ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಸ್ವೀಡನ್ ವರ್ಚುವಲ್ ಶೃಂಗಸಭೆ

Posted On: 05 MAR 2021 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ವೀಡನ್ ಸಾಮ್ರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಸ್ಟೀಫನ್ ಲೋಫ್ವೆನ್ ಇಂದು ನಡುವೆ ವರ್ಚುವಲ್ ಶೃಂಗಸಭೆ ನಡೆಯಿತು ಮತ್ತು ಅವರು ದ್ವಿಪಕ್ಷೀಯ ಸಂಬಂಧಗಳು ಹಾಗೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳು ಮತ್ತು  ಬಹುಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಮಾರ್ಚ್ 3ರಂದು ನಡೆದ ಹಿಂಸಾತ್ಮಕ ದಾಳಿ ಹಿನ್ನೆಲೆಯಲ್ಲಿ ಭಾರತ, ಸ್ವೀಡನ್ ಜೊತೆ ಇರುವುದಾಗಿ ಒಗ್ಗಟ್ಟನ್ನು ತೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. 

ಪ್ರಧಾನಮಂತ್ರಿ ಅವರು ಇದೇ ವೇಳೆ 2018ರಲ್ಲಿ ತಮ್ಮ ಭೇಟಿ ವೇಳೆ ನಡೆದ ಮೊದಲ ಭಾರತ-ನೋರ್ಡಿಕ್ ಶೃಂಗಸಭೆಯನ್ನು ಮತ್ತು 2019ರಲ್ಲಿ ಸ್ವೀಡನ್ ನ ಗೌರವಾನ್ವಿತ ದೊರೆ ಮತ್ತು ರಾಣಿ ಭಾರತಕ್ಕೆ ಭೇಟಿ ನೀಡಿದ್ದನ್ನು ಪ್ರೀತಿಯಿಂದ ನೆನಪಿಸಿಕೊಂಡರು.

ಭಾರತ ಮತ್ತು ಸ್ವೀಡನ್ ನಡುವಿನ ದೀರ್ಘಕಾಲದ ನಿಕಟ ಬಾಂಧವ್ಯವು ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳು, ಕಾನೂನು, ಬಹುತ್ವ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ಮೌಲ್ಯಗಳನ್ನು ಆಧರಿಸಿದೆ ಎಂದು ಉಭಯ ನಾಯಕರು ಬಲವಾಗಿ ಪ್ರತಿಪಾದಿಸಿದರು. ಬಹುಪಕ್ಷೀಯ ಆದರ್ಶಗಳು, ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ, ಭಯೋತ್ಪಾದನೆ ನಿಗ್ರಹ ಮತ್ತು ಶಾಂತಿ ಹಾಗೂ ಭದ್ರತೆ ಕುರಿತಂತೆ ತಮ್ಮ ದೃಢಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಐರೋಪ್ಯ ಒಕ್ಕೂಟ ಮತ್ತು ಇಯು ರಾಷ್ಟ್ರಗಳೊಂದಿಗೆ ಭಾರತದ ಪಾಲುದಾರಿಕೆ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಂಡರು. 

ಉಭಯ ನಾಯಕರು ಭಾರತ ಮತ್ತು ಸ್ವೀಡನ್ ನಡುವಿನ ಪ್ರಸ್ತುತ ಚಾಲ್ತಿಯಲ್ಲಿರುವ ವ್ಯಾಪಕ ಸಂಬಂಧಗಳ ಬಗ್ಗೆ ಪರಾಮರ್ಶೆ ನಡೆಸಿದರು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರಲ್ಲಿ ಸ್ವೀಡನ್ ಗೆ ಭೇಟಿ ನೀಡಿದ್ದ ಸಮಯದಲ್ಲಿ ಒಪ್ಪಿದ್ದಂತೆ ಜಂಟಿ ಕ್ರಿಯಾ ಯೋಜನೆ ಮತ್ತು ಜಂಟಿ ಅನುಶೋಧನೆ ಸಹಭಾಗಿತ್ವದ ಅನುಷ್ಠಾನದ ಕುರಿತಂತೆ ತೃಪ್ತಿ ವ್ಯಕ್ತಪಡಿಸಿದರು. ಈ ಪಾಲುದಾರಿಕೆಗಳಡಿ ವಿಚಾರಗಳಲ್ಲಿ ಸಂಬಂಧ ಮತ್ತಷ್ಟು ವೃದ್ಧಿಯ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿದರು.

ಅಂತಾರಾಷ್ಟ್ರೀಯ ಸೌರ ಮೈತ್ರಿ(ಐಎಸ್ ಎ) ಸೇರ್ಪಡೆಯಾಗುವ ಸ್ವೀಡನ್ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು. 2019ರ ಸೆಪ್ಟಂಬರ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆ ವೇಳೆ ಆರಂಭಿಸಲಾದ ಇಂಡಸ್ –ಟ್ರೈ ಟ್ರಾನ್ಸಿಷನ್ (ಲೀಡ್ ಐಟಿ) ನಾಯಕತ್ವ ಗುಂಪು ಸೇರಿದಂತೆ ಭಾರತ-ಸ್ವೀಡನ್ ನಡುವೆ ಸದಸ್ಯತ್ವ ಬೆಳವಣಿಗೆ ಹೊಂದುತ್ತಿರುವುದನ್ನು ಉಭಯ ನಾಯಕರು ಉಲ್ಲೇಖಿಸಿದರು.

ಕೋವಿಡ್-19 ಸ್ಥಿತಿಗತಿ, ಲಸಿಕೀಕರಣ ಅಭಿಯಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಅಲ್ಲದೆ, ಎಲ್ಲ ರಾಷ್ಟ್ರಗಳಲ್ಲಿ ಲಸಿಕೆಗೆ ತುರ್ತು ಮತ್ತು ಕೈಗೆಟುವ ದರದಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಮಾನತೆ ಸಾಧಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. 

***



(Release ID: 1703104) Visitor Counter : 207