ಪ್ರಧಾನ ಮಂತ್ರಿಯವರ ಕಛೇರಿ
ನಾಲ್ಕನೇ ಜಾಗತಿಕ ಆಯುರ್ವೇದ ಉತ್ಸವದಲ್ಲಿ ಪ್ರಧಾನ ಮಂತ್ರಿಗಳ ಭಾಷಣ
ಆಯುರ್ವೇದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಸ್ಥಿರವಾಗಿ ಏರಿಕೆ ಕಾಣುತ್ತಿದೆ: ಪ್ರಧಾನ ಮಂತ್ರಿ
ವಿಶ್ವವ್ಯಾಪಿ ಯೋಗಕ್ಷೇಮ ಕುರಿತ ಜಾಗತಿಕ ಶೃಂಗಸಭೆ ನಡೆಯಬೇಕು: ನರೇಂದ್ರ ಮೋದಿ ಕರೆ
ಆಯುರ್ವೇದ ಕ್ಷೇತ್ರದ ಬೆಳವಣಿಗೆಗೆ ಸರಕಾರದಿಂದ ಸಂಪೂರ್ಣ ಬೆಂಬಲ: ಪ್ರಧಾನ ಮಂತ್ರಿ ಭರವಸೆ
Posted On:
12 MAR 2021 9:46PM by PIB Bengaluru
ಆಯುರ್ವೇದ ಉತ್ಪನ್ನಗಳು ಮತ್ತು ಚಿಕಿತ್ಸಾ ಪದ್ಧತಿಗೆ ಜಾಗತಿಕ ಹಿತಾಸಕ್ತಿ ದಿನೇದಿನೆ ಹೆಚ್ಚಾಗುತ್ತಿದೆ. ವಿಶ್ವಾದ್ಯಂತ ಆಯುರ್ವೇದ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ನಡೆಸುತ್ತಿರುವ ಎಲ್ಲಾ ಪ್ರಯತ್ನಗಳು ಶ್ಲಾಘನೀಯ ಎಂದು ಪ್ರಧಾಣ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಜಾಗತಿಕ ಆಯುರ್ವೇದ ವರ್ಚುವಲ್ ಉತ್ಸವ (ಸಮಾವೇಶ) ಉದ್ದೇಶಿಸಿ ಮಾತನಾಡಿದ ಅವರು, ಆಯುರ್ವೇದವನ್ನು ‘ಸಮಗ್ರ ಮಾನವ ವಿಜ್ಞಾನ’ ಎಂದು ಸಮರ್ಪಕವಾಗಿ ವರ್ಣಿಸಬಹುದು ಎಂದರು.
‘ಸಸ್ಯಗಳಿಂದ ನಿಮ್ಮ ತಟ್ಟೆಯವರೆಗೆ, ಭೌತಿಕ ಬಲದಿಂದ ಮಾನಸಿಕ ಸದೃಢತೆವರೆಗೆ, ಆಯುರ್ವೇದ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಔಷಧ ವಿಧಾನದ ಪ್ರಭಾವ ಮತ್ತು ಪರಿಣಾಮ ಅದ್ಭುತವಾಗಿದೆ’ ಎಂದು ಅವರು ಬಣ್ಣಿಸಿದರು.
ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಆಯುರ್ವೇದ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಸ್ಥಿತವಾಗಿ ಬೇಡಿಕೆ ಹೆಚ್ಚುತ್ತಿದೆ. ಸಮಕಾಲೀನ ಪರಿಸ್ಥಿತಿಯು ಆಯುರ್ವೇದ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಲು ಇದು ಸಕಾಲವಾಗಿದೆ. ಇದರ ಬಗ್ಗೆ ಜನರ ಆಸಕ್ತಿ ಹೆಚ್ಚಾಗುತ್ತಿದೆ. ಯೋಗಕ್ಷೇಮ ಸುಧಾರಿಸಿಕೊಳ್ಳಲು ಇಡೀ ವಿಶ್ವದ ಜನರು ಆಧುನಿಕ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಕಾತರದಿಂದ ನೋಡುತ್ತಿದ್ದಾರೆ. ಆಯುರ್ವೇದದಲ್ಲಿ ಸಿಗುತ್ತಿರುವ ನಾನಾ ಪ್ರಯೋಜನಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳದಲ್ಲಿ ಅದರ ಪಾತ್ರವನ್ನು ಜನರು ಮನಗಾಣುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
ಯೋಗಕ್ಷೇಮ ಪ್ರವಾಸೋದ್ಯಮಕ್ಕೆ ಭಾರತದಲ್ಲಿರುವ ಅವಕಾಶಗಳು ಮತ್ತು ಸಾಮರ್ಥ್ಯಗಳನ್ನು ಪ್ರಸ್ತಾಪಿಸಿದ ಅವರು, ‘ಕಾಯಿಲೆಗೆ ಚಿಕಿತ್ಸೆ ನೀಡು, ಯೋಗಕ್ಷೇಮ ಸುಧಾರಿಸು’ ಎಂಬುದೇ ಯೋಗಕ್ಷೇಮ ಪ್ರವಾಸೋದ್ಯಮದ ಮೂಲತತ್ವವಾಗಿದೆ. ಆದ್ದರಿಂದ, ಆಯುರ್ವೇದ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯೇ ಯೋಗಕ್ಷೇಮ ಪ್ರವಾಸೋದ್ಯಮದ ಬಲಿಷ್ಠ ಆಧಾರಸ್ತಂಭವಾಗಿದೆ. ಈ ನಿಟ್ಟಿನಲ್ಲಿ ವಿಶ್ವದ ಜನರು ಒತ್ತಡ ನಿವಾರಿಕೊಳ್ಳಲು ಮತ್ತು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಭಾರತದ ಕಾಲಾತೀತ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು (ಅನುಸರಿಸಬೇಕು). ನಿಮ್ಮ ದೇಹಕ್ಕೆ ಚಿಕಿತ್ಸೆ ಪಡೆಯಬೇಕೆಂದರೆ, ನಿಮ್ಮ ಮನಸ್ಸನ್ನು ಏಕಾಂತತೆಗೆ ಕೊಂಡೊಯ್ಯಬೇಕಾದರೆ, ಭಾರತಕ್ಕೆ ಬನ್ನಿ ಎಂದು ನರೇಂದ್ರ ಮೋದಿ ಅವರು ಕರೆ ನೀಡಿದರು.
