ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಕೋವಿಡ್ 19 ಪರಿಸ್ಥಿತಿ ಕುರಿತು ಸಂವಾದ ನಡೆಸಿದ ಪ್ರಧಾನಮಂತ್ರಿ
ದೇಶದ ಇತರ ಭಾಗಗಳಲ್ಲೂ ಬಳಸಲು ಉತ್ತಮ ರೂಢಿಗಳನ್ನು ಹಂಚಿಕೊಳ್ಳುವಂತೆ ಅಧಿಕಾರಿಗಳಿಗೆ ಆಗ್ರಹ
Posted On:
18 MAY 2021 2:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ರಾಜ್ಯ ಮತ್ತು ಜಿಲ್ಲೆಗಳ ಕ್ಷೇತ್ರಾಧಿಕಾರಿಗಳೊಂದಿಗೆ ಕೋವಿಡ್ -19 ಸಾಂಕ್ರಾಮಿಕದ ನಿರ್ವಹಣೆಯಲ್ಲಿನ ಅನುಭವ ಕುರಿತಂತೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ಪಾಲ್ಗೊಳ್ಳುತ್ತಿರುವವರು ಭಾಗಿಯಾಗಿದ್ದರು.
ಸಂವಾದದ ವೇಳೆ ಅಧಿಕಾರಿಗಳು ಕೋವಿಡ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿರುವ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ತಮ್ಮ ಅನುಭವಗಳನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಂಡ ಅಧಿಕಾರಿಗಳು, ಇತ್ತೀಚೆಗೆ ಹೆಚ್ಚಳವಾದ ಪ್ರಕರಣಗಳನ್ನು ತಗ್ಗಿಸಲು ಕೈಗೊಂಡ ನಾವಿನ್ಯಪೂರ್ಣ ಕ್ರಮಗಳ ಬಗ್ಗೆಯೂ ವಿವರಿಸಿದರು. ವೈದ್ಯಕೀಯ ಮೂಲಸೌಕರ್ಯ ವರ್ಧನೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮರ್ಥ್ಯವರ್ಧನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು. ಉತ್ತಮ ರೂಢಿಗಳನ್ನು ಮತ್ತು ನಾವಿನ್ಯ ಪೂರ್ಣ ಕ್ರಮಗಳನ್ನು ಕ್ರೋಡೀಕರಿಸುವಂತೆ ತಿಳಿಸಿದ ಪ್ರಧಾನಮಂತ್ರಿಯವರು, ಅವುಗಳು ದೇಶದ ಇತರ ಜಿಲ್ಲೆಗಳಲ್ಲೂ ಬಳಸಬಹುದೆಂದರು.
ಸಂವಾದದ ಬಳಿಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸಂಕಷ್ಟದ ಸಮಯದಲ್ಲಿ ರಾಷ್ಟ್ರದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಆಡಳಿತಗಾರರು ತೋರಿದ ಸಮರ್ಪಣೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು ಮತ್ತು ಇದೇ ರೀತಿಯ ಚೈತನ್ಯದಿಂದ ಮುಂದುವರಿಯುವಂತೆ ಅವರನ್ನು ಆಗ್ರಹಿಸಿದರು. ದೇಶದ ಪ್ರತಿಯೊಂದು ಜಿಲ್ಲೆಯೂ ವಿಭಿನ್ನವಾಗಿದ್ದು, ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ ಎಂದ ಪ್ರಧಾನಮಂತ್ರಿ “ನಿಮ್ಮ ಜಿಲ್ಲೆಯ ಸವಾಲುಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಆದ್ದರಿಂದ ನಿಮ್ಮ ಜಿಲ್ಲೆ ಗೆದ್ದಾಗ, ದೇಶವು ಗೆಲ್ಲುತ್ತದೆ. ನಿಮ್ಮ ಜಿಲ್ಲೆಯು ಕರೋನಾವನ್ನು ಮಣಿಸಿದಾಗ, ದೇಶವು ಕರೋನಾವನ್ನು ಮಣಿಸುತ್ತದೆ.” ಎಂದು ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು. ಕೋವಿಡ್ -19 ಸೋಂಕಿನ ನಡುವೆಯೂ ರಜೆಯನ್ನೂ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅವರು ಪ್ರಶಂಸಿಸಿದರು. ಅವರು ಹಲವರಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರ ತ್ಯಾಗವನ್ನು ತಾವು ಅರ್ಥ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಈ ಹೋರಾಟದಲ್ಲಿ ಫೀಲ್ಡ್ ಕಮಾಂಡರ್ ಗಳಂತೆ ಮಹತ್ವದ ಪಾತ್ರವನ್ನು ಎಲ್ಲ ಅಧಿಕಾರಿಗಳು ವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ಥಳೀಯ ಕಂಟೈನ್ಮೆಂಟ್ ವಲಯಗಳು, ತೀವ್ರ ಪರೀಕ್ಷೆ ಮತ್ತು ಜನರಿಗೆ ಸಂಪೂರ್ಣ ಮತ್ತು ಸರಿಯಾದ ಮಾಹಿತಿ ನೀಡುವುದು ಈ ವೈರಾಣುವಿನ ವಿರುದ್ಧದ ಅಸ್ತ್ರಗಳಾಗಿವೆ ಎಂದರು. ಈ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದರೆ, ಮತ್ತೆ ಹಲವು ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿದೆ ಎಂದರು. ಈ ನಿಟ್ಟಿನಲ್ಲಿ ಸೋಂಕು ತಗ್ಗಿಸುವ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುವಂತೆ ತಿಳಿಸಿದರು. ಈ ಹೋರಾಟ ಪ್ರತಿಯೊಬ್ಬರ ಜೀವವನ್ನು ಉಳಿಸುವತ್ತ ಗಮನ ಹರಿಸಬೇಕು ಮತ್ತು ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಇಡಬೇಕು ಎಂದರು. ಗ್ರಾಮೀಣ ಜನರಿಗೆ ಪರಿಹಾರ ಸಾಮಗ್ರಿಗಳು ಸುಲಭವಾಗಿ ದೊರಕುವಂತೆ ಮಾಡುವಂತೆ ಅವರು ಅಧಿಕಾರಿಗಳಿಗೆ ಆಗ್ರಹಿಸಿದರು.
ತಮ್ಮ ಜಿಲ್ಲೆಯಲ್ಲಿನ ಪ್ರತಿಯೊಬ್ಬ ನಾಗರಿಕರ ಸುಗಮ ಜೀವನದ ಬಗ್ಗೆಯೂ ಕಾಳಜಿ ವಹಿಸುವಂತೆ ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು. ಸೋಂಕು ಹರಡದಂತೆ ತಡೆಯುವುದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಅವರು, ಅದೇ ವೇಳೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತಡೆಯಾಗದಂತೆ ಖಾತ್ರಿಪಡಿಸುವುದೂ ಮುಖ್ಯ ಎಂದರು. ಪಿ.ಎಂ. ಕೇರ್ಸ್ ನಿಧಿಯ ಮೂಲಕ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯ ಆಸ್ಪತ್ರೆಯಲ್ಲಿಯೂ ಆಮ್ಲಜನಕ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸುವ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು, ಹಲವು ಆಸ್ಪತ್ರೆಗಳಲ್ಲಿ ಈ ಸ್ಥಾವರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದರು.
ಲಸಿಕೆ ಹಾಕುವುದು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು ಹೇಗೆ ಸಹಾಯ ಮಾಡುತ್ತದೆ ಎಂಬ ಕುರಿತಂತೆ ಪ್ರಧಾನಮಂತ್ರಿ ಮಾತನಾಡಿದರು. ಕರೋನಾ ಲಸಿಕೆ ಪೂರೈಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದರು. ಲಸಿಕೆ ಹಾಕುವ ವ್ಯವಸ್ಥೆ ಮತ್ತು ಪ್ರಕ್ರಿಯೆಯನ್ನು ಆರೋಗ್ಯ ಸಚಿವಾಲಯ ಸುವ್ಯವಸ್ಥಿತಗೊಳಿಸುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯಗಳಿಗೆ 15 ದಿನಗಳ ಮುಂಚಿತವಾಗಿಯೇ ವೇಳಾಪಟ್ಟಿ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದ ಅವರು, ಲಸಿಕೆ ವ್ಯರ್ಥವಾಗುವುದನ್ನು ತಡೆಯುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಹಾಸಿಗೆ ಮತ್ತು ಲಸಿಕೆ ಲಭ್ಯತೆಯ ಮಾಹಿತಿ ಸುಲಭವಾಗಿ ದೊರೆತಾಗ ಜನರಿಗೆ ಅನುಕೂಲವಾಗುತ್ತದೆ ಎಂದರು. ಅದೇ ರೀತಿಯಲ್ಲಿ, ಕಾಳಸಂತೆ ಮಾರಾಟ ನಿಗ್ರಹಿಸಬೇಕು ಮತ್ತು ಹಾಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂಚೂಣಿ ಕಾರ್ಯಕರ್ತರ ಆತ್ಮ ಸ್ಥೈರ್ಯ ಹೆಚ್ಚಿಸುವ ಮೂಲಕ ಸಜ್ಜುಗೊಳಿಸಬೇಕು ಎಂದರು. ಹೇಗೆ ಗ್ರಾಮೀಣರು ವ್ಯಕ್ತಿಗತ ಅಂತರ ಕಾಪಾಡಿಕೊಂಡು ಕೃಷಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಉಲ್ಲೇಖಿಸಿ ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಗ್ರಾಮಗಳು ಮಾಹಿತಿಯನ್ನು ಗ್ರಹಿಸುತ್ತವೆ ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು. ಇದು ಹಳ್ಳಿಗಳ ಶಕ್ತಿಯಾಗಿದೆ. ಕೊರೊನಾ ವೈರಾಣು ವಿರುದ್ಧ ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ನೀವು ಯಾವುದೇ ಉತ್ತಮ ಕ್ರಮ ಕೈಗೊಳ್ಳಲು ಮುಕ್ತರಾಗಿದ್ದೀರಿ ಎಂದ ಅವರು, ನೀತಿ ಬದಲಾವಣೆಗಳ ಅಗತ್ಯ ಇದ್ದರೆ ಸೂಚಿಸಿ ಎಂದು ತಿಳಿಸಿದರು. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಎಚ್ಚರವಾಗಿರಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಗೃಹ ಸಚಿವರು, ರಕ್ಷಣಾ ಸಚಿವರು, ಆರೋಗ್ಯ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನೀತಿ ಆಯೋಗದ (ಆರೋಗ್ಯ)ಸದಸ್ಯರು, ಆರೋಗ್ಯ ಕಾರ್ಯದರ್ಶಿ, ಔಷಧ ಕಾರ್ಯದರ್ಶಿ, ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಇತರ ಅಧಿಕಾರಿಗಳು ಭಾಗವಹಿಸಿದ್ದರು.
***
(Release ID: 1719605)
Visitor Counter : 296
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam