ಹಣಕಾಸು ಸಚಿವಾಲಯ

ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

Posted On: 06 JAN 2021 5:20PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ (ಎನ್.ಐ.ಪಿ.) ಅನುಷ್ಠಾನದ ಪ್ರಗತಿ ಪರಿಶೀಲಿಸಿದರು. ಎನ್.ಐ.ಪಿ ಯೋಜನೆಗಳ ಪ್ರಗತಿ, ಈವರೆಗೆ ಆಗಿರುವ ವೆಚ್ಚ, ಮತ್ತು ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲು ತೆಗೆದುಕೊಂಡ ಉಪಕ್ರಮಗಳ ಕುರಿತು ಚರ್ಚಿಸುವುದು ಇಂದಿನ ಸಭೆಯ ಕಾರ್ಯಕ್ರಮಪಟ್ಟಿಯಲ್ಲಿತ್ತು. ಎನ್.ಐ.ಪಿ ಯೋಜನೆ ಅನುಷ್ಠಾನದ ನಿಗಾ ಮತ್ತು ಅದನ್ನು ವೇಗಗೊಳಿಸಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಹಣಕಾಸು ಸಚಿವರು ನಡೆಸಿದ ಎರಡನೇ ಪರಿಶೀಲನಾ ಸಭೆ ಇದಾಗಿತ್ತು.
ಸಾಂಕ್ರಾಮಿಕದ ನಡುವೆಯೂ, ಎನ್.ಐ.ಪಿ. ಗಮನಾರ್ಹ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಲಾಯಿತು. ಎನ್.ಐ.ಪಿ.ಯನ್ನು 6,835 ಯೋಜನೆಗಳೊಂದಿಗೆ ಆರಂಭಿಸಲಾಗಿದ್ದು, ಇದನ್ನು ಈಗ 7,300ಕ್ಕೂ ಹೆಚ್ಚು ಯೋಜನೆಗೆ ಹೆಚ್ಚಿಸಲಾಗಿದೆ. ಹಲವು ಸಚಿವಾಲಯಗಳು/ ಇಲಾಖೆಗಳು, 21ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಗಣನೀಯ ಪ್ರಗತಿ ತೋರಿವೆ. ಇದರ ಜೊತೆಗೆ ಬಹುತೇಕ ಸಚಿವಾಲಯಗಳು/ಇಲಾಖೆಗಳು 20ನೇ ಹಣಕಾಸು ವರ್ಷದ ವಾಸ್ತವ ವೆಚ್ಚಕ್ಕಿಂತ ಹೆಚ್ಚಿನ ಮೂಲಸೌಕರ್ಯ ವೆಚ್ಚದ ಗುರಿಯನ್ನು 21ನೇ ಹಣಕಾಸು ವರ್ಷದಲ್ಲಿ ಇಟ್ಟುಕೊಂಡಿವೆ. 
ಪರಿಶೀಲನಾ ಸಭೆಯಲ್ಲಿ ಎರಡು ಸಚಿವಾಲಯಗಳ/ಇಲಾಖೆಗಳಲ್ಲಿ ಮೂಲಸೌಕರ್ಯ ವೆಚ್ಚದ ಜೊತೆಗೆ ವಾರ್ಷಿಕ ಗುರಿ ಮತ್ತು ಸಾಧಿಸಲಾದ ವೆಚ್ಚ, ಕೈಗೊಳ್ಳಲಾಗಿರುವ ವಿವಿಧ ಉಪಕ್ರಮಗಳ ವೇಗ ಹೆಚ್ಚಿಸುವ ಕ್ರಮದ ಬಗ್ಗೆ  ಚರ್ಚಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ 80,915 ಕೋಟಿ ರೂ. ಮೌಲ್ಯದ 24 ಯೋಜನೆಗಳು ಮತ್ತು ಜಲ ಸಂಪನ್ಮೂಲ, ಆರ್.ಡಿ. ಮತ್ತು ಜಿ.ಆರ್. ಇಲಾಖೆಯಡಿಯ 2,79,604 ಕೋಟಿ ರೂ. ಮೌಲ್ಯದ 10 ಬೃಹತ್ ಯೋಜನೆಗಳ ಬಗ್ಗೆ ಸವಿವರವಾಗಿ ಮತ್ತು ಅನುಷ್ಠಾನದಲ್ಲಿ ಏನಾದರೂ ತೊಡಕುಗಳು ಎದುರಾಗಿವೆಯೇ ಎಂಬ ಕುರಿತಂತೆ ಪರಿಶೀಲಿಸಲಾಯಿತು. 
ಪ್ರಗತಿ ಪರಿಶೀಲಿಸುವಾಗ ಶ್ರೀಮತಿ ನಿರ್ಮಲಾ ಸೀತಾರಾಮನ್ ಎನ್.ಐ.ಪಿ. ವಿಶ್ವದರ್ಜೆಯ ಮೂಲಸೌಕರ್ಯವನ್ನು ತನ್ನ ಪ್ರಜೆಗಳಿಗೆ ನೀಡಬೇಕು ಮತ್ತು ಸುಗಮ ಜೀವನ ಮಟ್ಟ ಹೆಚ್ಚಿಸಬೇಕು ಎಂಬ ಭಾರತ ಸರ್ಕಾರದ ಉಪಕ್ರಮದ ಭಾಗವಾಗಿದೆ ಎಂದು ತಿಳಿಸಿದರು. ಎಲ್ಲಾ ಎನ್‌.ಐ.ಪಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮತ್ತು ರಾಜ್ಯ ಸರ್ಕಾರಗಳು ಮತ್ತು ಇತರ ಸಚಿವಾಲಯಗಳ ಸಮನ್ವಯದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಹಣಕಾಸು ಸಚಿವರು ಎರಡು ಸಚಿವಾಲಯಗಳು / ಇಲಾಖೆಗಳಿಗೆ ತಿಳಿಸಿದರು.  ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ ನಡೆಸುವ ಮೂಲಕ ಹೂಡಿಕೆಯ ಯೋಜನೆಗಳನ್ನು ಉತ್ತೇಜಿಸಲು ಸಚಿವಾಲಯಗಳು / ಇಲಾಖೆಗಳಿಗೆ ಸೂಚಿಸಿದರು. ತಡೆರಹಿತ ಆನ್‌ ಲೈನ್ ಮೇಲ್ವಿಚಾರಣೆಗೆ ಅನುವು ಮಾಡಿಕೊಡಲು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ ಲೈನ್ ಡ್ಯಾಶ್‌ ಬೋರ್ಡ್ ಅನ್ನು ನಿಯಮಿತವಾಗಿ ನವೀಕರಿಸಲು ಸಚಿವಾಲಯಗಳಿಗೆ ಸೂಚಿಸಿದರು. 


*** 

 



(Release ID: 1686596) Visitor Counter : 214