ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಲವು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಭಾಷಣ

Posted On: 25 FEB 2021 6:56PM by PIB Bengaluru

ತಮಿಳುನಾಡು ರಾಜ್ಯಪಾಲರಾದ ಶ್ರೀ ಬನ್ವರಿಲಾಲ್ ಪುರೋಹಿತ್ ಜಿತಮಿಳುನಾಡು ಮುಖ್ಯಮಂತ್ರಿ ಶ್ರೀ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಶ್ರೀ . ಪನ್ನೀರಸೆಲ್ವಂ ಜಿ, ನನ್ನ ಸಂಪುಟ ಸಹೋದ್ಯೋಗಿ ಪ್ರಹ್ಲಾದ್ ಜೋಷಿ ಜಿ, ತಮಿಳುನಾಡು ಸರ್ಕಾರದ ಸಚಿವರೇ, ಶ್ರೀ ವೇಲುಮಣಿ ಜಿ, ಗಣ್ಯರೇ, ಮಹಿಳೆಯರೇ ಮತ್ತು ಮಹಿನೀಯರೇ.  

ವಣಕ್ಕಂ

ಕೊಯಮತ್ತೂರಿನಲ್ಲಿ ಇರುವುದು ನನಗೆ ಸಂತಸ ತಂದಿದೆ. ಇದು ಕೈಗಾರಿಕೆ ಮತ್ತು ಆವಿಷ್ಕಾರಗಳ ನಗರಿ. ಇಂದು ನಾವು ಆರಂಭಿಸಿರುವ ಹಲವು ಅಭಿವೃದ್ಧಿ ಕಾರ್ಯಗಳಿಂದ ಕೊಯಮತ್ತೂರಿಗೆ ಮತ್ತು ಇಡೀ ತಮಿಳುನಾಡಿಗೆ ಅನುಕೂಲವಾಗಲಿದೆ.

ಮಿತ್ರರೇ,

ಭವಾನಿಸಾಗರ ಅಣೆಕಟ್ಟೆಯ ಆಧುನೀಕರಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದರಿಂದ ಸುಮಾರು ಎರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. ವಿಶೇಷವಾಗಿ ಯೋಜನೆಯಿಂದ ಈರೋಡ್, ತಿರುಪ್ಪೂರ್ ಮತ್ತು ಕರೂರ್ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಯೋಜನೆಯಿಂದ ನಮ್ಮ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ನನಗೆ ಶ್ರೇಷ್ಠ ಕವಿ ತಿರುವಳ್ಳವರ್ ಅವರ ಮಾತುಗಳು ನೆನಪಾಗುತ್ತವೆ. ಅವರು ಹೀಗೆ ಹೇಳಿದರು.

உழுதுண்டு வாழ்வாரே வாழ்வார்மற் றெல்லாம்

தொழுதுண்டு பின்செல் பவர்.

ಅದರ ಅರ್ಥ, ‘ರೈತರು ನಿಜವಾಗಿಯೂ ಬದುಕುವರು ಮತ್ತು ಉಳಿದೆಲ್ಲರೂ ಅವರ ಕಾರಣದಿಂದ ಬದುಕುತ್ತಾರೆ. ಹಾಗಾಗಿ ಅವರನ್ನು ಪೂಜಿಸಬೇಕುಎಂದು.

ಮಿತ್ರರೇ,

ತಮಿಳುನಾಡು ಭಾರತದ ಕೈಗಾರಿಕಾ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಕೈಗಾರಿಕೆಗಳ ಬೆಳವಣಿಗೆಗೆ ಮೂಲ ಅಗತ್ಯತೆಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯೂ ಒಂದಾಗಿದೆ. ಎರಡು ಪ್ರಮುಖ ವಿದ್ಯುತ್ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವುದು ಮತ್ತು ಮತ್ತೊಂದು ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದಕ್ಕೆ ನನಗೆ ಸಂತಸವಾಗುತ್ತಿದೆ. 709 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ ಮತ್ತು ವಿರುದ್ಧನಗರ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿದೆ. ಯೋಜನೆಯ ವೆಚ್ಚ ಸುಮಾರು ಮೂರು ಸಾವಿರ ಕೋಟಿ ರೂ.ಗಳು. ಮತ್ತೆ 1000 ಮೆಗಾವ್ಯಾಟ್ ಸಾಮರ್ಥ್ಯದ ಅಣುವಿದ್ಯುತ್ ಯೋಜನೆಯನ್ನು ಎನ್ಎಲ್ ಸಿ ಸುಮಾರು 7,800 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಇದರಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಉತ್ಪಾದನೆಯಾಗುವ ಶೇ.65ರಷ್ಟು ವಿದ್ಯುತ್ ಅನ್ನು ತಮಿಳುನಾಡು ಪಡೆಯಲಿದೆ.

