತೆಗೆ ನಾಗರಿಕರ ಜೀವನವನ್ನು ಸುಲಭಗೊಳಿಸುವತ್ತಲೂ ಆದ್ಯತೆ ನೀಡಬೇಕೆಂದು ಪ್ರಧಾನಿ ಒತ್ತಿ ಹೇಳಿದರು. ಬಡವರಿಗೆ ಉಚಿತ ಪಡಿತರ, ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸಬೇಕು. ಕಾಳಸಂತೆ ಮಾರಾಟವನ್ನು ನಿಲ್ಲಿಸಬೇಕು. ಹೋರಾಟವನ್ನು ಗೆಲ್ಲಲು ಮತ್ತು ಮುಂದುವರಿಸಲು ಕ್ರಮಗಳು ಸಹ ಅಗತ್ಯ ಎಂದು ಮೋದಿ ಅವರು ಹೇಳಿದರು.

***



(Release ID: 1720252) Visitor Counter : 257