ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 19, ಪ್ರಧಾನಮಂತ್ರಿ ಅವರಿಂದ ಕೇರಳದ ಹಲವು ಪ್ರಮುಖ ವಿದ್ಯುತ್ ಮತ್ತು ನಗರ ಸೌಕರ್ಯ ವಲಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ

Posted On: 17 FEB 2021 8:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 19ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದ ಹಲವು ಪ್ರಮುಖ ವಿದ್ಯುತ್ ಮತ್ತು ನಗರ ಸೌಕರ್ಯ ವಲಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುವರು. ಕೇರಳದ ಮುಖ್ಯಮಂತ್ರಿ, ಕೇಂದ್ರ ಇಂಧನ(ಸ್ವತಂತ್ರ ಹೊಣೆಗಾರಿಕೆ) ಸಹಾಯಕ ಸಚಿವ ಹಾಗೂ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪುಗಲೂರ್-ತ್ರಿಶೂರ್ ವಿದ್ಯುತ್ ಪ್ರಸರಣ ಯೋಜನೆ

ಪ್ರಧಾನಮಂತ್ರಿ ಅವರು 320 ಕೆವಿ ಸಾಮರ್ಥ್ಯದ ಪುಗಲೂರು(ತಮಿಳುನಾಡು) – ತ್ರಿಶೂರ್(ಕೇರಳ) ವಿದ್ಯುತ್ ಪ್ರಸರಣಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು ವೋಲ್ಟೇಜ್  ಮೂಲದಿಂದ ಕನ್ವರ್ಟರ್(ವಿ ಎಸ್ ಸಿ) ಆಧಾರಿತ ಹೈವೋಲ್ಟೇಜ್ ಡೈರೆಕ್ಟ್ ಕರೆಂಟ್(ಎಚ್ ವಿಡಿಸಿ) ಯೋಜನೆಯಾಗಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ವಿ ಎಸ್ ಸಿ ತಂತ್ರಜ್ಞಾನ ಆಧರಿಸಿ ಎಚ್ ವಿ ಡಿಸಿ ಲಿಂಕ್ ಬಳಸಲಾಗುತ್ತಿದೆ. 5070 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಅನ್ನು ಪಶ್ಚಿಮ ಪ್ರದೇಶದಿಂದ ಪ್ರಸರಣ ಮಾಡಲು ನೆರವಾಗಲಿದ್ದು, ಕೇರಳದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸಲು ಇದು ಸಹಕಾರಿಯಾಗಲಿದೆ. ವಿ ಎಸ್ ಸಿ ಆಧಾರಿತ ವ್ಯವಸ್ಥೆಯ ಅಂಶಗಳಿಂದಾಗಿ ಎಚ್ ವಿ ಡಿಸಿ ಎಕ್ಸ್ ಎಲ್ ಪಿ (ಕ್ರಾಸ್ ಲಿಂಕಡ್ ಪಾಲಿಥೈಲೆನೆ) ಕೇಬಲ್ ಸಂಯೋಜನೆಗೊಳಿಸಲಾಗಿದ್ದು, ಮೇಲ್ಭಾಗದಲ್ಲಿ ಬರುವ ವಿದ್ಯುತ್ ಮಾರ್ಗಗಳು ಸಾಂಪ್ರದಾಯಿಕ ಎಚ್ ವಿ ಡಿಸಿ ವ್ಯವಸ್ಥೆಗೆ ಹೋಲಿಸಿದರೆ ಶೇಕಡ 35 ರಿಂದ 40ರಷ್ಟು ನಷ್ಟ ತಗ್ಗಲಿದೆ

ಕಾಸರಗೋಡು ಸೌರ ವಿದ್ಯುತ್ ಯೋಜನೆ

ಪ್ರಧಾನಮಂತ್ರಿ ಅವರು 50 ಮೆಗಾವ್ಯಾಟ್ ಸಾಮರ್ಥ್ಯದ ಕಾಸರಗೋಡು ಸೌರ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದನ್ನು ರಾಷ್ಟ್ರೀಯ ಸೌರಶಕ್ತಿ ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯ ಪೈವಲಿಕೆ, ಮೀಂಜಾ ಮತ್ತು ಛಿಪ್ಪಾರ್ ಗ್ರಾಮಗಳ 250 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಇದರ ನಿರ್ಮಾಣಕ್ಕೆ 280 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ.

ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ

ಪ್ರಧಾನಮಂತ್ರಿ ಅವರು ತಿರುವನಂತಪುರಂನಲ್ಲಿ ಸ್ಥಾಪಿಸಲಿರುವ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಯೋಜನೆ ತಿರುವನಂತಪುರಂ ಮುನಿಸಿಪಾಲಿಟಿ ಕಾರ್ಪೊರೇಷನ್ ನಲ್ಲಿ ಸ್ಮಾರ್ಟ್ ಪರಿಹಾರಗಳನ್ನು ಒದಗಿಸಲು ರೂಪಿಸಲಾಗಿದೆ ಮತ್ತು ಇದು ತುರ್ತು ಸಂದರ್ಭಗಳಲ್ಲಿ ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಒಂದೇ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ.

ಸ್ಮಾರ್ಟ್ ರಸ್ತೆ ಯೋಜನೆ

ಪ್ರಧಾನಮಂತ್ರಿ ಅವರು ತಿರುವನಂತಪುರಂ ಸ್ಮಾರ್ಟ್ ರಸ್ತೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು. ಅಂದಾಜು 427 ಕೋಟಿ ರೂ. ವೆಚ್ಚದಲ್ಲಿ ತಿರುವನಂತಪುರಂನಲ್ಲಿ ಹಾಲಿ ಇರುವ 37 ಕಿ.ಮೀ. ಉದ್ದದ ರಸ್ತೆಯನ್ನು ವಿಶ್ವದರ್ಜೆಯ ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ವಿದ್ಯುತ್ ದೂರಸಂಪರ್ಕ ಸೇರಿದಂತೆ ಎಲ್ಲ ಬಗೆಯ ತಂತಿ ಹಾಗೂ ಕೇಬಲ್ ಗಳು ನೆಲದಾಳದಲ್ಲಿ ಬರಲಿವೆ ಮತ್ತು ರಸ್ತೆ ಹಾಗೂ ಜಂಕ್ಷನ್ ಅಭಿವೃದ್ಧಿ ಕಾರ್ಯಗಳನ್ನೂ ಸಹ ಕೈಗೆತ್ತಿಕೊಳ್ಳಲಾಗುವುದು.

ಅರುವಿಕ್ಕರ ಜಲ ಸಂಸ್ಕರಣಾ ಘಟಕ

ಅಮೃತ್ ಮಿಷನ್ ಯೋಜನೆಯಡಿ ಅರುವಿಕ್ಕರದಲ್ಲಿ ನಿರ್ಮಿಸಿರುವ 75 ಎಂ ಎಲ್ ಡಿ (ಮಿಲಿಯನ್ ಲೀಟರ್ ಪ್ರತಿ ದಿನ) ಜಲ ಸಂಸ್ಕರಣಾ ಘಟಕವನ್ನು ಪ್ರಧಾನಮಂತ್ರಿ ಉದ್ಘಾಟಿಸುವರು. ಇದರಿಂದ ತಿರುವನಂತಪುರದ ಜನತೆಗೆ ಕುಡಿಯುವ ನೀರಿನ ಪೂರೈಕೆಗೆ ಉತ್ತೇಜನ ಸಿಗಲಿದೆ ಮತ್ತು ಅರುವಿಕ್ಕರದಲ್ಲಿ ಹಾಲಿಇರುವ ಸಂಸ್ಕರಣಾ ಘಟಕದ ನಿರ್ವಹಣಾ ಕಾರ್ಯದ ವೇಳೆ ತಿರುವನಂತಪುರಂಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವುದು ತಪ್ಪಲಿದೆ.

***



(Release ID: 1699346) Visitor Counter : 201