ಆಯುರ್ವೇದ ಜನಪ್ರಿಯತೆಯ ಪ್ರಯೋಜನಗಳನ್ನು ಪಡೆಯಿರಿ. ಆಧುನಿಕ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳ ಸಂಯೋಜನೆಯಿಂದ ಲಭ್ಯವಾಗಿರುವ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಿ. ನಮ್ಮ ಯುವ ಸಮುದಾಯ ವಿವಿಧ ಆಯುರ್ವೇದ ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ಉಲ್ಲೇಖಿಸಿದ ಅವರು, ಸಾಕ್ಷ್ಯಾಧರಿತ ವೈದ್ಯಕೀಯ ವಿಜ್ಞಾನದ ಜತೆ ಆಯುರ್ವೇದವನ್ನು ಸಂಯೋಜಿಸುವ ಪ್ರಜ್ಞಾವಂತಿಕೆ ಹೆಚ್ಚಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವಲಯದ ತಜ್ಞರು ಮತ್ತು ಸಂಶೋಧಕರು ಆಯುರ್ವೇದ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಬಗ್ಗೆ ಆಳ ಸಂಶೋಧನೆ ನಡೆಸಬೇಕು. ನವೋದ್ಯಮಗಳು ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲು ವಿಶೇಷ ಗಮನ ಹರಿಸಬೇಕು ಎಂದು ಪ್ರಧಾನ ಮಂತ್ರಿ ಕರೆ ನೀಡಿದರು.
ಆಯುರ್ವೇದ ಕ್ಷೇತ್ರದ ಪ್ರಗತಿಗೆ ಸರಕಾರ ಎಲ್ಲಾ ಬೆಂಬಲ ನೀಡಲಿದೆ. ಆಯುಷ್ ವೈದ್ಯಕೀಯ ವ್ಯವಸ್ಥೆ ಉತ್ತೇಜಿಸಲು ರಾಷ್ಟ್ರೀಯ ಆಯುಷ್ ಮಿಷನ್ ಸ್ಥಾಪಿಸಲಾಗಿದ್ದು, ಇದರ ಮೂಲಕ ಪರಿಣಾಮಕಾರಿ ವೆಚ್ಚದಲ್ಲಿ ಆಯುಷ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆಯುರ್ವೇದ, ಸಿದ್ಧ ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳ ಗುಣಮಟ್ಟದ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಲು ಮತ್ತು ಕಚ್ಚಾ ವಸ್ತುಗಳ ಸುಸ್ಥಿರ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಸಹ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸರಕಾರ, ಗುಣಮಟ್ಟ ನಿಯಂತ್ರಣದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಯುರ್ವೇದ ಮತ್ತು ಇತರೆ ಭಾರತೀಯ ಚಿಕಿತ್ಸಾ ವಿಧಾನಗಳ ನಮ್ಮ ನೀತಿಯನ್ನು 2014-2023ರ ವಿಶ್ವ ಆರೋಗ್ಯ ಸಂಘಟನೆಯ ಕಾರ್ಯತಂತ್ರಕ್ಕೆ ಸರಿಹೊಂದಿಸಲಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
ಆಯುರ್ವೇದ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಧ್ಯಯನ ನಡೆಸಲು ಹಲವಾರು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದಾರೆ. ವಿಶ್ವವ್ಯಾಪಿ ಯೋಗಕ್ಷೇಮ ರಂಗವನ್ನು ಬಲಪಡಿಸಲು ಇದು ಸಕಾಲ. ಬಹುಶ: ಈ ವಿಷಯ ಕುರಿತು ಜಾಗತಿಕ ಶೃಂಗಸಭೆ ಆಯೋಜಿಸಬಹುದು ಎಂದು ಅವರು ಸಲಹೆ ನೀಡಿದರು.
ಸದೃಢ ಆರೋಗ್ಯ ಕಾಪಾಡುವ ಆಯುರ್ವೇದ ಆಹಾರ ಉತ್ಪನ್ನಗಳನ್ನು ಉತ್ತೇಜಿಸಲು ಇದೀಗ ಒತ್ತು ನೀಡುವುದು ಅಗತ್ಯವಾಗಿದೆ. ವಿಶ್ವಸಂಸ್ಥೆ 2023ನೇ ಇಸವಿಯನ್ನು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಜನರು ಸಿರಿಧಾನ್ಯಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಆಯುರ್ವೇದದಲ್ಲಿ ನಾವು ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡಿ. ನಮಗೆ ಆಯುರ್ವೇದ ಚಾಲನಾ ಶಕ್ತಿಯಾಗಿದೆ. ನಮ್ಮ ನೆಲಕ್ಕೆ ಇಡೀ ವಿಶ್ವವನ್ನೇ ಕರೆ ತರುತ್ತಿದೆ. ಇದು ನಮ್ಮ ಯುವ ಸಮುದಾಯಕ್ಕೆ ಸಂಪತ್ತು ಸಮೃದ್ಧಿ ಸೃಷ್ಟಿಸಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
***
(Release ID: 1704773)
Visitor Counter : 254
Read this release in:
Bengali
,
Odia
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam