ಪ್ರಧಾನ ಮಂತ್ರಿಯವರ ಕಛೇರಿ

ಅಧಿಕ ಸೋಂಕಿನ ಹೊರೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್-19 ಪರಿಸ್ಥಿತಿ ಪರಿಶೀಲನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ ಮೊದಿ


ನಾವು ಒಂದು ರಾಷ್ಟ್ರವಾಗಿ ಕೆಲಸ ಮಾಡಿದರೆ, ಸಂಪನ್ಮೂಲಗಳ ಕೊರತೆ ಇರುವುದಿಲ್ಲ: ಪ್ರಧಾನಿ

ಪ್ರಯಾಣದ ಸಮಯ ಮತ್ತು ಆಮ್ಲಜನಕ ಟ್ಯಾಂಕರ್‌ಗಳನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯನ್ನು ನಿಯೋಜಿಸಲಾಗುತ್ತಿದೆ: ಪ್ರಧಾನಿ

ಅಗತ್ಯ ಔಷಧಗಳು ಮತ್ತು ಚುಚ್ಚುಮದ್ದುಗಳ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕಾಗಿ ರಾಜ್ಯಗಳಿಗೆ ಮನವಿ ಮಾಡಿದ ಪ್ರಧಾನಿ

ಕೇಂದ್ರವು ರಾಜ್ಯಗಳಿಗೆ 15 ಕೋಟಿಗೂ ಹೆಚ್ಚು ಡೋಸ್ ಲಸಿಕೆಯನ್ನು ಉಚಿತವಾಗಿ ಒದಗಿಸಿದೆ: ಪ್ರಧಾನಿ

ಆಸ್ಪತ್ರೆಗಳ ಸುರಕ್ಷತೆಯನ್ನು ನಿರ್ಲಕ್ಷಿಸಬಾರದು: ಪ್ರಧಾನಿ

ಸಾರ್ವಜನಿಕರ ಆತಂಕದ ಖರೀದಿ ಧಾವಂತವನ್ನು ತಪ್ಪಿಸಲು ಜಾಗೃತಿ ಹೆಚ್ಚಿಸಬೇಕು: ಪ್ರಧಾನಿ

Posted On: 23 APR 2021 2:42PM by PIB Bengaluru

ಇತ್ತೀಚೆಗೆ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ಕೋವಿಡ್-19 ಪರಿಸ್ಥಿತಿಯ ಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆ ನಡೆಸಿದರು.

ದೇಶಾದ್ಯಂತ ಹಲವಾರು ರಾಜ್ಯಗಳ ಜೊತೆಗೆ 2ನೇ ಮತ್ತು 3ನೇ ಸ್ತರದ ನಗರಗಳ ಮೇಲೂ ವೈರಸ್ ಒಮ್ಮೆಲೆ ಪರಿಣಾಮ ಬೀರುತ್ತಿದೆ ಎಂದ ಪ್ರಧಾನಿ ಅವರು, ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಾಮೂಹಿಕ ಶಕ್ತಿಯೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಕರೆ ನೀಡಿದರು. ಸಾಂಕ್ರಾಮಿಕದ ಮೊದಲ ಅಲೆಯನ್ನು ಎದುರಿಸುವ ವೇಳೆ ಭಾರತದ ಯಶಸ್ಸಿಗೆ ನಮ್ಮ ಒಗ್ಗಟ್ಟಿನ ಪ್ರಯತ್ನಗಳು ಮತ್ತು ಒಗ್ಗಟ್ಟಿನ ಕಾರ್ಯತಂತ್ರಗಳೇ ದೊಡ್ಡ ಅಸ್ತ್ರವಾಗಿದ್ದವು ಎಂದ ಅವರು, ಬಾರಿಯೂ ಸವಾಲನ್ನು ನಾವು ಅದೇ ರೀತಿಯಲ್ಲಿ ಎದುರಿಸಬೇಕಾಗಿದೆ ಎಂದು ಪುನರುಚ್ಚರಿಸಿದರು.

ಹೋರಾಟದಲ್ಲಿ ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ಸಂಪೂರ್ಣ ಬೆಂಬಲದ ಭರವಸೆಯನ್ನು ಪ್ರಧಾನಿ ಮೋದಿ ನೀಡಿದರು. ಆರೋಗ್ಯ ಸಚಿವಾಲಯವೂ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಕಾಲಕಾಲಕ್ಕೆ ರಾಜ್ಯಗಳಿಗೆ ಅಗತ್ಯ ಸಲಹೆಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಆಮ್ಲಜನಕ ಪೂರೈಕೆ ಕುರಿತು ರಾಜ್ಯಗಳು ಎತ್ತಿರುವ ಅಂಶಗಳನ್ನು ಪ್ರಧಾನಿ ಮೋದಿ ಅವರು ಪರಿಗಣನೆಗೆ ತೆಗೆದುಕೊಂಡರು. ಆಮ್ಲಜನಕ ಪೂರೈಕೆ ಹೆಚ್ಚಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದರು. ಸರಕಾರದ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಮತ್ತು ಸಚಿವಾಲಯಗಳು ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ತಕ್ಷಣದ ಅಗತ್ಯಗಳನ್ನು ಪೂರೈಸಲು ಕೈಗಾರಿಕಾ ಆಮ್ಲಜನಕವನ್ನು ಸಹ ವೈದ್ಯಕೀಯ ಬಳಕೆಯತ್ತ ತಿರುಗಿಸಲಾಗಿದೆ ಎಂದರು.

ಔಷಧಗಳು ಮತ್ತು ಆಮ್ಲಜನಕಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಮತ್ತು ಪರಸ್ಪರ ಸಮನ್ವಯ ಕಾಯ್ದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದರು. ಆಮ್ಲಜನಕ ಮತ್ತು ಔಷಧಗಳ ಅಕ್ರಮ ದಾಸ್ತಾನು ಮತ್ತು ಕಾಳ ಸಂತೆಯ ಮಾರಾಟಕ್ಕೆ ಅಂಕುಶ ಹಾಕುವಂತೆ ರಾಜ್ಯಗಳಿಗೆ ಸೂಚಿಸಿದರು. ಯಾವುದೇ ರಾಜ್ಯಕ್ಕೆ ತಲುಪಬೇಕಿರುವ ಯಾವುದೇ ಆಕ್ಸಿಜನ್ ಟ್ಯಾಂಕರ್‌ನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತಿಯೊಂದು ರಾಜ್ಯವೂ ನೋಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಸಾಗಿಸಲು ಉನ್ನತ ಮಟ್ಟದ ಸಮನ್ವಯ ಸಮಿತಿಯೊಂದನ್ನು ಸ್ಥಾಪಿಸುವಂತೆ ಪ್ರಧಾನಿ ರಾಜ್ಯಗಳಿಗೆ ಒತ್ತಾಯಿಸಿದರು. ಕೇಂದ್ರದಿಂದ ಆಮ್ಲಜನಕ ಹಂಚಿಕೆಯಾದ ತಕ್ಷಣ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಮ್ಲಜನಕ ತಲುಪುವಂತೆ ಸಮನ್ವಯ ಸಮಿತಿ ನೋಡಿಕೊಳ್ಳಬೇಕು ಎಂದರು. ನಿನ್ನೆಯಷ್ಟೇ ಆಮ್ಲಜನಕ ಪೂರೈಕೆದಾರರೊಂದಿಗೆ ಸಭೆಯ ನಡೆಸಿದ್ದೇನೆ. ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುವ ಎಲ್ಲಾ ಆಯ್ಕೆಗಳ ಬಗ್ಗೆ ಚರ್ಚಿಸಲು ಇವತ್ತೂ ಸಹ ಮತ್ತೊಂದು ಸಭೆಯಲ್ಲಿ ಭಾಗವಹಿಸಲಿದ್ದೇನೆ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ತಿಳಿಸಿದರು.

ಆಕ್ಸಿಜನ್ ಟ್ಯಾಂಕರ್‌ಗಳ ಪ್ರಯಾಣದ ಸಮಯ ಮತ್ತು ಮರುಭರ್ತಿ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ರೈಲ್ವೆ ಇಲಾಖೆಯು ʻಆಕ್ಸಿಜನ್ ಎಕ್ಸ್‌ಪ್ರೆಸ್ʼ ಆರಂಭಿಸಿದೆ. ಒಂದು ಮಾರ್ಗ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಖಾಲಿ ಆಮ್ಲಜನಕ ಟ್ಯಾಂಕರ್‌ಗಳನ್ನು ವಿಮಾನದಲ್ಲಿ ಸಾಗಿಸುವ ಕೆಲಸವೂ ವಾಯುಪಡೆಯಿಂದ ನಡೆಯುತ್ತಿದೆ ಎಂದು ಮೋದಿ ಮಾಹಿತಿ ನೀಡಿದರು.

ಸಂಪನ್ಮೂಲಗಳನ್ನು ಮೇಲ್ದರ್ಜೆಗೇರಿಸುವ ಜೊತೆಗೆ, ನಾವು ಪರೀಕ್ಷೆಯತ್ತ ಗಮನ ಹೆಚ್ಚಿಸಬೇಕಿದೆ. ಜನರಿಗೆ ಸುಲಭವಾಗಿ ಸೌಲಭ್ಯ ಸಿಗುವಹಾಗೆ ವ್ಯಾಪಕ ಪರೀಕ್ಷೆ ನಡೆಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು.