ಮಿತ್ರರೇ,

ತಮಿಳುನಾಡು ಸಮುದ್ರ ವ್ಯಾಪಾರ ಮತ್ತು ಬಂದರು ಆಧಾರಿತ ಅಭಿವೃದ್ಧಿಯಲ್ಲಿ ವೈಭವದ ಇತಿಹಾಸವನ್ನು ಹೊಂದಿದೆ. ತೂತುಕುಡಿಯ ವಿ.. ಚಿದಂಬರನರ ಬಂದರಿಗೆ ಸಂಬಂಧಿಸಿದಂತೆ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನಾವು ನಮ್ಮ ಶ್ರೇಷ್ಠ ಸ್ವಾತಂತ್ರ್ಯ ಯೋಧರಾದ ವಿ--ಸಿ ಅವರ ಪ್ರಯತ್ನಗಳನ್ನು ಸ್ಮರಿಸಬೇಕಾಗಿದೆ. ಉತ್ಕೃಷ್ಟ ಭಾರತೀಯ ಶಿಪ್ಪಿಂಗ್ ಉದ್ಯಮ ಮತ್ತು ಸಾಗರ ಅಭಿವೃದ್ಧಿ ಕುರಿತ ಅವರ ದೂರದೃಷ್ಟಿ ನಮಗೆ ಪ್ರೇರಣೀಯ. ಇಂದು ಆರಂಭಿಸಿರುವ ಯೋಜನೆಗಳಿಂದ ಬಂದರಿನಲ್ಲಿ ಸರಕು ನಿರ್ವಹಣೆ ಸಾಮರ್ಥ್ಯವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ. ಅಲ್ಲದೆ ಇದು ಹಸಿರು ಬಂದರು ಉಪಕ್ರಮಗಳನ್ನು ಮತ್ತಷ್ಟು ಬೆಂಬಲಿಸಲಿವೆ. ಅಲ್ಲದೆ ಬಂದರನ್ನು ಪೂರ್ವ ಕರಾವಳಿಯ ದೊಡ್ಡ ಸಾಗಣಿಕೆ ಶಿಪ್ ಮೆಂಟ್ ಬಂದರನ್ನಾಗಿ ಅಭಿವೃದ್ಧಿಪಡಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ. ನಮ್ಮ ಬಂದರುಗಳು ಹೆಚ್ಚು ಪರಿಣಾಮಕಾರಿಯಾದರೆ ಅವು ಭಾರತ ಆತ್ಮನಿರ್ಭರ ಸಾಧನೆಗೆ ಮತ್ತು ಜಾಗತಿಕ ವ್ಯಾಪಾರಿ ತಾಣವಾಗಿ ರೂಪುಗೊಳ್ಳಲು ಹಾಗೂ ಸರಕು ಸಾಗಣೆಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿದೆ.

ಭಾರತ ಸರ್ಕಾರ ಬಂದರು ಆಧರಿಸಿದ ಅಭಿವೃದ್ಧಿಗೆ ಬದ್ಧವಾಗಿದ್ದು, ಅದನ್ನು ಸಾಗರಮಾಲಾ ಯೋಜನೆಯಲ್ಲಿ ಕಾಣಬಹುದಾಗಿದೆ. ಸುಮಾರು 6 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ 575 ಯೋಜನೆಗಳನ್ನು ಗುರುತಿಸಲಾಗಿದ್ದು, 2015-2035 ಅವಧಿಯಲ್ಲಿ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು. ಕಾರ್ಯಗಳಲ್ಲಿ ಬಂದರು ಆಧುನೀಕರಣ. ಹೊಸ ಬಂದರು ಅಭಿವೃದ್ಧಿ, ಬಂದರು ಸಂಪರ್ಕ ವೃದ್ಧಿ, ಬಂದರು ಆಧಾರಿತ ಕೈಗಾರೀಕರಣ ಮತ್ತು ಸಾಗರ ಸಮುದಾಯ ಅಭಿವೃದ್ಧಿ ಕಾರ್ಯಗಳು ಸೇರಿವೆ.

