ಪ್ರಧಾನ ಮಂತ್ರಿಯವರ ಕಛೇರಿ

ಜೋರ್ಡಾನ್ ಸಾಮ್ರಾಜ್ಯದ 100ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿಯವರ ಮಾತುಗಳು

Posted On: 13 APR 2021 11:25PM by PIB Bengaluru

ಜೋರ್ಡಾನ್ ಸಾಮ್ರಾಜ್ಯದ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು  ಬಯಸುತ್ತೇನೆ.

ಘನತೆವೆತ್ತ ದೊರೆ ಅಬ್ದುಲ್ಲಾ ಮತ್ತು ಜೋರ್ಡಾನ್ ಜನರಿಗೆ ನನ್ನ ಆತ್ಮೀಯ ಶುಭಾಶಯಗಳು.

ವಿಶ್ವದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಜೋರ್ಡಾನ್ ಗೆ ಗೌರವಾನ್ವಿತ ಹೆಸರಿದೆ.

ಘನತೆವೆತ್ತ ದೊರೆ ಅಬ್ದುಲ್ಲಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಜೋರ್ಡಾನ್ ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯನ್ನು ಸಾಧಿಸಿದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಇದರ ಪ್ರಗತಿ ಗಮನಾರ್ಹವಾಗಿದೆ.

ವಿಶ್ವದ ಒಂದು ಪ್ರಮುಖ ಪ್ರಾಂತ್ಯದಲ್ಲಿರುವ ಜೋರ್ಡಾನ್, ಪ್ರಬಲ ಧ್ವನಿಯಾಗಿ ಮತ್ತು ಮಂದಗಾಮಿತ್ವ ಮತ್ತು ಸರ್ವರ ಒಳಗೊಳ್ಳುವಿಕೆಯ ಜಾಗತಿಕ ಸಂಕೇತವಾಗಿ ಹೊರಹೊಮ್ಮಿದೆ.

ಜೋರ್ಡಾನ್ ತನ್ನ ನೆರೆಹೊರೆಯ ದೇಶಗಳೊಂದಿಗೆ ಶಾಂತಿಯುತವಾಗಿ ಬದುಕುವ ಮೂಲಕ ಮಾದರಿ ದೇಶವಾಗಿ ಹೊರಹೊಮ್ಮಿದೆ ಮತ್ತು ಸ್ಥಿರತೆಯ ಸಂಕೇತವಾಗಿದೆ ಮತ್ತು ವಿವೇಚನೆಯ ಧ್ವನಿಯಾಗಿದೆ.

ಘನತೆವೆತ್ತ ದೊರೆಗಳು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಯ ಬಗ್ಗೆ ಸಮನ್ವಯವನ್ನು ಉತ್ತೇಜಿಸುವಲ್ಲಿ ʻಅಕಾಬಾ ಪ್ರಕ್ರಿಯೆʼ ಕೊಡುಗೆ ಅಪಾರ.

ಅದೇ ರೀತಿ, 2004 ʻಅಮ್ಮನ್ ಸಂದೇಶʼವು ಸಹಿಷ್ಣುತೆ, ಏಕತೆ ಮತ್ತು ಮಾನವ ಘನತೆಯನ್ನು ಗೌರವಿಸುವ ನಿಟ್ಟಿನಿಲ್ಲಿ ನೀಡಿದಂತಹ ಪ್ರಬಲ ಕರೆಯಾಗಿತ್ತು.

2018ರಲ್ಲಿ ಘನತೆವೆತ್ತ ದೊರೆಗಳ ಐತಿಹಾಸಿಕ ಭಾರತ ಭೇಟಿಯ ಸಂದರ್ಭದಲ್ಲಿ ನವದೆಹಲಿಯಲ್ಲಿ ಇದೇ ಸಂದೇಶವನ್ನು ಅವರು ಪುನರುಚ್ಚರಿಸಿದರು.

ಧಾರ್ಮಿಕ ವಿದ್ವಾಂಸರ ಕೂಟದಲ್ಲಿ ''ವಿಶ್ವದ ಭವಿಷ್ಯದಲ್ಲಿ ನಂಬಿಕೆಯ ಪಾತ್ರ'' ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ನೀಡಿದ ಆಹ್ವಾನವನ್ನು ಅವರು ಹೃತ್ಪೂರ್ವಕವಾಗಿ ಸ್ವೀಕರಿಸಿದರು.

ಶಾಂತಿ ಮತ್ತು ಸಮೃದ್ಧಿಗೆ ಮಂದಗಾಮಿತ್ವ ಮತ್ತು ಶಾಂತಿಯುತ ಸಹಬಾಳ್ವೆ ಅತ್ಯಗತ್ಯ ಎಂಬ ನಂಬಿಕೆಯಲ್ಲಿ ಭಾರತ ಮತ್ತು ಜೋರ್ಡಾನ್ ಒಂದಾಗಿವೆ.

ಸಮಸ್ತ ಮನುಕುಲದ ಉತ್ತಮ ಭವಿಷ್ಯಕ್ಕಾಗಿ ನಮ್ಮ ಜಂಟಿ ಪ್ರಯತ್ನಗಳಲ್ಲಿ ನಾವು ಜತೆಯಾಗಿ ಜೊತೆ ಜೊತೆಯಾಗಿ ಸಾಗುತ್ತೇವೆ. ಮತ್ತೊಮ್ಮೆ, ಸಂತೋಷದ ಸಂದರ್ಭದಲ್ಲಿ ಘನತೆವೆತ್ತ ದೊರೆಗಳು ಮತ್ತು ಜೋರ್ಡಾನ್ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.

ಅಲ್ಫ್ ಮುಬಾರಕ್, ಸಹಸ್ರ ಅಭಿನಂದನೆಗಳು ಮತ್ತು ಶುಕ್ರನ್,

ಧನ್ಯವಾದಗಳು.

***



(Release ID: 1711929) Visitor Counter : 132