ಪರಿಸ್ಥಿತಿಯಲ್ಲಿ ನಮ್ಮ ಲಸಿಕಾ ಅಭಿಯಾನ ನಿಧಾನವಾಗಬಾರದು ಎಂದು ಮೋದಿ ಸಲಹೆ ನೀಡಿದರುಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ನಡೆಸುತ್ತಿದೆಇಲ್ಲಿಯವರೆಗೆ ಭಾರತ ಸರಕಾರವು ರಾಜ್ಯಗಳಿಗೆ 13 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳನ್ನು ಉಚಿತವಾಗಿ ಒದಗಿಸಿದೆ ಎಂದು ಅವರು ಉಲ್ಲೇಖಿಸಿದರು. 45 ವರ್ಷ ಮೀರಿದ ಎಲ್ಲಾ ನಾಗರಿಕರು ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‌ಲೈನ್‌ ವರ್ಕರ್‌ಗಳಿಗೆ ಉಚಿತ ಲಸಿಕೆ ನೀಡಲು ಕೇಂದ್ರ ಸರಕಾರ ಪ್ರಾರಂಭಿಸಿದ ಅಭಿಯಾನವು ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಮೇ 1ರಿಂದ ಲಸಿಕೆಯು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಲಭ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಲು ನಾವು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು.

ರೋಗಿಗಳ ಚಿಕಿತ್ಸೆಗಾಗಿ ಎಲ್ಲಾ ಕ್ರಮಗಳ ಜೊತೆಗೆ, ಆಸ್ಪತ್ರೆಯ ಸುರಕ್ಷತೆಯೂ ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಆಸ್ಪತ್ರೆಗಳಲ್ಲಿ ಆಮ್ಲಜನಕ ಸೋರಿಕೆ ಮತ್ತು ಅಗ್ನಿ ಅವಘಡಗಳಂತಹ ಇತ್ತೀಚಿನ ಘಟನೆಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಆಸ್ಪತ್ರೆಯ ಆಡಳಿತ ಸಿಬ್ಬಂದಿಗೆ ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಜನರು ಭಯಭೀತರಾಗಿ ಖರೀದಿ ಭರಾಟೆಯಲ್ಲಿ ತೊಡಗದಂತೆ ನಿರಂತರವಾಗಿ ಅರಿವು ಮೂಡಿಸಬೇಕೆಂದು ಪ್ರಧಾನಿ ಮೋದಿ ಸರಕಾರಗಳನ್ನು ಒತ್ತಾಯಿಸಿದರು. ಒಗ್ಗಟ್ಟಿನ ಪ್ರಯತ್ನಗಳಿಂದ ನಾವು ದೇಶಾದ್ಯಂತ ಸಾಂಕ್ರಾಮಿಕದ ಎರಡನೇ ಅಲೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮೊದಲು, ಡಾ. ವಿ.ಕೆ. ಪಾಲ್ ಅವರು ಸೋಂಕಿನ ಉಲ್ಬಣವನ್ನು ಎದುರಿಸಲು ನಡೆಸಲಾಗುತ್ತಿರುವ ಸಿದ್ಧತೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಸ್ತುತಿಯನ್ನು ಮುಂದಿಟ್ಟಿದ್ದರು. ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ರೋಗಿಗಳನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ನೀಡಲು ಮಾರ್ಗಸೂಚಿಯನ್ನು ಸಹ ಡಾ. ಪಾಲ್ ಅವರು ಪ್ರಸ್ತುತಪಡಿಸಿದ್ದರು. ವೈದ್ಯಕೀಯ ಮೂಲಸೌಕರ್ಯ, ತಂಡಗಳು ಮತ್ತು ಸರಬರಾಜುಗಳನ್ನು ಹೆಚ್ಚಿಸುವ ಬಗ್ಗೆ; ಚಿಕಿತ್ಸಾತ್ಮಕ ನಿರ್ವಹಣೆ; ನಿಯಂತ್ರಣ; ಲಸಿಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಬಗ್ಗೆ ಅವರು ಎಲ್ಲರಿಗೂ ವಿವರಿಸಿದ್ದರು.

ಸಂವಾದದ ವೇಳೆ, ರಾಜ್ಯಗಳ ಮುಖ್ಯಮಂತ್ರಿಗಳು ಪ್ರಸ್ತುತ ಸೋಂಕಿನ ಅಲೆಯ ವೇಳೆ ಆಯಾ ರಾಜ್ಯ ಸರಕಾರಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರಿಸಿದರು. ಪ್ರಧಾನ ಮಂತ್ರಿಯವರು ನೀಡಿದ ನಿರ್ದೇಶನಗಳು ಮತ್ತು ನೀತಿ ಆಯೋಗ ಪ್ರಸ್ತುತಪಡಿಸಿದ ನೀಲ ನಕ್ಷೆಯು ಸಾಂಕ್ರಾಮಿಕದ ಬಗ್ಗೆ ಸರಕಾರಗಳ ಸ್ಪಂದನೆಯನ್ನು ಉತ್ತಮಪಡಿಸಲು ನೆರವಾಗಲಿವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

***



(Release ID: 1713564) Visitor Counter : 256