ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ತಾಲ್ಚೇರ್ ರಸಗೊಬ್ಬರ ನಿಯಮಿತ (ಟಿ.ಎಫ್.ಎಲ್.)ದಲ್ಲಿ ಕಲ್ಲಿದ್ದಲು ಅನಿಲೀಕರಣದ ಮೂಲಕ ಉತ್ಪಾದಿಸುವ ಯೂರಿಯಾಕ್ಕೆ ವಿಶೇಷ ಸಬ್ಸಿಡಿ ನೀತಿಗೆ ಸಂಪುಟದ ಅನುಮೋದನೆ
Posted On:
20 APR 2021 3:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿ ಸಭೆಯು, ತಾಲ್ಚೇರ್ ರಸಗೊಬ್ಬರ ನಿಯಮಿತ (ಟಿ.ಎಫ್.ಎಲ್.) ನಲ್ಲಿ ಕಲ್ಲಿದ್ದಲು ಅನಿಲೀಕರಣ ಮಾರ್ಗದ ಮೂಲಕ ತಯಾರಿಸಲಾದ ಯೂರಿಯಾಕ್ಕೆ ವಿಶೇಷ ಸಬ್ಸಿಡಿ ನೀತಿಯನ್ನು ರೂಪಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.
ಉದ್ದೇಶಗಳು
ದೇಶದ ವ್ಯೂಹಾತ್ಮಕ ಇಂಧನ ಸುರಕ್ಷತೆ ಮತ್ತು ಯೂರಿಯಾ ಸ್ವಾವಲಂಬನೆಯನ್ನು ಪರಿಗಣಿಸಿ, ದೇಶದ ವಿಶಾಲವಾದ ಕಲ್ಲಿದ್ದಲು ನಿಕ್ಷೇಪಗಳನ್ನು ಗಮನಿಸಿದರೆ, ಕಲ್ಲಿದ್ದಲು ಅನಿಲೀಕರಣ ತಂತ್ರಜ್ಞಾನವನ್ನು ಆಧರಿಸಿ ತಾಲ್ಚೇರ್ ರಸಗೊಬ್ಬರ ನಿಯಮಿತದ ಸ್ಥಾವರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಈ ಯೋಜನೆಯು ರೈತರಿಗೆ ಗೊಬ್ಬರದ ಲಭ್ಯತೆಯನ್ನು ಸುಧಾರಿಸುತ್ತದೆ ಮತ್ತು ಇದರಿಂದಾಗಿ ಪೂರ್ವ ವಲಯದ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ದೇಶದ ಪೂರ್ವ ಭಾಗದಲ್ಲಿ ಯೂರಿಯಾ ಪೂರೈಕೆಗಾಗಿ ಸಾರಿಗೆ ಸಹಾಯಧನವನ್ನು ಉಳಿಸುತ್ತದೆ. ಇದು ಯೂರಿಯಾ ಆಮದನ್ನು ವಾರ್ಷಿಕ 12.7 ಎಲ್.ಎಂ.ಟಿ.ಗೆ ಇಳಿಸಲೂ ಸಹಾಯ ಮಾಡುತ್ತದೆ, ಇದು ವಿದೇಶಿ ವಿನಿಮಯದ ಉಳಿತಾಯಕ್ಕೂ ಕಾರಣವಾಗುತ್ತದೆ.
ಈ ಯೋಜನೆಯು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮತ್ತು ಆತ್ಮನಿರ್ಭರ ಅಭಿಯಾನಕ್ಕೂ ಚೈತನ್ಯ ನೀಡಲಿದ್ದು, ಮೂಲಸೌಕರ್ಯಗಳಾದ ರಸ್ತೆ, ರೈಲುಮಾರ್ಗ, ಜಲ ಮಾರ್ಗ ಇತ್ಯಾದಿಗಳ ಅಭಿವೃದ್ಧಿಗೂ ನೆರವಾಗಲಿದೆ. ಇದು ಪೂರಕ ಉದ್ಯಮಕ್ಕೆ ಉತ್ತೇಜನ ನೀಡುವುದೂ ಸೇರಿದಂತೆ ದೇಶದ ಪೂರ್ವ ವಲಯದಲ್ಲಿ ಆರ್ಥಿಕತೆಗೆ ಪ್ರಮುಖ ಇಂಬು ನೀಡಲಿದೆ. ಈ ಯೋಜನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಯೋಜನೆಯು ಪೂರಕ ಕೈಗಾರಿಕೆಗಳ ರೂಪದಲ್ಲಿ ಹೊಸ ವ್ಯಾಪಾರ ಅವಕಾಶಗಳನ್ನು ಒದಗಿಸಲಿದೆ.
