ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಗೌರವಾನ್ವಿತ ಸುಗಾ ಯೋಶಿಹಿದೆ ನಡುವೆ ದೂರವಾಣಿ ಸಮಾಲೋಚನೆ

Posted On: 09 MAR 2021 8:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಗೌರವಾನ್ವಿತ ಸುಗಾ ಯೋಶಿಹಿದೆ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಮಾರ್ಗದರ್ಶನದಿಂದಾಗಿ ಕಳೆದ ಕೆಲವು ವರ್ಷಗಳಿಂದ ಭಾರತ-ಜಪಾನ್ ನಡುವಿನ ವಿಶೇಷ ಕಾರ್ಯತಾಂತ್ರಿಕ ಮತ್ತು ಜಾಗತಿಕ ಪಾಲುದಾರಿಕೆ ಸಕಾರಾತ್ಮಕ ವೇಗದಲ್ಲಿ ಮುನ್ನಡೆಯುತ್ತಿರುವುದಕ್ಕೆ ಉಭಯ ನಾಯಕರು ತೃಪ್ತಿವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಳೆದ ವರ್ಷ ದ್ವಿಪಕ್ಷೀಯ ವಿನಿಮಯಗಳನ್ನು ಕಾಯ್ದುಕೊಂಡಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ. ಉಭಯ ನಾಯಕರು ಇತ್ತೀಚೆಗೆ ನಿರ್ದಿಷ್ಠ ಕೌಶಲ ಹೊಂದಿದ ಕೆಲಸಗಾರ (ಎಸ್ ಎಸ್ ಡಬ್ಲೂ) ರಿಗೆ ಸಂಬಂಧಿಸಿದಂತೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು ಮತ್ತು ಆದಷ್ಟು ಬೇಗ ಅದನ್ನು ಅನುಷ್ಠಾನಗೊಳಿಸುವುದನ್ನು ಎದುರುನೋಡುತ್ತಿರುವುದಾಗಿ ಹೇಳಿದರು.

ಮುಂಬೈ –ಅಹಮದಾಬಾದ್ ಹೈ ಸ್ಪೀಡ್ ರೈಲು (ಎಂಎಎಚ್ಎಸ್ಆರ್) ಯೋಜನೆ ಭಾರತ-ಜಪಾನ್ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಕೆಗೆ ಪ್ರಕಾಶಮಾನ ಉದಾಹರಣೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅದರ ಯಶಸ್ವಿ ಅನುಷ್ಠಾನಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳ ಕುರಿತು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಸಾಮಾನ್ಯ ಸವಾಲುಗಳನ್ನು ಎದುರಿಸುವಲ್ಲಿ ಉಭಯ ದೇಶಗಳ ಪಾಲುದಾರಿಕೆ ಮಹತ್ವದ ಪಾತ್ರ ವಹಿಸಲಿದೆ ಎಂಬ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ, ಸಮಾನ ಮನಸ್ಕ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ಅಮೆರಿಕಾ ಮತ್ತಿತರ ರಾಷ್ಟ್ರಗಳೊಂದಿಗೆ ಕ್ವಾಡ್ ಸಮಾಲೋಚನೆಗಳ ರೂಪದಲ್ಲಿ ಮೌಲ್ಯಯುತ, ಉಪಯುಕ್ತ ಸಮಾಲೋಚನೆಗಳನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 2022ಕ್ಕೆ 70 ವರ್ಷ ಪೂರ್ಣಗೊಳ್ಳಲಿದೆ ಎಂಬ ಅಂಶವನ್ನು ಉಭಯ ನಾಯಕರು ಉಲ್ಲೇಖಿಸಿದರು ಮತ್ತು ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಒಪ್ಪಿದರು.

ಪ್ರಧಾನಮಂತ್ರಿ ಅವರು ವಾರ್ಷಿಕ ದ್ವೀಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಸುಗಾ ಅವರನ್ನು ಆಹ್ವಾನಿಸಿದರು.

***



(Release ID: 1703823) Visitor Counter : 238