ಚೆನ್ನೈನ ಶ್ರೀಪೆರಂಬುದೂರ್ ಸಮೀಪದ ಮಾಪೆದುನಲ್ಲಿ ಸದ್ಯದಲ್ಲೇ ಹೊಸ ಮಲ್ಟಿ ಮಾಡಲ್ ಸಾರಿಗೆ ಪಾರ್ಕ್ ಅನ್ನು ಉದ್ಘಾಟನೆಯಾಗಲಿದೆ ಎಂಬುದನ್ನು ತಿಳಿಸಲು ಹರ್ಷವಾಗುತ್ತಿದೆ. ‘ಸಾಗರಮಾಲಾ ಕಾರ್ಯಕ್ರಮದಡಿ ಎಂಟು ಪಥದ ಕೋರಂಪಲ್ಲಂ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಬಂದರಿಗೆ ತಡೆರಹಿತ ಸಾರಿಗೆ ಸೌಕರ್ಯ ಲಭ್ಯವಾಗುವುದಲ್ಲದೆ, ಬಂದರಿನಿಂದ ವಾಹನ ದಟ್ಟಣೆರಹಿತ ಸಾರಿಗೆ ಸಂಚಾರ ಸಾಧ್ಯವಾಗಲಿದೆ. ಇದರಿಂದ ಸರಕು ಸಾಗಣೆ ಟ್ರಕ್ ಗಳು ಹೋಗಿ ಬರುವ ಸಂಚಾರದ ಸಮಯ ಮತ್ತಷ್ಟು ಇಳಿಕೆಯಾಗಲಿದೆ.

ಮಿತ್ರರೇ,

ಪರಿಸರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಮತ್ತು ಕಾಳಜಿ ಎರಡೂ ಅತ್ಯಂತ ನಿಕಟ ಸಂಬಂಧ ಹೊಂದಿವೆ. ವಿ--ಸಿ ಬಂದರಿನಲ್ಲಿ ಈಗಾಗಲೇ 500 ಕಿಲೋವ್ಯಾಟ್ ಮೇಲ್ಛಾವಣಿ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗಿದೆ. ಮತ್ತೆ 140 ಕಿಲೋವ್ಯಾಟ್ ಸಾಮರ್ಥ್ಯದ ಮೇಲ್ಛಾವಣಿ ಸೌರಶಕ್ತಿ ಘಟಕವನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ವಿ--ಸಿ ಬಂದರು ಗ್ರಿಡ್ ಸಂಪರ್ಕ ಸಾಧಿಸಿ 25 ಕೋಟಿ ರೂ. ವೆಚ್ಚದಲ್ಲಿ 5 ಮೆಗಾವ್ಯಾಟ್ ಸಾಮರ್ಥ್ಯದ ಭೂಮಿಯ ಮೇಲಿನ ಸೌರಶಕ್ತಿ ಘಟಕ ಸ್ಥಾಪನೆಯನ್ನು ಕೈಗೆತ್ತಿಕೊಂಡಿದೆ ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ. ಯೋಜನೆಯಿಂದ ಬಂದರಿಗೆ ಅಗತ್ಯವಾದ ಒಟ್ಟಾರೆ ವಿದ್ಯುತ್ ಶೇ.60ರಷ್ಟು ಪೂರೈಕೆಯಾಗಲಿದೆ. ಇದು ನಿಜಕ್ಕೂ ಊರ್ಜಾ ಆತ್ಮನಿರ್ಭರ ಭಾರತಕ್ಕೆ ನೈಜ ಉದಾಹರಣೆಯಾಗಿದೆ.  

ನೆಚ್ಚಿನ ಮಿತ್ರರೇ,

ಅಭಿವೃದ್ಧಿಯ ಮುಖ್ಯ ತಿರುಳೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಘನತೆಯನ್ನು ಖಾತ್ರಿಪಡಿಸುವುದಾಗಿದೆ. ಘನತೆ ಖಾತ್ರಿಪಡಿಸುವ ಒಂದು ವಿಧಾನವೆಂದರೆ ಅದು ಪ್ರತಿಯೊಬ್ಬರಿಗೂ ವಸತಿ ಸೌಕರ್ಯ ಕಲ್ಪಿಸುವುದು. ನಮ್ಮ ಜನರ ಆಶೋತ್ತರಗಳು ಮತ್ತು ಅವರ ಕನಸಿಗೆ ರೆಕ್ಕೆಗಳನ್ನು ನೀಡಲು         ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಆರಂಭಿಸಲಾಗಿದೆ.

ಮಿತ್ರರೇ,

4,144 ಮನೆಗಳನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಅವುಗಳನ್ನು ತಿರುಪ್ಪೂರ್, ಮಧುರೈ ಮತ್ತು ತಿರುಚಿರಾಪಲ್ಲಿ ಜಿಲ್ಲೆಗಳಲ್ಲಿ ನಿರ್ಮಿಸಲಾಗಿದೆ. ಯೋಜನೆಗಳ ವೆಚ್ಚ 332 ಕೋಟಿ ರೂ.ಗಳು. ಸ್ವಾತಂತ್ರ್ಯಗಳಿಸಿ 70 ವರ್ಷಗಳಾದರೂ ಇನ್ನೂ ತಮ್ಮ ನೆತ್ತಿಯ ಮೇಲೆ ಸೂರು ಹೊಂದಿಲ್ಲದ ಜನರಿಗೆ ಮನೆಗಳನ್ನು ಹಸ್ತಾಂತರಿಸಲಾಗುತ್ತಿದೆ.

ಮಿತ್ರರೇ,

ತಮಿಳುನಾಡು ಅತ್ಯಂತ ನಗರೀಕರಣಗೊಂಡಿರುವ ರಾಜ್ಯ. ಭಾರತ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ನಗರಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿವೆ. ತಮಿಳುನಾಡಿನಾದ್ಯಂತ ಇರುವ ಸ್ಮಾರ್ಟ್ ಸಿಟಿಗಳಲ್ಲಿ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ನನಗೆ ಸಂತಸ ತಂದಿದೆ. ಇವು ಎಲ್ಲಾ ನಗರಗಳಲ್ಲಿ ಹಲವು ಸೇವೆಗಳನ್ನು ನಿರ್ವಹಿಸಲು ಬುದ್ದಿವಂತ ಹಾಗೂ ಸಮಗ್ರ ಐಟಿ ಪರಿಹಾರಗಳನ್ನು ಒದಗಿಸಲಿವೆ.

ಮಿತ್ರರೇ,

ಇಂದು ಉದ್ಘಾಟಿಸಲಾಗಿರುವ ಯೋಜನೆಗಳು ತಮಿಳುನಾಡಿನ ಜನರ ಜೀವನೋಪಾಯ ಮತ್ತು ಜೀವನವನ್ನು ಮತ್ತಷ್ಟು ಉತ್ತೇಜಿಸಲಿವೆ ಎಂಬ ಭರವಸೆ ನನಗಿದೆ. ಇಂದು ಹೊಸ ಮನೆಗಳನ್ನು ಪಡೆಯುತ್ತಿರುವ ಎಲ್ಲ ಕುಟುಂಬಗಳಿಗೆ ನನ್ನ ಶುಭಾಶಯಗಳು. ನಾವು ಜನರ ಕನಸುಗಳನ್ನು ಈಡೇರಿಸಲು ಮತ್ತು ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದನ್ನು ಮುಂದುವರಿಸುತ್ತೇವೆ.

ಧನ್ಯವಾದಗಳು

ತುಂಬಾ ತುಂಬಾ ಧನ್ಯವಾದಗಳು

ವಣಕ್ಕಂ

***



(Release ID: 1701623) Visitor Counter : 138