ಕಲ್ಲಿದ್ದಲು ದರ ಅಸ್ಥಿರವಲ್ಲದ ಕಾರಣ ಮತ್ತು ಕಲ್ಲಿದ್ದಲು ಯಥೇಚ್ಛವಾಗಿ ಲಭ್ಯವಿರುವುದರಿಂದ, ಕಲ್ಲಿದ್ದಲು ಅನಿಲೀಕರಣ ಸ್ಥಾವರಗಳು ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ. ತಾಲ್ಚೇರ್ ಸ್ಥಾವರವು ಯೂರಿಯಾ ಉತ್ಪಾದನೆಯಲ್ಲಿ ಮಹತ್ವದ ನೈಸರ್ಗಿಕ ಅನಿಲದ ಮೇಲಿನ ಅವಲಂಬನೆಯನ್ನೂ ತಗ್ಗಿಸುತ್ತದೆ ಮತ್ತು ಎಲ್.ಎನ್.ಜಿ. ಆಮದಿನ ಮೊತ್ತವನ್ನೂ ಇಳಿಕೆ ಮಾಡುತ್ತದೆ. ತಾಲ್ಚೇರ್ ಘಟಕದಲ್ಲಿ ಅಳವಡಿಸಲಾಗಿರುವ ಅನಿಲೀಕರಣ ಪ್ರಕ್ರಿಯೆಯು ಶುದ್ಧ ಕಲ್ಲಿದ್ದಲು ತಂತ್ರಜ್ಞಾನವಾಗಿದ್ದು, ನೇರವಾಗಿ ಕಲ್ಲಿದ್ದಲು ಉರಿಸುವ ಪ್ರಕ್ರಿಯೆಗಳಿಗೆ ಹೋಲಿಸಿದರೆ ಎಸ್.ಓ.ಎಕ್ಸ್, ಎನ್.ಓ.ಎಕ್ಸ್ ಮತ್ತು ಮುಕ್ತ ಕಣಗಳ ಹೊರಸೂಸುವಿಕೆಯನ್ನು ನಗಣ್ಯವಾಗಿಸುತ್ತದೆ.
ಹಿನ್ನೆಲೆ
ತಾಲ್ಚೇರ್ ರಸಗೊಬ್ಬರ ನಿಯಮಿತ (ಟಿ.ಎಫ್.ಎಲ್.) ನಾಲ್ಕು ಪಿ.ಎಸ್.ಯು.ಗಳ ಅಂದರೆ ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರಗಳು (ಆರ್.ಸಿ.ಎಫ್), ಗೇಲ್ (ಇಂಡಿಯಾ) ಲಿಮಿಟೆಡ್ (ಜಿ.ಎ.ಐ.ಎಲ್.), ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಭಾರತೀಯ ರಸಗೊಬ್ಬರ ನಿಗಮ ನಿಯಮಿತ (ಎಫ್.ಸಿ.ಐ.ಎಲ್)ನ ಒಂದು ಜಂಟಿ ಸಹಯೋಗದ ಕಂಪನಿಯಾಗಿದ್ದು, ಇದನ್ನು 2015ರ ನವೆಂಬರ್ 13ರಂದು ಸ್ಥಾಪಿಸಲಾಯಿತು. ಟಿಎಫ್.ಎಲ್. ಹಿಂದಿನ ಭಾರತೀಯ ರಸಗೊಬ್ಬರ ನಿಯಮಿತದ ತಾಲ್ಚೇರ್ ಸ್ಥಾವರ (ಎಫ್.ಸಿ.ಐ.ಎಲ್.) ಅನ್ನು ಈಗ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸ್ಥಾಪಿತ ಸಾಮರ್ಥ್ಯದ (ಎಲ್.ಎಂ.ಟಿ.ಪಿ.ಎ.) ಹಸಿರುವಲಯ ಯೂರಿಯಾ ಸ್ಥಾವರವಾಗಿ ಪುನಶ್ಚೇತನಗೊಳಿಸುತ್ತಿದೆ. ಟಿಎಫ್.ಎಲ್.ನ ಯೂರಿಯಾ ಯೋಜನೆಯ ಅಂದಾಜು ವೆಚ್ಚ 13277.21 ಕೋಟಿ ರೂ.(ಶೇ. (+/-10) ಆಗಿರುತ್ತದೆ.
***
(Release ID: 1712975)
Visitor Counter : 267
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam